ಪುಣೆ ಮಹಾನಗರದ ಔದ್ಯೋಗಿಕ ನಗರಿ ಪಿಂಪ್ರಿ ಚಿಂಚ್ವಾಡ್ ನ ಸಮಸ್ತ ತುಳು ಬಾಂಧವರ ಸಂಸ್ಥೆ ತುಳು ಸಂಘ ಪಿಂಪ್ರಿ ಚಿಂಚ್ವಾಡ್ ಇದರ ಮಹಾಸಭೆಯು ನವೆಂಬರ್ 29ರಂದು ಬೋಸ್ರಿಯ ಜಂಜಿರಾ ಹೋಟೆಲ್ ನ ಬ್ಯಾಂಕ್ವೇಟ್ ಹಾಲ್ ನಲ್ಲಿ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್ ರವರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ತುಳು ಸಂಘದ ನೂತನ ಹೊಸ ಕಾರ್ಯಕಾರಿಣಿ ಸಮಿತಿಯನ್ನು ನೆರೆದ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದರು. ಕಳೆದ ಅವದಿಯಲ್ಲಿ ಸಂಘದ ಕಾರ್ಯವನ್ನು ಯಶಸ್ವಿಯಾಗಿ ನಡೆಸಿ ಇಲ್ಲಿನ ತುಳುವರ ಅಭಿಮಾನಕ್ಕೆ ಪಾತ್ರರಾದ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್ ಇವರನ್ನು ಅಧ್ಯಕ್ಷರಾಗಿ ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಉದ್ಯಮಿ ದಿನೇಶ್ ಶೆಟ್ಟಿ ಉಜಿರೆ ಇವರನ್ನು ಮರು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ಸಂಘದ ಸ್ಥಾಪನೆಯಿಂದ ಸಂಘದ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಉದ್ಯಮಿ ನಿತಿನ್ ಶೆಟ್ಟಿ ನಿಟ್ಟೆ, ಕೊಶಾಧಿಕಾರಿಯಾಗಿ ಉದ್ಯಮಿ ರಾಜೇಶ್ ಶೆಟ್ಟಿ ಕುರ್ಕಾಲ್ ರವರು ಆಯ್ಕೆಯಾದರು. ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಪೆರ್ಡೂರು, ಸಾಮಾಜಿಕ ಸೇವಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಕುಸುಮ ಸಾಲಿಯಾನ್, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷರಾಗಿ ಉದ್ಯಮಿ ರತ್ನಾಕರ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.
ತುಳು ಸಂಘದ ವಿವಿಧ ಸಮಿತಿಗಳ ಉಪಾಧ್ಯಕ್ಷರುಗಳಾಗಿ ಸುರೇಶ್ ಶೆಟ್ಟಿ ಪಣೀಯೂರ್ [ಸಮಾಜ ಕಲ್ಯಾಣ], ರಾಜಾರಾಮ ಶೆಟ್ಟಿ ತಲೆಗಾಂವ್ [ಸಾಂಸ್ಕೃತಿಕ ವಿಭಾಗ ], ಗಣೇಶ ಶೆಟ್ಟಿ ದೆಹುರೋಡ್ [ಕ್ರೀಡಾ ವಿಭಾಗ], ಚಂದ್ರ ಪೂಜಾರಿ ವಾಕಡ್ ಮತ್ತು ಶುಭಕರ ಶೆಟ್ಟಿ ಇವರು ಜಂಟಿಯಾಗಿ ಜನಸಂಪರ್ಕಧಿಕಾರಿಗಳಾಗಿ ಆಯ್ಕೆಯಾದರು ಹಾಗೂ ಸಮಿತಿ ಸದಸ್ಯರುಗಳನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಆಯ್ಕೆಯಾದ ನೂತನ ಸಮಿತಿ ಸದಸ್ಯರುಗಳಿಗೆ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದರು.
ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್ ಮಾತನಾಡಿ, ತುಳು ಸಂಘ ಸ್ಥಾಪನೆಯಾದ ದಿನದಿಂದ ತುಳು ಬಾಂಧವರು ಸಂಘದ ಮೇಲೆ ಪ್ರೀತಿ ಇಟ್ಟು ಉತ್ತಮ ಸಹಕಾರ ನೀಡಿದ್ದಿರಿ. ನಮ್ಮ ತುಳು ಭಾಷೆ, ಕಲೆ, ಸಂಸ್ಕ್ರತಿ ಬೆಳೆಯಲು ಹಾಗೂ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ನಿರಂತರ ಸಂಪರ್ಕದೊಂದಿಗೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದೀರಿ. ನಿಮ್ಮ ಸೇವಾ ಮನೋಭಾವದೊಂದಿಗೆ ಸಂಘದ ಮೇಲಿನ ಪ್ರೀತಿ ನಿರಂತವಾಗಿರಲಿ. ಮುಂದೆ ನಡೆಯಲಿರುವ ಸಂಘದ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಪಾಲ್ಗೊಂಡು ಸಹಕಾರ ನೀಡಿ ಪ್ರತಿಯೊಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.
ವರದಿ : ಹರೀಶ್ ಮೂಡಬಿದಿರೆ ಪುಣೆ