ಡಾ| ನಿರಂಜನ ಶೆಟ್ಟಿ ಅವರು ಬಹು ಮುಖ ಪ್ರತಿಭೆಯ ಓರ್ವ ಸಂಪನ್ಮೂಲ ವ್ಯಕ್ತಿ. ಒಂದು ಸ್ವಸ್ಥ ಆರೋಗ್ಯವಂತ ಸಮಾಜ ನಿರ್ಮಾಣ ಕಾರ್ಯದಲ್ಲಿ ಶ್ರೀಯುತರ ಕೊಡುಗೆ ಅಪಾರ. ಜೀವನದಲ್ಲಿ ಹತಾಶೆಗೊಂಡವರನ್ನು ಪುನಃ ಜೀವನದ ಮುಖ್ಯವಾಹಿನಿಯಲ್ಲಿ ತಂದು ಕೌನ್ಸೆಲಿಂಗ್ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಿ ಜೀವನದಲ್ಲಿ ನವಚೇತನ ಮೂಡಿಸುವ ಮಾನವೀಯ ಕಾರ್ಯನಿರತರೋರ್ವರ ಕಿರುಪರಿಚಯ ಇಲ್ಲಿದೆ.
ಡಾ| ನಿರಂಜನ್ ಶೆಟ್ಟಿಯವರು ತನ್ನ ಪ್ರಥಮ ಹಂತದ ವಿದ್ಯಾಭ್ಯಾಸವನ್ನು ಕಾಪು ಮಹಾದೇವಿ ಹೈಸ್ಕೂಲ್ ನಲ್ಲಿ ಮುಗಿಸಿ ಮುಂದೆ ಮುಂಬಯಿ ಮತ್ತು ಗುಜರಾತ್ ನಲ್ಲಿ ಉನ್ನತ ಅಧ್ಯಯನ ನಡೆಸಿ ನಂತರ IIPR (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈಕಾಲಜಿ ಆಂಡ್ ರಿಸರ್ಚ್ ಬೆಂಗಳೂರು) ಇಲ್ಲಿ ಮನೋಶಾಸ್ತ್ರದಲ್ಲಿ ಗೌರವ ಡಾಕ್ಟರೇಟ್ ಪಡೆದರು. ಪ್ರಸ್ತುತ ಸುನಂದಾ ವೆಲ್ನೆಸ್ ಸೆಂಟರ್ ಕಾಪು ನ ಮುಖಾಂತರ ಇವರು ಮಾನಸಿಕ ರೋಗಿಗಳಿಗೆ, ಖಿನ್ನತೆಗೊಳಗಾದವರಿಗೆ ನೀಡುವ ಥೆರಪಿ ಜೊತೆಗೆ ಆತ್ಮ ವಿಶ್ವಾಸ ತುಂಬುವ ಮಾತುಗಳು ಅದೆಷ್ಟೊ ರೋಗಿಗಳಿಗೆ ಆಶಾಕಿರಣವಾಗಿ ಪರಿಣಮಿಸಿದ್ದು ಅವರೆಲ್ಲಾ ಡಾ. ಶೆಟ್ಟರನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿಕೊಳ್ಳುತ್ತಾರೆ.
ಆಳ್ವಾಸ್, ಎಸ್ ಡಿ ಎಮ್ ಉಡುಪಿ ಶ್ರೀದೇವಿ ಇನ್ಸ್ಟಿಟ್ಯೂಟ್ ಹಾಗೂ ಮುನಿಯಾಲ್ ಆಯುರ್ವೇದ ಮೊದಲಾದ ವೈದ್ಯಕೀಯ ಸಂಸ್ಥೆಗಳು ಶ್ರೀಯುತರ ವಿಶೇಷ ಜ್ಞಾನದ ಸಹಾಯ ಪಡೆಯುತ್ತಾರೆ. ಮಾನವಹಕ್ಕು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಂಸ್ಥೆಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಅನುಪಮ ಸೇವೆ ಸಲ್ಲಿಸುತ್ತಿರುವ ನಿರಂಜನ ಶೆಟ್ಟಿ ಅವರು ಅನೇಕ ಸರ್ಕಾರೇತರ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಲಿಂಬ್ರ ವಿಂಡ್ಸೆರ್ ಸಿನಿಕ್ಟಿಕಟ್ ಇವರು ಡಾ. ಶೆಟ್ಟಿ ಅವರಿಗೆ ಸ್ವರ್ಣ ಪದಕ ಪ್ರದಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದ್ದಾರೆ. ಸಿಇಓ ಚಾಂಪಿಯನ್ ಆಫ್ ಚಾಂಪಿಯನ್ಸ್ ಅವಾರ್ಡ್ ಆಫ್ ಸಿಂಗಾಪುರ್ ನಂಥ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಶೆಟ್ಟಿ ಅವರು ಅನೇಕ ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಪತ್ರಗಳನ್ನು ಪಡೆದಿದ್ದಾರೆ.
ಇಂದಿನ ಒತ್ತಡದ ಹಾಗೂ ಸಂಘರ್ಷದ ಜೀವನದಲ್ಲಿ ಜನರ ಮಾನಸಿಕ ಸಮತೋಲನ ಕಾಪಾಡುವ ಅವಶ್ಯಕತೆ ಎಂದಿಗಿಂತ ಇಂದು ಹೆಚ್ಚು ಇದೆ ಎಂದು ಪ್ರದಿಪಾದಿಸುವ ಶ್ರೀಯುತರು ಸತತ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಕೃತಾರ್ಥ ಭಾವ ಹೊಂದಿರುತ್ತಾರೆ. ಇವರು ನಿಜವಾದ ಅರ್ಥದಲ್ಲಿ ಬಂಟ ಸಮಾಜದ ಅಮೂಲ್ಯ ಕೊಡುಗೆ.
ಸುನಂದಾ ವೆಲ್ನೆಸ್ ಸೆಂಟರ್ ಮೂಲಕ ಸದಾ ಕಾರ್ಯಶೀಲರಾಗಿರುವ ಶ್ರೀಯುತರ ಜೀವನ ಸುಖ ಶಾಂತಿ ನೆಮ್ಮದಿಯೊಂದಿಗೆ ಸಾಗಲಿ. ತನ್ಮೂಲಕ ಒಟ್ಟು ಸಮಾಜ ಮಾನಸಿಕ ದೈಹಿಕ ಸ್ವಾಸ್ಥ್ಯ ಹೊಂದಿ ಸದೃಢ ಸಮಾಜ ನಿರ್ಮಾಣವಾಗಲಿ ಎಂದು ನಾವೆಲ್ಲ ಹಾರೈಸೋಣ.