“ನೋವಿದ್ದವರು ನಗಬಾರದೆಂದಿಲ್ಲ
ನಗುವವರಲ್ಲಿ ನೋವಿಲ್ಲಾ ಎಂದರ್ಥವಲ್ಲ
ನೋವ ನುಂಗಿ ನಕ್ಕು ಹಗುರಾಗಿಸುವುದೇ ಜೀವನ”. ಹೌದು, ಕಷ್ಟ ಯಾರಿಗಿಲ್ಲ ಹೇಳಿ. ಕಷ್ಟ ಎನ್ನುವುದು ಮನುಷ್ಯರನ್ನು ಬಿಡಿ ಮೂಕ ಪ್ರಾಣಿಗಳು ಸೇರಿದಂತೆ ಜಲಾಚರ ಜೀವಿಗಳನ್ನು ಬಿಟ್ಟಿಲ್ಲ. ಅದರಲ್ಲೂ ತಮ್ಮ ನೋವುಗಳನ್ನು ಅದುಮಿಟ್ಟುಕೊಂಡು ಇನ್ನೊಬ್ಬರನ್ನು ನಗಿಸುವ ಶಕ್ತಿ ಎಲ್ಲರಿಗೂ ಇರುವುದಿಲ್ಲ. ಅದೂ ಒಂದು ದೈವದತ್ತ ಕೊಡುಗೆ ಎಂದೇ ಹೇಳಬಹುದು. ಇಷ್ಟೆಲ್ಲಾ ವಿಚಾರಗಳನ್ನು ನಾನು ಹೇಳಲು ಕಾರಣವೂ ಇದೆ. ನಾನೀಗ ಹೇಳಲು ಹೊರಟಿರುವುದು ನಮ್ಮೂರು ರೆಂಜಾಳದ ಬಸ್ ಕಂಡೆಕ್ಟರೊಬ್ಬರ ಕತೆಯನ್ನು. ಇಷ್ಟಕ್ಕೂ ಈ ಅಪರಿಚಿತ ಕಂಡೆಕ್ಟರ್ ಆ ಬಸ್ನ ಪ್ರಯಾಣದ ಸಂದರ್ಭದಲ್ಲಿ ನಮಗಂತೂ ನೀಡಿದ ಖುಷಿಯಂತೂ ನಾವು ಆ ಬಸ್ ಮತ್ತು ಆ ಕಂಡೆಕ್ಟರ್ನ ಅಪ್ಪಟ ಅಭಿಮಾನಿಯಾಗುವಂತೆ ಮಾಡಿತು.
ಆ ಬಸ್ಸಿನ ಹೆಸರು “ಸುನೀಲ್” ಮೊಟಾರ್ಸ್. ರೆಂಜಾಳದಿಂದ ಬೆಳ್ಳಂಬೆಳಗ್ಗೆ 8 ಗಂಟೆಗೆ ಹೊರಡುವ ಈ ಬಸ್ನಲ್ಲಿ ಸೀಟು ಹಿಡಿಯುವುದೆ ಒಂದು ರೀತಿಯ ಹರ ಸಾಹಸ. ಈ ಕೊರೊನಾ ಎಂಬ ಮಹಾಮಾರಿ ಒಕ್ಕರಿಸಿದ ಬಳಿಕ ನಮ್ಮೂರಿನ ಬಸುಗಳಿಗೆ ಬರ ಬಂದಿರುವುದಂತು ಸುಳ್ಳಲ್ಲ. ಹಿಂದೆ ಅರ್ಧ ಗಂಟೆಗೆ ಒಂದಿದ್ದ ಬಸ್ಗಳ ಸಂಖ್ಯೆ ಇಂದು ವೈದ್ಯರು ನೀಡುವ ಮಾತ್ರೆಯಂತೆ ಬೆಳಗ್ಗೆಯೊಂದು, ಮಧ್ಯಾಹ್ನಕ್ಕೊಂದು, ಸಂಜೆಗೊಂದರಂತಾಗಿದೆ.
ಆಕಸ್ಮಿಕವಾಗಿ ಇತ್ತೀಚೆಗೆ ಊರಿಗೆ ತೆರಳಿದ್ದೆ. ಮಂಗಳೂರಿನಲ್ಲಿ ನನ್ನದೊಂದು ಕೃತಿ ಪ್ರಕಟಗೊಳ್ಳುತ್ತಿರುವುದರಿಂದ ಅಲ್ಲಿಗೆ ಹೋಗಲು ಸುನೀಲ್ ಬಸ್ನಲ್ಲಿ ಹೊಗುವ ಅನಿವಾರ್ಯತೆ ಎದುರಾಯಿತು. ಶಾಲಾ-ಕಾಲೇಜು ಮಕ್ಕಳಿಂದಲೆ ತುಂಬಿ ತುಳುಕುತ್ತಿರುವ ಈ ಬಸ್ನಲ್ಲಿ ಮೊದಲು ಹೋಗಿ ಸೀಟು ಹಿಡಿದರೆ ಬಚಾವ್. ಬಸ್ ಹೊರಡುವ ಸಮಯಕ್ಕೆ ಹೋದರಂತು ಸೀಟಿಗಾಗಿ ಪರದಾಡುವ ಸ್ಥಿತಿ ನಮ್ಮದು. ನಾವು ಹತ್ತು ನಿಮಿಷ ಮೊದಲೆ ತೆರಳಿದರು ಕೂಡಾ ಶೇ.80 ರಷ್ಟು ಬಸ್ ತುಂಬಿ ಹೋಗಿತ್ತು. ಕೊನೆಗೂ ಸಿಕ್ಕಿದ್ದು ಸೀರುಂಡೆ ಎಂದು ತಿಳಿದು ನಮ್ಮ ಸೀಟನ್ನು ಭದ್ರಪಡಿಸಿಕೊಂಡೆವು.
ಬಸ್ ಹೊರಟ ತಕ್ಷಣ ನಗುಮೊಗದಿಂದ ಟಿಕೆಟ್ ಕೊಡಲು ಎಂಟ್ರಿಯಾಗುವ ಕಂಡೆಕ್ಟರ್ ನನಗಂತು ಅಪರಿಚಿತರಾದರೂ ಇತರ ಪ್ರಯಾಣಿಕರಿಗೆ ತೀರಾ ಪರಿಚಿತ. ಈ ಕಂಡೆಕ್ಟರೇ ಈ ಲೇಖನದ ಹೀರೊ ಎನ್ನಲು ನನಗೊಂದು ರೀತಿಯ ಹೆಮ್ಮೆ. ಕೆಲವು ವ್ಯಕ್ತಿಗಳು ನಮಗೆ ಕಾರಣವಿಲ್ಲದೆ ಇಷ್ಟವಾಗಿ ಬಿಡುತ್ತಾರೆ. ನನಗಂತೂ ಈ ಕಂಡೆಕ್ಟರ್ ಇಷ್ಟವಾದದ್ದು ತನ್ನ ಕರ್ತವ್ಯದೊಂದಿಗೆ ಹಾಸ್ಯ ಚಟಾಕಿಯ ಮೂಲಕ ರಂಜಿಸುವ ಮಾತುಗಳಿಂದ. ದಿನಂಪ್ರತಿ ಪ್ರಯಾಣಿಸುವವರಿಗೆ ಅವರ ಮಾತುಗಳು ಮಾಮೂಲಿನಂತೆ ಕಂಡರೂ ಅಪರೂಪಕ್ಕೆ ಪ್ರಯಾಣಿಸುವವರಿಗೆ ಅವರ ಮಾತುಗಳಿಂದ ಮನರಂಜನೆಯ ಭೂರಿ ಭೋಜನ. ಬಸ್ ಹೊರಟು ಹತ್ತು ನಿಮಿಷ ಕಳೆದರೆ ಸಾಕು ಕಿಕ್ಕಿರಿದು ತುಂಬಿ ಹೋಗುತ್ತದೆ. ಪಾಪಾ ಆ ಕಂಡೆಕ್ಟರ್ನ ಪಾಡಂತು ದೇವರೆ ಬಲ್ಲ.
ಒಮ್ಮೆ ಮುಂದಿನ ಬಾಗಿಲಿಗೆ ಓಡಿ ಪ್ರಯಾಣಿಕರನ್ನು “ಪಿರ ಪೊಲೆಯೆ”… ಮತ್ತೊಮ್ಮೆ ಹಿಂದಿನ ಬಾಗಿಲಿಗೆ ಬಂದು “ದುಂಬು ಪೊಲೆಯೆ” ಎಂದು ಹೇಳುವ ಭರದಲ್ಲಿ “ವೊ ಬ್ಯಾವರ್ಸಿ ದುಂಬು ಪೊ ಮಾರಾಯ” “ಫೊನೊಡು ನಿನ್ನ ಅಮ್ಮಡ ಬೊಕ್ಕ ಪಾತೆರ್” ಎಂಬ ಬೈಗುಳಗಳು ನನ್ನಂತಹ ಹೊಸ ಪ್ರಯಾಣಿಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. “ಓ ಈ ಎರೆಡದೆ ಅಂಚಲ ಪಾತೆರ್ನು… ಮೊಬೈಲ್ ಬೆಚ್ಚ ಏರ್ದು ಪೋಂಡ ದಾನೆ” ಇಂತಹ ಮಾತುಗಳು ಆ ಹೆಣ್ಮಕ್ಕಳಿಗೆ ತಮಾಷೆಯೊಂದಿಗೆ ಎಚ್ಚರಿಕೆಯ ಕರೆಗಂಟೆಯೂ ಹೌದು. ಇದು ಬೈಗುಳ ಎಂದು ಯಾರಿಗಾದರೂ ಅನಿಸಿದರೆ ಖಂಡಿತವಾಗಿಯೂ ಅಲ್ಲ. ಆ ಕಂಡೆಕ್ಟರ್ ಹೇಳುವ ಮಾತಿನ ದಾಟಿಯಲ್ಲಿ ಅಷ್ಟೊಂದು ಪ್ರೀತಿಯಿದೆ.. ಆತ್ಮೀಯತೆಯಿದೆ. ಕಂಡೆಕ್ಟರ್ ಎಷ್ಟೇ ಬೈದರೂ ಕೂಡ ಪ್ರಯಾಣಿಕರು ಮಾತ್ರ ತುಟಿಬಿಚ್ಚುವುದಿಲ್ಲ. ತಮ್ಮಷ್ಟಕ್ಕೆ ನಗು ಬೀರುತ್ತಾರಷ್ಟೆ.
ಇನ್ನೊಂದೆಡೆ ಕಂಡೆಕ್ಟರ್ನನ್ನು ಶಾಲಾ ಹೆಣ್ಮಕ್ಕಳು ನೋಡಿ ನಕ್ಕರೆ “ಈ ಕೂಲಿ ಬೊಕ್ಕ ಬುಡುದೆ…. ಒಂತೆ ಪಿರ ಪೋದೆ” ಎನ್ನುವಾಗ ಹೊಸಬರಂತು ಕಂಡೆಕ್ಟರ್ನನ್ನು ಯಾರಪ್ಪ ಇದು ಎಂದು ಕಣ್ಣೆತ್ತಿ ನೋಡುವುದಂತು ಗ್ಯಾರಂಟಿ. ಬಸ್ ಪೂರ ತುಂಬಿ ಹೋಗುವಾಗ ಈ ಮಕ್ಕಳು ಟಿಕೆಟ್ ಪಡೆಯುತ್ತಾರೊ ಇಲ್ಲವೂ ದೇವರೆ ಬಲ್ಲ. ಆ ಸಂದರ್ಭದಲ್ಲಿ “ಓ ಬ್ಯಾವರ್ಸಿಲೆ ಕಾಸ್ ಕೊರಿಯರಂಬೆ” ಎಂದು ಹೇಳುವಾಗ ಆ ಮಾತಿನಲ್ಲಿ ಅಡಗಿರುವ ಪ್ರೀತಿಯೆಂಬ ಅಲೆ ಉಯ್ಯಾಲೆ ಆಡಿದಂತಾಗುತ್ತದೆ.
ಅದರಲ್ಲೂ ಮುಂಬೈಯ ಬಯ್ಯಗಳೆಲ್ಲ ಈಗ ಊರಿಗಿಳಿದಿದ್ದಾರೆ. ನಮ್ಮೂರಲ್ಲೂ ಅವರ ಸಂಖ್ಯೆ ಕಡಿಮೆ ಏನಿಲ್ಲ. ಈ ಕಂಡೆಕ್ಟರ್ ಮಾತ್ರ ಅವರೊಂದಿಗೆ ಎಷ್ಟೊಂದು ಪ್ರೀತಿಯಿಂದ ವ್ಯವಹರಿಸುತ್ತಾರೆ ಎಂದರೆ ಅದನ್ನು ಹೇಳುವುದಕ್ಕಿಂತ ಕೇಳುವುದೆ ಒಂದು ರೀತಿಯ ಮಜಾ. “ಓ ಬಯ್ಯಾ ಟಿಕೆಟ್ ಕೊರ್ಯನಂಬೆ” ಎಂದಾಗ … ಹಿಂದಿನ ಸೀಟಿನ ಹುಡುಗನೋರ್ವ “ಬಯ್ಯೆ ಬಯ್ಯಡ್ ಕೊರ್ಪೆಗೆ” ಎಂದಾಗ.. ಬಯ್ಯ ಕಿಸೆಯಿಂದ ನೋಟುಗಳ ಕಟ್ಟಿನ ಎಡೆಯಿಂದ ನೂರು ರೂಪಾಯಿಯನ್ನು ಕೊಟ್ಟಾಗ ” ಓ ಬಯ್ಯಾ ಈತ್ ಕಾಸ್ ಪತೊಂದು ಒಡೆ ಸೈಪ ಮಾರಾಯ… ನಿನ್ನ ಊರು ಬರ್ಸೊಡು ಮುರ್ಕುದುಂಡು… ಈತ್ ಕಾಸ್ ಪತೊಂದು ಪೊದು ಬೊಲ್ಲೊಗ್ ಪಾಡುವನ” ಎಂಬ ಕಂಡೆಕ್ಟರ್ನ ಮಾತನ್ನು ಕೇಳಿ ಪ್ರಯಾಣಿಕರು ನಗೆಗಡಲ್ಲಲ್ಲಿ ತೇಲಿದರೆ ಬಯ್ಯಾ ಕಿಸಕ್ಕೆಂದು ಹಲ್ಲು ಬಿಟ್ಟ.
ನನಗೆ ಟಿಕೆಟ್ ನೀಡಿದ ಕಂಡೆಕ್ಟರ್ ನಮ್ಮ ಪಕ್ಕದ ಸೀಟಿನಲ್ಲಿ ಇಬ್ಬರು ಮಕ್ಕಳಿಗೆ ಟಿಕೆಟ್ ನೀಡುವಾಗ “ನಿಗುಲ್ ಪೊಸತ್ತದೆ ಓಲ್ತಗುಲ್ ನಿಗುಲ್” ಎಂದು ಕೇಳಿದರು. ನಿಜವಾಗಿಯೂ ಆ ಮಕ್ಕಳು ಹೊಸಬರೆ ಅಥವಾ ನಾವು ಹೊಸಬರು ಬಸ್ಸಲ್ಲಿರುವುದನ್ನು ನೋಡಿ ಹೇಳಿದ್ದೊ ನಾನರಿಯೆ. ನನಗಂತೂ ಆ ಮಾತು ಕೆನ್ನೆಗೆ ಹೊಡೆದಂತಾಗಿತ್ತು.
ಒಬ್ಬ ಹುಡುಗನಂತೂ ಕಂಡೆಕ್ಟರ್ “ಟಿಕೆಟ್ ಕಾಸ್ ಕೊರಿಯನಂಬೆ” ಎಂದು ಕೇಳಿದಾಗ ಎನ್ನ ಪರಿಕ್ಷೆ ಉಂಡುಯೆ” ಎಂದು ಹೇಳಿ ಬ್ಯಾಗ್ ಎತ್ತಿಕೊಂಡು ಬಸ್ ಇಳಿದು ಓಡಿಯೆ ಬಿಟ್ಟ. ಕಂಡೆಕ್ಟರ್ ಮಾತ್ರ “ಈ ಎಲ್ಲೆ ನೆಕ್ಕೆ ಬರೊಡತ್ತ…ಬಲ ಎಲ್ಲೆ” ಎಂದು ಹೇಳಿ ಆತನನ್ನು ಬೀಳ್ಕೊಟ್ಟರು. ರೆಂಜಾಳದಿಂದ ಕಾರ್ಕಳ ಆನೆಕೆರೆವರೆಗೆ ನಮಗಂತೂ ಮನರಂಜನೆ. ನನ್ನ ಅಕ್ಕನ ಮಗಳಂತೂ ಕಂಡೆಕ್ಟರ್ನ ಹಲವಾರು ಬೈಗುಳಗಳನ್ನು ರೆಕಾರ್ಡ್ ಮಾಡಿ ಮತ್ತೆ ಮತ್ತೆ ಕೇಳಿ ನಗುತ್ತಿದ್ದಳು. ವಿಶೇಷವೆಂದರೆ ಸುಮಾರು 30 ರಿಂದ 40 ನಿಮಿಷಗಳ ಕಾಲ ಮಕ್ಕಳೊಂದಿಗೆ ಮಕ್ಕಳಾಗಿ ಕರ್ತವ್ಯ ನಿರ್ವಹಿಸುವ ಕಂಡೆಕ್ಟರ್ ಕಾರ್ಕಳದಿಂದ ಮಂಗಳೂರಿಗೆ ತೆರಳುವಾಗ ಅಷ್ಟೇ ಗಂಭೀರತೆಯಿಂದ ಇದ್ದದ್ದು ನೋಡಿ ನನಗೆ ಆಶ್ಚರ್ಯವಾಯಿತು. ನಿಜವಾಗಿಯೂ ಆ ವ್ಯಕ್ತಿ ಈತನೆಯೇ ಎಂದು ನನಗೆ ಅನುಮಾನ ಮೂಡಿದಂತು ಸುಳ್ಳಲ್ಲ. ಅಲ್ಲೂ ಕೂಡ ನಾನು ಆ ಕಂಡೆಕ್ಟರ್ನ ಇನ್ನೊಂದು ಸಮಾಜಮುಖಿ ಸೇವೆಯನ್ನು ಕಂಡು ಬೆರಗಾದೆ.
ಆ ಕಂಡೆಕ್ಟರ್ ಬಗ್ಗೆ ನನಗೆ ಕುತೂಹಲ ಮೂಡಿ ಅವರು ಯಾರೆಂದು ತಿಳಿಯಲು ಮುಂದಾದಾಗ ಆ ಯುವಕನ ಹೆಸರು “ಸಂದೇಶ್ ದೇವಾಡಿಗ” ಎಂದು ತಿಳಿಯಿತು. ಕಳೆದ ಹಲವಾರು ವರ್ಷಗಳಿಂದ ಸುನಿಲ್ ಬಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರಂತೆ. ಮಧ್ಯಮ ಕುಟುಂಬದಿಂದ ಬಂದ ಅವರಿಗೆ ವೈಯಕ್ತಿಕವಾಗಿ ಹಲವಾರು ಕಷ್ಟ ಕಾರ್ಪಣ್ಯಗಳಿದ್ದರು ಕೂಡ ತನ್ನ ಕರ್ತವ್ಯದಲ್ಲಿ ಅವೆಲ್ಲವನ್ನು ಮರೆತು ಇತರರನ್ನು ನಗಿಸುತ್ತಿದ್ದಾರೆ. ಮಕ್ಕಳು ಅವರು ಎಷ್ಟೆ ಬೈದರೂ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಸದಾ ನಗುಮೊಗದಿಂದ ಸೇವೆ ಸಲ್ಲಿಸುವ ಸಂದೇಶ್ ಅವರು ನಾನು ಕಂಡುಕೊಂಡಾಗೆ ಒಂದು ಬಸ್ನ ಕಂಡೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿಲ್ಲ. ರೆಂಜಾಳದ ಸುಮಾರು 30 ಕ್ಕೂ ಅಧಿಕ ಮನೆಯ ಮಕ್ಕಳೆಂಬ ಬೆಳಕುಗಳನ್ನು ಜಾಗರೂಕತೆಯಿಂದ ಕಾರ್ಕಳಕ್ಕೆ ಮುಟ್ಟಿಸುವ ಜವಾಬ್ದಾರಿಯುತ ಕೆಲಸ ಮಾಡುತ್ತಿದ್ದಾರೆ. ಬಸ್ ಎಷ್ಟೆ ತುಂಬಿದ್ದರು ಕೂಡ ಯಾವ ಶಾಲಾ ಮಕ್ಕಳನ್ನು ಬಿಟ್ಟು ಹೋಗುವುದಿಲ್ಲ. ಕಂಡೆಕ್ಟರೊಂದಿಗೆ ಚಾಲಕ ಕೂಡ ಮಕ್ಕಳನ್ನು ಬಸ್ನ ಬಾಗಿಲಲ್ಲಿ ನಿಲ್ಲದಂತೆ ಎಚ್ಚರಿಕೆ ವಹಿಸುತ್ತಾರೆ.
ಕಂಡೆಕ್ಟರ್ ಸಂದೇಶ್ ಅವರಿಂದ ಯುವ ಪೀಳಿಗೆ ಕಲಿಯುವಂತದ್ದು ಬಹಳಷ್ಟಿದೆ. ಕೆಲಸ ಯಾವುದೇ ಇರಲಿ ಅದನ್ನು ನಿಷ್ಠೆಯಿಂದ, ಅಷ್ಟೇ ಪ್ರೀತಿಯಿಂದ ನಿರ್ವಹಿಸಿದಾಗ ಅದರಲ್ಲಿ ಸ್ವರ್ಗ ಸುಖ ಕಾಣುವುದಂದರೆ ಇದೆ ತಾನೆ. ಬದುಕನ್ನು ಬಂದಂತೆ ಸ್ವೀಕರಿಸಬೇಕು. ಸುಖ, ದುಃಖ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅದನ್ನು ಸಮನಾಗಿ ಸ್ವೀಕರಿಸುವ ಜೀವನ ಪ್ರೀತಿಯನ್ನು ಅವರ ಕರ್ತವ್ಯದಲ್ಲಿ ಕಂಡೆ. ನಮ್ಮಲ್ಲಿ ಎಷ್ಟೇ ನೋವು, ದು:ಖ, ದುಮ್ಮಾನಗಳಿದ್ದರು ಕೂಡಾ ಇಂತಹ ವ್ಯಕ್ತಿಗಳಿರುವ ಸ್ಥಳಗಳಲ್ಲಿ ಕುಳಿತುಕೊಂಡರೆ ಮನಸು ಹಗುರವಾಗಿ ಬಿಡುತ್ತದೆ. ಸಂದೇಶ್ ಅವರ ಬಗ್ಗೆ ರೆಂಜಾಳದವರಿಗೆ ಒಳ್ಳೆಯ ಅಭಿಪ್ರಾಯವಿದೆ ಎಂಬುದನ್ನು ನಾನು ಅರಿತುಕೊಂಡೆ. ನಿಜವಾಗಿಯೂ ಇಂತಹ ಸಿಬ್ಬಂದಿಯನ್ನು ಪಡೆದ ಸುನಿಲ್ ಬಸ್ಸಿನ ಮಾಲಕರು ಅದೃಷ್ಟವಂತರು. ನಾನಂತೂ ಮುಂದೊಂದು ದಿನ ಇದೆ ಬಸ್ನಲ್ಲಿ ಪ್ರಯಾಣಿಸಲು ಕಾತರದಿಂದ ಕಾಯುತ್ತಿರುವೆ. ಸಂದೇಶ್ ಅವರಂತಹ ಪ್ರಾಮಾಣಿಕ, ನಿಸ್ವಾರ್ಥ, ನಿಶ್ಕಲ್ಮಶ ವ್ಯಕ್ತಿಗಳ ಸಂಖ್ಯೆ ಇಮ್ಮಡಿಗೊಳ್ಳಲಿ. ಅವರಿಗೆ ಶುಭವಾಗಲಿ. ಬಸ್ಸಿನಲ್ಲಿ ಪ್ರಯಾಣಿಸುವ ರೆಂಜಾಳದ ಮಕ್ಕಳಿಗೆ ಅವರಿಂದ ಇನ್ನಷ್ಟು ಒಳಿತಾಗಲಿ ಎಂಬ ಹಾರೈಕೆಯೊಂದಿಗೆ.
ಡಾ. ದಿನೇಶ್ ಶೆಟ್ಟಿ ರೆಂಜಾಳ ಮುಂಬೈ