ನವೆಂಬರ್ 1: ಎಲ್ಲೆಡೆ ಕನ್ನಡಗೀತೆಗಳ ಮಾರ್ದನಿ, ಹಳದಿ ಕೆಂಪು ಬಣ್ಣಗಳಿಂದ ಅಲಂಕೃತಗೊಂಡ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಕನ್ನಡ ಧ್ವಜವನ್ನು ಅರಳಿಸಿ ಮಾತನಾಡಿ, ಕರುನಾಡು ಸಂಸ್ಕೃತಿಯ ಬೀಡು, ಕನ್ನಡ ಸಾಹಿತ್ಯವನ್ನು ಮಕ್ಕಳು ಓದಬೇಕು. ಕನ್ನಡ ಕಂಪನ್ನು ಎಲ್ಲೆಡೆ ಪಸರಿಸಬೇಕು. ಕುವೆಂಪುರವರ ವಿಶ್ವಮಾನವ ಸಂದೇಶವನ್ನು ಪಾಲಿಸಬೇಕೆಂದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭ ಹಾರೈಸಿ ಮಾತನಾಡಿ ನಾವು ನಮ್ಮ ನಾಡಿನ ನೆಲ, ಜಲ ಶ್ರೀಮಂತ ಸಂಸ್ಕೃತಿಯನ್ನು ತಿಳಿಯಬೇಕು. ಇಂದಿನ ತಂತ್ರಜ್ಞಾನದ ಯುಗದಲ್ಲಿ ಕನ್ನಡದ ಜೊತೆಗೆ ಅನ್ಯ ಭಾಷೆಗಳ ಕಲಿಕೆ ಅನಿವಾರ್ಯವಾಗಿದೆ. ಆದರೆ ಯಾವಾಗಲೂ ಕನ್ನಡಿಗರು ಎನ್ನುವ ಆತ್ಮಾಭಿಮಾನ, ಹೆಮ್ಮೆ ನಮ್ಮಲ್ಲಿ ಇರಬೇಕೆಂದರು. ಕಾರ್ಯಕ್ರಮದಲ್ಲಿ ವಿಶ್ವನಾಥ್ ಪ್ರಭು, ತ್ಯಾಗೀಶ್ಚಂದ್ರ ಶೆಟ್ಟಿ, ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿರಿದ್ದರು.