ಅಯೋಧ್ಯೆಯ ಶ್ರೀರಾಮನ ಜನ್ಮಭೂಮಿಯಲ್ಲಿ ಉಡುಪಿ ಹೋಟೆಲ್ ತೆರೆಯಲಾಗಿದೆ. ಬಾಗಲಕೋಟೆ ಮುಧೋಳ ಲೋಕಾಪುರದ ಕುಂದಾಪುರ ಮೂಲದ ಉದ್ಯಮಿ ಗುಣಾಕರ್ ಶೆಟ್ಟಿ ಎಂಬುವವರು ಹೋಟೆಲ್ ಆರಂಭಿಸಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಬಾಲ ಮೂರ್ತಿ ಲೋಕಾರ್ಪಣೆಗೊಂಡ ಬಳಿಕ ಇಲ್ಲಿನ ಹೋಟೆಲ್, ವಸತಿ ಗೃಹಗಳ ದರಗಳು ಗಗನಕ್ಕೇರಿವೆ. ಆದರೆ, ನಾವು ಆರಂಭಿಸುತ್ತಿರುವ ಹೋಟೆಲ್ ಮತ್ತು ವಸತಿ ಗೃಹದಲ್ಲಿ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ರಿಯಾಯಿತಿ ದರ ನಿಗದಿಪಡಿಸಲಾಗಿದೆ. ಅಲ್ಲದೇ ಇಡೀ ಹೋಟೆಲ್ ಕನ್ನಡಮಯ ಆಗಿರಲಿದ್ದು, ಕೆಲಸಕ್ಕೆ ಕನ್ನಡಿಗರಿಗೆ ಆಧ್ಯತೆ ನೀಡಲಾಗುವುದು. ಒಟ್ಟಾರೆ ಕರ್ನಾಟಕದಿಂದ ಬರುವ ಭಕ್ತರಿಗೆ ವಿಶೇಷ ಆದರಾತಿಥ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳ ಸಾನಿಧ್ಯದಲ್ಲಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟನೆ ನೆರವೇರಿಸಿದರು. ಈ ಸಂಧರ್ಭದಲ್ಲಿ ಕರ್ನಾಟಕ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ, ಸ್ವಾತಿ ಗ್ರೂಪ್ ಆಫ್ ಹೋಟೆಲ್ಸ್ ಸಿಎಂಡಿ ಜಿ ಕೆ ಶೆಟ್ಟಿಯವರು ಉಪಸ್ಥಿತರಿದ್ದರು.
ಇನ್ಮುಂದೆ ಅಯೋಧ್ಯೆಯಲ್ಲೂ ಶ್ರೀರಾಮನ ಭಕ್ತರಿಗೆ ಕರ್ನಾಟಕದ ಸವಿರುಚಿ ಲಭ್ಯ. ರಾಮ ಮಂದಿರದಿಂದ 500 ಮೀ. ದೂರದಲ್ಲಿ ರಾಮಪಥ್ ರಸ್ತೆಯಲ್ಲಿ ಈ ಹೋಟೆಲ್ ಇದೆ. ಅಯೋಧ್ಯೆ ಫುಡ್ ಪ್ಯಾಲೇಸ್ ಹೆಸರಿನಲ್ಲಿ ಹೋಟೆಲ್ ನಿರ್ಮಿಸಲಾಗಿದೆ. ಕಳೆದ ವರ್ಷ ಜನವರಿ 22ರಂದು ಶ್ರೀ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಗಳು ನೆರವೇರಿದ್ದವು.