ಮೂಡುಬಿದಿರೆ: ಭಾರತದ ರಾಜಕಾರಣ ಸಂವಿಧಾನದ ನಿರ್ದೇಶನ ಹಾಗೂ ತತ್ವಗಳ ಅಡಿಯಲ್ಲಿ ಕೆಲಸ ಮಾಡಿದರೆ ಇನ್ನು ಮುಂದಿನ ಹತ್ತು ವರ್ಷಗಳಲ್ಲಿ ಎರಡನೇ ದರ್ಜೆಯ ಪ್ರಜೆಗಳೆನಿಸಿರುವ ಆದಿವಾಸಿಗಳು ಸಮಾಜದ ಮುಖ್ಯವಾಹಿನಿಗೆ ಬರುವಂತಾಗುತ್ತದೆ. ರಾಜಕಾರಣವನ್ನು ಬದಿಗಿರಿಸಿ ಸಂವಿಧಾನದ ತತ್ವಗಳನ್ನು ಜಾರಿ ಮಾಡುವ ಮೂಲಕ ಸಮಸಮಾಜದ ನಿರ್ಮಾಣ ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಎಚ್.ಸಿ.ಮಹಾದೇವಪ್ಪ ಹೇಳಿದರು. ಮೂಡುಬಿದಿರೆ ವಿದ್ಯಾಗಿರಿ ಆಳ್ವಾಸ್ನ ನುಡಿಸಿರಿ ಸಭಾಂಗಣದ ದಿವಂಗತ ಜ್ಯೋತಿ ಸುಂದರ ನಾಯ್ಕ ವೇದಿಕೆಯಲ್ಲಿ ಭಾನುವಾರ ನಡೆದ ‘ಗದ್ದಿಗೆ’ ಕರಾವಳಿ ಮರಾಟಿ ಸಮಾವೇಶ 2024 ಉದ್ಘಾಟಿಸಿ ಅವರು ಮಾತನಾಡಿದರು. ಬಾಬಾ ಸಾಹೇಬರ ಮಂತ್ರ- ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಬಾಬಾ ಸಾಹೇಬರ ಮಂತ್ರ- ಶಿಕ್ಷಣ, ಸಂಘಟನೆ ಹಾಗೂ ಹೋರಾಟ. ಶಿಕ್ಷಿತರಾಗುವ ಮೂಲಕ ಸಂಘಟಿತ ಹೋರಾಟ ಸಾಧ್ಯ. ಆ ಮೂಲಕ ನಮ್ಮ ನಿರ್ದಿಷ್ಟ ಬೇಡಿಕೆಗಳು ಇಡೇರುತ್ತವೆ. ಹೋರಾಟ ವ್ಯಕ್ತಿತ್ವ, ನೈತಿಕತೆ ಹಾಗೂ ಚರಿತ್ರೆಯನ್ನು ನಿರ್ಮಾಣ ಮಾಡಬಲ್ಲದು ಎಂದು ಅಂಬೇಡ್ಕರ್ ನಂಬಿದ್ದರು.
ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಬಾಬಾ ಸಾಹೇಬರು ರಚಿಸಿದ ಸಂವಿಧಾನದಲ್ಲಿದೆ. ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂದರು. ‘ಸಾವಿರಾರು ದೇವರುಗಳು ನಮ್ಮ ಬಂಧನವನ್ನು ಬಿಡಿಸಲು ಸಾಧ್ಯವಾಗದೆ ಇದ್ದಾಗ, ಸಂವಿಧಾನ ಕೊಟ್ಟಿರುವ ಮೀಸಲಾತಿ ನಮ್ಮ ಬಂಧನವನ್ನು ಬಿಡಿಸಿತ್ತು. ಸಂವಿಧಾನ ನಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಸಾಮಾರ್ಥ್ಯವನ್ನು ಹೊಂದಿದೆ ಎಂದು ಅಂದು ಅಂಬೇಡ್ಕರ್ ನುಡಿದ ಮಾತುಗಳನ್ನು ಪುನರುಚ್ಚಿಸಿದರು’. ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯಲ್ಲಿ ಗ್ಯಾರಂಟಿ ಯೋಜನೆ ನಮ್ಮ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿಗಳು ಸಂವಿಧಾನದ ಸಿದ್ದಾಂತಗಳ ಅಡಿಯಲ್ಲಿ ನಿರ್ಮಾಣಗೊಂಡಿವೆ. ಅವು ಯಾವುದೇ ಧರ್ಮ ಜಾತಿಗೆ ಸೀಮಿತವಾಗಿಲ್ಲ. ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯ ಅಡಿಯಲ್ಲಿ ಅವುಗಳನ್ನು ಜಾರಿಗೊಳಿಸಲಾಗಿದೆ. ಇದು ದೇಶದಲ್ಲಿ ಮಾತ್ರವಲ್ಲದೆ, ಇಡೀ ಜಗತ್ತಿನಲ್ಲೆ ಮೊದಲ ಬಾರಿ ಇಂತಹ ಯೋಜನೆಗಳನ್ನು ಜಾರಿಗೊಳಿಸಿದ ಹಿರಿಮೆ ನಮ್ಮ ಸರ್ಕಾರದು ಎಂದರು.
ಮರಾಟಿ ಸಮುದಾಯದ 17 ಬೇಡಿಕೆಗಳು ಈಡೇರಿಸಲು ಪ್ರಯತ್ನ ಕರಾವಳಿಯ ಮರಾಟಿ ಸಮುದಾಯದ ನ್ಯಾಯಯುತ ಬೇಡಿಕೆಗಳನ್ನು ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಿ, ಮುಖ್ಯಮಂತ್ರಿ ಯವರ ಗಮನಕ್ಕೆ ತಂದು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಗದ್ದಿಗೆ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಕರಾವಳಿ ಮರಾಟಿ ಸಮಾವೇಶ ನಮ್ಮ ಆವರಣದಲ್ಲಿ ಜರಗುತ್ತಿರುವುದು ಸಂತಸದ ವಿಷಯ. ನಮ್ಮ ಶಿಕ್ಷಣ ಪ್ರತಿಷ್ಠಾನ ಸದಾ ಸಮಾಜದ ಪರಿಕಲ್ಪನೆಯಲ್ಲಿ ಕರ್ಯನಿರ್ವಹಿಸುತ್ತಾ ಬಂದಿದೆ. ಮರಾಟಿ ಸಮಾಜ ಸದಾ ಹೋರಾಟ ಹಾಗೂ ಸ್ವಾಭಿಮಾನದ ಮೂಲಕ ಬದುಕಿದವರು ಎಂಬುದು ಅವರ ಇತಿಹಾಸದ ಮೂಲಕ ತಿಳಿಯುತ್ತದೆ. ನಾವು ಯಾವುದೇ ಜಾತಿ ಧರ್ಮದವರಾಗಿದ್ದರೂ, ನಾವು ಈ ಸಮಸ್ತ ಸಮಾಜದ ಭಾಗ ಹಾಗೂ ಈ ದೇಶದ ಪ್ರಜೆ ಎಂಬ ನಮ್ಮಲ್ಲಿ ಸದಾ ಜಾಗೃತವಾಗಿರಬೇಕು ಎಂದರು. ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದ ಮೂಲ್ಕಿ- ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಎ ಕೋಟ್ಯಾನ್, ಸಮಾವೇಶ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಸಮುದಾಯದ ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು. ವಿದ್ಯೆಗೆ ಯಾವುದೇ ಜಾತಿ, ಧರ್ಮದ ಗಡಿಗಳಿಲ್ಲ. ಪ್ರತಿಯೊಬ್ಬರೂ ವಿದ್ಯಾವಂತರಾಗುವಂತೆ ಪ್ರತಿ ಸಮಾಜ ಶ್ರಮಿಸಬೇಕು ಎಂದರು. ಕರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಜಮ್ಮು ಕಾಶ್ಮೀರ ಸರಕಾರದ ಪ್ರಧಾನ ಕರ್ಯದರ್ಶಿ ಹಾಗೂ ಕರಾವಳಿ ಮರಾಟಿ ಸಮಾವೇಶದ ಅಧ್ಯಕ್ಷ ರಾಜೇಶ್ ಪ್ರಸಾದ, ದೇಶ ಸ್ವಾತಂತ್ರ್ಯ ಪಡೆದು ಏಳು ದಶಕವಾದರೂ ಮರಾಟಿ ಸಮಾಜ ಹಿಂದುಳಿದಿದೆ. ನಮ್ಮ ಸಮಾಜದ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯತೆ ಇದೆ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ನಾವು ಮುಖ್ಯ ವಾಹಿನಿಗೆ ಬರಲು ಶಿಕ್ಷಣ ನಮಗಿರುವ ಪ್ರಮುಖಅಸ್ತ್ರಎಂದರು. ಗದ್ದಿಗೆ ಸ್ಮರಣ ಸಂಚಿಕೆಯನ್ನು ಡಾ ಎಂ ಮೋಹನ ಆಳ್ವ ಬಿಡುಗಡೆಗೊಳಿಸಿದರು. ಕರ್ಯಕ್ರಮದಲ್ಲಿ ಪ್ರಮುಖ ಮೂರು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಯಿತು. ಮೊದಲನೆ ಗೋಷ್ಠಿಯಲ್ಲಿ ಶಿಕ್ಷಣ ಮತ್ತು ಯುವಜನತೆ ವಿಷಯದ ಕುರಿತು ಡಾ ಎಂ ಮೋಹನ್ ಆಳ್ವ ಮಾತನಾಡಿದರು. ಎರಡನೇ ಗೋಷ್ಠಿಯಲ್ಲಿ ಮರಾಟಿಗರ ಆಚಾರ ವಿಚಾರ ಮತ್ತು ಸಂಸ್ಕಾರ ವಿಷಯದ ಕುರಿತು ನ್ಯಾಯವಾದಿ ಎನ್ಎಸ್ ಮಂಜುನಾಥ ವಿಷಯ ಮಂಡಿಸಿದರು.
ಕೊನೆಯ ಗೋಷ್ಠಿ ಮರಾಟಿಗರ ಸಮಸ್ಯೆ ಮತ್ತ ಸವಾಲುಗಳು ಕುರಿತು ಉಚ್ಛನ್ಯಾಲಯದ ನ್ಯಾಯವಾದಿ ಪ್ರವೀಣಕುಮಾರ ಮುಗುಳಿ ಮಾತನಾಡಿದರು. ಮರಾಟಿ ಭಾಷೆ ಉಳಿಸುವುದು ಮತ್ತು ಬೆಳೆಸುವುದು ವಿಷಯದಲ್ಲಿ ದೈಹಿಕ ಶಿಕ್ಷಕಿ ರತಿ ಪ್ರಭಾಕರ ನಾಯ್ಕ ಉಪನ್ಯಾಸ ನೀಡಿದರು. ಪದ್ಮಶ್ರೀ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಅಮೈ ಮಹಾಲಿಂಗ ನಾಯ್ಕರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿ ಬರೋಡಾ ಶಶಿಧರ ಶೆಟ್ಟಿ, ಕೇಂದ್ರ ಸರ್ಕಾರದ ನಿವೃತ್ತ ಕೃಷಿ ನಿರ್ದೇಶಕ ಡಾ.ಬಿ.ಜಿ.ನಾಯ್ಕ, ಬೆಂಗಳೂರು ಮರಾಟಿ ಸಂಘದ ಅಧ್ಯಕ್ಷೆ ಶೋಭಾವತಿ ಎಂ.ಟಿ., ದಕ್ಷಿಣ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ವಿಶ್ವನಾಥ ನಾಯ್ಕ, ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ, ಸಮ್ಮೇಳನದ ಸಂಚಾಲಕ ಡಾ.ಬಾಲಕೃಷ್ಣ ಸಿ.ಎಚ್., ಕೂಡ್ಲಿ ಮರಾಟಿ ಸಮಾಜದ ಅಧ್ಯಕ್ಷ ರಾಮಚಂದ್ರ ನಾಯ್ಕ್, ಕೆ. ಚಂದ್ರಶೇಖರ ನಾಯ್ಕ್, ಎಸ್. ಎಸ್. ಪರಮೇಶ್ವರ, ಸಮ್ಮೇಳನದ ಸಹಸಂಚಾಲಕ ಪ್ರಕಾಶ್ ನಾಯ್ಕ ಮೊದಲಾದವರು ಇದ್ದರು. ಸಮ್ಮೇಳನದ ಕಾರ್ಯಾಧ್ಯಕ್ಷ ರಾಮಚಂದ್ರ ಕೆಂಬಾರೆ ಅವರು ಮನವಿ ವಾಚಿಸಿದರು. ಮರಾಟಿ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕರ್ಯಕ್ರಮಗಳು ಜರುಗಿದವು. ಆಳ್ವಾಸ್ಶಿ ಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ವಿಶೇಷ ವೈವಿಧ್ಯಮಯ ಕರ್ಯಕ್ಮ ನಡೆಯಿತು. ಸಮಾವೇಶದ ಗೌರವಾಧ್ಯಕ್ಷ ಡಾ.ಕೆ.ಸುಂದರ ನಾಯ್ಕ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಂಕರ ನಾಯ್ಕ ವಂದಿಸಿದರು. ಉಪನ್ಯಾಸಕ ಪ್ರಕಾಶ ನಾಯ್ಕ ನಿರೂಪಿಸಿದರು.