ಇಂದು ಶಿಕ್ಷಣ ಸಂಸ್ಥೆಗಳು ದೇಶದ ಭವಿಷ್ಯದ ಭದ್ರ ಬುನಾದಿಗೆ ಕಾರಣವಾಗಿವೆ. ಹೆಚ್ಚು ಹೆಚ್ಚು ಉತ್ತಮ ಶಿಕ್ಷಣ ಸಂಸ್ಥೆಗಳು ಸ್ಥಾಪನೆಗೊಂಡು ಶಿಕ್ಷಣ ಸರ್ವರಿಗೂ ಸಿಗುವಂತಾಗಬೇಕು. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಪೋಷಕರು ಉತ್ತಮ ಶಿಕ್ಷಣ ನೀಡಿದರೆ ಅದುವೇ ಅಮೂಲ್ಯ ಆಸ್ತಿಯಾಗುತ್ತದೆ. ಇಂದಿನ ಯುವ ಪೀಳಿಗೆಗೆ ನಮ್ಮ ನಾಡಿನ ಶ್ರೀಮಂತ ಸಂಸ್ಕೃತಿಯನ್ನು ಪರಿಚಯಿಸುವುದು ಅತ್ಯಗತ್ಯ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಶೆಟ್ಟಿ ಹೇಳಿದರು. ಅವರು ಕೋಟೇಶ್ವರ ಯಡಾಡಿ ಮತ್ಯಾಡಿ ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ದೀಪಾವಳಿ ಸಂಭ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹೆಗ್ಗದ್ದೆ ಸ್ಟುಡಿಯೋ ಯೂಟ್ಯೂಬ್ ಚಾನಲ್ ನ ಸಂದೀಪ್ ಶೆಟ್ಟಿ ಮಾತನಾಡುತ್ತಾ “ಮಕ್ಕಳು ಎಳವೆಯಲ್ಲಿಯೇ ಕನಸು ಕಾಣಬೇಕು ಮತ್ತು ನನಸಾಗಿಸಲು ಪ್ರಯತ್ನಿಸಬೇಕು” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಡಾ| ರಮೇಶ್ ಶೆಟ್ಟಿ ಮಾತನಾಡಿ, ಮಕ್ಕಳಿಗೆ ನಮ್ಮ ನಾಡಿನ ಆಚಾರ ವಿಚಾರಗಳನ್ನು ತಿಳಿಸುವುದು ಇಂತಹ ಕಾರ್ಯಕ್ರಮಗಳ ಉದ್ದೇಶ ಎಂದು ಹೇಳಿದರು.
ಇಂದಿನ ಆಧುನಿಕ ಯುಗದಲ್ಲಿ ಜನ ಒತ್ತಡ ಹಾಗೂ ಇತರ ಕಾರಣಗಳಿಂದ ನಮ್ಮ ಹಿಂದಿನ ಪರಂಪರೆ, ಆಚಾರ ವಿಚಾರಗಳನ್ನು ಒಳಗೊಂಡ ಶ್ರೀಮಂತ ಸಂಸ್ಕೃತಿಯನ್ನು ಮರೆಯುತ್ತಿದ್ದು ಈ ಕಾಲಘಟ್ಟದ ಮಕ್ಕಳಿಗೆ ಅದರ ಪರಿಚಯವೇ ಇಲ್ಲದಂತಾಗಿದೆ. ಕಾರ್ಯಕ್ರಮದಲ್ಲಿ ತುಳಸಿ ಪೂಜೆ, ಬಲಿಂದ್ರ ಪೂಜೆ, ಗೋಪೂಜೆ, ಹಳೆಯ ಕಾಲದ ಪರಿಕರಗಳ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಿ ಮಕ್ಕಳಿಗೆ ತುಳಸಿ ಪೂಜೆ ಮತ್ತು ಗೋಪೂಜೆಯ ಮಹತ್ವ ತಿಳಿಸಲಾಯಿತು. ಹಿಂದಿನ ಸಂಪ್ರದಾಯದ ಪರಿಚಯ ಜೊತೆಗೆ ಮಕ್ಕಳಲ್ಲಿ ಮೌಲ್ಯಗಳನ್ನು ಹೆಚ್ಚಿಸಲು ದೀಪಾವಳಿಯ ಸಮಯದಲ್ಲಿ ಆಚರಿಸುವ ಬಲಿಂದ್ರ ಚಕ್ರವರ್ತಿಯ ತ್ಯಾಗದ ಪ್ರತೀಕವಾದ ಬಲಿಂದ್ರ ಪೂಜೆಯು ವಿಶೇಷವಾಗಿತ್ತು. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಬಳಸುತ್ತಿದ್ದ ರೈತಾಪಿ ಪರಿಕರಗಳಾದ ನೊಗ, ಕಳಸಿಗೆ, ಸೇರು, ಸಿದ್ದಿ ಹಾಗೂ ದಿನಬಳಕೆಯ ಬೀಸುಕಲ್ಲು, ಕಡೆಗೋಲು, ಗ್ಯಾಸ್ ಲೈಟ್ ಇತ್ಯಾದಿ ಸುಮಾರು 500ಕ್ಕೂ ವಸ್ತುಗಳನ್ನು ಒಳಗೊಂಡ ಹಿಂದಿನ ಕಾಲದ ವಸ್ತುಗಳ ಪ್ರದರ್ಶನ ಮಕ್ಕಳ ಜಾನಪದ ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಯಿತು. ವೈಜ್ಞಾನಿಕವಾಗಿ ಹೆಚ್ಚು ಪ್ರಗತಿ ಹೊಂದದ ಕಾಲದಲ್ಲಿಯೂ ನಮ್ಮ ಜನಪದರ ಸೃಜನಶೀಲತೆಯಿಂದ ಮೂಡಿ ಬಂದು ಬಹುಪಯೋಗಿಯಾಗಿದ್ದ ವಸ್ತುಗಳನ್ನು ಮಕ್ಕಳು ಕುತೂಹಲದಿಂದ ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಮೂಡಿ ಬಂದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ವಿವಿಧ ನೃತ್ಯ ಪ್ರಕಾರಗಳನ್ನು ಒಳಗೊಂಡು ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಹೆಗ್ಗದ್ದೆ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ನ ಸಂದೀಪ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಸುಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಂಜನ್ ಶೆಟ್ಟಿ, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಉಪಸ್ಥಿತರಿದ್ದರು. ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಖಜಾಂಚಿ ಭರತ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ರಜತ್ ಭಟ್ ನಿರೂಪಿಸಿದರು.