ಯಕ್ಷಗಾನ ಕಲೆಗೆ ಅದರದೇ ಆದ ಮಹತ್ವವಿದೆ. ಮೂಲ ಚೌಕಟ್ಟಿಗೆ ಬದಲಾವಣೆಯಾಗದಂತೆ ಆ ಕಲೆಯನ್ನು ಪ್ರದರ್ಶಿಸಬೇಕು. ಇತ್ತೀಚೆಗೆ ಕೆಲವು ಪ್ರಸಂಗಗಳು ಯಕ್ಷಗಾನದ ಚೌಕಟ್ಟನ್ನು ಮೀರಿ ಪ್ರದರ್ಶನಗೊಳ್ಳುತ್ತಿರುವುದು ವಿಷಾದನೀಯ. ಯಕ್ಷಗಾನದಲ್ಲಿ ಬದಲಾವಣೆ ಹಾಗೂ ಮನೋರಂಜನೆ ಬೇಕು. ಆದರೆ ಅದಕ್ಕೊಂದು ಇತಿಮಿತಿ ಇರಬೇಕು ಎಂದು ಹೇರಂಬಾ ಇಂಡಸ್ಟ್ರೀಸ್ ಲಿ. ನ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ತಿಳಿಸಿದರು.
ಕುರ್ಲಾ ಪೂರ್ವದ ಮುಂಬಯಿ ಬಂಟರ ಸಂಘದ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಸೆಪ್ಟೆಂಬರ್ 29ರಂದು ಜರಗಿದ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿಯ 23ನೇ ವಾರ್ಷಿಕೋತ್ಸವದ ತ್ರಯೋವಿಂಶತಿ ಕಲಾ ಸಂಭ್ರಮ ಯಕ್ಷರಕ್ಷಾ ಪ್ರಶಸ್ತಿ ಪ್ರಧಾನ ಸಮಾರಂಭ, ಕೋಟಿ – ಚೆನ್ನಯ ಯಕ್ಷಗಾನ ಪುಸ್ತಕ ಬಿಡುಗಡೆ ಹಾಗೂ ಪರಕೆದ ಪಲ್ಲೆಂಕಿ ಯಕ್ಷಗಾನ ಪ್ರದರ್ಶನದಲ್ಲಿ ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಅವರು ಉದ್ಘಾಟಿಸಿ, ಪ್ರಸಿದ್ಧ ಯಕ್ಷಗಾನ ಕಲಾವಿದ ಪ್ರಾರ್ಥಿಸುಬ್ಬರಿಂದ ಹಿಡಿದು ಅನೇಕ ಪ್ರಸಿದ್ಧ ಹಿರಿಯ ಕಲಾವಿದರು ಯಕ್ಷಗಾನಕ್ಕಾಗಿ ಉತ್ತಮ ಕೊಡುಗೆ ನೀಡಿದ್ದಾರೆ. ಅವರ ಜೀವನವೇ ಯಕ್ಷಗಾನಕ್ಕಾಗಿ ಮುಡಿಪಾಗಿತ್ತು. ಅಂತಹ ಕಲೆಯನ್ನು ನಾವು ಗೌರವ, ಭಕ್ತಿ, ಶ್ರದ್ಧೆಯಿಂದ ಪ್ರದರ್ಶಿಸಬೇಕಾಗಿದೆ. ನಾಟಕ ಕಲೆ ಬೇರೆ, ಯಕ್ಷಗಾನ ಕಲೆ ಬೇರೆ ಈ ಎರಡೂ ಕಲೆಗಳಿಗೂ ಅದರದೇ ಆದ ಮಹತ್ವವಿದೆ. ಆದರೆ ಇತ್ತೀಚಿಗಿನ ಕೆಲವು ಯಕ್ಷಗಾನಗಳು ಎರಡು ಕಲೆಗಳ ಮಿಶ್ರಣದಂತೆ ಪ್ರದರ್ಶನಗೊಳ್ಳುತ್ತಿರುವುದು ನೋಡುವಾಗ ಬೇಸರವಾಗುತ್ತದೆ. ನಾವು ಪಟ್ಲ ಫೌಂಡೇಶನ್ ಮೂಲಕ ಯಕ್ಷಗಾನ ಕಲೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತೆ ಮಾಡುತ್ತಿದ್ದೇವೆ. ಮುಂಬಯಿಯಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಅಜೆಕಾರು ಕಲಾಭಿಮಾನಿಗಳ ಬಳಗ ಮೂಲಕ ಅನೇಕ ವರ್ಷಗಳಿಂದ ಯಕ್ಷಗಾನವನ್ನು ಉಳಿಸಿ ಬೆಳೆಸಲು ನಿರಂತರ ಪ್ರಯತ್ನಿಸುತ್ತಿರುವುದು ಅಭಿನಂದನೀಯ. ಇಂಥಹ ಕಲೆಗೆ ಯಾವುದೇ ಕುಂದು ಕೊರತೆ ಬಾರದಂತೆ ಉಳಿಸಿ ಅದರ ಪರಂಪರೆಯಂತೆ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಮುಂಬಯಿಯಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಕಾರ್ಯಗಳಿಗೆ ಎಲ್ಲರೂ ಸಹಕಾರ, ಪ್ರೋತ್ಸಾಹ ನೀಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಮುಂಬಯಿಯಲ್ಲಿ ಯಕ್ಷಗಾನಕ್ಕೆ ವಿಶೇಷ ಸ್ಥಾನಮಾನ ನೀಡಿ ಬೆಳೆಸಿದ್ದಾರೆ. ಅವರು ಮಕ್ಕಳಿಂದ ಹಿಡಿದು ಹಿರಿಯರವರೆಗೂ ಯಕ್ಷಗಾನವನ್ನು ಕಲಿಸಿ ಪ್ರದರ್ಶಿಸುವಂತೆ ಮಾಡಿದ್ದಾರೆ. ಮುಂಬಯಿಯ ಪ್ರಸಿದ್ಧ ಯಕ್ಷಗುರು ಬಾಲಕೃಷ್ಣ ಶೆಟ್ಟಿ ಎಂದರೆ ತಪ್ಪಾಗಲಾರದು. ಅವರು ಕಳೆದ 23 ವರ್ಷಗಳಿಂದ ನಿರಂತರ ಯಕ್ಷಗಾನಕ್ಕಾಗಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಇಂಥಹ ಕಾರ್ಯಗಳಿಗೆ ನಮ್ಮೆಲ್ಲ ಸಹಕಾರ, ಪ್ರೋತ್ಸಾಹ ಸದಾ ಇರುತ್ತದೆ ಎಂದರು.
ಗೌರವ ಅತಿಥಿಯಾಗಿದ್ದ ಬಂಟರ ಸಂಘ ಮುಂಬಯಿಯ ಪ್ರಾದೇಶಿಕ ಸಮಿತಿಯ ಸಮನ್ವಯಕ ರವೀಂದ್ರನಾಥ್ ಎಂ. ಭಂಡಾರಿ ಮಾತನಾಡಿ, ಯಕ್ಷಗಾನ ಪ್ರದರ್ಶನಕಕ್ಕೊಂದು ಚೌಕಟ್ಟಿದೆ. ಆ ಚೌಕಟ್ಟನ್ನು ಮೀರಿ ಯಕ್ಷಗಾನ ಪ್ರದರ್ಶಿಸುವುದು ಉತ್ತಮ ಬೆಳವಣಿಗೆಯಲ್ಲ. ಮುಂಬಯಿಯಂತಹ ಮಹಾನಗರದಲ್ಲಿ ಯಕ್ಷಗಾನ ಪ್ರೇಕ್ಷಕರು ಯಕ್ಷಗಾನವನ್ನು ಅತ್ಯಂತ ಅಭಿಮಾನ, ಗೌರವದಿಂದ ಕಾಣುತ್ತಾರೆ. ಆದ್ದರಿಂದ ಮುಂಬಯಿಯಲ್ಲಿ ಯಕ್ಷಗಾನ ಪ್ರದರ್ಶಿಸುವಾಗ ಯಕ್ಷಗಾನದ ಪರಂಪರೆ, ಅದರ ಇತಿಮಿತಿಯನ್ನು ಗಮನದಲ್ಲಿಟ್ಟು ಪ್ರದರ್ಶಿಸಬೇಕಾಗುತ್ತದೆ. ನಮ್ಮಲ್ಲಿ ಅನೇಕ ಪ್ರಖ್ಯಾತ ಕಲಾವಿದರು ಯಕ್ಷಗಾನ ಕ್ಷೇತ್ರದಲ್ಲಿದ್ದಾರೆ. ಅವರು ಧಾರ್ಮಿಕ ಪ್ರಸಂಗವಾಗಲಿ, ಸಾಮಾಜಿಕ ಪ್ರಸಂಗವಾಗಲಿ ಅತ್ಯಂತ ನಿಷ್ಠೆಯಿಂದ ಹಾಗೂ ಗೌರವದಿಂದ ಪ್ರದರ್ಶಿಸಿದ್ದಾರೆ. ಯಕ್ಷಗಾನದಂತಹ ಪವಿತ್ರ ಕಲೆಗೆ ಯಾವುದೇ ಕುಂದು ಕೊರತೆ ಬಾರದಂತೆ ನಾವೆಲ್ಲರೂ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮುಂಬಯಿಯಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ಕಾರ್ಯ ಮೆಚ್ಚುವಂಥದ್ದು ಎಂದರು.
ಮುಂಬಯಿ ಬಂಟರ ಸಂಘದ ಮಾಜಿ ಕಾರ್ಯದರ್ಶಿ ಸಿಎ ಸದಾಶಿವ ಶೆಟ್ಟಿ ಮಾತನಾಡಿ, ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಯಕ್ಷಗಾನ ಪ್ರದರ್ಶನದೊಂದಿಗೆ ಯಕ್ಷಗಾನ ಕಲಾವಿದರನ್ನು ಕಲಾ ಪೋಷಕರನ್ನು ಸನ್ಮಾನಿಸಿ ಅವರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿಯ ವಾರ್ಷಿಕ ಕಲಾ ಗೌರವ ಯಕ್ಷರಕ್ಷಾ ಪ್ರಶಸ್ತಿಯನ್ನು ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ, ಅಜೆಕಾರು ಯಕ್ಷರಕ್ಷಾ ಪ್ರಶಸ್ತಿ -2024 ಅನ್ನು ಪ್ರಸಿದ್ಧ ಭಾಗವತ ಹೆಬ್ರಿ ಗಣೇಶ್ ಹಾಗೂ ಮಾತೋಶ್ರೀ ಯಕ್ಷರಕ್ಷಾ ಪ್ರಶಸ್ತಿಯನ್ನು ಪತ್ರಕರ್ತೆ ರೇಷ್ಮಾ ಶೆಟ್ಟಿ ಗೋರೂರು ಅವರಿಗೆ ಪ್ರಧಾನ ಮಾಡಲಾಯಿತು. ಸಾಧಕ ಯಕ್ಷರಕ್ಷಾ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳ ಸಾಧಕರಾದ ರಂಗ ಕರ್ಮಿ ಡಾ| ಸುರೇಂದ್ರ ಕುಮಾರ್ ಹೆಗ್ಡೆ, ಸಂಘಟಕ ಕರುಣಾಕರ ಶೆಟ್ಟಿ ಕುಕ್ಕುಂದೂರು, ಕಲಾವಿದ ದಯಾನಂದ ಗೌಡ ಸಂಪಾಜೆ, ಯಕ್ಷಗಾನ ಭಾಗವತ ಜಯಪ್ರಕಾಶ್ ನಿಡ್ವಣ್ಣಾಯ, ಮದ್ದಳೆ ವಾದಕ ಸುರೇಶ್ ಶೆಟ್ಟಿ ಕಣಂಜಾರು, ಯಕ್ಷಗಾನ ಕಲಾವಿದ ಶೈಲೇಶ್ ಪುತ್ರನ್ ಅವರಿಗೆ ಪ್ರದಾನ ಮಾಡಲಾಯಿತು. ದಿ. ಶೇಖರ್ ಅಜೆಕಾರು ಮರಣೋತ್ತರ ಸಹಾಯ ನಿಧಿಯನ್ನು ಸೌಮ್ಯ ಶೇಖರ್ ಅಜೆಕಾರು ಅವರಿಗೆ ನೀಡಲಾಯಿತು. ಅಜೆಕಾರು ಯಕ್ಷರಕ್ಷಾ ಪ್ರಶಸ್ತಿಯು 10 ಸಾವಿರ ರೂ ನಗದು ಬಹುಮಾನ ಒಳಗೊಂಡಿತ್ತು.
ಕಾರ್ಯಕ್ರಮದಲ್ಲಿ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಅಭಿಮತ ಟಿವಿಯ ಡಾ| ಮಮತಾ ಪಿ. ಶೆಟ್ಟಿ, ಮಣಿಕಂಠ ಸೇವಾ ಸಮಿತಿ ವಸಾಯಿ ಗೌರವಾಧ್ಯಕ್ಷ ಶಂಕರ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು. ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಬಂಟರ ಸಂಘದ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಪಕ್ಕಳ ನಿರೂಪಿಸಿ, ವಂದಿಸಿದರು.