ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗುವುದು ಸಹಕಾರಿ ಕ್ಷೇತ್ರದಿಂದ ಮಾತ್ರ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು. ಮಂದಾರ್ತಿ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಮಂದಾರ್ತಿ ರಥಬೀದಿಯಲ್ಲಿ ನಡೆದ ಶತಸಾರ್ಥಕ್ಯ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ, ಸ್ಮರಣ ಸಂಚಿಕೆ ಬಿಡುಗಡೆ ಬಿಡುಗಡೆ ಮಾಡಿ ಭಾನುವಾರ ಮಾತನಾಡಿದರು.
ಸಂಘದ ಅಧ್ಯಕ್ಷ ಎಚ್. ಗಂಗಾಧರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, 1925 ರಲ್ಲಿ ಆರಂಭಗೊಂಡ ಸಂಘವನ್ನು ಎಲ್ಲರೂ ತಮ್ಮ ಶ್ರಮದಿಂದ ಕಟ್ಟಿ ಬೆಳೆಸಿದ್ದಾರೆ. ಹಿಂದಿನ ಎಲ್ಲಾ ಅಧ್ಯಕ್ಷರು, ಸಿಇಒ ಉತ್ತಮ ಸೇವೆ ಸಲ್ಲಿಸಿದ್ದಾರೆ. ಸಿಬ್ಬಂದಿಯ ವಿನಯ, ವಿಧೇಯತೆಯಿಂದ ಸಂಸ್ಥೆ ಸೇವೆ ಸಲ್ಲಿಸುತ್ತಾ ಬಂದಿದ್ದರಿಂದ ಮತ್ತು ಗ್ರಾಹಕರ ಸಹಕಾರದಿಂದ ಇಂದು 100 ಕೋಟಿ ಠೇವಣಿ ಸಂಗ್ರಹ ಮಾಡಲು ಸಾಧ್ಯವಾಯಿತು ಎಂದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್ ಗಳ ಕಾನೂನು ಮತ್ತು ಭಾಷೆಯ ಗೊಂದಲಗಳಿಂದ ವಾಣಿಜ್ಯ ಬ್ಯಾಂಕ್ ಗಳ ಸ್ಥಾನವನ್ನು ಸಹಕಾರಿ ಕ್ಷೇತ್ರ ಆವರಿಸುತ್ತಿದೆ. ಸಹಕಾರಿ ಕ್ಷೇತ್ರವು ಗ್ರಾಮ ಪಂಚಾಯಿತಿಗೆ ಶಕ್ತಿಯನ್ನು ನೀಡುತ್ತಾ ಸಮಾಜದ ಕಟ್ಟಕಡೆಯ ಗ್ರಾಹಕನಿಗೂ ಸೇವೆ ಕೊಡುವಂತಾಗಲಿ ಎಂದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಗ್ರಾಹಕರ ಎಲ್ಲಾ ಅಶೋತ್ತರಗಳನ್ನು ಈಡೇರಿಸಿರುವುದರಿಂದ ಈ ಸಂಸ್ಥೆ ಇತರರಿಗೆ ಮಾದರಿಯಾಗಿ, ಶತಮಾನೋತ್ಸವ ಆಚರಿಸಿದೆ ಎಂದರು.
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಜಯಕರ ಶೆಟ್ಟಿ ಎಂ., ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ನಿರ್ದೇಶಕ ಡಾ. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಹಿರಿಯಡ್ಕ ರೈತರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ಇನ್ನಂಜೆ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ರಾಜೇಶ್ ರಾವ್, ಹೆಗ್ಗುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಕೃಷ್ಣ, ಕಾಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಲಂಧರ ಶೆಟ್ಟಿ, ಬಿಲ್ಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ಉಪಸ್ಥಿತರಿದ್ದರು.
ಈ ಸಂದರ್ಭ ಮಾಜಿ ನಿರ್ದೇಶಕರು, ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿ, ಸಂಘಕ್ಕೆ ಶ್ರಮಿಸಿದ ಸಿಬ್ಬಂದಿಯನ್ನು ಗೌರವಿಸಲಾಯಿತು. ಉಪಾಧ್ಯಕ್ಷ ಕೆ. ಶಂಭುಶಂಕರ ರಾವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ ಶೆಟ್ಟಿ, ನಿರ್ದೇಶಕರಾದ ಶೇಡಿಕೊಡ್ಲು ವಿಠಲ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಗುರುಪ್ರಸಾದ್, ಸಂತೋಷ್ ಶೆಟ್ಟಿ, ಬಸವ ಮರಾಠಿ, ಪ್ರವೀಣ್ ಕುಮಾರ್ ಶೆಟ್ಟಿ, ಬೇಬಿ ಪೂಜಾರ್ತಿ, ಪ್ರೇಮ, ರಾಧಾ, ಕಾರ್ಯ ನಿರ್ವಹಣಾಧಿಕಾರಿ ರಾಮಕೃಷ್ಣ ಶೆಟ್ಟಿ, ರಾಜಾರಾಮಶೆಟ್ಟಿ ಉಪಸ್ಥಿತರಿದ್ದರು. ಸುಪ್ರೀತಾ ಡಿ. ಶೆಟ್ಟಿ ಪ್ರಾರ್ಥಿಸಿದರು. ನಿರ್ದೇಶಕ ಶೇಡಿಕೊಡ್ಲು ವಿಠಲ್ ಶೆಟ್ಟಿ ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷ ಎಚ್. ಗಂಗಾಧರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಮತ್ತು ಶಶಿಧರ್ ಶೆಟ್ಟಿ ನಂಚಾರು ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಗುರುಪ್ರಸಾದ್ ವಂದಿಸಿದರು.
ಮುಖ್ಯ ಅತಿಥಿಗಳನ್ನು ದೇವಳದಿಂದ ಮೆರವಣಿಗೆಯಲ್ಲಿ ಚಂಡೆ, ವಾದ್ಯ, ಘೋಷಣೆಗಳಿಂದ ಕರೆತರಲಾಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಖ್ಯಾತ ಹಾಸ್ಯ ಕಲಾವಿದ ಕುಂದಗನ್ನಡ ರಾಯಭಾರಿ ಮನು ಹಂದಾಡಿ ಅವರಿಂದ ನಗೆ ಹೊನಲು ಕಾರ್ಯಕ್ರಮ ಮತ್ತು ಪುಟಾಣಿಗಳಿಂದ ನಡೆದ ಯಕ್ಷನಾಟ್ಯ ಕಾರ್ಯಕ್ರಮ ನೆರೆದ ಸಭಿಕರ ಮನಸೂರೆಗೊಂಡಿತು. ಜಿಲ್ಲೆಯ ನಾನಾ ಸಹಕಾರಿ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಮಂದಾರ್ತಿ ಸೇವಾ ಸಹಕಾರಿ ಸಂಘದ ಸಿಬ್ಬಂದಿ, ಗ್ರಾಹಕರು ಪಾಲ್ಗೊಂಡಿದ್ದರು.