ಸಂತ ಫಿಲೋಮಿನಾ ಕಾಲೇಜಿನ ಯಕ್ಷಕಲಾ ಕೇಂದ್ರ ಹಾಗೂ ದೇಶಭಕ್ತ ಎನ್.ಎಸ್. ಕಿಲ್ಲೆ ಪ್ರತಿಷ್ಠಾನಗಳ ಸಹಯೋಗದೊಂದಿಗೆ ‘ಫಿಲೋ ಯಕ್ಷಾಮೃತ’ ಪ್ರಮಾಣ ಪತ್ರ ಪ್ರದಾನ ಕಾರ್ಯಕ್ರಮವು ಇತ್ತೀಚೆಗೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಭಾಭವನದಲ್ಲಿ ನಡೆಯಿತು. ಯಕ್ಷಾಮೃತ ಸರ್ಟಿಫಿಕೇಟ್ ಕೋರ್ಸ್ ನಲುವತ್ತು ಗಂಟೆಗಳ ಪಠ್ಯವನ್ನು ಹೊಂದಿದ್ದು, ಲಿಖಿತ ಮತ್ತು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ವಂದನೀಯ ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ ‘ಕಲೆಯು ವಿಶ್ವ ಮಾನ್ಯ. ಅದು ಜಾತಿ ಅಂತಸ್ತುಗಳ ಪರಿಧಿಯನ್ನು ಮೀರಿ ಪ್ರತಿಭಾ ಸಂಪನ್ನರಾದ ಸರ್ವರಿಗೂ ಒಲಿಯುವ ವಿಶೇಷ ವಿದ್ಯೆ. ಅದಕ್ಕೆ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಬೆಳಗಿಸುವ ಅಪೂರ್ವ ಶಕ್ತಿ ಇದೆ’ ಎಂದರು.
ಯಕ್ಷಗಾನ ರಂಗ ಪ್ರಯೋಗ ಕಲೆಯ ಸರ್ಟಿಫಿಕೇಟ್ ಕೋರ್ಸ್ ‘ಯಕ್ಷಾಮೃತ’ ದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ದೇಶಭಕ್ತ ಎನ್.ಎಸ್. ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಷ್ ರೈ ಅವರು ಪ್ರಮಾಣ ಪತ್ರ ವಿತರಣೆ ಮಾಡಿ, ಮುಂದಿನ ಶೈಕ್ಷಣಿಕ ವರ್ಷದಿಂದ ‘ಉತ್ತಮ ವಿದ್ಯಾರ್ಥಿ ಕಲಾವಿದ’ ಪ್ರಶಸ್ತಿಯನ್ನು ನೀಡುವುದಾಗಿ ಘೋಷಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಯಕ್ಷಗಾನ ತಾಳಮದ್ದಳೆಯ ಖ್ಯಾತ ಅರ್ಥಧಾರಿಗಳಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಜಬ್ಬಾರ್ ಸಮೋ ಭಾಗವಹಿಸಿದರು.
ಕರ್ನಾಟಕ ಯಕ್ಷ ಭಾರತಿ : ಭಾಸ್ಕರ ರೈ ಕುಕ್ಕುವಳ್ಳಿಯವರು ಸಂಸ್ಥೆಯ ಸಮಗ್ರ ಸಾಧನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಮಾತನಾಡುತ್ತಾ, ’70ರ ದಶಕದಲ್ಲಿ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಪ್ರಾರಂಭವಾದ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಂಸ್ಥೆಯನ್ನು ತಾನು ಮುನ್ನಡೆಸುತ್ತಿದ್ದು, ಅದರ ಮೂಲಕ ಆಕಾಶವಾಣಿ, ದೂರದರ್ಶನ ಮತ್ತು ದೇಶದ ವಿವಿಧ ಭಾಗಗಳಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ಸಂಯೋಜಿಸಲಾಗುತ್ತಿದೆ’ ಎಂದರು.‘ಅಂಗದ – ಪ್ರಹಸ್ತ’ ತಾಳಮದ್ದಳೆ: ಸಭಾ ಕಾರ್ಯಕ್ರಮದ ಬಳಿಕ ಯಕ್ಷ ಪುರಾಣ ಪಾತ್ರ ಪ್ರಪಂಚ ಸರಣಿಯ ‘ಅಂಗದ ಪ್ರಹಸ್ತ’ ಸಂವಾದ ತಾಳಮದ್ದಳೆ ಜರಗಿತು. ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ಅಂಗದ) ಮತ್ತು ಜಬ್ಬಾರ್ ಸಮೋ (ಪ್ರಹಸ್ತ) ಅರ್ಥಧಾರಿಗಳಾಗಿದ್ದರು. ಪ್ರಶಾಂತ ರೈ, ಲವಕುಮಾರ್ ಐಲ ಹಿಮ್ಮೇಳದಲ್ಲಿದ್ದರು. ಯಕ್ಷ ಕಲಾಕೇಂದ್ರದ ವಿದ್ಯಾರ್ಥಿಗಳಾದ ಹೃಷಿತಾ ಮತ್ತು ಮಹಿಮಾ ಪ್ರಾರ್ಥಿಸಿ, ಯಕ್ಷ ಕಲಾಕೇಂದ್ರದ ನಿರ್ದೇಶಕ ಹಾಗೂ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಪ್ರಾಧ್ಯಾಪಕರಾದ ಪ್ರಶಾಂತ್ ರೈ ಮುಂಡಾಲಗುತ್ತು ಸ್ವಾಗತಿಸಿ, ಲಲಿತ ಕಲಾ ವಿಭಾಗದ ಸಂಯೋಜಕರಾದ ಸುರಕ್ಷಾ ಎಸ್. ವಂದಿಸಿದರು.