ವಿದ್ಯಾಗಿರಿ: ನಾವು ಸೇವಿಸುವ ಆಹಾರ ಯಾವುದೇ ಬಾಹ್ಯ ಅಂಶಗಳಿಂದ ನಿರ್ಧರಿತವಾಗಿರಬಾರದು. ಆದರೆ ಭಾರತದಲ್ಲಿ ಆಹಾರ ವ್ಯವಸ್ಥೆಯು ಸಾರ್ವಜನಿಕ ನೀತಿಯನ್ನು ಅವಲಂಬಿಸಿದೆ. ಹಾಗಾಗಿ ನಾವು ಏನು ಬಯಸುತ್ತವೆಯೋ ಅದನ್ನು ಸೇವಿಸುವ ಬದಲು ನಮ್ಮ ನಡುವೆ ನಿರ್ಮಾಣಗೊಂಡಿರುವ ವ್ಯವಸ್ಥೆಗೆ ಒಳಗಾಗಿ ಆಹಾರವನ್ನು ತೆಗೆದುಕೊಳ್ಳುವ ಸ್ಥಿತಿಗೆ ನಾವು ಬಂದಿದ್ದೇವೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್. ಧರ್ಮ ಹೇಳಿದರು.
ಐಎಪಿಇಎನ್ ಇಂಡಿಯಾದ ಮಂಗಳೂರು ಘಟಕದ ಸಹಕಾರದಲ್ಲಿ ಆಳ್ವಾಸ್ ಶಿಕ್ಷಣಪ್ರತಿಷ್ಠಾನ(ರಿ)ದ ಆತಿಥ್ಯದಲ್ಲಿ ಆಹಾರ, ಪೌಷ್ಟಿಕ ಮತ್ತು ಆಹಾರಪದ್ಧತಿಯ ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ‘ಕ್ಷೇಮ ಮತ್ತು ಅನಾರೋಗ್ಯದಲ್ಲಿ ಪೌಷ್ಟಿಕ ಚಿಕಿತ್ಸೆಯ ಸಮಗ್ರ ವಿಧಾನ’ ಕುರಿತ ಅಂತರರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ವೈದ್ಯರು ತಿಳಿಸುವ ಆಹಾರದ ಬದಲು ನಮ್ಮ ಧಾರ್ಮಿಕ ಹಾಗೂ ರಾಜಕೀಯ ಮುಖಂಡರು ನಮ್ಮ ಆಹಾರವನ್ನು ನಿರ್ಧಾರ ಮಾಡುತ್ತಿದ್ದಾರೆ. ಝೊಮ್ಯಾಟೋ, ಸ್ವಿಗ್ಗಿ ಬಹುರಾಷ್ಟ್ರೀಯ ಆಹಾರ ವಿತರಣಾ ಕಂಪೆನಿಗಳು ನಮ್ಮ ಮೆನುವನ್ನು ನಿರ್ಧಾರ ಮಾಡುತ್ತಿವೆ.
ಹಿಂದೆ ಗಂಜಿ ಊಟದಂತಹ ಆಹಾರ ಪದ್ಧತಿಗೆ ಹೊಂದಿಕೊಂಡಿದ್ದ ನಮ್ಮ ಹಿರಿಯರು ಆರೋಗ್ಯವಾಗಿದ್ದರು. ಆದರೆ, ಈಗ ಜಂಕ್ಫುಡ್ ಹೆಚ್ಚಾಗಿದ್ದು, ಮಂಗಳೂರಿನಲ್ಲಿಯೇ 2,400 ಕ್ಕೂ ಅಧಿಕ ಮಂದಿ ಆಹಾರ ಸರಬರಾಜು (ಡೆಲಿವರಿ ಬಾಯ್ಸ್) ಕೆಲಸದಲ್ಲಿ ತೊಡಗಿದ್ದಾರೆ. ಇಂತಹ ಆಹಾರ ಸರಬರಾಜು ಮಾಡುವ ಸಂಸ್ಥೆಗಳು ಪ್ರತಿ ವರ್ಷ ಶೇಕಡಾ 12.5ರಷ್ಟು ಹೆಚ್ಚಳವಾಗುತ್ತಿವೆ ಎಂದರು.
ಈ ಜಗತ್ತಿನಲ್ಲಿ ನಮ್ಮನ್ನು ನಾವು ರಕ್ಷಿಸಿಕೊಂಡಷ್ಟು ಬೇರೆ ಯಾರು ನಮ್ಮನ್ನು ಸಂರಕ್ಷಿಸಲಾರರು. ಈಗ ಚಾಲ್ತಿಯಲ್ಲಿರುವ ಇಂಗ್ಲೀಷ್ ಗಾದೆ- ದಿನಕ್ಕೆ ಒಂದು ಸೇಬು ವೈದ್ಯರನ್ನು ದೂರವಿಡುತ್ತದೆ ಎಂಬುದು ಸುಳ್ಳು. ಬದಲಾಗಿ ಮನೆಯಲ್ಲಿ ತಯಾರಾದ ಪಾರಂಪರಿಕ ಆಹಾರ ನಮ್ಮನ್ನು ಆರೋಗ್ಯವಂತರನ್ನಾಗಿ ಇಡಬಲ್ಲದು ಎಂದರು.
ಐಎಪಿಇಎನ್ ಇಂಡಿಯಾದ ಅಧ್ಯಕ್ಷ ಡಾ. ಪಿ.ಸಿ. ವಿಜಯಕುಮಾರ್ ಮಾತನಾಡಿ, ಮನುಷ್ಯನಿಗೆ ಆರೋಗ್ಯ ಬಹುಮುಖ್ಯ. ಅದನ್ನು ನಾವು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಎಂದರು. ಇಂದಿನ ದಿನಗಳಲ್ಲಿ ಮನೆಯಲ್ಲಿ ಅಡುಗೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ ಎಂದರು.
ಆರ್ಥಿಕ ಅಭಿವೃದ್ಧಿ ಹೊಂದಿದಂತೆ ಮನುಷ್ಯ ಸುಖ ಅನುಭವಿಸುತ್ತಾನೆ. ಆಗ ಸಹಜವಾಗಿ ಜೀವನಶೈಲಿಯ ಬದಲಾವಣೆಯಿಂದ ಆಹಾರದಲ್ಲಿ ವ್ಯತ್ಯಯ ಉಂಟಾಗಿ ಸಮಸ್ಯೆಗೆ ಈಡಾಗುತ್ತಾನೆ. ಅದಕ್ಕಾಗಿ ಆಹಾರದ ಬಗ್ಗೆ ಎಚ್ಚರ ಅವಶ್ಯ. ಪೌಷ್ಟಿಕ ಆಹಾರದಿಂದ ಆರೋಗ್ಯಕರ ಬದುಕು ಸಾಧ್ಯ ಎಂದರು.
ಆಳ್ವಾಸ್(ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ಯುವಜನತೆಯ ಆಹಾರ ಬುಟ್ಟಿಯು ಅನಾರೋಗ್ಯ ಈಡುಮಾಡುವ ವಸ್ತುಗಳಿಂದ ತುಂಬಿವೆ. ಅವರಿಗೆ ರಾಸಾಯನಿಕ ಬಳಸಿದ, ಕರಿದ ತಿಂಡಿಗಳೇ ಹೆಚ್ಚು ಪ್ರಿಯವಾಗಿದೆ. ಹೀಗಾಗಿ ಹೊಟ್ಟೆಗೆ ಮಲೀನವೇ ಹೆಚ್ಚು ಸೇರುತ್ತಿದೆ ಎಂದರು.
ಐಎಪಿಇಎನ್ ಇಂಡಿಯಾ ಉಪಾಧ್ಯಕ್ಷ ಶಿವ್ಶಂಕರ್ ತಿಮ್ಮರ್ಪ್ಯಾಟಿ, ಎನ್ಇಸಿ ಸದಸ್ಯರಾದ ಶ್ರೀಮತಿ ವೆಂಕಟರಾಮನ್, ಆಳ್ವಾಸ್ (ಸ್ವಾಯತ್ತ) ಕಾಲೇಜು ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಭಾಗದ ಮುಖ್ಯಸ್ಥೆ ಡಾ ಅರ್ಚನಾ ಪ್ರಭಾತ್ ಇದ್ದರು.
ಅಂತರರಾಷ್ಟ್ರೀಯ ವಿಚಾರಸಂಕಿರಣದ ಅಂಗವಾಗಿ 4 ವೈಜ್ಞಾನಿಕ ಅಧಿವೇಶನಗಳು ನಡೆದವು. ಶ್ರೀಲಂಕಾ, ದುಬೈ, ಮುಂಬೈ, ಉತ್ತರ ಪ್ರದೇಶ, ಮಣಿಪಾಲದಿಂದ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿದ್ದರು. ವಿಚಾರ ಸಂಕಿರಣದಲ್ಲಿ ದೇಶದ ವಿವಿಧ ಭಾಗಗಳಿಂದ 500 ಜನರು ಆಗಮಿಸಿದ್ದರು.
ನಂತರ ಸಮಾರೋಪ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಇದ್ದರು.
ಐಎಪಿಇಎನ್ ಇಂಡಿಯಾ ಮಂಗಳೂರು ಘಟಕದ ಅಧ್ಯಕ್ಷ ವಾಸುದೇವ ಭಟ್ ಸ್ವಾಗತಿಸಿದರು. ಹರ್ಷಿತಾ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಕಾರ್ತೀಕ ದೇವಿ ವಂದಿಸಿದರು.