ವಿದ್ಯಾಗಿರಿ: ‘ಮಹಿಳೆಯರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಗಳು ನಿರ್ಮಾಣಗೊಳ್ಳಬೇಕು’ ಎಂದು ಬಂಟರ ಮಹಿಳಾ ಸಂಘದ ಮೂಡುಬಿದಿರೆ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ) ವತಿಯಿಂದ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶನಿವಾರ ‘ಸಕ್ಷಮ’- ಆಳ್ವಾಸ್ ಮಹಿಳಾ ಸಂಘಟನೆಯ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಪ್ರಸ್ತುತ ಸಮಾಜದಲ್ಲಿ ಮಹಿಳೆ ಹಲವಾರು ಸಮಸ್ಯೆಗಳನ್ನು ತೋರ್ಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ, ಇಂತಹ ವೇದಿಕೆಗಳ ಮೂಲಕ ಆಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಬೇಕು ಎಂದು ಅವರು ಆಶಿಸಿದರು. ಮುಂದಿನ ದಿನಗಳಲ್ಲಿ ಸಕ್ಷಮ ಸಂಘಟನೆಯ ಮೂಲಕ ಅನೇಕ ಸಮಾಜಮುಖಿ ಕಾರ್ಯ ನಡೆಯಲಿ. ಸಂಘಟನೆಯ ಎಲ್ಲಾ ನೂತನ ಪದಾಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ಮುತುವರ್ಜಿ ಹಾಗೂ ಚಾಕಚಕ್ಯತೆಯಿಂದ ನಿಭಾಯಿಸಬೇಕು ಎಂದು ಸಲಹೆ ನೀಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಸರಿಯಾದ ಶಕ್ತಿ ಮತ್ತು ಸಾಮಥ್ರ್ಯದ ಶಕ್ತಿಯೇ ಸಕ್ಷಮ. ಮಹಿಳೆಯರು ತಮ್ಮ ಶಕ್ತಿಯನ್ನು ಅರಿತುಕೊಳ್ಳಬೇಕು. ನೈಸರ್ಗಿಕವಾಗಿ ಮಹಿಳೆಯರಲ್ಲಿ ಅಗಾಧವಾದ ಶಕ್ತಿ, ಸಹನೆ,
ಧೈರ್ಯ, ಬಹುಕಾರ್ಯದ ಪ್ರವೃತ್ತಿಯ ಅಂಶ ಅಡಗಿರುತ್ತದೆ. ಅದನ್ನು ಅರಿತುಕೊಂಡು ಬದುಕು ಸಾಗಿಸಬೇಕು ಎಂದು ಸಲಹೆ ನೀಡಿದರು. ‘ಸಕ್ಷಮ’ವು ಮಹಿಳೆಯರಿಗೆ ಭಾವನಾತ್ಮಕ ಸಮಸ್ಯೆಗಳಿಗೂ ಪರಿಹಾರ ನೀಡುವ ವೇದಿಕೆ ಆಗಬೇಕು. ವ್ಯಕ್ತಿತ್ವ ವೃದ್ಧಿಗೆ ವಿದ್ಯೆ, ಬುದ್ಧಿಯ ಜೊತೆ ಸುಂದರ ಮನಸ್ಸು ಕೂಡ ಅಗತ್ಯವಿದೆ ಎಂದರು.
ಜೀವನದಲ್ಲಿ ಪ್ರತಿ ಹೆಣ್ಣು ಅನೇಕ ರೀತಿಯ ಪಾತ್ರಗಳನ್ನು ಜವಾಬ್ದಾರಿಯಿಂದ ನಡೆಸಿಕೊಂಡು ಬಂದಿರುತ್ತಾಳೆ. ಹೆಣ್ಣಿನಲ್ಲಿ ಸಹಾನುಭೂತಿ ಮಾತ್ರವಲ್ಲದೇ ಕ್ರೀಡಾ, ದೇಶಿಯ ಮನೋಭಾವ ಮತ್ತು ಸೌಂದರ್ಯ ಪ್ರಜ್ಞೆ ರೂಪುಗೊಳ್ಳಬೇಕು. ಸಕ್ಷಮ ಇಂತಹ ವಿಚಾರಗಳ ಮೇಲೆ ಆದಷ್ಟು ಬೆಳಕು ಚೆಲ್ಲಲಿ ಎಂದು ಅವರು ಆಶಿಸಿದರು ನಿಜವಾದ ಜೀವಕಳೆ ಮಹಿಳೆಯರಲ್ಲಿ ಅಡಗಿರುತ್ತದೆ. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಅನೇಕ ಮಹಿಳೆಯರ ಬಗ್ಗೆ ಕಾಳಜಿ ಮತ್ತು ಗೌರವವಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮುಂದಿನ ಜನುಮವೇನಾದರೂ ಇದ್ದರೆ ತಾನು ಹೆಣ್ಣಾಗಿ ಹುಟ್ಟಿ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುವ ಇಂಗಿತ ವ್ಯಕ್ತಪಡಿಸಿದರು.

ಬಳಿಕ ‘ಸಕ್ಷಮ’ದ ನೂತನ ಪಧಾಧಿಕಾರಿಗಳಿಗೆ ಶಾಲು ಹಾಕಿ ಪದಗ್ರಹಣ ಮಾಡಿದರು. ‘ಸಕ್ಷಮ’ದ ಮಾಸಿಕ ಸುದ್ದಿ ಪತ್ರ ‘ಶಿರೋಸ್’ ಭಿತ್ತಿಪತ್ರವನ್ನು ಅನಾವರಣಗೊಳಿಸಲಾಯಿತು. ‘ಸಕ್ಷಮ’ದ ಮುಂದಿನ 6 ತಿಂಗಳ ಯೋಜನೆಗಳ ವರದಿಯನ್ನು ಸಕ್ಷಮ ಆಳ್ವಾಸ್ ಮಹಿಳಾ ಸಂಘಟನೆ ಅಧ್ಯಕ್ಷೆ ಡಾ .ಮುಕಾಂಬಿಕ ವಾಚಿಸಿದರು. ಸಕ್ಷಮ ಆಳ್ವಾಸ್ ಮಹಿಳಾ ಸಂಘಟನೆಯ ನೂತನ ಪದಾಧಿಕಾರಿಗಳು ನೇಮಕಗೊಂಡರು. ಆಳ್ವಾಸ್ ಮಹಿಳಾ ಸಂಘಟನೆ ಅಧ್ಯಕ್ಷೆಯಾಗಿ ಡಾ ಮುಕಾಂಬಿಕ, ಉಪಾಧ್ಯಕ್ಷೆಯಾಗಿ ಡಾ ಸುರೇಖಾ ಪೈ, ಕಾರ್ಯದರ್ಶಿ ಶಾಜಿಯಾ ಖಾನುಮ್, ಸಹ ಕಾರ್ಯದರ್ಶಿ ಡಾ ದೀಪಾ ಕೊಠಾರಿ, ಖಚಾಂಚಿಯಾಗಿ ಡಾ ಕ್ಯಾಥ್ರಿನ್ ನಿರ್ಮಲಾ ಜವಾಬ್ದಾರಿ ವಹಿಸಿಕೊಂಡರು.
ಸಕ್ಷಮ ರೂವಾರಿ ಗ್ರೀಷ್ಮ ಆಳ್ವ, ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹಾಗೂ ಪ್ರಮುಖರು ಇದ್ದರು. ಉಪನ್ಯಾಸಕಿ ರಶ್ಮಿನ್ ತನ್ವಿರ್ ಕಾರ್ಯಕ್ರಮ ನಿರೂಪಿಸಿ, ‘ಸಕ್ಷಮ’ ಕಾರ್ಯದರ್ಶಿ ಶಾಝಿಯಾ ಖಾನುಂ ವಂದಿಸಿದರು.





































































































