ಪಡುಬಿದ್ರಿ ಬಂಟರ ಸಂಘ, ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸಹಭಾಗಿತ್ವದಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಮತ್ತು ವಿದ್ಯಾರ್ಥಿವೇತನ ವಿತರಣೆ ಹಾಗೂ ಸಿರಿಮುಡಿ ದತ್ತಿನಿಧಿ ಟ್ರಸ್ಟ್ ಬಂಟರ ಸಂಘದ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಸ್ತ ಬಂಟ ಸಮಾಜದ ಪರವಾಗಿ ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದ ಬಂಟ ಸಮಾಜದ ನಾಯಕ ಉದ್ಯಮಿ ಡಾ| ಕೆ. ಪ್ರಕಾಶ್ ಶೆಟ್ಟಿ ಅವರಿಗೆ ಶ್ರೀ ಗುರು ನಿತ್ಯಾನಂದಾನುಗ್ರಹ ಪ್ರಶಸ್ತಿಯನ್ನು ಪ್ರಧಾನಿಸಿ ಗೌರವಿಸಲಾಯಿತು.
ಶ್ರೀ ಗುರು ನಿತ್ಯಾನಂದಾನುಗ್ರಹ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೆಂಗಳೂರಿನ ಉದ್ಯಮಿ, ಎಂಆರ್ ಜಿ ಗ್ರೂಪ್ ನ ಛೇರ್ಮನ್ ಡಾ| ಕೆ ಪ್ರಕಾಶ್ ಶೆಟ್ಟಿಯವರು, ಇಂದಿನ ಶ್ರೀ ಗುರು ನಿತ್ಯಾನಂದಾನುಗ್ರಹ ಪ್ರಶಸ್ತಿ ಸನ್ಮಾನವು ನನ್ನ ಪಾಲಿಗೆ ಅವಿಸ್ಮರಣೀಯವಾಗಿದೆ. ಬಂಟರ ಸಮುದಾಯದ ಅಭ್ಯುತ್ಥಾನಕ್ಕಾಗಿ ಜೀವನ ಪರ್ಯಂತ ಪರಿಶ್ರಮವನ್ನು ಮುಂದುವರಿಸುವುದಾಗಿ ಹೇಳಿದ್ದು, ಪಡುಬಿದ್ರಿಯ ಅಭಿಮಾನಿ ಬಳಗದ ಪ್ರೀತಿಯು ಅಮೋಘವಾಗಿದೆ. ನಾನು ಪಡುಬಿದ್ರಿಗಾಗಿ ಬಲು ದೊಡ್ಡ ಕೊಡುಗೆ ನೀಡಬೇಕಿದೆ. ಈ ಊರಿನ ದೇವಳದ ಜೀರ್ಣೋದ್ಧಾರದ ಸಂಕಲ್ಪಕ್ಕಾಗಿ ನಾವೆಲ್ಲಾ ಒಗ್ಗಟ್ಟಾಗಿ ಪ್ರಯತ್ನಶೀಲರಾಗಿ ಮುಂದುವರೆಯಬೇಕಿದೆ ಎಂದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸದಾ ಸಮಾಜದ ತುಡಿತವನ್ನು ಹೊಂದಿರುವ ಪ್ರಕಾಶ್ ಶೆಟ್ಟಿ ಅವರಂತಹ ಆದರ್ಶಯುತ ವ್ಯಕ್ತಿತ್ವವು ಸಮಾಜದಲ್ಲಿ ಮತ್ತಷ್ಟು ಬೆಳಗಬೇಕಿದೆ. ಬದುಕಿನಲ್ಲಿ ಸಮಾಜದ ಋಣ ತೀರಿಸುವ ಕೆಲಸವಾಗಬೇಕು. ಅಂತಹ ಹಾದಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಜೊತೆ ಬೆರೆತು ಸೇವೆ ಸಲ್ಲಿಸಿ ಸಮಾಜಕ್ಕೆ ಆಸರೆ ಆಗಬೇಕಿದೆ ಎಂದರು. ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಬಂಟ ಸಮಾಜದ ಉದ್ದಾರಕ್ಕಾಗಿ ಅಹರ್ನಿಶಿ ದುಡಿಯುತ್ತಿರುವವರು ಪ್ರಕಾಶ್ ಶೆಟ್ಟಿ ಅವರಾಗಿದ್ದಾರೆ. ಮಾನವ ಸಂಪನ್ಮೂಲ ಸದ್ಬಳಕೆಯಲ್ಲಿ ದೇವಿಪ್ರಸಾದ್ ಶೆಟ್ಟಿ ಮುಂಚೂಣಿಯಲ್ಲಿದ್ದಾರೆ. ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು ಕೊಡುಗೆಯಿತ್ತವರನ್ನು ಮರೆಯಬಾರದೆಂದರು.
ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಂಟಾಶ್ರಯ ಯೋಜನೆಗಾಗಿ ಸ್ಥಳವನ್ನಿತ್ತ ಮಾರ್ಕ್ಸ್ ಡಿಸೋಜರಿಗೆ ಮುಂಬೈ ಉದ್ಯಮಿ ಎಲ್ಲೂರುಗುತ್ತು ಪ್ರವೀಣ್ ಭೋಜ ಶೆಟ್ಟಿ ಅವರ ಪರವಾಗಿ ಮುಂಗಡ ಹಣವನ್ನು ಹಸ್ತಾಂತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಮುಂಬೈ ಪೆನಿನ್ಸುಲಾ ಗ್ರೂಪ್ ಆಫ್ ಹೋಟೆಲ್ಸ್ ಸಿಎಂಡಿ ಕರುಣಾಕರ ಆರ್. ಶೆಟ್ಟಿ, ಪಿಂಪ್ರಿ ಚಿಂಚಿವಾಡ ಪುಣೆ ಬಂಟ್ಸ್ ಸಂಘದ ಮಾಜಿ ಅಧ್ಯಕ್ಷ ಎರ್ಮಾಳು ಸೀತಾರಾಮ ಶೆಟ್ಟಿ, ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎರ್ಮಾಳ್ ಶಶಿಧರ ಶೆಟ್ಟಿ, ಸಿರಿಮುಡಿ ದತ್ತಿನಿಧಿ ಸ್ಥಾಪಕಾಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಉಪಾಧ್ಯಕ್ಷ ಪಲ್ಲವಿ ಸಂತೋಷ್ ಶೆಟ್ಟಿ, ಶ್ರೀನಾಥ್ ಹೆಗ್ಡೆ, ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಆರ್ ಶೆಟ್ಟಿ ಹಾಗೂ ಯುವ ವಿಭಾಗದ ಅಧ್ಯಕ್ಷ ನವೀನ್ ಎನ್ ಶೆಟ್ಟಿ ಉಪಸ್ಥಿತರಿದ್ದರು. ಸುಧಾ ಎಸ್ ಶೆಟ್ಟಿ, ಸುಮಂಗಳಾ ಎಸ್ ಶೆಟ್ಟಿ, ಜಯಶ್ರೀ ಜೆ. ಶೆಟ್ಟಿ ಪ್ರಾರ್ಥಿಸಿದರು. ಸಿರಿಮುಡಿ ದತ್ತಿನಿಧಿಯ ಸ್ಥಾಪಕಾಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ| ದೇವಿಪ್ರಸಾದ ಶೆಟ್ಟಿ ಪ್ರಸ್ತಾವಿಸಿದರು. ಜಯ ಎಸ್. ಶೆಟ್ಟಿ ಪದ್ರ ಹಾಗೂ ಡಾ. ಮನೋಜ್ ಕುಮಾರ್ ಶೆಟ್ಟಿ ನಿರ್ವಹಿಸಿದರು.
ಕಾರ್ಯಕ್ರಮದ ಮುನ್ನ ಪಡುಬಿದ್ರಿ ಪೇಟೆಯಿಂದ ಬಂಟರ ಭವನದವರೆಗೆ ಅದ್ದೂರಿ ಮೆರವಣಿಗೆಯಲ್ಲಿ ಡಾ| ಕೆ. ಪ್ರಕಾಶ್ ಶೆಟ್ಟಿ, ಪತ್ನಿ ಆಶಾ ಪ್ರಕಾಶ್ ಶೆಟ್ಟಿ ದಂಪತಿ ಹಾಗೂ ಇತರ ಅತಿಥಿ ಗಣ್ಯರನ್ನು ಬರಮಾಡಿಕೊಳ್ಳಲಾಯಿತು. ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಜರಗಿತು.