ಮಹಾಕವಿ ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ ಸಂಸ್ಕೃತ ನಾಟಕವನ್ನಾಧರಿಸಿದ ‘ಸತೀ ಶಕುಂತಲೆ’ ಯಕ್ಷಗಾನ ತಾಳಮದ್ದಳೆಯು ಈ ವಾರದಿಂದ ಮಂಗಳೂರು ಆಕಾಶವಾಣಿಯಲ್ಲಿ ಎರಡು ಭಾಗಗಳಾಗಿ ಮೂಡಿ ಬರಲಿದೆ. ಕರ್ನಾಟಕ ಯಕ್ಷ ಭಾರತಿ ಪುತ್ತೂರು ತಂಡದ ಕಲಾವಿದರು ಭಾಗವಹಿಸಿರುವ ಈ ಯಕ್ಷಗಾನ ತಾಳಮದ್ದಳೆಯ ಮೊದಲನೇ ಭಾಗ ‘ಮುದ್ರಿಕಾ ಪ್ರದಾನ’ 2024 ಅಕ್ಟೋಬರ್ 18 ಶುಕ್ರವಾರದಂದು ರಾತ್ರಿ ಗಂಟೆ 9.30ಕ್ಕೆ ಪ್ರಸಾರವಾಗಲಿದೆ.
ಅರ್ಥಧಾರಿಗಳಾಗಿ ಭಾಸ್ಕರ ರೈ ಕುಕ್ಕುವಳ್ಳಿ, ಗಣರಾಜ ಕುಂಬ್ಳೆ, ಎಂ.ಕೆ ರಮೇಶಾಚಾರ್ಯ, ರಮೇಶ ಸಾಲ್ವಣ್ಕರ್ ಹಾಗೂ ಉಮೇಶಾಚಾರ್ಯ ಗೇರುಕಟ್ಟೆ ಪಾತ್ರ ವಹಿಸಲಿದ್ದಾರೆ. ಭಾಗವತರಾಗಿ ಪ್ರಶಾಂತ ರೈ ಪುತ್ತೂರು, ಹಿಮ್ಮೇಳದಲ್ಲಿ ಪಿ.ಟಿ. ಜಯರಾಮ ಭಟ್, ಕೋಳ್ಯೂರು ಭಾಸ್ಕರ ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಸಹಕರಿಸಲಿದ್ದಾರೆ.
ಪ್ರಸಂಗದ ಎರಡನೇ ಭಾಗ ‘ಸತೀ ಸಮಾಗಮ’ ಮುಂದಿನ ಶುಕ್ರವಾರ ಅಕ್ಟೋಬರ್ 25 ರಂದು ರಾತ್ರಿ 9:30ಕ್ಕೆ ಪ್ರಸಾರವಾಗುವುದು. ಕರ್ನಾಟಕ ಯಕ್ಷ ಭಾರತಿ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸಂಯೋಜಿಸಿದ ಈ ಯಕ್ಷಗಾನವನ್ನು ಮಂಗಳೂರು ಆಕಾಶವಾಣಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೂರ್ಯನಾರಾಯಣ ಭಟ್ ಪಿ.ಎಸ್ ನಿರ್ಮಿಸಿ ಬಾನುಲಿ ಪ್ರಸಾರಕ್ಕೆ ಸಿದ್ಧಪಡಿಸಿದ್ದಾರೆ. ಚೈತನ್ಯ ಪ್ರಶಾಂತ್ ಧ್ವನಿ ಮುದ್ರಣದಲ್ಲಿ ಸಹಕರಿಸಿದ್ದಾರೆ ಎಂದು ಪುತ್ತೂರಿನ ಕರ್ನಾಟಕ ಯಕ್ಷ ಭಾರತಿಯು ಪ್ರಕಟಣೆಯಲ್ಲಿ ತಿಳಿಸಿದೆ.