ನಿಟ್ಟೆ ವಿಶ್ವ ವಿದ್ಯಾಲಯ ಸೆಪ್ಟೆಂಬರ್ 28 ರಂದು ತುಳು ದಿನ ಮತ್ತು ತುಳುವಿನ ಖ್ಯಾತ ಕವಿ ಡಾ| ಅಮೃತ ಸೋಮೇಶ್ವರ ಅವರ ನೆನಪಿನಲ್ಲಿ ”ಅಮೃತ ನೆಂಪು” ಆಚರಿಸಲಿದ್ದು ಆ ಸಂದರ್ಭದಲ್ಲಿ ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಜೊತೆಗೆ ಸೇರಿಕೊಂಡು ಕೊರಗ ಭಾಷೆಯ ಮೊತ್ತ ಮೊದಲ ”ಕೂಜಿನ ಪಾಟು” ಎಂಬ ಹಾಡನ್ನು ಬಿಡುಗಡೆ ಮಾಡಲಿದೆ. ಇದೇ ಸಂದರ್ಭದಲ್ಲಿ ಅಮೃತರ ನೆನಪಿನಲ್ಲಿ ಅವರ ಕೈಬರಹದ ಗ್ರಂಥ ಗೊಂಚಲನ್ನು ನಿಟ್ಟೆ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವ ವಿದ್ಯಾಲಯದ ನಿಕಟಪೂರ್ವ ಕುಲಪತಿಗಳಾದ ಪ್ರೊಫೆಸರ್ ಡಾ. ಸತೀಶ್ ಕುಮಾರ್ ಭಂಡಾರಿ ವಹಿಸಿಕೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಅಮೃತ ಸೋಮೇಶ್ವರರವರ ಪುತ್ರ, ಸಾಹಿತಿ ಡಾ. ಚೇತನ್ ಸೋಮೇಶ್ವರ್, ನಿಟ್ಟೆ ವಿಶ್ವ ವಿದ್ಯಾಲಯದ ಪ್ರೊಫೆಸರ್ ಡಾ. ಗೋಪಾಲ್ ಮುಗೆರಾಯ ಮತ್ತು ಖ್ಯಾತ ಕನ್ನಡ ತುಳು ಸಂಗೀತ ನಿರ್ದೇಶಕ ವಿ ಮನೋಹರ್ ಭಾಗವಹಿಸುತ್ತಿದ್ದಾರೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಲೂಣ್ಕರ್ ಮತ್ತು ನಿಟ್ಟೆ ವಿಶ್ವ ವಿದ್ಯಾಲಯದ ಕುಲಸಚಿವರಾದ ಪ್ರೊಫೆಸರ್ ಡಾ. ಹರ್ಷ ಹಾಲಹಳ್ಳಿ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ನಿಟ್ಟೆ ವಿಶ್ವವಿದ್ಯಾಲಯದ ಡಾ. ಸಾಯಿಗೀತಾ ಹೆಗ್ಡೆ, ಶಶಿಕುಮಾರ್ ಶೆಟ್ಟಿ, ಡಾ. ನರಸಿಂಹ ಬೈಲ್ಕೇರಿ ಮತ್ತು ಐಲೇಸಾದ ಸಾರಥಿ ಡಾ| ರಮೇಶ್ಚಂದ್ರ ಅನಂತ್ ರಾವ್, ಕವಿ ಶಾಂತಾರಾಮ್ ಶೆಟ್ಟಿ ಜಂಟಿಯಾಗಿ ಸಂಯೋಜಿಸಲಿದ್ದು, ತಾಂತ್ರಿಕ ಹಿನ್ನಲೆಯನ್ನು ಗೋಪಾಲ್ ಪಟ್ಟೆ ಮತ್ತು ವಿವೇಕಾನಂದ ಮಂಡೆಕರ ನಿರ್ವಹಿಸಲಿದ್ದಾರೆ. ಐಲೇಸಾದ ಗಾಯಕರಾದ ಸುಧಾಕರ್ ಶೆಟ್ಟಿ, ಡಾ. ಸುಶೀಲಾ, ಪ್ರಕಾಶ್ ಪಾವಂಜೆ, ಆತ್ಮಾರಾಮ್ ಆಳ್ವ, ಸುಮಾಕೋಟೆ, ಅಜೇಶ್ ಚಾರ್ಮಾಡಿ ಅಮೃತ ಸೋಮೇಶ್ವರ ಅವರ ಸಾಹಿತ್ಯದ ಹಾಡುಗಳನ್ನು ಹಾಡಲಿದ್ದಾರೆ. ಪಳ್ಳಿ ವಿಶ್ವನಾಥ್ ಶೆಟ್ಟಿ, ನರೇಂದ್ರ ಕಬ್ಬಿನಾಲೆ ಸಹಕರಿಸಲಿದ್ದಾರೆ ಎಂದು ಐಲೇಸಾ ಮಾಧ್ಯಮ ಸಂಚಾಲಕ ಸುರೇಂದ್ರ ಶೆಟ್ಟಿ ಮಾರ್ನಾಡು ತಿಳಿಸಿದ್ದಾರೆ.
ಕೂಜಿನ ಪಾಟು ಪ್ರಪ್ರಥಮ ಕೊರಗ ಭಾಷೆಯ ಹಾಡು. ಕೂಜಿನ ಪಾಟು ಹೆಣ್ಣು ಮಗುವಿನ ಜನನವನ್ನು ಸಂಭ್ರಮಿಸುವ ಹಾಡಾಗಿದ್ದು ತುಳುನಾಡಿನ ಆದಿಮೂಲ ಜನಾಂಗವಾದ ಪೂರ್ಣ ಪ್ರಮಾಣದಲ್ಲಿ ಕೊರಗ ಭಾಷೆಯ ಮೊದಲ ಹಾಡಾಗಿ ಬಿಡುಗಡೆಯಾಗಲಿದೆ. ಕೊರಗ ಸಾಹಿತ್ಯದಲ್ಲಿ ವಿಶೇಷ ಕೃಷಿ ಮಾಡಿದ ಪಾಂಗಾಳ ಬಾಬು ಕೊರಗ ಈ ಹಾಡಿಗೆ ಈ ಅತ್ಯುತ್ತಮವಾಗಿ ಸಾಹಿತ್ಯ ನೀಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ಅವರು ಬುಡಕಟ್ಟು ಜನಾಂಗದ ಮೂಲ ಸಂಗೀತವನ್ನೇ ಅಳವಡಿಸಿದ್ದು, ಹಾಡನ್ನು ಮಂಗಳೂರಿನ ಉದಯೋನ್ಮುಖ ಗಾಯಕ ಚೇತನ್ ಖುಷಿ ಕುಲಾಲ್ ಇವರ ಧ್ವನಿಯಲ್ಲಿ ಮಧುರವಾಗಿ ಮೂಡಿ ಬಂದಿದೆ. ತುಳುನಾಡಿನ ಅಂಗ ಭಾಷೆಯಾಗಿರುವ ಕೊರಗ ಭಾಷೆಯನ್ನು ಉಳಿಸಿ ಬೆಳೆಸುವ ಸಲುವಾಗಿ ಈ ಹಾಡನ್ನು ಷ್ನೇಯ್ಡರ್ ಎಲೆಕ್ಟ್ರಿಕ್ ಗ್ರೂಪ್ ನ ಜನರಲ್ ಕೌನ್ಸೆಲ್ ಆಗಿರುವ ಕಿಶೋರ್ ಶೆಟ್ಟಿ ಐಲೇಸಾದ ಮೂಲಕ ಪ್ರಾಯೋಜಿಸಿದ್ದಾರೆ.
ವರದಿ : ಸುರೇಂದ್ರ ಶೆಟ್ಟಿ ಮಾರ್ನಾಡ್