ಸಮಾಜದ ಎಲ್ಲರೂ ಒಪ್ಪುವಂತಹ ಸಜ್ಜನಿಕೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬರುವುದು ಅಪರೂಪದ ಕೆಲಸ. ಈ ವ್ಯಕ್ತಿತ್ವವನ್ನು ಸುದೀರ್ಘ ಕಾಲ ಶ್ರದ್ಧೆಯಿಂದ ಪಾಲಿಸಿಕೊಂಡು ಬಂದಿರುವ ಅಪ್ಪಣ್ಣ ಹೆಗ್ಡೆಯವರದ್ದು ಬಣ್ಣಿಸುವ ಪದಗಳ ಹೂರಣ ಎಂದು ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ನುಡಿದರು. ಬಸ್ರೂರಿನ ಶ್ರೀ ಶಾರದಾ ಕಾಲೇಜಿನ ಆವರಣದಲ್ಲಿ ನಡೆದ ಆಳ್ವಾಸ್ ಸಾಂಸ್ಕೃತಿಕ ಲೋಕ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ| ಜಿ.ಶಂಕರ್ ಅವರು, ಸಾಮಾಜಿಕ, ಧಾರ್ಮಿಕ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಅಪಾರ ಕೊಡುಗೆ ಸಲ್ಲಿಸಿರುವ ಬಸ್ರೂರು ಅಪ್ಪಣ್ಣ ಹೆಗ್ಡೆಯವರದ್ದು ಅಪರೂಪದ ವ್ಯಕ್ತಿತ್ವ. ಜಾತಿ, ಧರ್ಮಗಳನ್ನು ಮೀರಿದ ವ್ಯಕ್ತಿ. ಅಂತಹ ಪುಣ್ಯ ಪುರುಷರ ಸಮಕಾಲಿನರಾಗಿ ಇರುವುದೇ ನಮ್ಮ ಭಾಗ್ಯ. ಅವರು ನೂರ್ಕಾಲ ಬಾಳಿ, ಸಮಾಜಕ್ಕೆ ಬದುಕಲಿ ಎಂದು ಹಾರೈಸಿದರು.
ಬಸ್ರೂರು ಅಪ್ಪಣ್ಣ ಹೆಗ್ಡೆ 90 ರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣಗೊಳಿಸಿ ಮಾತನಾಡಿದ ಮುಂಬಯಿ ಉದ್ಯಮಿ ಎನ್.ಟಿ ಪೂಜಾರಿ ಅವರು, ಸರಳತೆಯ ಶ್ರೀಮಂತಿಕೆಯ ವ್ಯಕ್ತಿತ್ವ ಹೊಂದಿರುವ ಅಪ್ಪಣ್ಣ ಹೆಗ್ಡೆ ಅವರು ಎಲ್ಲಾ ವಯಸ್ಸಿನ, ಎಲ್ಲಾ ವರ್ಗದ ಜನರಿಗೂ ಸಮಾನವಾಗಿ ಸಲ್ಲುವ ವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ. ಆರಕ್ಕೆ ಏರದ, ಮೂರಕ್ಕೆ ಇಳಿಯದ ಸಮಾನತೆಯ ಮೇರು ವ್ಯಕ್ತಿತ್ವ ಅವರದ್ದು ಎಂದು ವಿಶ್ಲೇಷಣೆ ಮಾಡಿದರು. ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ, ಕೋಟ ಗೀತಾನಂದ ಫೌಂಡೇಶನ್ ಟ್ರಸ್ಟ್ ಪ್ರವರ್ತಕ ಆನಂದ ಸಿ ಕುಂದರ್, ಬೆಂಗಳೂರು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಬಿ. ಉದಯ್ಕುಮಾರ ಹೆಗ್ಡೆ, ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಅಧ್ಯಕ್ಷ ರಾಮ್ಕಿಶನ್ ಹೆಗ್ಡೆ ಇದ್ದರು. ಬಸ್ರೂರು ಅಪ್ಪಣ್ಣ ಹೆಗ್ಡೆ ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಸ್ವಾಗತಿಸಿದರು. ವಕ್ವಾಡಿ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ರಾಜೇಶ್ ಕೆ.ಸಿ ನಿರೂಪಿಸಿದರು.
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ 400 ಜನ ವಿದ್ಯಾರ್ಥಿಗಳು 2.15 ಗಂಟೆಗಳ ಕಾಲ ನೀಡಿದ ವಿಭಿನ್ನವಾದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದ ಸಾವಿರಾರು ಜನರ ಮನಸೂರೆಗೊಂಡಿತು. ಶ್ರೀಲಂಕಾ ಸೇರಿದಂತೆ ದೇಶ ವಿದೇಶದ ಅಪರೂಪದ ಸಾಂಸ್ಕೃತಿಕ ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳು ಬಸ್ರೂರು ಅಪ್ಪಣ್ಣ ಹೆಗ್ಡೆ ಅವರಿಗೆ ‘ಕಲಾ ಗೌರವ’ವನ್ನು ಸಮರ್ಪಿಸಿದರು. ಶಾಸ್ತ್ರೀಯ ನೃತ್ಯ ಭೋ ಶಂಭೂ, ಗುಜರಾತಿನ ಗಾರ್ಭ ಮತ್ತು ದಾಂಡಿಯ, ಸೃಜನಾತ್ಮಕ ನೃತ್ಯ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಮಣಿಪುರಿಯ ಸ್ಟಿಕ್ ಡ್ಯಾನ್ಸ್, ಬಡಗುತಿಟ್ಟಿನ ಶ್ರೀ ಕೃಷ್ಣ ಲೀಲೆ, ಕಥಕ್ ನೃತ್ಯ ವರ್ಷಧಾರೆ, ಪಶ್ಚಿಮ ಬಂಗಾಳದ ಪುರುಲಿಯಾ ನೃತ್ಯ, ಡೊಳ್ಳು ಕುಣಿತ, ಮಲ್ಲಕಂಬ ಹಾಗೂ ವಿವಿಧ ಕಸರತ್ತುಗಳನ್ನು ಪ್ರೇಕ್ಷಕರು ಸಂಭ್ರಮಿಸಿದರು.