ಯಕ್ಷಗಾನ ಮತ್ತು ಯಕ್ಷಗಾನ ತಾಳಮದ್ದಳೆ ಕ್ಷೇತ್ರವು ಉಳಿಯಬೇಕು, ಬೆಳೆಯಬೇಕು, ಹೊಸ ಹೊಸ ಕಲಾವಿದರು ಈ ರಂಗದಲ್ಲಿ ಸೃಷ್ಟಿಯಾಗಬೇಕು ಎನ್ನುವ ಉದ್ದೇಶವನ್ನಿರಿಸಿಕೊಂಡು ಮುಂಬಯಿ ನಗರದಾದ್ಯಂತ ಅಲ್ಲಲ್ಲಿ ಯಕ್ಷಗಾನ ಆಸಕ್ತರಿಗಾಗಿ ಶಿಬಿರವನ್ನು ಆಯೋಜಿಸಿ ಈ ಮೂಲಕ ಯುವ ಜನಾಂಗಕ್ಕೆ ಯಕ್ಷಗಾನ ಬಗ್ಗೆ ತಿಳುವಳಿಕೆ ಮತ್ತು ದೀಕ್ಷೆಯನ್ನು ನೀಡುತ್ತಾ ಬಂದಿರುವುದೇ ಅಲ್ಲದೇ ನಗರದ ಅನೇಕ ನಾಮಾಂಕಿತ ಕಲಾಪೋಷಕ ಗಣ್ಯ ಕನ್ನಡಿಗ ಉದ್ಯಮಿಗಳಿಗೂ, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳಿಗೂ ಯಕ್ಷಗಾನ ದೀಕ್ಷೆಯನ್ನು ನೀಡಿ ಅವರೆಲ್ಲರೂ ಕಲಾವಿದರ ಸಾಲಿನಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಹಿರಿತನ ಯಕ್ಷಗುರು ಬಾಲಕೃಷ್ಣ ಶೆಟ್ಟಿಯವರಿಗೆ ಹಾಗೂ ಅವರ ಸಂಚಾಲಕತ್ವದಲ್ಲಿ ಕಳೆದ ಸುಮಾರು 23 ವರ್ಷಗಳಿಂದ ಕಾರ್ಯರೂಪದಲ್ಲಿರುವ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿಗೆ ಸಲ್ಲುವಂತಿದೆ.
ಅದೇ ರೀತಿ ತವರೂರ ಅನೇಕ ಪ್ರಸಿದ್ಧ ನಾಮಾಂಕಿತ ಹಾಗೂ ಪ್ರತಿಭೆ ಇದ್ದರೂ ಸೂಕ್ತ ವೇದಿಕೆಯ ಮತ್ತು ಅವಕಾಶದ ಕೊರತೆ ಅನುಭವಿಸುತ್ತಿರುವ ತೆರೆಯ ಮರೆಯ ಯುವ ಪ್ರತಿಭಾವಂತ ಕಲಾಕಾರರನ್ನು ಆಯ್ದು ಅವರನ್ನು ತವರೂರಿನಿಂದ ಮುಂಬಯಿ ಮಹಾನಗರಕ್ಕೆ ಆಹ್ವಾನಿಸಿ, ಅವರ ಪ್ರತಿಭೆಯನ್ನು ಅನಾವರಣಗೊಳಿಸಲು ಯೋಗ್ಯ ವೇದಿಕೆಯನ್ನು ಕಲ್ಪಿಸಿಕೊಟ್ಟು ಸರಣಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವನ್ನು ನಗರದ ಕಲಾಪೋಷಕರ, ಕಲಾರಸಿಕರ ಸಂಪೂರ್ಣ ಸಹಾಯ, ಸಹಕಾರದೊಂದಿಗೆ ಆಯೋಜಿಸುತ್ತಾ ಬಂದಿರುವ ಹಿರಿತನ ಕೂಡಾ ಅಜೆಕಾರು ಬಾಲಕೃಷ್ಣ ಶೆಟ್ಟಿಯವರಿಗೆ ಮತ್ತು ಅವರ ನೇತೃತ್ವದಲ್ಲಿ ಕಾರ್ಯರೂಪದಲ್ಲಿರುವ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಸಂಸ್ಥೆಗೆ ಸಲ್ಲುವಂತಿದೆ ಎಂದು ಅಭಿಮಾನದೊಂದಿಗೆ ಹೇಳಿಕೊಳ್ಳುವಂತಿದೆ.
ಈ ರೀತಿಯ ಹಿನ್ನಲೆಯೊಂದಿಗೆ ಮುಂಬಯಿ ರಂಗದಲ್ಲಿ ನಿರಂತರ ಸಕ್ರಿಯವಾಗಿರುವ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಪ್ರಸ್ತುತ ವರ್ಷದ ಕಲಾಚಟುವಟಿಕೆಗಳಿಗೆ ಯುವ ಪ್ರತಿಭಾವಂತ ಕಲಾವಿದರ ಕೂಡುವಿಕೆಯ ‘ಯಕ್ಷ ಶ್ರೀ ಹವ್ಯಾಸಿ ಬಳಗ ಪುತ್ತೂರು’ ಮಹಿಳಾ ಯಕ್ಷಗಾನ ತಾಳಮದ್ದಳೆ ಬಳಗವನ್ನು ನಗರಕ್ಕೆ ಬರಮಾಡಿಸಿ ಕೊಳ್ಳುವುದರ ಮೂಲಕ ತನ್ನ ಉದ್ದೇಶವನ್ನು ಜೀವಂತವಾಗಿರಿಸಿ ಕೊಂಡಿದ್ದಾರೆ. ಹಾಗೆ ಈ ಪ್ರತಿಭಾವಂತ ಮಹಿಳಾ ಕಲಾವಿದೆಯರ ಕೂಡುವಿಕೆಯ ತಂಡ ಇದೇ ಮೊತ್ತ ಮೊದಲ ಬಾರಿಗೆ ನಗರ ಪ್ರವಾಸವನ್ನು ಕೈಗೊಳ್ಳಲಿದೆ ಮತ್ತು ಜುಲೈ 6 ರಿಂದ 10 ರವರೆಗೆ ನಗರದ ವಿವಿಧೆಡೆಗಳಲ್ಲಿ ಯಕ್ಷಗಾನ ತಾಳಮದ್ದಳೆಯನ್ನು ಪ್ರಸ್ತುತ ಪಡಿಸಿ ನಗರದ ಕಲಾ ರಸಿಕರನ್ನು ಮನೋರಂಜಿಸಲಿದ್ದಾರೆ. ಜೊತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ.
ಯಕ್ಷ ಶ್ರೀ ಹವ್ಯಾಸಿ ಬಳಗ ಪುತ್ತೂರು ತಂಡದ ಕಿರು ಪರಿಚಯ : ಬೆಟ್ಟದಷ್ಟು ಕನಸುಗಳನ್ನು ಹೊತ್ತು ಪುಟ್ಟದೊಂದು ಹವ್ಯಾಸಿ ತಾಳಮದ್ದಳೆ ಬಳಗವನ್ನು ಕಟ್ಟಿಕೊಂಡು ಹಲವು ಧ್ಯೇಯ, ಉದ್ದೇಶಗಳೊಂದಿಗೆ ತಮ್ಮೊಳಗೆ ಹುದುಗಿರುವ ಪ್ರತಿಭೆಯ ಅನಾವರಣಕ್ಕೆ ಅಣಿಯಾಗಿರುವ ಕಲಾ ಬಳಗವೇ ಯಕ್ಷ ಶ್ರೀ ಹವ್ಯಾಸಿ ಬಳಗ ಪುತ್ತೂರು. ಸಮಾನ ಮನಸ್ಕರಾದ ಮಹಿಳಾ ಕಲಾವಿದೆಯರು ಸೇರಿ ಪ್ರಾರಂಭಿಸಿದ ಈ ಸಂಸ್ಥೆಗೆ ಭದ್ರ ಅಡಿಪಾಯವನ್ನು ಹಾಕಿದ ಹಿರಿಮೆ ವೀಣಾ ನಾಗೇಶ್ ತಂತ್ರಿ ಮತ್ತು ವೀಣಾ ಸರಸ್ವತಿ ನಿಡ್ವಣ್ಣಾಯ, ಗೀತಾ ಕುದ್ವಾಣ್ಣಾಯ ಇವರಿಗೆ ಸಲ್ಲುವಂತಿದೆ. ಸಂಘ ಪ್ರಾರಂಭ ಮಾಡಿದ ವರ್ಷವೇ ಲೋಕಕ್ಕೆ ಅಪ್ಪಳಿಸಿದ ಕೊರೊನಾ ಎಂಬ ರೋಗದ ಅಲೆಗೆ ಈ ಸಂಸ್ಥೆ ಬಲಿಪಶುವಾದರೂ ಕೂಡಾ ನಂತರದ ವರ್ಷಗಳಲ್ಲಿ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಮುಂದುವರಿದು ಇದುವರೆಗೆ ಕರಾವಳಿ ಕರ್ನಾಟಕದಾದ್ಯಂತ ಸುಮಾರು 76 ಕಾರ್ಯಕ್ರಮಗಳನ್ನು ನೀಡಿದೆ. ಇದರ ಹೊರತಾಗಿ ಹಲವು ದೇವಸ್ಥಾನಗಳಲ್ಲಿ ಜಾತ್ರೋತ್ಸವ, ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಸೇವಾ ರೂಪದಲ್ಲಿ ಕಾರ್ಯಕ್ರಮಗಳನ್ನು ನೀಡಿದ ಹಿರಿತನ ಈ ಮಹಿಳಾ ಸದಸ್ಯೆಯರ ಬಳಗಕ್ಕೆ ಸಲ್ಲುವಂತಿದೆ. ನಮ್ಮೊಳಗಿನ ತುಡಿತಕ್ಕೆ, ಪ್ರತಿಭಾ ಅನಾವರಣಕ್ಕೆ, ಮನಸ್ಸಿನ ಸಂತೋಷಕ್ಕೆ ಈ ಮುಖಾಂತರ ದಾರಿಯನ್ನು ಕಂಡು ಕೊಂಡಿರುವ ಈ ಮಹಿಳಾ ಮಣಿಗಳು ಹಲವಾರು ಪುರಾಣ ಕಥೆಗಳನ್ನು ವಿವಿಧ ವೇದಿಕೆಗಳ ಮೂಲಕ ಕಥಾ ರೂಪದಲ್ಲಿ ಪ್ರಸ್ತುತ ಪಡಿಸುವ ಪ್ರಯತ್ನವನ್ನು ಮಾಡುತ್ತಾ ಬಂದವರಿದ್ದಾರೆ.
ಇದೀಗ ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ಮುಖಾಂತರ ಮೊದಲ ಬಾರಿ ಈ ಬಳಗಕ್ಕೆ ಮುಂಬಯಿ ಹವ್ಯಾಸಿ ರಂಗದಲ್ಲಿ ತಮ್ಮ ತಮ್ಮ ಪ್ರತಿಭೆಯನ್ನು ಬಿತ್ತರಿಸುವ, ತಮ್ಮನ್ನು ತಾವು ಪರಿಚಯಿಸಿಕೊಳ್ಳುವ ಅವಕಾಶ ಲಭ್ಯವಾಗಿದೆ. ಪ್ರಬುದ್ಧ ಕಲಾವಿದರ ಈ ತಂಡದ ಹಿಮ್ಮೇಳದಲ್ಲಿ ಭಾಗವತರಾಗಿ ಕುಮಾರಿ ಶ್ರೇಯಾ ಆಚಾರ್ಯರವರು ತಮ್ಮ ಪ್ರತಿಭೆಯನ್ನು ಬಿತ್ತರಿಸಲಿದ್ದಾರೆ. ಮೂಲತಃ ಕಡಬ ತಾಲೂಕಿನ ಅಲಂಕಾರಿನ ಯೋಗೀಶ್ ಆಚಾರ್ಯ ಹಾಗೂ ಶ್ಯಾಮಲ ದಂಪತಿಗಳ ಪುತ್ರಿಯಾಗಿರುವ ಇವರು ಪ್ರಸ್ತುತ ಪುತ್ತೂರಿನ ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ದ್ವಿತೀಯ ಬಿ.ಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಲಕ್ಷ್ಮಣ ಆಚಾರ್ಯ ಎಡಮಂಗಲ, ಚಂದ್ರಶೇಖರ್ ಸುಳ್ಯಪದವು ಇವರಿಂದ ಯಕ್ಷಗಾನ ನಾಟ್ಯವನ್ನು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಗೋವಿಂದ ನಾಯಕ್ ಪಾಲೆಚ್ಚಾರ್, ಹರೀಶ್ ಭಟ್ ಬೊಳಂತಿಮೊಗರು ಇವರಲ್ಲಿ ಭಾಗವತಿಕೆಯನ್ನು ಕರಗತಿಸಿ ಕೊಂಡವರಿದ್ದಾರೆ. ಪ್ರಾಥಮಿಕ ಹಂತದಿಂದಲೂ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಯಕ್ಷಗಾನ, ಭರತನಾಟ್ಯ, ಸಂಗೀತ, ಯೋಗ, ಭಜನೆ, ಚಿತ್ರಕಲೆ, ಭಾಷಣ ಹೀಗೆ ತನ್ನನ್ನು ತಾನು ತೊಡಗಿಸಿಕೊಂಡು ಹಲವಾರು ಕಡೆ ಗುರುತಿಸಿಕೊಂಡಿದ್ದಾರೆ. ಶಿಕ್ಷಣ ಇಲಾಖೆಯು ನಡೆಸುವ ಪ್ರತಿಭಾ ಕಾರಂಜಿಯ ಸ್ಪರ್ಧೆಯಲ್ಲಿ ಎರಡು ಬಾರಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಯಕ್ಷಗಾನ ಸ್ವರ್ಧೆಯಲ್ಲಿ ಎರಡು ಬಾರಿ ಜಿಲ್ಲಾ ಮಟ್ಟದಲ್ಲಿ ಎರಡು ಬಾರಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಯಕ್ಷಗಾನದಲ್ಲಿ ಐದು ಬಾರಿ ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸಿದ ಏಕೈಕ ಪ್ರತಿಭೆ ಎಂದೆನಿಸಿ ಕೊಂಡಿರುವ ಇವರು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ವರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಹಾಗೇ ಇವರು ಪ್ರತಿಭಾ ದೀಪ ಪ್ರಶಸ್ತಿ, ಕಲಾಶ್ರೀ ಪ್ರಶಸ್ತಿ, ಕರ್ನಾಟಕ ಮಕ್ಕಳ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡವರಿದ್ದಾರೆ. ಆದಿತ್ಯ ಹೊಳ್ಳ ಇವರು ತಂಡದ ಯುವ ಚೆಂಡೆ ವಾದಕರು. ಸುರೇಶ್ ಹೊಳ್ಳ ಮತ್ತು ವಿಜಯಲಕ್ಷ್ಮೀ ಹೊಳ್ಳ ದಂಪತಿ ಪುತ್ರರಾಗಿರುವ ಇವರು ಉಜಿರೆಯ ಎಸ್.ಡಿ.ಎಂ ಪಿಯು ಕಾಲೇಜಿನ ವಿದ್ಯಾರ್ಥಿ. ಆರನೇ ವಯಸ್ಸಿನಿಂದಲೇ ಮೋಹನ್ ಬೈಪಡಿತ್ತಾಯರವರಿಂದ ಹಿಮ್ಮೇಳ ಮತ್ತು ವಿಶ್ವನಾಥ್ ಗೌಡ ಕೊಯ್ಯುರು ಮತ್ತು ತನ್ನ ಸಹೋದರಿಯಿಂದ ಮುಮ್ಮೇಳನವನ್ನು ಕೂಡಾ ಕರಗತಿಸಿಕೊಂಡಿರುವ ಇವರು ಓರ್ವ ಯುವ ಚೆಂಡೆ ವಾದಕರಾಗಿ ಈ ಬಳಗದ ಜೊತೆಗಿದ್ದಾರೆ.
ಕೇಶವ ಬೈಪಾಡಿತ್ತಾಯ ಪೂಜೆ, ಪೌರೋಹಿತ್ಯ ಇವರ ವೃತ್ತಿಯಾಗಿದ್ದರೂ ಕೂಡಾ ಯಕ್ಷಗಾನ ಕಲಾಸಕ್ತರಾಗಿರುವ ಇವರು ಚೆಂಡೆ ಮದ್ದಳೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಿದ್ದಾರೆ. ಅನೇಕ ಯುವ ಕಲಾವಿದರಿಗೆ ವಿದ್ಯಾರ್ಥಿಗಳಿಗೆ ಚೆಂಡೆ, ಮದ್ದಳೆ ಚಕ್ರತಾಳವನ್ನು ಹೇಳಿ ಕೊಡುತ್ತಿರುವ ಇವರು ಇದೀಗ ಬಳಗದ ಜೊತೆಗೆ ಮುಂಬಯಿ ಪ್ರವಾಸದಲ್ಲಿದ್ದಾರೆ. ತಂಡದ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ವೀಣಾ ನಾಗೇಶ್ ತಂತ್ರಿ,
ಪುತ್ತೂರು ಕೆಮ್ಮಿಂಜೆಯ ನಾಗೇಶ್ ತಂತ್ರಿಯವರ ಪತ್ನಿಯಾಗಿರುವ ಇವರು ಬಹುಮುಖ ಪ್ರತಿಭಾವಂತೆ ಕಲಾವಿದೆ. ಯಕ್ಷ ಶ್ರೀ ಹವ್ಯಾಸಿ ಬಳಗ ಪುತ್ತೂರು ಕಲಾಸಂಸ್ಥೆಯ ಸ್ಥಾಪಕರಲ್ಲೋರ್ವರು ಮತ್ತು ಇದೀಗ ಅಧ್ಯಕ್ಷರಾಗಿರುವರು. ತಾಳಮದ್ದಳೆ, ಅರ್ಥಗಾರಿಕೆ, ಭಜನೆ, ಗಮಕ ವಾಚಕ ಇತ್ಯಾದಿ ಹಲವು ಕಲಾಪ್ರಕಾರಗಳಲ್ಲಿ ತನ್ನನ್ನು ತಾನು ಸಕ್ರಿಯವಾಗಿರಿಸಿ ಕೊಂಡಿರುವ ಇವರು ಇದೀಗ ಬಳಗದ ಮುಂಬಯಿ ಪ್ರವಾಸದ ಜವಾಬ್ದಾರಿಯನ್ನು ಹೆಗಲ ಮೇಲಿರಿಸಿ ಕೊಂಡವರಿದ್ದಾರೆ.
ಆಶಾಲತಾ ಕಲ್ಲೂರಾಯ ಇವರು ಯಕ್ಷ ಶ್ರೀ ಹವ್ಯಾಸಿ ಬಳಗದ ಇನ್ನೋರ್ವ ಸ್ಥಾಪಕರಾಗಿರುವರು. ಹಿರಿಯ ಕಲಾವಿದೆ ಲೀಲಾವತಿ ಬೈಪಾಡಿತ್ತಾಯ ಇವರಿಂದ ಭಾಗವತಿಕೆ ಮತ್ತು ಕೇಶವ ಬೈಪಾಡಿತ್ತಾಯ ಇವರಿಂದ ಚಕ್ರ ತಾಳವನ್ನು ಅಭ್ಯಸಿಸುತ್ತಿದ್ದರೂ ಯಕ್ಷಗಾನ ಕ್ಷೇತ್ರದ ತಾಳಮದ್ದಳೆ ಅರ್ಥದಾರಿಯಾಗಿ ತಮ್ಮನ್ನು ತಾವು ಗುರುತಿಸಿ ಕೊಂಡವರಿದ್ದಾರೆ. ವೀಣಾ ಸರಸ್ವತಿ ನಿಡ್ವಣ್ಣಾಯ,
ಇವರು ವೃತ್ತಿಯಲ್ಲಿ ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕಿ, ಪ್ರವೃತ್ತಿಯಲ್ಲಿ ಅರ್ಥಗಾರಿಕೆ, ಭಜನೆ, ಗಮಕ ವಾಚನ ಇತ್ಯಾದಿ ಕಲಾಪ್ರಕಾರಗಳನ್ನು ಮೈಗೂಡಿಸಿ ಕೊಂಡಿರುವ ಓರ್ವ ಹವ್ಯಾಸಿ ಕಲಾವಿದೆ. ಕಾರ್ಯಕ್ರಮ ನಿರೂಪಕಿಯಾಗಿ ತನ್ನನ್ನು ತಾನು ಪರಿಚಯಿಸಿಕೊಂಡಿರುವ ಹಿರಿತನವೂ ಇವರದ್ದಾಗಿದೆ.
ಗೀತಾ ಕುದ್ವಣ್ಣಾಯ ಇವರು ವೃತ್ತಿಯಲ್ಲಿ ಓರ್ವ ನರ್ಸ್. ಯಕ್ಷಗಾನದಲ್ಲಿ ಅಪಾರ ಆಸಕ್ತಿಯನ್ನಿರಿಸಿ ಕೊಂಡಿರುವ ಇವರು ತಾಳಮದ್ದಳೆ ಕ್ಷೇತ್ರದ ನುರಿತ ಅರ್ಥದಾರಿಣಿಯಾಗಿ ಗುರುತಿಸಿಕೊಂಡವರಿದ್ದಾರೆ. ತವರೂರಲ್ಲಿ ಭಜನಾ ತಂಡವನ್ನು ಕಟ್ಟಿ ಮುನ್ನಡೆಸಿ ಕೊಂಡು ಬಂದವರಿದ್ದಾರೆ. ಈ ರೀತಿಯ ಹಿನ್ನಲೆಯನ್ನು ಹೊಂದಿದ ‘ಯಕ್ಷ ಶ್ರೀ ಹವ್ಯಾಸಿ ಬಳಗ ಪುತ್ತೂರು’ ತಂಡದ ಮುಂಬಯಿ ಪ್ರವಾಸದ ಮೊದಲ ಪ್ರದರ್ಶನವು ಜುಲೈ 6 ರ ಶನಿವಾರ ಬಂಟರ ಸಂಘ ಮುಂಬಯಿ ಇದರ ಜ್ಞಾನ ಮಂದಿರದ ಶ್ರೀ ವಿಷ್ಣುಮೂರ್ತಿ ವೇದಿಕೆಯಲ್ಲಿ ಪ್ರಸ್ತುತಗೊಳ್ಳಲಿದೆ.
ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ಉದ್ಘಾಟಿಸಿ ಈ ತಂಡದ ಮೊತ್ತ ಮೊದಲ ಮುಂಬಯಿ ಪ್ರವಾಸಕ್ಕೆ ಚಾಲನೆ ನೀಡಲಿದ್ದಾರೆ. ಈ ನಗರ ಪ್ರವಾಸದಲ್ಲಿರುವ ನೂತನ ತಂಡದ ಎಲ್ಲಾ ಪ್ರದರ್ಶನಗಳಿಗೆ ಕಲಾ ರಸಿಕರು, ಕಲಾ ಪೋಷಕರು, ಕಲಾವಿದರು ಹೆಚ್ಚಿನ ಪ್ರೋತ್ಸಾಹವನ್ನು ನೀಡಿ ಸಹಕರಿಸುವಂತೆ, ಕಲಾಕಾರರಿಗೆ ಪ್ರೇರಣೆಯನ್ನು ನೀಡುವಂತೆ ತಂಡದ ಮುಂಬಯಿ ಸಂಚಾಲಕ, ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಮೊ.ನಂಬ್ರ –
9821880089 /9869176737 ಕ್ಕೆ ಸಂಪರ್ಕಿಸಲು ವಿನಂತಿಸಿಕೊಂಡಿದ್ದಾರೆ.