ಬಂಟರ ಯಾನೆ ನಾಡವರ ಮಾತೃ ಸಂಘ ಬಂಟ್ಸ್ ಹಾಸ್ಟೆಲ್ ಮಂಗಳೂರು ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ಬಂಟರ ಕ್ರೀಡಾಕೂಟ ‘ಬಂಟರ ಕ್ರೀಡೋತ್ಸವ 2024’ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಕ್ರೀಡಾಂಗಣದಲ್ಲಿ ಜರಗಿತು. ಈ ಕ್ರೀಡಾಕೂಟದಲ್ಲಿ ಗುರುಪುರ ಬಂಟರ ಮಾತೃ ಸಂಘವು ಎಲ್ಲಾ ಕ್ರೀಡಾ ವಿಭಾಗಗಳಲ್ಲಿ ಭಾಗವಹಿಸಿ 9 ಪ್ರಥಮ, 6 ದ್ವಿತೀಯ, 3 ತೃತೀಯ ಬಹುಮಾನಗಳನ್ನು ಪಡೆದು ಸತತ ಮೂರನೇ ವರ್ಷ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.

ಕ್ರೀಡಾಕೂಟವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕಾರ್ಯದರ್ಶಿ ಎಂ. ಸುಂದರ್ ಶೆಟ್ಟಿ ಉದ್ಘಾಟಿಸಿ, ಬಂಟರು ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದು, ಕ್ರೀಡೋತ್ಸವಗಳಿಂದ ಇನ್ನಷ್ಟು ಕ್ರೀಡಾ ಪ್ರತಿಭೆಗಳು ಹೊರಗೆ ಬರಲಿ ಎಂದರು. ಸಂಜೆ ನಡೆದ ಸಮಾರೋಪದ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ವಹಿಸಿದ್ದರು.

ಸಿದ್ಧಿವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಬಿ ನಾಗರಾಜ್ ಶೆಟ್ಟಿ, ಜೆಪ್ಪು ಬಂಟರ ಸಂಘದ ಅಧ್ಯಕ್ಷ ವಸಂತ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಉದ್ಯಮಿ ಯಶವಂತ್ ಶೆಟ್ಟಿ, ಕೆ.ಎಂ.ಎಫ್ ಅಧ್ಯಕ್ಷ ಸುಚರಿತ ಶೆಟ್ಟಿ, ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಕಿರಣ್ ಪಕ್ಕಳ ಉಪಸ್ಥಿತರಿದ್ದರು.






































































































