ಅಯ್ಯೋ ದೇವ್ರೇ ಏನ್ ಸಂಗತಿ ಮಾರ್ರೆ.. ಎಲ್ಲಿ ನೋಡಿದರೂ ಕಳ್ಳರು, ದರೋಡೆಕೋರರು. ಅಂದ್ರೆ ಡಕಾಯಿತರು. ನಾನು 2019ರ ಸೆಪ್ಟೆಂಬರ್ ನಲ್ಲಿ ನೈಜೀರಿಯಾಕ್ಕೆ ಬರುವುದೆಂದು ನಿರ್ಧಾರ ಮಾಡಿದೆ. ಬರುವ ಮೊದಲಿನ ದಿವಸ ನನ್ನ ಯೋಗ ಗುರುಗಳೊಬ್ಬರು ಹೀಗೆಂದರು, ಶರತಣ್ಣ ನೀವು ಬೇರೆಲ್ಲಾದರೂ ಹೋಗಿ ಆದರೆ ನೈಜೀರಿಯಾಕ್ಕೆ ಮಾತ್ರ ಬೇಡ. ಯಾಕೆಂದರೆ ಅಲ್ಲಿ ದುಡ್ಡಿಗಾಗಿ ಏನು ಬೇಕಾದರೂ ಮಾಡ್ತಾರೆ. ನೀವು ಎಲ್ಲಾದರೂ ಕಾರು ನಿಲ್ಲಿಸಿದ್ರೆ ಇನ್ನೊಂದು ಬದಿಯಲ್ಲಿ ನಿಮ್ಮ ಕಾರ್ ನ ಟಯರನ್ನೇ ಕದ್ದು ಮತ್ತೆ ಅದನ್ನೇ ನಿಮಗೆ ಮತ್ತೆ ಮಾರಿ ಬಿಡುವಂತ ಖದೀಮ ಕಳ್ಳರು ಅಲ್ಲಿದ್ದರಂತ ಕೇಳಿದ್ದೆ. ನೀವು ಇಲ್ಲಿ ಭಜನೆ ಹರಿಕಥೆ, ನಿರೂಪಣೆ, ಭಾಗವತಿಕೆ ಅಂತ ಮಾಡಿಕೊಂಡಿರುವವರು. ಆದರೆ ಅಲ್ಲಿ ಜನಗಳು ಸರಿಯಿಲ್ಲ. ಕೊಲೆ, ಸುಲಿಗೆ, ಕಳ್ಳತನ ಎಲ್ಲವೂ ಇದೆ. ನಿಮ್ಮಂತವರಿಗೆ ಕಷ್ಟ ಎಂದ್ರು ಯಾರೂ ಬರಲ್ಲ. ನಾನಂದೆ ಗುರುಗಳೇ ನನ್ನ ನಿರ್ಧಾರವೂ ಆಗಿದೆ. ಮತ್ತೆ ವಿಮಾನದ ಟಿಕೆಟ್ಟೂ ಬಂದಿದೆ. ಎಲ್ಲವೂ ಹರಿ ಚಿತ್ತ. ನೋಡುವ ಆಗುವುದನ್ನು ತಪ್ಪಿಸಲು ಯಾರಿಂದಲೂ ಅಸಾಧ್ಯವಲ್ವೇ ಎಂದು. ಹಾಗೆ ಬಂದವನೇ ಈಗ ನಾಲ್ಕುವರೆ ವರ್ಷ ಕಳೆದು ಐದನೇ ವರ್ಷಕ್ಕೆ ಮುಂದಡಿ ಇಡುತ್ತಿದ್ದೇನೆ. ಅದೃಷ್ಟವಶಾತ್, ನೈಜೀರಿಯಾದಲ್ಲಿ ನಾನಿರುವ ನಗರದಲ್ಲಿ ಇದುವರೆಗೆ ಒಂದು ಕೊಲೆಯಾಗಲೀ ದರೋಡೆಯಾಗಲೀ ಅಥವಾ ಬೇರೆ ಬೇಡದ ಘಟನೆಯಾಗಲೀ ನನ್ನ ಗಮನಕ್ಕೆ ಬಂದಿಲ್ಲ.
ಅಂದರೆ ಇಲ್ಲಿ ಆಗುವುದೇ ಇಲ್ಲ ಎಂದು ಅಲ್ಲ. ಆದರೆ ವೈಭವೀಕರಣವಾಗಲಿ ಅಂತಹ ಚಾನೆಲ್ ಗಳಾಗಲೀ ಪತ್ರಿಕೆಗಳಾಗಲೀ ಇಲ್ಲ. ಸೀಮಿತವಾದ ಸುದ್ದಿಗಳು. ಅನಗತ್ಯ ಸುದ್ದಿಗಳಿಗೆ ಇಲ್ಲಿಯ ಸರಕಾರವೇ ಅವಕಾಶ ಕೊಡುತ್ತಿಲ್ಲ. ಹಾಗೆಂದು ಇಲ್ಲಿಯವರೆಗೆ ನಾನು, ರಸ್ತೆಯಲ್ಲಿ ಬಿದ್ದ ಒಬ್ಬ ಕುಡುಕನನ್ನು ಕಂಡಿಲ್ಲ. ಇಲ್ಲಿ ರೇಪ್ ಕೇಸ್ ಅನ್ನುವುದೇ ಇಲ್ಲ. ಅಂದರೆ ಇಲ್ಲಿಯವರು ನೀವೆಣಿಸುವಷ್ಟು ಅಪ್ಪಟ ನಾಗರೀಕರು, ವಿದ್ಯಾವಂತರು ಅಥವಾ ಬಹಳ ಸಜ್ಜನರು ಎಂಬುದಕ್ಕಿಂತಲೂ ತಮ್ಮ ಧರ್ಮವನ್ನು ಅತಿಯಾಗಿ ಪ್ರೀತಿಸುವ, ಮುಖ್ಯವಾಗಿ ಮನುಷ್ಯ ಮನುಷ್ಯನನ್ನು ಪ್ರೀತಿಸುವ ಮರ್ಯಾದಿ ಕೊಡುವ ಜನಗಳು. ಇನ್ನೊಬ್ಬರಲ್ಲಿ ಕೇಳಿ ಪಡೆದಾರು ಹೊರತು ಮತ್ತೊಬ್ಬನಿಂದ ಹೊಡೆದು ಬಡಿದು ಪಡೆಯುವುದು, ಕಳ್ಳತನ ಮಾಡುವುದು ತಪ್ಪು ಎಂಬ ಭಾವನೆಯನ್ನು ಅಗಾಧವಾಗಿ ರೂಢಿಸಿಕೊಂಡವರು. ಹಾಗಾಗಿ ಕೊಲೆ ಸುಲಿಗೆ ಬಹಳ ಕಡಿಮೆ. ಒಂದು ವೇಳೆ ಮಾಡಿದರೆ ಅವರನ್ನು ಸಾರ್ವಜನಿಕರೇ ಹಿಡಿದು, ಬಡಿದು ಕೈಕಾಲು ಮುರಿದು ಹದ ಮಾಡಿ ಹಣ್ಣುಕಾಯಿ ನೀರುಗಾಯಿ ಮಾಡಿದ ಮೇಲೆಯೇ ಪೋಲೀಸರಿಗೆ ಒಪ್ಪಿಸುವವರು. ಹಾಗಾಗಿ ಕಳ್ಳನೂ ಕಳ್ಳತನ ಮಾಡಲು ಬಹಳಷ್ಟು ಆಲೋಚಿಸುತ್ತಾನೆ. ಒಮ್ಮೆ ಅವ ಪೋಲೀಸರಿಗಿಂತಲೂ ಸಾರ್ವಜನಿಕರ ಕೈಗೆ ಒಮ್ಮೆ ಸಿಕ್ಕಿಬಿದ್ದಾ ಎಂದಾದರೆ ಮತ್ತೆ ದೇವರೇ ಗತಿ. ಕೈ ಕಾಲು ಮುರಿದು ಹಾಕಿ ನರಗಳನ್ನೂ ತುಂಡು ತುಂಡು ಮಾಡುತ್ತಾರೆ. ಮತ್ತೆ ಆತ ದುಡಿದು ತಿನ್ನುವುದೂ ಕಷ್ಟ. ಹಾಗೆ ಮಾಡಿ ಬಿಡುತ್ತಾರೆ. ಹಾಗಾಗಿ ಅವನಿಗೆ ಅವನ ನಾಳೆಯ ಮೇಲೆ ಅತೀ ಪ್ರೀತಿ ಇರುವುದರಿಂದ ಕಳ್ಳತನ, ಮಾನಹರಣ ಮಾಡಲು ನೂರು ಭಾರಿ ಆಲೋಚಿಸುತ್ತಾನೆ. ಈ ಎಲ್ಲಾ ಕಥೆಗಳು ಯಾಕೆ ಹೇಳಿದೆ ಎಂದರೆ, ನಮ್ಮ ಮಂಗಳೂರಿನ ಒಂದೊಂದು ಕಥೆ ಕೇಳುವಾಗ ನಿಜಕ್ಕೂ ಆಶ್ಚರ್ಯವಾಗುತ್ತಿದೆ. ನಾವು ಸಜ್ಜನರು, ತಿಳಿದವರು, ಬುದ್ದಿವಂತರು ಎಣಿಸಿದವರ ಊರಿನಲ್ಲಿ ದಿನವೂ ಒಂದರ ಮೇಲೊಂದು ಕಳ್ಳತನ, ದರೋಡೆ, ಮೋಸ, ಕೊಲೆ, ಸುಲಿಗೆ, ಮಾನಭಂಗ ಒಂದೋ ಎರಡೋ, ಹೇಳುವುದಕ್ಕೆ ನಾಚಿಕೆ ಮತ್ತೆ ಆಶ್ಚರ್ಯವಾಗುತ್ತದೆ. ನಮ್ಮಲ್ಲಿ ಯಾವುದಕ್ಕೆ ಕಮ್ಮಿಇದೆ ಹೇಳಿ?.
ಇದ್ದಲ್ಲೆಲ್ಲಾ ಸಿಸಿ ಟಿವಿ ಕ್ಯಾಮರಾಗಳು. ಅಲ್ಲಲ್ಲಿ ರಾತ್ರಿ ಪೋಲೀಸ್ ಪಹರೆ (ಬೀಟ್), ಜಂಕ್ಷನ್ ಪ್ರದೇಶಗಳಲ್ಲಿ ನಾಲ್ಕೂ ಕಡೆ ತಿರುಗುವ ಅಂದ್ರೆ 360 ಡಿಗ್ರಿಯೂ ತಿರುಗುತ್ತಾ ಎಲ್ಲವನ್ನೂ ಚಿತ್ರೀಕರಿಸುವ ವಿಶೇಷ ಕ್ಯಾಮರಾಗಳು. ಇದೆಲ್ಲವೂ ಇದ್ದೂ ಸಹಿತ “ಚಡ್ಡಿ ಗ್ಯಾಂಗ್” ನ ಬಡ್ಡಿ ಮಕ್ಕಳು ಅರ್ಥಾತ್ ಕಳ್ಳ ಶಿಕಾಮಣಿಗಳು ನಗರದ ಮದ್ಯ ಪ್ರದೇಶಕ್ಕೆ ಭಾರತದ ಮದ್ಯ ಪ್ರದೇಶದಿಂದ ರಾಜಾರೋಷವಾಗಿ ಬಂದು ದರೋಡೆ ಮಾಡುತ್ತಾರೆ ಎಂದರೆ ಎಂತಹ ಚಾಲಾಕಿ ಕಳ್ಳರು ಇವರು ಮತ್ತು ಇವರ ಧೈರ್ಯ ಎಂತದ್ದು ಮಾರ್ರೇ? ಅಲ್ಲ ಕಾಕತಾಳೀಯವಾಗಿ ಈ ಕಳ್ಳರಿಗೂ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಇರುವಾಗ ಆನೆಬಲ ಬಂದ ಹಾಗೆ ಆಗುತ್ತದಾ? ಎಂದು ಇದು ಒಂದು ಜಿಜ್ಞಾಸೆಯ ಪ್ರಶ್ನೆಯಷ್ಟೇ. ಇಲ್ಲವಾದಲ್ಲಿ ಇವರಿಗೆ ಯಾರ ಹೆದರಿಕೆಯೂ ಇಲ್ಲ ಅಂದ್ರೆ ಏನು ಕತೆ ಮಾರ್ರೆ? ಅಲ್ಲ ಈಗ ಸಿಕ್ಕಿ ಬಿದ್ದರು ಎಂಬುದು ಒಂದು ಸಂತೋಷ. ಆದರೆ ಗಂಭೀರವಾಗಿ ನಾವೆಲ್ಲರೂ ಆಲೋಚಿಸಲೇ ಬೇಕಾದ ಇನ್ನೊಂದು ಸಂಗತಿ ಎಂದ್ರೆ ಈಗ ದರೋಡೆ ಆಯ್ತು, ಪೋಲೀಸ್ ಇಲಾಖೆಯೂ ಬಹಳ ಮುತುವರ್ಜಿಯಿಂದ ಕೆಲವೇ ದಿನಗಳಲ್ಲಿ ಕಳ್ಳರನ್ನು ಹಿಡಿಯುವಲ್ಲೂ ಯಶಸ್ವಿಯಾಯ್ತು. ಆದರೆ ನಮ್ಮ ಕಾನೂನು ಇನ್ನು ಇಂತಹವರಿಗೆ ಏನು ಮಾಡ್ತದೆ ಅಂದ್ರೆ ಸ್ವಲ್ಪ ದಿನ ಕಸ್ಟಡಿ ವಿಚಾರಣೆ ಎಲ್ಲಾ ನಡೆಸಿ ಜೈಲಿಗೂ ಹಾಕುತ್ತದೆ. ಆದರೆ ಸ್ವಲ್ಪವೇ ದಿನದಲ್ಲಿ ಜಾಮೀನು ಕೊಟ್ಟು ಬಿಡುಗಡೆಯೂ ಮಾಡುತ್ತದೆ!. ಇದು ನಮ್ಮ ಕಾನೂನಿನ ತೀರಾ ಆತಂಕಕಾರಿ ವಿಚಾರ.
ನೀವೆಲ್ಲಾ ಗಮನಿಸಿ, ಈ ಕಳ್ಳರ ತಂಡದಲ್ಲಿ ಮುಖ್ಯವಾಗಿ ಆರೋಪಿಯಾಗಿರುವವರು ಈ ಮೊದಲು ಹಲವಾರು ಕಳ್ಳತನದ ಆರೋಪದಲ್ಲಿ ಜೈಲು ಸೇರಿದವರು ಮತ್ತು ಪೋಲೀಸರ ಆತಿಥ್ಯದ ರುಚಿ ನೋಡಿದವರು. ಹಾಗಾದರೆ ಇವರು ಮತ್ತೆ ಮತ್ತೆ ಅಂತದ್ದೇ ಕೃತ್ಯಗಳಲ್ಲಿ ಭಾಗಿಯಾಗಲು ನಮ್ಮ ಕಾನೂನಿನ ಶಿಕ್ಷೆಯು ಕಠಿಣವಿಲ್ಲದ್ದೇ ಇರುವುದು ಕಾರಣವಲ್ಲವೇ? ಈ ದೌರ್ಬಲ್ಯವನ್ನು ಯಾಕೆ ನಮ್ಮ ಕೋರ್ಟ್ ಗಳು ಅರ್ಥೈಸಿಲ್ಲ. ಅದೇ ನಾನು ಮೇಲೆ ಹೇಳಿದ ಹಾಗೆ ಒಂದಾ ನಮ್ಮ ಜನಗಳ ನೈತಿಕ ಮೌಲ್ಯಗಳ ಅಧಪತನವೇ ನಮ್ಮ ಈ ಕಳ್ಳರು ಹೆಚ್ಚಾಗಲು ಕಾರಣ. ಇದಕ್ಕೆ ನೇರವಾದ ಕಾರಣವೇ ನಮ್ಮ ಸರಕಾರ ಮತ್ತು ಕಾನೂನು ವ್ಯವಸ್ಥೆ. ಕಳ್ಳರು ತಯಾರಾಗಲೂ ನಮ್ಮ ವ್ಯವಸ್ಥೆಯೇ ಕಾರಣ. ಬೇರೆ ರಾಜ್ಯದಿಂದ ಬರುವ ಮಂದಿಯ ಬಗ್ಗೆ ನಿಗಾ ಇಡಲು ಇನ್ನೂ ಹೆಚ್ಚಿನ ಕಾನೂನಾತ್ಮಕ ಕ್ರಮಗಳ ಅಗತ್ಯವಿದೆ. ಒಂದು ಸಮಾಧಾನದಾಯಕ ಸಂಗತಿ ಎಂದರೆ ಎಲ್ಲಾ ಕಡೆ ಹೆದರಿಸಿ ದುಡ್ಡು ಬಂಗಾರ ದೋಚಿದ್ದಾರೆಯೇ ಹೊರತು ಮಾನ ಅಥವಾ ಪ್ರಾಣಕ್ಕೆ ಆಪತ್ತು ತಂದಿಲ್ಲವಲ್ಲ ಎಂಬುದು. ಮತ್ತೊಂದು ಸಂಗತಿ ನಾವು ಮನೆ ಬೀದಿಗೆ ಎಲ್ಲಾ ಕಡೆ ಸಿಸಿ ಕ್ಯಾಮರಾ ಅಳವಡಿಸುತ್ತೇವೆಯೇ ಹೊರತು ನಮ್ಮ ಅಕ್ಕ ಪಕ್ಕದವರೊಂದಿಗೆ ಎಷ್ಟು ಒಳ್ಳೆಯತನ ಇಟ್ಟುಕೊಂಡಿದ್ದೇವೆ ಎನ್ನುವುದು. ಇದು ಫ್ಲಾಟ್, ಒಂಟಿ ಮನೆಯಲ್ಲಿರುವ ಎಲ್ಲರೂ ಆಲೋಚಿಸಲೇ ಬೇಕಾದ ಸಂಗತಿ. ನಾವು ದುಡಿದು ಸಂಗ್ರಹಿಸಿದ ಹಣದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಟ್ಟು, ಮತ್ತೆ ಪರದೇಶಕ್ಕೂ ಕಳುಹಿಸಿ ಉತ್ತಮ ವೇತನದ ಕೆಲಸಕ್ಕೂ ಸೇರುವಂತೆ ಮಾಡುತ್ತೇವೆ. ಊರಲ್ಲಿ ಮನೆ ಮಾಡಿ ಎಲ್ಲಾ ಸೌಲಭ್ಯಗಳೊಂದಿಗೆ ಜೀವಿಸುತ್ತೇವೆ. ಆದರೆ ಎಲ್ಲದಕ್ಕೂ ದುಡ್ಡೇ ಮುಖ್ಯವಲ್ಲ. ಮನುಷ್ಯ ಮನುಷ್ಯನ ಸಂಬಂಧಕ್ಕಿಂತ ದುಡ್ಡೇ ಎಲ್ಲಾ ಕಡೆ ಸಹಕಾರಿಯಾಗದು. ಮನೆಯ ಕೋಣೆಯ ಒಳಗಡೆ ಎಸಿ, ಫ್ಯಾನ್ ಎಲ್ಲವನ್ನೂ ಹಾಕಿ ಮಲಗಿದೆವು ಎಂದಾದರೆ, ಆ ಶಬ್ದಕ್ಕೆ ಕಳ್ಳ ದರೋಡೆಕೋರ ಯಾರು ಮನೆಯೊಳಗೆ ಬಂದರೂ ಎಚ್ಚರವಾಗದ ಸ್ಥಿತಿ. ಇದೂ ಕೂಡ ಕಳ್ಳರಿಗೆ ಸಹಕಾರಿ. ಮತ್ತೆ ನೆರೆಕರೆಯ ಮಂದಿಯೂ ಶಬ್ದವಾದರೂ, ಕೂಗು ಕೇಳಿದರೂ ನನಗ್ಯಾಕೆ ಇತರರ ಉಸಾಬರಿ ಎಂದು ಹೊರಗೆ ಬರದವರೂ ಇದ್ದಾರೆ. ಮತ್ತೆ ಮತ್ತೆ ಹೇಳಬೇಕೆಂದರೆ ಒಟ್ಟಾರೆಯಾಗಿ ನಮ್ಮೊಳಗಿನ ಮಾನವೀಯ ಮೌಲ್ಯಗಳು ಕುಸಿದಿರುವುದೂ ಈ ಕಳ್ಳ ಕಾಕರ ದರೋಡೆಕೋರರ ಕೆಲಸಕ್ಕೆ ಪುಷ್ಟಿ ನೀಡುತ್ತಿದೆ ಎಂದರೆ ಹೆಚ್ಚಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಸರಕಾರ, ಕಾನೂನು, ಅದರೊಂದಿಗೆ ಇಡೀ ಸಮಾಜವೇ ಎಚ್ಚೆತ್ತು ಈ ಪಿಡುಗಿಗೆ ಮದ್ದರೆಯಬೇಕಿದೆ. ಪ್ರತೀ ಕಾಲೋನಿ, ಏರಿಯಾ, ಲೇಔಟ್, ವಸತಿ ಪ್ರದೇಶಗಳಲ್ಲೂ ಈ ಬಗ್ಗೆ ಜಾಗೃತಿ ಸಮಿತಿಗಳು ಆಗಬೇಕಾಗಿದೆ. ರಾತ್ರಿ ಮಾತ್ರವಲ್ಲದೇ ಹಗಲೂ ಅಪರಿಚಿತರ ಮೇಲೆ ಕಣ್ಣಿಡುವ ವ್ಯವಸ್ಥೆಯಾಗಬೇಕಾಗಿದೆ. ಆಗ ಮಾತ್ರ ಈ ಕಳ್ಳರ ಕರಾಮತ್ತಿಗೆ ಲಗಾಮು ಹಾಕಬಹುದೇನೋ?.
-ಶರತ್ ಶೆಟ್ಟಿ ಪಡುಪಳ್ಳಿ