ಇಂದು ಪ್ರಪಂಚದ ಮೂಲೆ ಮೂಲೆಗಳಲ್ಲಿ ಒಂದಲ್ಲ ಒಂದು ಆಘಾತ ಸಂಭವಿಸುತ್ತಲೇ ಇರುತ್ತದೆ. ಅದು ಮಳೆ, ಬರಗಾಲ, ಸ್ಫೋಟ, ಯುದ್ಧ, ಸಾವು-ನೋವು ಏನೇ ಆಗಿರಬಹುದು. ಇವುಗಳೆಲ್ಲ ಬುದ್ದಿವಂತರೆನಿಸಿಕೊಂಡ ನಮ್ಮದೇ ಭಾವನೆಗಳಿಂದ, ಸ್ವಾರ್ಥ, ಅಧಿಕಾರ ದಾಹಗಳಿಂದಾಗಿರಬಹುದು. ಏಪ್ರಿಲ್, ಮೇ, ಜೂನ್ ನಲ್ಲಿ 45+, 50+ ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ನಲುಗಿದ ನಾವು ವಿಶೇಷವಾಗಿ ಇಂದು ದೇಶದಾದ್ಯಂತ ಕುಂಭದ್ರೋಣ ಮಳೆ, ಭೂಕುಸಿತ, ಊರಿಗೆ ಊರೇ ಕೊಚ್ಚಿಹೋಗುವ ಆತಂಕಕಾರಿ ಘಟನೆಗಳಿಂದ ಆಘಾತಗೊಂಡಿದ್ದೇವೆ. ಇವುಗಳಿಗೇನು ಕಾರಣ ಎಂದು ಆಲೋಚಿದರೆ ನಮ್ಮ ಅತೀ ಬುದ್ದಿವಂತಿಕೆ, ಆವೈಜ್ಞಾನಿಕ ಯೋಚನೆ ಯೋಜನೆಗಳೇ ಕಾರಣ ಎಂಬುದನ್ನು ನಾವು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಬೇರೆ ಯಾರನ್ನೋ ಬೊಟ್ಟು ಮಾಡಿ ತೋರಿಸುತ್ತೇವೆ.
ಭೂಗರ್ಭ ಶಾಂತವಾಗಿರಬೇಕು. ತುಸು ಅಲ್ಲಾಡಿದರೂ ಸಾಕು ಭೂಕಂಪ, ಅಗ್ನಿಸ್ಫೋಟ, ನಮ್ಮ ದಕ್ಷಿಣ ಕನ್ನಡ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಸಕಲೇಶಪುರದ ಎತ್ತಿನ ಹೊಳೆ ಯೋಜನೆಯ ಪರಿಣಾಮವನ್ನೀಗ ಅನುಭವಿಸುತ್ತಿದ್ದೇವೆ. ಕೆಲವು ತಿಂಗಳ ಹಿಂದೆ ಕುಡಿಯಲು ನೀರಿಲ್ಲ. ನದಿ ಕಾಲುವೆಗಳಲ್ಲಿ ನೀರಿನ ಪಟ್ಟೆ ಪಸೆಯಿರಲಿಲ್ಲ. ಈಗ ಕುಂಭದ್ರೋಣ ಮಳೆ, ಪ್ರವಾಹ, ಭೂಗರ್ಭ, ಹಾನಿ, ಕುಸಿತ ಒಟ್ಟಿನಲ್ಲಿ ಎತ್ತಿನ ಹೊಳೆ ಯೋಜನೆಯ ಆವೈಜ್ಞಾನಿಕ ಫಲವಾಗಿ ಲಕ್ಷಾಂತರ ಮರಗಳ ಮಾರಣ ಹೋಮವಾಗಿದೆ. ಭಾರೀ ಪ್ರಮಾಣದ ಸ್ಪೋಟಕಗಳ ಬಳಸಿ ಭೂಗರ್ಭದೊಳಗಿನ ಬಂಡೆಗಳನ್ನು ಪುಡಿ ಮಾಡಲಾಗಿದೆ. ಸಡಿಲ ಮಣ್ಣುಗಳ ಕಡಿದಾಗಿ ಕೊರೆದು ಕಂದಕಗಳ ನಿರ್ಮಿಸಲಾಗಿದೆ. ಭೂಮಿಯನ್ನು ಅಗೆದು ಭೀಮ ಗಾತ್ರದ ಪೈಪುಗಳನ್ನು ಅಳವಡಿಸಲಾಗಿದೆ ಎಂಬಿತ್ಯಾದಿ ಮಾಧ್ಯಮಗಳ ವರದಿ ನಮಗೆ ಆತಂಕ ಉಂಟುಮಾಡಿವೆ. ಆದರೆ ನಾವು ನಮ್ಮ ಕೊರೆತ ಸ್ಪೋಟಕಗಳನಿನ್ನೂ ನಿಲ್ಲಿಸಿಲ್ಲ. ಮಳೆಗಾಲ ಬಂತೆಂದರೆ ಸಾಕು ಭಾರೀ ಅನಾಹುತಗಳೇ ಎದುರಾಗುತ್ತವೆ. ಕೇರಳದ ವಯನಾಡು ಜುಲೈ 30/24 ಮಂಗಳವಾರ ಜನರೆಲ್ಲಾ ಗಾಢ ನಿದ್ರೆಯಲ್ಲಿರುವಾಗಲೇ ಕುಂಭದ್ರೋಣ ಮಳೆಗೆ ಬೆಟ್ಟ- ಗುಡ್ಡ, ಸೇತುವೆಗಳೇ ಕುಸಿದು ಹಳ್ಳಿಗೆ ಹಳ್ಳಿಯೇ ಕೊಚ್ಚಿಕೊಂಡು ಹೋಗಿ, ನೂರಾರು ಜನರು ಸೂರ್ಯೋದಯವನ್ನೇ ಕಾಣದೆ ಬದುಕನ್ನೇ ಕಳಕೊಂಡರು. ಬದುಕಿ ಉಳಿದವರ ಬದುಕು ನರಕ ಸದೃಶ. ಇಂಥದೇ ಆತಂಕ ದೇಶದ ಬಹುಭಾಗಗಳಲ್ಲಿದೆ. ಪಶ್ಚಿಮ ಘಟ್ಟದ ಸಕಲೇಶಪುರದ ಹಾರ್ಲೆ ಎಸ್ಟೇಟ್ ಬಳಿ ಸಂಭವಿಸಿರುವ ರಸ್ತೆಕುಸಿತ ಆತಂಕಗಳಿಗೆ ಕಾರಣವಾಗಿದೆ. ದಶಕಗಳಿಂದ ಇರುವ ಹಾರ್ಲೆ – ಕಾಡುಮನೆ ರಸ್ತೆಯನ್ನು 2017 ರಲ್ಲಿ ಕಾಂಕ್ರೀಟ್ ರಸ್ತೆ ಮಾಡಲಾಗಿತ್ತಾದರೂ ರಸ್ತೆ ನಿರ್ಮಿಸಿ ಅದರ ಇಕ್ಕೆಲಗಳಲ್ಲಿ ನೀರು ಹರಿದು ಹೋಗಲು ಚರಂಡಿ ಮಾಡುವ ಬದಲಿಗೆ, ಎತ್ತಿನಹೊಳೆ ಯೋಜನೆಯ ಬೃಹತ್ ಗಾತ್ರದ ಭೂಗತ ಪೈಪುಗಳನ್ನು ಆಳವಡಿಸಲಾಗಿದ್ದರ ಪರಿಣಾಮ ಇಂತಹ ಅನಾಹುತಗಳಿಗೆ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ. ದೋಣಿಗಾಲ್ ರೈಲ್ವೇ ನಿಲ್ದಾಣ ಮತ್ತು ಎತ್ತಿನ ಹಳ್ಳ ರೈಲ್ವೇ ಸೇತುವೆ ಮಧ್ಯೆ ಎತ್ತಿನಹೊಳೆ ಯೋಜನೆಯ ಅಡ್ಡಗಟ್ಟಿ – ವಿಯರ್, ಪಂಪ್ ಹೌಸ್, ಪವರ್ ಸ್ಟೇಷನ್, ಪೈಪ್ ಲೈನ್, ಓವರ್ ಹೆಡ್ ಟ್ಯಾಂಕ್ – ಇತ್ಯಾದಿ ಕಾಮಗಾರಿಗಳ ಅವೈಜ್ಞಾನಿಕ ಯೋಜನೆಗಳಿದಾಂಗಿ ಮಳೆಗೆ ಧರೆ ಕುಸಿಯುತ್ತಲೇ ಇದೆ. ಮಾಧ್ಯಮಗಳ ವರದಿಗಳ ಶೀರ್ಷಿಕೆ ನೋಡಿದರೆ ಸಾಕು ಮಳೆಗಾಲದ ಅವಾಂತರಗಳ ಘೋರ ದರ್ಶನವಾಗುವುದು. ಶಿರಾಡಿ ಘಾಟ್ ನಲ್ಲಿ ಮತ್ತೆ ಮತ್ತೆ ಭೂಕುಸಿತ, ಮಣ್ಣಿನ ರಾಶಿಯಲ್ಲಿ ಸಿಲುಕಿದ ವಾಹನಗಳು, ಹೆದ್ದಾರಿ ಸಂಪೂರ್ಣ ಸ್ಥಗಿತ, ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ, ವರುಣನ ಆರ್ಭಟ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ, ಎಲ್ಲೆಡೆ ಜಲಗಂಡಾಂತರ, ಪ್ರವಾಹ ಉಗ್ರರೂಪ, ನೇತ್ರಾವತಿ ಕುಮಾರಧಾರ ಸಂಗಮ, ಇನ್ನೆರಡು ತಿಂಗಳು ದಾಖಲೆ ಮಳೆ, ಮುಸಲಧಾರೆಗೆ ತತ್ತರಿಸಿದ ಕರಾವಳಿ, ಶಾಲಾ ಕಾಲೇಜುಗಳಿಗೆ ರಜೆ ಹೀಗೇ ನ್ಯೂಸ್ ಗಳ ಜಾಡು ಹರಿದಾಡುತ್ತಲೇ ಇರುತ್ತದೆ.
ಒಟ್ಟಿನಲ್ಲಿ ನಮ್ಮ ಪರಿಸರ ಜಾಗೃತಿ ಸ್ವಾರ್ಥದ ಕಡೆಗೆ ತಿರುಗಿದೆ. “ಅವ ಕೊಡ ನಾ ಬಿಡೆ” ಎಂಬ ಅಹಂಭಾವ, ಅಧಿಕಾರ ಜಗ್ಗಾಟ, ಅಧಿಕಾರಿಗಳ ಕೋಟಿ ಚಾಚುವಿಕೆ, ಅವೈಜ್ಞಾನಿಕ ಯೋಜನೆ, ಪರಿಸರ ನಿರ್ಲಕ್ಷ್ಯ, ಏರುತ್ತಿರುವ ಜನಸಂಖ್ಯೆ, ಸರಿಯಾದ ಶಿಕ್ಷಣದ ವ್ಯವಸ್ಥೆ ಇಲ್ಲದಿರುವ ಕಾರಣ ನಾವು ಇನ್ನೇನು ಅನುಭವಿಸಲಿದ್ದೇವೆಯೋ? ನಾವು ಸಣ್ಣವರಿರುವಾಗ ಬಯಲು ಪ್ರದೇಶ, ಹೊಲಗದ್ದೆಗಳು, ಎತ್ತು ಉಳುಮೆ, ಮುಂಜಾನೆ ನಾಲ್ಕೈದು ಗಂಟೆಗೆ ರೈತಾಪಿ ಜನರು ಗದ್ದೆ- ತೋಟಗಳಲ್ಲಿ ಭತ್ತ ಬೆಳೆ, ವಾಡಿಕೆಯ ಮಳೆ, ಆಳವಾದ ನದಿ ತೋಡು, ಕೆರೆಗಳು, ಅಲ್ಲಲ್ಲಿ ಮಾವು, ಹಲಸು, ಸಾಗುವಾನಿ, ತೆಂಗು ತಾಳೆ ಮರಗಳು, ವಿಧವಿಧ ಹಕ್ಕಿಗಳ ಗೂಡು-ಕಲರವ, ಹಾರೆ ಪಿಕ್ಕಾಸು, ಗುದ್ದಲಿ ಬುಟ್ಟಿ ಹೊತ್ತು ಹೊಲಗದ್ದೆಗಳಿಗೆ ಸಾಗುವ ಕೃಷಿ ಕಾರ್ಮಿಕರು. ಹಬ್ಬ ಹರಿದಿನಗಳ ಸಂಭ್ರಮ, ದೈವರಾಧನೆ, ನಾಗರಾಧನೆ, ನೇಮ ತಂಬಿಲ, ಕೋಲ, ಜಾತ್ರೆ ನಡಾವಳಿಗಳು, ನಮ್ಮದೇ ಪ್ರಪಂಚ. ಈಗ ದಿನ ಬೆಳಗಾದರೆ ಸಾಕು ಬೆಚ್ಚಿ ಬೀಳಿಸುವ ವಿಚಿತ್ರ ಸಂಗತಿಗಳು. ಬದಲಾವಣೆ ಹೊಂದಿ ಬಾಳುವುದೇ ಬದುಕು ಅಲ್ಲವೇ?..
ನಾರಾಯಣ ರೈ ಕುಕ್ಕುವಳ್ಳಿ.