ಈ ಸಾರಿಯ ಮಳೆಗಾಲವಂತೂ ಅಪಾಯ ಮತ್ತು ಆತಂಕ ಎಂಬ ಮಹಾ ಮುನ್ಸೂಚನೆ ಕೊಟ್ಟಿದೆ. ದಿನ ನಿತ್ಯವೂ ನಾನಾ ಕಾರಣಗಳಿಂದ ಸಾವು ನೋವು ಅವಘಡಗಳು ಘಟಿಸುತ್ತಲೇ ಇದೆ. ಮುಖ್ಯವಾಗಿ ಅನಿಸುವುದು ನಗರ ಪ್ರದೇಶದ ಕೆಲ ಅವಾಂತರಗಳನ್ನು ಕಂಡಾಗ. ಈ ಮೊದಲು “ಊರ ಮೇಲೆ ಊರು ಬಿದ್ರೂ ಶ್ಯಾನುಭೋಗರ _ ಹೋಯ್ತು” ಎಂದು ರಸ್ತೆ, ಸೇತುವೆ, ತೋಡು ಬದಿ ಕಟ್ಟುವುದು, ತಡೆಗೋಡೆ ಎಂಬ ಕಾಮಗಾರಿಗಳಲ್ಲಿ “ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ” ಎಂದು ನಡೆದದ್ದೇ ನಡೆದದ್ದು. ಅದರ ಪರಿಣಾಮ ಈಗ ಸಾರ್ವಜನಿಕರು ಎದುರಿಸುವಂತಾಗಿದೆ. ಅಲ್ಲ ಈ ಸಲದ ಮಳೆಗೆ ಎಷ್ಟೊಂದು ಅವಾಂತರಗಳು ನಡೆದದ್ದು ಮಾರಾಯ್ರೆ!?. ಛೆ ಛೆ ಕೆಲವೊಂದು ಮಳೆಯಿಂದಾಗಿ ಆದರೆ ಇನ್ನು ಕೆಲವು ಮಳೆಯೊಳಗೆ ಎನ್ನಬಹುದು.
ಮುಖ್ಯವಾಗಿ ಎಲ್ಲರ ಗಮನ ಸೆಳೆದ ಅವಘಡ ಎಂದರೆ ಅಂಬಲಪಾಡಿಯ ಶ್ರೀಮತಿ ಅಶ್ವಿನಿ ಮತ್ತು ಶ್ರೀಯುತ ರಮಾನಂದ ಶೆಟ್ಟಿ ದಂಪತಿಗಳ ಮನೆಯಲ್ಲಿ ನಡೆದ ಬೆಂಕಿ ಅವಘಢ. ಇದು ಊರಿನಲ್ಲಿ ಮಾತ್ರವಲ್ಲದೇ ಪರವೂರು, ಪರ ದೇಶದಲ್ಲೇ ಸುದ್ದಿ ಮಾಡಿದ್ದು. ಮಾತ್ರವಲ್ಲದೇ ಎಲ್ಲರೂ ಪಶ್ಚಾತ್ತಾಪ ಆಶ್ಚರ್ಯ ಎರಡೂ ವ್ಯಕ್ತಪಡಿಸಿದ ಘಟನೆ. ನಾನೂ ಅಶ್ವಿನಿ ಮೇಡಂರವರ ಕೆಲ ವಿಡಿಯೋಗಳನ್ನು ಗಮನಿಸಿದ್ದೆ. ಇಂದಿನ ಕಾಲದಲ್ಲಿ ಇದನ್ನೆಲ್ಲಾ ಹೇಳುವವರು ಯಾರು? ಮತ್ತು ಕೇಳುವವರಾದರೂ ಯಾರು? ಎಂದು ನನಗೂ ಒಮ್ಮೆ ಅನಿಸಿತ್ತು. ಆದರೆ ಅದರಲ್ಲಿ ಸತ್ಯ ಮತ್ತು ಸತ್ಯವಿತ್ತು. ನಮ್ಮ ಹಿರಿಯರು ಅಂದು ನಡೆಸಿದ್ದ ಮತ್ತು ಇಂದೂ ಕೆಲವರಾದರೂ ಆಚರಿಸಿಕೊಂಡು ಬರುತ್ತಿರುವ ಹಲವಾರು ನಂಬಿಕೆಗಳ ಕುರಿತು, ಸಂಪ್ರದಾಯಗಳ ಬಗ್ಗೆ ಸರಿಯಾಗಿ ಅಧ್ಯಯನ ನಡೆಸಿ ಅದರ ಹಿಂದಿರುವ ವೈಜ್ಞಾನಿಕ ಸತ್ಯವನ್ನು ಇಂದಿನ ಮಕ್ಕಳಿಗೆ ಮಾತ್ರವಲ್ಲ, ನನ್ನಂತಹ ಕೆಲ ದೊಡ್ಡವರಿಗೂ ತಿಳಿ ಹೇಳುವ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದುದೇ ಆಗಿತ್ತು. ಕಾರಣ ನಾನೂ ಅವರಂತೆಯೇ ನನಗೆ ತಿಳಿದ ಕೆಲ ತಿಳುವಳಿಕೆಯ ವಿಚಾರಗಳನ್ನು ಜನಸಾಮಾನ್ಯರಿಗೆ, ಮಕ್ಕಳಿಗೆ ಹೋದಲ್ಲೆಲ್ಲಾ ತಿಳಿಸುತ್ತಿರುತ್ತೇನೆ. ಆದರೆ ನನ್ನ ಎದುರಿಗೆ ಏನೋ ಕಾಟಾಚಾರಕ್ಕಾಗಿ ಕೇಳಿದರೂ ಅದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವವರು ತುಂಬಾನೇ ಕಡಿಮೆ. ಅಂದ್ರೆ ಎಲ್ಲರಿಗೂ ಅದೊಂದು ಅಸಡ್ಡೆ. ಅದೆಲ್ಲ ಯಾವ ಕರ್ಮಕ್ಕೆ? ಅದನ್ನು ತಿಳ್ಕೊಂಡು ಏನು ಸಾಧಿಸಲಿಕ್ಕೆ ಎಂಬ ಭಾವನೆ. ಆದರೆ ಅಶ್ವಿನಿಯವರು ತಮ್ಮ ಭವ್ಯವಾದ ಬಂಗಲೆಯಲ್ಲಿದ್ದರೂ ನಾನು ತಿಳಿದ ಹಾಗೆ ಒಬ್ಬಾಕೆ ಬ್ರಾಹ್ಮಣ ಕುಲಜೆಯಾಗಿ ಬಂಟನನ್ನು ಮೋಹಿಸಿ ವಿವಾಹವಾದ ಕಾರಣಕ್ಕೆ ಮದುವೆಯ ನಂತರ ಹೆತ್ತವರಿಂದ ಪರಿತ್ಯಕ್ತೆಯಾಗಿದ್ದರೂ ಮಾನಸಿಕವಾಗಿ ಕುಗ್ಗದೆ ಧೃಢಚಿತ್ತದಿಂದ ಪ್ರೇಮಿಸಿ ಕೈಹಿಡಿದ ಗಂಡನಿಗೆ ಅತಿಪ್ರಿಯಳಾಗಿ ಶಾಸ್ತ್ರ ವಚನದಂತೆ “ಕಾರ್ಯೇಷು ದಾಸಿ, ಕರಣೇಶು ಮಂತ್ರಿ, ಭೋಜ್ಯೇಷು ಮಾತಾ, ರೂಪೇಷು ಲಕ್ಷ್ಮೀ, ಶಯನೇಷು ರಂಭಾ, ಕ್ಷಮಯಾ ಧರಿತ್ರಿ ಷಟ್ಧರ್ಮಯುಕ್ತಾ ಗುಣ ಧರ್ಮಪತ್ನಿ. ಪತ್ನಿಯಾದವಳು ಪತಿಯ ಸೇವೆಯಲ್ಲಿ ದಾಸಿಯಂತೆ, ಬುದ್ಧಿ ಹೇಳುವುದರಲ್ಲಿ ಮಂತ್ರಿಯಂತೆ, ಹಸಿದ ಹೊಟ್ಟೆಗೆ ಬಡಿಸುವುದರಲ್ಲಿ ತಾಯಿಯಂತೆ, ರೂಪದಲ್ಲಿ ಲಕ್ಷ್ಮೀಯಂತೆ, ಸರಸದಲ್ಲಿ ರಂಭೆಯಂತೆ (ಧರಿತ್ರಿ) ಅಂದ್ರೆ ಭೂಮಿ ತಾಯಿಯಂತೆ ಕ್ಷಮಾಗುಣೆಯಾಗಿ ಗಂಡನಿಗೆ ತಕ್ಕ ಅರ್ಧಾಂಗಿಯಾಗಿ ಧರ್ಮಪತ್ನಿಯಾಗಿ ಮೊನ್ನೆಯವರೆಗೆ ತನ್ನ ಜೀವನದಲ್ಲಿ ಸಾರ್ಥಕತೆಯನ್ನು ಕಂಡವರು.
ತಮ್ಮ ಸುಖದ ಸುಪ್ಪತ್ತಿಗೆಯ ಐಶಾರಾಮದ ಜೀವನದ ನಡುವೆಯೂ ಕೇವಲ ಮೆರೆಯದೆ, ಸಂಸ್ಕಾರವನ್ನು ಮರೆಯದೆ ತಮ್ಮ ಮಕ್ಕಳನ್ನೇ ಉದ್ದೇಶವಾಗಿರಿಸಿ, ಹೆತ್ತವರು ಮಕ್ಕಳೊಡನೆ ಸೌಜನ್ಯತೆಯಿಂದ ಹೇಗೆ ಮಾತಾಡಬಹುದು ಮತ್ತು ಹೇಳಬೇಕಾದ ವಿಷಯವನ್ನು ಪರಿಣಾಮಕಾರಿ ಮತ್ತು ಸುಂದರವಾಗಿ, ಆಕರ್ಷಕವಾಗಿ ಹೇಗೆ ಸಂವಹನ ನಡೆಸಬಹುದು ಎಂಬುದನ್ನು ಸಮಾಜದ ಇತರರಿಗೂ ತಿಳಿಹೇಳುವ ಅತ್ಯುತ್ತಮವಾದ ಯೂಟ್ಯೂಬ್ ವಿಡಿಯೋಗಳನ್ನು ಮಾಡಿರುವುದು ಈಗ ಅವರ ಅಂತಿಮ ಪಯಣದ ನಂತರ ಜನಮಾನಸಕ್ಕೆ ಗೊತ್ತಾಯಿತು. ಇದು ಹೇಳಲು ಸಣ್ಣ ವಿಚಾರ ಎಂದು ನೀವು ಎಣಿಸಬಹುದು. ಆದರೆ ಒಬ್ಬ ವ್ಯಕ್ತಿಯು ಸಾಯುವವರೆಗೆ ಕೇವಲ ತಮ್ಮ ಸ್ವಾರ್ಥಕ್ಕಾಗಿಯೇ ಬದುಕಿದರೆ ಅವರ ನಂತರ ಅವರನ್ನು ನೆನಪಿಸುವವರು ಅವರಿಂದ ಪ್ರಯೋಜನ ಪಡೆದ ಅವರ ಕುಟುಂಬದ ಸದಸ್ಯರು ಮಾತ್ರ. ಆದರೆ ಸಜ್ಜನ ನಟ ಪುನೀತ್ ರಾಜ್ ಕುಮಾರ್ ನಂತಹ ಕೆಲವಷ್ಟು ಮಂದಿ ಸದ್ದಿಲ್ಲದೆ ಮಾಡಿದ ಸಮಾಜಮುಖಿ ಕೆಲಸಗಳು ಅವರ ಮರಣದ ನಂತರವೂ ಜನಗಳ ಮನದಲ್ಲಿ ಅಚ್ಚೊತ್ತಿದೆ!. ಇಂತಹುದೇ ಸತ್ಕಾರ್ಯ ಮಾಡಿದವರು ಶ್ರೀಮತಿ ಅಶ್ವಿನಿಯವರು. ಕೇವಲ ಯೂಟ್ಯೂಬ್ ವಿಡಿಯೊಗಳಲ್ಲಿ ಜಾಗೃತಿ ಹುಟ್ಟಿಸಿದ್ದು ಮಾತ್ರವಲ್ಲದೆ, ಕಷ್ಟದಲ್ಲಿದ್ದವರಿಗೆ ಹಸಿದವರಿಗೆ ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳಿಗೂ ಆಹಾರ ನೀಡುತ್ತಾ, ತಮ್ಮ ಮನದ ಆಲೋಚನೆಯಂತೆ, ತಾವು ಹೇಳಿದಂತೆ ತನ್ನ ಬದುಕಲ್ಲೂ ಅದನ್ನು ಅನುಷ್ಠಾನಗೊಳಿಸಿ, ಕಾಯಾ ವಾಚಾ ಮನಸಾ ಮಾದರಿಯಾಗಿ “ಅಶ್ವಿನೀ” ದೇವತೆಗಳ ಲೋಕಕ್ಕೆ ಪಯಣಿಸಿದರು. ಆದರೆ ಒಂದಂತೂ ಸತ್ಯ. ನಮ್ಮ ಒಳ್ಳೆಯತನ, ಸತ್ಕಾರ್ಯ ಏನು ಮಾಡಿದರೂ ಹುಟ್ಟುವಾಗ ಹಣೆಯಲ್ಲಿ ಅಚ್ಚೊತ್ತಿದ ವಿಧಿ ಲಿಖಿತವನ್ನು ಬದಲಾಯಿಸಲಾಗದು ಎಂಬುದನ್ನು ಈ ದಂಪತಿಗಳ ಸಾವು ಸಾಬೀತು ಮಾಡಿದೆ!. ಅದಕ್ಕೇ ದಾಸರಂದಿರಬೇಕು, ಮಂಚ ಬಾರದು ಮಡದಿ ಬಾರಳು, ಕಂಚು ಕನ್ನಡಿ ಬಾರದು ಹಂತಿಲಿರಿಸಿದ ಧನವು ಬಾರದು ಹಿಂದೆ ಮಾಡಿದ ಕರ್ಮವಲ್ಲದೆ ಎಂಬುದಾಗಿ.
ಈ ಒಂದು ವಿಷಯದಲ್ಲಿ ಚ್ಯಾನಲ್ಗಳು, ಯುಟ್ಯೂಬರ್ಗಳು ತಮ್ಮ ಟಿ.ಆರ್.ಪಿ ಮತ್ತು ಲೈಕ್ಗಳನ್ನು ಹೆಚ್ಚಿಸಿಕೊಳ್ಳಲು ಮನಸ್ಸಿಗೆ ತೋಚಿದಂತೆ ಹೇಳಿದ್ದಂತೂ ಬೇಸರವಾಯ್ತು. ಏರ್ ಕಂಡೀಷನರ್ ಗಳು ಮತ್ತು ರೆಫ್ರಿಜರೇಶನ್ ನ ತಿಳುವಳಿಕೆಯಿದ್ದುದರಿಂದ ಅದೇ ಕ್ಷೇತ್ರದಲ್ಲಿ ಕೆಲ ವರ್ಷಗಳ ಅನುಭವ ಇರುವುದರಿಂದ ಈ ಬಗ್ಗೆ ನನ್ನ ಅಭಿಪ್ರಾಯ ಹೀಗೆ..
ಬಲ್ಲ ಮೂಲಗಳಿಂದ ತಿಳಿದಂತೆ ಈ ಘಟನೆಯ ಬಗ್ಗೆ ನನ್ನ ಅನಿಸಿಕೆ ಇದು ಅಷ್ಟೇ. ಎ.ಸಿ ಎನ್ನುವುದು ಒಂದು ಸೀಲ್ಡ್ ಸಿಸ್ಟಮ್. ಅದು ಒಂದು ನಿರಂತರ ಚಕ್ರದಂತೆ ತನ್ನೊಳಗೆ ಸುತ್ತುತ್ತಿರುತ್ತದೆ. (ಸೈಕಲ್ನಂತೆ ) ತನ್ನೊಳಗಿರುವ ಬೇರೆ ಬೇರೆ ನಮೂನೆಯ ಶೀತಲೀಕರಿಸುವ ಅನಿಲ (ಫ್ರೀಯಾನ್, ಅಮೋನಿಯಾ, 134A ಇವೆಲ್ಲಾ ಹಳೆಯ ರೆಫ್ರುಜರೇಟರ್ R410, R32 ಈಗಿನ ಅನಿಲಗಳು) ಇವೆಲ್ಲವೂ ಮನೆಯ ಹೊರಗಡೆ (ಔಟ್ ಡೋರ್ ಯುನಿಟ್) ಯ ಕಂಪ್ರೆಸರ್ ನ ಒಳ ಪ್ರವೇಶಿಸುವಾಗ ಕಡಿಮೆ ಉಷ್ಣಾಂಷ ಮತ್ತು ಕಡಿಮೆ ಒತ್ತಡದ ಅನಿಲವಾಗಿದ್ದು ನಂತರ ಕಂಪ್ರೆಸರ್ ನ ಪಿಚಕಾರಿಯ (ಪಿಸ್ಟನ್ ನ) ಪಂಪಿಂಗ್ ನ ಒತ್ತಡದಿಂದ ಹೆಚ್ಚು ಉಷ್ಣಾಂಷ ಮತ್ತು ಒತ್ತಡದ ಅನಿಲವಾಗಿ ಕಂಡೆನ್ಸರ್ ಎಂಬ ನಳಿಕೆಗಳ ಸಮೂಹಕ್ಕೆ ದೂಡಲ್ಪಡುತ್ತದೆ. ಅಲ್ಲಿರುವ ಫಿನ್ಸ್ ಸಮೇತದ ಪೈಪ್ ಮತ್ತು ಫ್ಯಾನ್ ನಿಂದಾಗಿ ಅದು ಒಳಗಡೆಯಿಂದಲೇ ತನ್ನ ಉಷ್ಣಂಶವನ್ನು ಕಳೆದುಕೊಳ್ಳುತ್ತದೆ. ಕ್ರಮೇಣ ಇನ್ನೂ ಸಪೂರವಾದ (ಕ್ಯಾಪಿಲ್ಲರಿ ಟ್ಯೂಬ್) ನಳಿಕೆಯಲ್ಲಿ ಹಾಯಿಸಿ ಹಾಗೆಯೇ ಉಳಿದ ತನ್ನ ಒತ್ತಡವನ್ನೂ ಕೂಡಾ ಕಳೆದುಕೊಳ್ಳತ್ತದೆ. ಆ ಹೊತ್ತಿಗೆ ಆ ಗ್ಯಾಸ್ ನ ಗುಣದಂತೆ ಅದು ತನ್ನ ಸ್ಥಿತಿಯಲ್ಲಿ ಬದಲಾವಣೆಯಾಗುತ್ತಾ ಗ್ಯಾಸ್ ಆಗಿದ್ದದ್ದು ತಣ್ಣಗಾಗುವಾಗ ಗಾಳಿಯೂ ಅಲ್ಲದ ದ್ರವವೂ ಅಲ್ಲದ ಪ್ಲಾಸ್ಮಾ ಸ್ಥಿತಿಯನ್ನು ಪಡೆಯುತ್ತದೆ. ಮತ್ತೆ ಅಲ್ಲಿರುವ ಅಕ್ಯುಮಿಲೇಟರ್ ಅಂದ್ರೆ ಸ್ವಲ್ಪ ಹೊತ್ತು ಗ್ಯಾಸನ್ನು ಹಿಡಿದಿಡುವ ಸ್ವಲ್ಪ ಅಗಲವಾದ ಸಣ್ಣ ಗಾತ್ರದ ನಳಿಕೆ (ಇಲ್ಲಿ ಗ್ಯಾಸ್ ನೊಡನೆ ಅಪ್ಪಿ ತಪ್ಪಿ ಮಿಶ್ರಿತವಾದ ಕಂಪ್ರೆಸರ್ ಒಳಗಿನ ಆಯಿಲ್ ಅಥವಾ ಸಣ್ಣ ಕಣಗಳು ಏನಾದರೂ ಇದ್ದರೂ ಅಲ್ಲೇ ಶೇಖರಣೆಯಾಗುತ್ತದೆ) ಅಲ್ಲಿಂದ ಮುಂದುವರಿದು ಕಂಡೆನ್ಸರ್ ನಂತಯೇ ನಳಿಕೆ (ಪೈಪ್) ಇರುವ ಸ್ವಲ್ಪ ಉದ್ದದ “ಇವಾಪರೇಟರ್” ಗೆ ಬರುತ್ತದೆ. ಇಷ್ಟು ಹೊತ್ತು ಹೇಳಿದ ಎಲ್ಲಾ ಭಾಗಗಳೂ ಮನೆಯ ಹೊರಗಡೆ ಇದ್ದರೆ ಈ ಭಾಗ ಮಾತ್ರ (ಇನ್ ಡೋರ್ ಯುನಿಟ್) ಮನೆಯ ಒಳಗಡೆ ಇರುತ್ತದೆ. ಇದರೊಳಗೆ ಒಂದು ಉದ್ದ ಗಾತ್ರದ ಫ್ಯಾನ್ (ಬ್ಲೋವರ್) ಕೂಡಾ ಇರುತ್ತದೆ. ಇಲ್ಲಿ ಬರುವಾಗ ಒಳಗಡೆಯೇ ಇದ್ದ ಪ್ಲಾಸ್ಮಾ ಸ್ಥಿತಿಯ ರೆಫ್ರಿಜರೆಂಟ್ ಮತ್ತೆ ಕೋಣೆಯೊಳಗಿನ ಬಿಸಿ ಗಾಳಿಯನ್ನು ಸಂಪರ್ಕಿಸಿದಾಗ ಮತ್ತೆ ಅನಿಲ (ಗ್ಯಾಸ್) ಆಗಿ ಪರಿವರ್ತಿತವಾಗುತ್ತದೆ. ಈಗ ಮತ್ತೆ ಕಡಿಮೆ ಒತ್ತಡ ಮತ್ತು ಕಡಿಮೆ ಉಷ್ಣಾಂಶದ ಅನಿಲ ಅಲ್ಲಿಂದ ಕಂಪ್ರಸರ್ ನ ಒಳಗಡೆ ಪುನಃ ಪ್ರವೇಶಿಸುತ್ತದೆ. ಇದರೊಳಗಿನ ಶೀತಲೀಕರಿಸುವ ಅನಿಲದ ಗುಣವೆಂದರೆ ಅದು ಕಡಿಮೆ ಉಷ್ಣತೆಯಲ್ಲೇ ಕುದಿಯುತ್ತದೆ ಮತ್ತು ತನ್ನ ಸ್ಥಿತಿಯನ್ನು ಬದಲಾಯಿತ್ತದೆ. ಅಂದ್ರೆ ಈ ಅನಿಲದ ಕುದಿಯುವ ಉಷ್ಣಾಂಶ ಮತ್ತು ತಣ್ಣಗಾಗುವ ಗುಣ ತುಂಬಾನೇ ಕಡಿಮೆ. ಹೀಗೆ ಈ ಎಲ್ಲಾ ಪ್ರಕ್ರಿಯೆಯು ಸಂಪೂರ್ಣ ಮುಚ್ಚಿದ (ಸೀಲ್ಡ್ ಸಿಸ್ಟಮ್) ವ್ಯವಸ್ಥೆಯಲ್ಲೇ ನಡೆಯುವುದು. ಹಾಗಾಗಿ ಗ್ಯಾಸ್ ಎಲ್ಲೂ ಹೊರಗೆ ಬರಲು ಅಥವಾ ಬೇರೆ ಯಾವುದರ ಸಂಪರ್ಕ ಪಡೆಯಲು ಸಾಧ್ಯವೇ ಇಲ್ಲ. ಒಂದು ವೇಳೆ ಪೈಪ್ ಏನಾದರೂ ಒಡೆದು ಹೋದರೆ ಮಾತ್ರ ಗ್ಯಾಸ್ ಲೀಕೇಜ್ ಆಗಲು ಸಾಧ್ಯ. ಹಾಗಾಗಿ ಇದರೊಳಗೆ ನೀರು ಪ್ರವೇಶಿಸುವುದು ಅಥವಾ ಬ್ಲಾಕ್ ಆಗುವ ಸಂಭವಗಳು ತುಂಬಾನೇ ಕಡಿಮೆ.
ಕೆಲವರು ಎಣಿಸುವಂತೆ ಒಳಗಿದ್ದ ಒಂದೇ ಒತ್ತಡದ ಗ್ಯಾಸ್ ಎಷ್ಟೇ ವರ್ಷವಾದರೂ ಕಡಿಮೆಯಾಗುವ ಸಾಧ್ಯತೆಯೇ ಇಲ್ಲ. ಹಾಗಾಗಿ ಸಮರ್ಪಕವಾದ ಗಾಳಿಯು ಕಂಡೆನ್ಸರ್ (ಹೊರಗಡೆಯ ಭಾಗ) ಮತ್ತು ಇವೋಪರೇಟರ್ (ಒಳಗಡೆಯ ಭಾಗ) ಇದರೊಂದಿಗಿನ ಫ್ಯಾನ್ ಮತ್ತು ಫಿನ್ಸ್ ನ್ನು ಸ್ವಚ್ಚಗೊಳಿಸುವುದನ್ನು ಮಾತ್ರ ವರ್ಷಕ್ಕೊಮ್ಮೆ ಸರ್ವಿಸ್ ಎಂದು ಮಾಡಿಸಬೇಕಾಗುತ್ತದೆ. ಆಗ ಅದರಲ್ಲಿರುವ ಗಾಳಿಯನ್ನು ಶುದ್ದವಾಗಿ ಹೊರ ಹಾಕಲು ಬಳಸುವ ಜಾಲಿ ಮತ್ತು ಪ್ಯಾನ್ ನಲ್ಲಿ ಸಿಕ್ಕಿಕೊಂಡ ಧೂಳಿನ ಕಣಗಳನ್ನು ಕ್ಲೀನ್ ಮಾಡುವುದನ್ನು ಬಿಟ್ಟರೆ ಸರ್ವೀಸ್ ಮಾಡುವವರು ಬೇರೆ ಸೀಲ್ಡ್ ಸಿಸ್ಟಮ್ ನ ಒಳಗೆ ಕೈಹಾಕಿ ಸ್ವಚ್ಛ ಮಾಡಲು ಸಾಧ್ಯವೇ ಇಲ್ಲ. ನಾನು ತಿಳಿದಂತೆ ಎಸಿಗಳು ಪ್ರೆಶರ್ ಜಾಸ್ತಿಯಾಗಿ ಒಡೆಯುವ ಸಾಧ್ಯತೆಗಳು ಅತಿ ಕಡಿಮೆ. ಒಂದಾ ಹೊರಗಡೆ ಕಂಪ್ರೆಸರ್ ಮತ್ತು ಫ್ಯಾನ್ ಗಳಿಗೆ ಕೊಟ್ಟ ವಿದ್ಯುತ್ ವೈರ್ ಗಳ ಜೋಡಣೆಯ ವ್ಯತ್ಯಾಸದಿಂದ ಬೆಂಕಿ ಕಾಣಿಸಿಕೊಂಡರೆ ಅದು ಜೋರಾಗಿ ಉರಿದರೆ ಆ ಬೆಂಕಿ (ಈಗೀಗ ಹೊಸ ಎಸಿಗಳಿಗೆ ಹಾಕಿರುವ ಕಡಿಮೆ ದಪ್ಪದ ಗುಣಮಟ್ಟವಿಲ್ಲದ ಅಲ್ಯುಮಿನಿಯಮ್ ಕೊಳವೆಗಳು ಒಡೆದು ಒಳಗಿರುವ ಗ್ಯಾಸ್ ಹೊರಗೆ ಬರುವ ಸಾಧ್ಯತೆ ಇದೆ) ಈ ಗ್ಯಾಸ್ ಗೆ ಬೆಂಕಿ ತಗುಲಿ ಅದು ಹತ್ತಿರವಿರುವ ಎಲ್ಲವನ್ನೂ ಉರಿಸುವ ಸಾಧ್ಯತೆಗಳು ಇವೆ. ಮುಂಚೆ ಈ ಗ್ಯಾಸ್ ಗಳಿಗೆ ಬೆಂಕಿ ಹತ್ತುತ್ತಿರಲಿಲ್ಲ. ಆದರೆ ಈಗ ವೆಚ್ಚ ಕಡಿಮೆ ಮಾಡುವ ಮತ್ತು ಪರಿಸರಕ್ಕೆ ಮಾರಕವಲ್ಲದ ಹೊಸ ಹೊಸ ಗ್ಯಾಸ್ ಗಳನ್ನು ಹಾಕುವುದರಿಂದ ಆ ಗ್ಯಾಸ್ ಗೆ ಬೆಂಕಿ ತಗುಲುತ್ತಿದೆ. ಅದೇ ರೀತಿ ಬಳಸುವ ಪೈಪ್ ಗಳೂ ಕಳಪೆಯೇ. ಮುಂಚೆ ತಾಮ್ರದ ನಳಿಕೆಗಳನ್ನು ಬಳಸುತ್ತಿದ್ದರು. ಅದು ಹೆಚ್ಚು ಉಷ್ಣಾಂಶವನ್ನು ತಡೆದುಕೊಳ್ಳುತ್ತಿತ್ತು ಮತ್ತು ಅದು ಒಡೆಯುವ ಸಾಧ್ಯತೆಗಳೇ ಕಡಿಮೆ. ಆದರೆ ಈಗ ವೆಚ್ಚ ಕಡಿಮೆ ಮಾಡಲು ಅಲ್ಯುಮಿನಿಯಮ್ ನ ನಳಿಕೆಗಳನ್ನು ಉಪಯೋಗಿಸುತ್ತಿದ್ದಾರೆ. ಇದೂ ಬೆಂಕಿ ಹರಡಲು ಕಾರಣವಾಗುತ್ತಿದೆ.
ಈ ಘಟನೆಯಲ್ಲೂ ನಡೆದಿರುವುದು ಇಷ್ಟೇ. ನನಗೆ ಬಂದ ಮಾಹಿತಿಯಂತೆ ಎಸಿ ಬ್ಲಾಸ್ಟ್ ಆದದ್ದೇ ಇಲ್ಲವಂತೆ!. ಆದರೆ ವೈರ್ ಗಳಿಂದ ಬಂದ ಬೆಂಕಿ ಮನೆಯಲ್ಲಿ ತೊಂಬತ್ತು ಶೇಕಡಾದಷ್ಟು ಆವರಿಸಿದ್ದ ಮರದ ಇಂಟೀರಿಯರ್ಸ್ ಮತ್ತು ಪೀಠೋಪಕರಣಗಳಿಗೆ ತಗುಲಿ ಆ ಬೆಂಕಿಯ ಕೆನ್ನಾಲಿಗೆ ಇಡೀ ಮನೆಯನ್ನೇ ಆಪೋಷಣೆ ತೆಗೆದುಕೊಂಡಿದೆ. ಆಗ ಬಂದ ಕಪ್ಪು ಹೊಗೆ ಕಾರ್ಬನ್ ಮೋನಾಕ್ಸೈಡ್ ವಿಷಾನಿಲ ಮನೆಯನ್ನೆಲ್ಲಾ ವ್ಯಾಪಿಸಿತು. ಅದರಿಂದ ಸಂಪೂರ್ಣವಾಗಿ ಬಂದ್ ಆಗಿದ್ದ ಮನೆಯೊಳಗೆ ಉಸಿರಾಟಕ್ಕೆ ಆಮ್ಲಜನಕ ಸಿಗದ ಕಾರಣ ಈ ಇಬ್ಬರು ದಂಪತಿಗಳು ದಾರುಣವಾಗಿ ಅಂತ್ಯ ಕಾಣಬೇಕಾಯ್ತು. ದಿವಂಗತರಾದ ರಮಾನಂದ ಶೆಟ್ಟಿ ಮತ್ತು ಅಶ್ವಿನಿ ದಂಪತಿಗಳು ಅವರ ಕೋಣೆಯೊಳಗೆ ಮತ್ತು ಅವರ ಇಬ್ಬರು ಮಕ್ಕಳು ಅವರ ಪಕ್ಕದಲ್ಲೇ ಇರುವ ಇನ್ನೊಂದು ಕೋಣೆಯಲ್ಲಿ ಸುಖವಾಗಿಯೇ ಮಲಗಿದ್ದರು. ಎಸಿ ಅಳವಡಿಸಿದ ಕೋಣೆಗಳಾಗಿರುವುದರಿಂದ ಸಾಮಾನ್ಯವಾಗಿ ಗಾಳಿ ಹೊರಗಡೆ ಹೋಗಲು ಮತ್ತು ಹೊರಗಡೆಯಿಂದ ಹವೆ ಒಳ ಪ್ರವೇಶಿಸಲು ಅವಕಾಶಗಳೇ ಇಲ್ಲ. ಅದೇನೂ ಹೊಸತಲ್ಲ. ಇದು ಎಸಿ ಅಳವಡಿಸಿದ ಎಲ್ಲರ ಮನೆಯ ಅವಸ್ಥೆ. ಹಾಗೆಂದು ಯಾವತ್ತೂ ಮುಂಜಾನೆ ನಾಲ್ಕು ನಾಲ್ಕುವರೆಗೆ ಮಾರ್ನಿಂಗ್ ವಾಕ್ ಗೆ ಹೋಗುತ್ತಿದ್ದ ಶೆಟ್ರು ಮುಂಚಿನ ದಿವಸ ಸ್ವಲ್ಪ ಜ್ವರ ಬಂದಿದ್ದ ಕಾರಣಕ್ಕೆ ವಾಕಿಂಗ್ ಗೆ ಹೋಗಿರಲಿಲ್ಲವಂತೆ. ಹಾಗೆಂದು ಬೆಳಿಗ್ಗೆ ಎದ್ದವರೇ ಕೋಣೆಯಿಂದ ಹೊರ ಬಂದವರೇ ಆ ಮೊದಲೇ ಯಾವುದೋ ಕಾರಣಕ್ಕೆ ಬೆಂಕಿ ತಗುಲಿ ಉರಿದಿದ್ದ ಅರ್ಧ ಮನೆಯ ಮರದಿಂದ ಬಂದ ಹೊಗೆಯನ್ನು ಕಂಡು ಹೌಹಾರಿ ಕೂಡಲೇ ಮಕ್ಕಳನ್ನು ಎಬ್ಬಿಸಿ ಗಾಳಿಯಾಡುವ ಬಚ್ಚಲು ಮನೆಯೊಳಗೆ ಹಾಕುತ್ತಾರೆ. ಅಲ್ಲಿಂದ ಮುಖ್ಯ ದ್ವಾರ ತೆರೆಯಲು ಹೋಗುವಾಗ ತೀವ್ರವಾಗಿ ಉಸಿರಾಟದ ತೊಂದರೆಯಾಗಿ ಸ್ಮೃತಿ ತಪ್ಪಿ ಬೀಳುತ್ತಾರೆ. ಇದನ್ನು ಕಂಡ ಮಕ್ಕಳು ಬೊಬ್ಬೆ ಹೊಡೆಯುತ್ತಾರೆ. ಕೂಡಲೇ ಪರಿಸರದ ನೆರೆಹೊರೆಯವರು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸುತ್ತಾರೆ. ಒಂದು ಗಂಟೆಯ ಬಳಿಕ ಅವರೂ ಬಂದು ಶತಪ್ರಯತ್ನದಿಂದ ಬಾಗಿಲು ತೆರೆಯುತ್ತಾರೆ. ಆದರೆ ಅಷ್ಟು ಹೊತ್ತಿಗಾಗಲೇ ರಮಾನಂದರ ಪ್ರಾಣಪಕ್ಷಿ ಹಾರಿ ಹೋಗಿರುತ್ತದೆ. ಆ ಮೊದಲೇ ಅವರ ಮಗ ಕೂಡಾ ಅವರ ಎದೆಗೆ ಬಡಿದು ಪ್ರಥಮ ಚಿಕಿತ್ಸೆಯ ಪ್ರಯತ್ನವನ್ನೂ ಮಾಡಿರುತ್ತಾನೆ. ಆ ಹೊತ್ತಿಗೆ ಉಸಿರಾಟಕ್ಕೆ ಸಮಸ್ಯೆಯಾಗಿ ಒಳಗಡೆಯೇ ಎದುಸಿರು ಬಿಡುತ್ತಿದ್ದ ಅಶ್ವಿನಿಯವರೂ ಆಮ್ಲಜನಕದ ಕೊರತೆಯಿಂದ ಆಂತರಿಕವಾಗಿ ಬೆಂದು ಒದ್ದಾಡುತ್ತಿದ್ದರು. ಆದರೆ ವಿಧಿಲೀಲೆಯಿಂದ ರಮಾನಂದರು ಆಗಾಗಲೇ ಸ್ವರ್ಗ ಸೇರಿದ್ದರೆ ಅಶ್ವಿನಿ ಮೇಡಂ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದರು. ಆದರೆ ವಿಧಿಯಾಟದಲ್ಲಿ ಕೊನೆಗೂ ಅವರೂ ಶಿವನ ಪಾದ ಸೇರಬೇಕಾಯ್ತು. ಇದು ವಿಧಿಯ ವಿಕಟ ಅಟ್ಟಹಾಸದ ವಿಪರ್ಯಾಸ. ಅಯ್ಯೋ ವಿಧಿಯೇ ಏನು ಹೇಳೋಣ. ಆಗಬಾರದ್ದು ಆಗಿಯೇ ಹೋಯ್ತು. ಈ ಭೂಮಿಯಲ್ಲಿ ಎಲ್ಲರೂ ಬಯಸುವುದು ಮೊದಲು ದುಡ್ಡು ಬದುಕು, ಸುಖದ ಸುಪ್ಪತ್ತಿಗೆ. ಆಮೇಲೆ ಗೌರವ ಪ್ರತಿಷ್ಠೆ ಹೆಸರು. ಈ ದಂಪತಿಗಳೂ ಮನೆಯೆಲ್ಲಾ ತೊಂಬತ್ತು ಶೇಕಡಾ ಮರ ಬಳಸಿ ಸಜ್ಜುಗೊಳಿಸಿದ್ದೇ ಇವರ ಮರಣಕ್ಕೆ ಕಾರಣವಾಯ್ತೇ ? ಇಲ್ಲವೇ ಅತಿಯಾವ ಐಷಾರಾಮ ಸುರಕ್ಷತಾ ಕ್ರಮವೇ ಅವರ ಅಂತ್ಯಕ್ಕೆ ಅನುವು ಮಾಡಿತೇ? ಇದು ಇನ್ನೂ ಪ್ರಶ್ನಾರ್ಹ ವಿಚಾರ?!. ಎಲ್ಲವನ್ನೂ ಪಡೆದು ಜೊತೆಗೆ ಎಲ್ಲರೊಂದಿಗೆ ಸೌಹಾರ್ದತೆಯಿಂದ ಬಾಳಿ ಬದುಕಿದ ಈ ಕುಟುಂಬಕ್ಕೆ ಭಗವಂತ ಇಂತಹ ದೊಡ್ಡ ಹೊಡೆತ ನೀಡಬಾರದಿತ್ತು ಎಂಬ ಪಶ್ಚಾತ್ತಾಪ ಮಾತ್ರ ನಾವೆಲ್ಲಾ ಮಾಡಬಹುದು ಅಷ್ಟೇ. ಅವರ ದಿವ್ಯ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂಬುದು ನನ್ನ ಪ್ರಾರ್ಥನೆ.
-ಶರತ್ ಶೆಟ್ಟಿ ಪಡುಪಳ್ಳಿ