ಕರ್ನಾಟಕದ ಗಡಿನಾಡು ಕಾಸರಗೋಡಿನಲ್ಲಿ ಬಹಳಷ್ಟು ಮಂದಿ ಕನ್ನಡಿಗರು ಇದ್ದುದರಿಂದ ಅದು ಕರ್ನಾಟಕ ರಾಜ್ಯಕ್ಕೆ ಸೇರಬೇಕೆಂದು ಖ್ಯಾತ ಕವಿ ಕಯ್ಯಾರ ಕಿಞ್ಞಣ್ಣ ರೈ ಸಹಿತ ಹಲವಾರು ಮಂದಿ ಹೋರಾಟ ಮಾಡಿದ್ದರು. ಆದರೆ ಕೇರಳ ಸರಕಾರವು ಕಾಸರಗೋಡನ್ನು ಕೇರಳ ರಾಜ್ಯದ ಒಂದು ಜಿಲ್ಲೆಯನ್ನಾಗಿ ಘೋಷಿಸಿದ ಮೇಲೆ ಕರ್ನಾಟಕ ರಾಜ್ಯದೊಂದಿಗೆ ವಿಲೀನವಾಗುವುದು ತಪ್ಪಿದರೂ ಕನ್ನಡದ ಕಂಪು ಈಗಲೂ ಪಸರಿಸುತ್ತಲೇ ಇದೆ. ಇದೇ ಬರುವ ನವೆಂಬರ್ 10 ನೇ ತಾರೀಕು ಕಾಸರಗೋಡಿನ ಮೀಪುಗುರಿ ಎಲ್ ಪಿ ಶಾಲೆಯ ಪ್ರದೇಶದಲ್ಲಿ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನವು ಜರುಗಲಿದೆ. ಕರ್ನಾಟಕ ರಾಜ್ಯದ ಮತ್ತು ಕೇರಳ ರಾಜ್ಯದ ಶಾಲೆಗಳ ಒಂದು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸೇರಿ ತಮ್ಮ ಪ್ರತಿಭೆಯನ್ನು ಪ್ರಸ್ತುತ ಪಡಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಖ್ಯಾತ ಸಾಹಿತಿಗಳು, ಮಂತ್ರಿಗಳು, ಶಾಸಕರು, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸ್ವಾಮಿಗಳು, ಪೋಲೀಸ್ ಅಧಿಕಾರಿಗಳು, ಕಾಲೇಜುಗಳ ಪ್ರಿನ್ಸಿಪಾಲರುಗಳು ಮತ್ತು ಉಪನ್ಯಾಸಕರು, ಯಕ್ಷಗಾನ, ನಾಟಕ ಮತ್ತು ಸಂಗೀತಗಾರರು ಇತ್ಯಾದಿ ಘಟಾನಾಘಟಿಗಳು ಭಾಗವಹಿಸಿ ಸಮ್ಮೇಳನಕ್ಕೆ ಮೆರುಗು ನೀಡುವುದಲ್ಲದೇ, ಮಕ್ಕಳಿಗೆ ಹಲವಾರು ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ
ಈ ಐತಿಹಾಸಿಕ ಸಮ್ಮೇಳನದಲ್ಲಿ ಮುಂಬಯಿ ನಿವಾಸಿಯಾದ ಶ್ರೀಮತಿ ಶಾಲಿನಿ ಸತೀಶ್ ಶೆಟ್ಟಿ, ಸಚ್ಚೇರಿಗುತ್ತು ಇವರಿಗೆ ಇವರ ಸ್ಥಾಪಕಾಧ್ಯಕ್ಷತೆಯ “ಶ್ರೀ ಶಕ್ತಿ ಫೌಂಡೇಶನ್ ಮಹಾರಾಷ್ಟ್ರ, ಇದರ ಕಾರ್ಯ ಚಟುವಟಿಕೆಗಳನ್ನು ಮತ್ತು ಸಮಾಜ ಸೇವೆಯನ್ನು ಗುರುತಿಸಿ “ಕರಾವಳಿ ಪ್ರತಿಭಾಶಾಲಿನಿ” ಎಂಬ ರಾಷ್ಟ್ರೀಯ ಪ್ರಶಸ್ತಿ” ನೀಡಿ ಗೌರವಿಸಲಿದ್ದಾರೆ. ಮುಂಬಯಿಯಲ್ಲಿ ಹಲವಾರು ಕಡೆ ಪ್ರಶಸ್ತಿ ಮತ್ತು ಸನ್ಮಾನ ಸ್ವೀಕರಿಸಿರುವ ಶ್ರೀಮತಿ ಶಾಲಿನಿ ಸತೀಶ್ ಶೆಟ್ಟಿ ಸಚ್ಚೇರಿಗುತ್ತು ಇವರು “ಜಯದೇವಿ ತಾಯಿ ಲಿಗಾಡೆ ಪ್ರಶಸ್ತಿ” ಮತ್ತು “ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ”ಯಂತಹ ಮೇರು ಪ್ರಶಸ್ತಿಗಳಿಗೂ ಭಾಜನರಾದವರು. ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಜರುಗಿದ “ಹೊರನಾಡ ಕನ್ನಡಿಗರ ಸಮ್ಮೇಳನದ” ಆಯೋಜಕರು ಶ್ರೀಮತಿ ಶಾಲಿನಿಯವರನ್ನು ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿ ಗೌರವಿಸಿದ್ದಾರೆ.
ಇದೇ ಬರುವ ನವೆಂಬರ್ ತಾರೀಕು 10ರಂದು ಕೇರಳ ರಾಜ್ಯದ ಕಾಸರಗೋಡುವಿನಲ್ಲಿ ಜರಗಲಿರುವ “ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಪ್ರದಾನಿಸಲಾಗುತ್ತಿರುವ “ಕರಾವಳಿ ಪ್ರತಿಭಾಶಾಲಿನಿ” ಎಂಬ ರಾಷ್ಟ್ರೀಯ ಪ್ರಶಸ್ತಿಯು ಶ್ರೀಮತಿ ಶಾಲಿನಿ ಸತೀಶ್ ಶೆಟ್ಟಿ ಸಚ್ಚೇರಿಗುತ್ತು ಇವರ ಮೇರು ಪ್ರತಿಭೆಗೆ ದಕ್ಕಿರುವ ಪ್ರಶಸ್ತಿಗಳ ಮುಕುಟದ ಮಧ್ಯದಲ್ಲಿ ಕಂಗೊಳಿಸಲಿರುವ ಚಿನ್ನದ ನವಿಲಗರಿ ಎನ್ನಬಹುದು.