ಇಂದು ಡಿಜಿಟಲ್ ಸಾಕ್ಷರತೆಯಿಲ್ಲದೆ ದೈನಂದಿನ ಜೀವನ ನಡೆಯುವುದು ಕಷ್ಟ. ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಜ್ಞಾನವಿಲ್ಲದೆ ಉದ್ಯೋಗ ವ್ಯವಹಾರ ಅಸಾಧ್ಯ ಎಂದು ಉಡುಪಿ ಸ್ವದೇಶ್ ಗ್ರೂಪ್ ಆಫ್ ಹೋಟೆಲ್ಸ್ ನ ಚೇರ್ಮನ್ ಮ್ಯಾನೇಜಿಂಗ್ ಡೈರೆಕ್ಟರ್ ನಾಗೇಶ್ ಹೆಗ್ಡೆ ಹೇಳಿದರು. ಕುಂತಳನಗರದ ಉಡುಪಿ ಗ್ರಾಮೀಣ ಸಂಘದ ಗ್ರಾಮೀಣ ಬಂಟರ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಮಂಗಳೂರು ಪ್ರಾಯೋಜಕತ್ವದಲ್ಲಿ ನಡೆಯುವ ಕಂಪ್ಯೂಟರ್ ಉಚಿತ ತರಬೇತಿ ಕಾರ್ಯಕ್ರಮದ 17ನೇ ಬ್ಯಾಚ್ ನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮದಲ್ಲಿ ಈವರೆಗೆ 360 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಕೌಶಲ್ಯ ಮತ್ತು ಉದ್ಯೋಗ ತರಬೇತಿ ಶಿಬಿರದ ಮೂಲಕ 2200 ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಮಹಿಳೆಯರಿಗೆ ತರಬೇತಿ ನೀಡಲಾಗಿದ್ದು, ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಎರಡು ಬೃಹತ್ ಉದ್ಯೋಗ ಮೇಳದ ಮೂಲಕ 1300 ಅಭ್ಯರ್ಥಿಗಳಿಗೆ ಉದ್ಯೋಗ ದೊರೆತಿದೆ ಎಂದರು.
ಸಮಾಜ ಸೇವಕಿ ಬಿಂದು ಶೆಟ್ಟಿ ಮಣಿಪುರ ಮುಖ್ಯ ಅತಿಥಿಗಳಾಗಿದ್ದರು. ಟ್ರಸ್ಟ್ ನ ಟ್ರಸ್ಟಿಗಳಾದ ದಯಾನಂದ ಶೆಟ್ಟಿ ಕಲ್ಮಂಜೆ, ರಂಜಿನಿ ಹೆಗ್ಡೆ, ರಮೇಶ್ ಶೆಟ್ಟಿ ನಿಂಜೂರು, ಗೋಪಾಲ ಶೆಟ್ಟಿ ಕಂಪ್ಯೂಟರ್ ತರಬೇತಿದಾರ ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು. ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮ ನಿರ್ದೇಶಕ ಪದ್ಮನಾಭ ಹೆಗ್ಡೆ ವಂದಿಸಿದರು. ಕೋಶಾಧಿಕಾರಿ ಹಾಗೂ ಕಾರ್ಯಕ್ರಮ ನಿರ್ದೇಶಕ ವಿಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.