ಮಳೆಗಾಲದಲ್ಲಿ ಮಳೆ ಬಂದರೇನೇ ಚಂದ. ಹಾಗೆಯೇ ಈ ಭೂಮಿ ಸಸ್ಯ ಶ್ಯಾಮಲೆಯಾಗಿರಬೇಕಾದರೆ, ನಾವೆಲ್ಲಾ ತಿನ್ನುವ ತುತ್ತು ಅನ್ನವೂ ಬೆಳೆಯಬೇಕಾದರೆ ಈ ಮಳೆ ಎಂಬ ಅಮೃತ ಸಿಂಚನವಾಗಲೇ ಬೇಕು. ಆದರೆ ಈ ಪರಿವೆ ಈಗಿನ ಜನಕ್ಕಾಗಲೀ ಜನಪ್ರತಿನಿಧಿಗಳಿಗಾಗಲೀ ಅಥವಾ ಮಂಗಳೂರಿನ ಮಹಾನಗರ ಪಾಲಿಕೆಗಾಗಲೀ ಇಲ್ಲ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಎಲ್ಲರೂ ಅವರವರ ಸ್ವಾರ್ಥ ಸಾಧನೆಯಲ್ಲಿ ನಗರದ ನಾಳೆಯ ಭವಿಷ್ಯಕ್ಕೆ ಕೊಡಲಿಯೇಟು ಹಾಕುವುದರಲ್ಲೇ ನಿತ್ಯ ನಿರತರಾಗಿದ್ದಾರೆ. ಕಾರಣ ನಮ್ಮೆಲ್ಲರ ಕಣ್ಣ ಮುಂದೆಯೇ ಇದೆ. ಇದ್ದಲ್ಲೆಲ್ಲಾ ಅಗೆದು ಅಗೆದು ಹಿರಣ್ಯ ಕಶ್ಯಪುವಿನ ಉದರವನ್ನು ನರಸಿಂಹ ಬಗೆದುದಕ್ಕಿಂತಲೂ ಭೀಕರವಾಗಿ ಮಂಗಳೂರಿನ ರಸ್ತೆಯನ್ನೆಲ್ಲಾ ಅಗೆದು ಬಗೆದು ರಂಪ ರಾಡಿ ಮಾಡಿ ಹಾಕಿದ್ದಾರೆ. ಅಲ್ಲ ವಿಚಿತ್ರ ಅನಿಸೋದು!!! ಎಷ್ಟೊಂದು ಸಿಮೆಂಟ್, ಜಲ್ಲಿ, ಹೊಯಿಗೆ, ಕೆಲಸಗಾರರ ಶ್ರಮದ ಮಜೂರಿ ಇತ್ಯಾದಿಗಳನ್ನು ಬಳಸಿ ಮಾಡಿದ ಅಷ್ಟು ಸುಂದರ ಕಾಂಕ್ರೀಟನ್ನು ಕೇಕ್ ಕತ್ತರಿಸಿದ ಹಾಗೆ ತುಂಡು ತುಂಡು ಮಾಡುವಾಗ ಒಂದು ಚೂರೂ ಬೇಸರ ಅನಿಸುವುದಿಲ್ಲವೋ?!. ಈ ಮಂದಿಗೆ.
ಅಯ್ಯೋ ಮಂಗಳೂರು ತುಂಬಾ ಇದನ್ನು ನೋಡಿ ನೋಡಿ ಸಾಕಾಯ್ತು. ಜನಗಳು ಬೇಸತ್ತು ಹೋದರು. ಆದರೂ ಈ ಬಗ್ಗೆ ಯಾಕೆ ರಾಜ್ಯ ಸರಕಾರವಾಗಲೀ ಕೇಂದ್ರವಾಗಲೀ ಚಮುಕ್ ಚುಮುಕ್ ಎನ್ನದೇ ಈ ಹಗಲು ದರೋಡೆಯನ್ನು ಪ್ರಶ್ನಿಸದೆ ಕೂತಿದೆ? ಇದ್ದಲ್ಲೆಲ್ಲಾ ನೀರು ನಿಂತು ಇಡೀ ನಗರವೇ ಕೊಚ್ಚೆ ರಾಡಿ ಎದ್ದು ಹೋಗಿದೆ. ಇದರಿಂದ ಮುಂದೆ ಡೆಂಗೂ, ಮಲೇರಿಯಾ, ಕಾಲಾರ, ಮಲೇರಿಯಾ, ಟೈಫೋಯಿಡ್ ನಂತಹ ರೋಗ ಬರುವ ಸಂಭವವಿದೆ. ವಿಚಿತ್ರ ಎಂದರೆ ಮಂಗಳೂರಿಗೆ ಮಳೆ ಬರುತ್ತದೆ. ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಗಳು ಆಗಲೇಬೇಕು ಎಂಬ ಅರಿವಿದ್ದರೂ ನಮ್ಮ ಜನಪ್ರತಿನಿಧಿಗಳಾಗಲೀ, ಮಹಾನಗರಪಾಲಿಕೆಯಾಗಲೀ ಯಾಕೆ ಮಳೆಗಾಲದ ಪ್ರಾರಂಭದ ಮೊದಲು ಕ್ರಮ ಕೈಗೊಂಡಿಲ್ಲ? ಪ್ರತೀ ವರ್ಷವೂ ಅದೆಷ್ಟೋ ಮನೆ ಅಂಗಡಿ ಮುಂಗಟ್ಟುಗಳ ಒಳಗೆ ನೆರೆ ನೀರು ನುಗ್ಗಿ ಸಾಕಷ್ಟು ಗೋಳು ಅನುಭವಿಸಿದ ನಂತರವೂ ಯಾವುದೇ ಶಾಶ್ವತ ಪರಿಹಾರ ಇನ್ನೂ ಆಗಿಲ್ಲ. ಮಂಗಳೂರು ಸ್ಮಾರ್ಟ್ ಸಿಟಿ ಇಂದಾಗುತ್ತದೆ, ನಾಳೆ ಆಗುತ್ತದೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿರುವ ಮಂಗಳೂರಿನ ಮಹಾ ಜನತೆಯ ಆಸೆ ಯಾವಾಗ ನೆರವೇರುತ್ತದೋ ಆ ಭಗವಂತನೇ ಬಲ್ಲ. ನಮ್ಮ ಜನಗಳೂ ಸ್ವಲ್ಪ ತಿಳಿದುಕೊಳ್ಳಬೇಕಿದೆ. ಟ್ಯಾಪ್ ಉದ್ಘಾಟನೆಯಿಂದ ತೊಡಗಿಸಿ, ಸ್ಮಶಾನ ಲೋಕಾರ್ಪಣೆ, ಅಂಗಡಿ, ಕೋಲ, ನಾಮಕರಣ, ನೇಮ, ಮದುವೆ, ಮುಂಜಿ, ಸಾವು, ಬೊಜ್ಜ, ಸಂಕ ಉದ್ಘಾಟನೆ ಎಂದು ಇದ್ದ ಬದ್ದ ಎಲ್ಲಾ ಕಾರ್ಯಕ್ರಮಗಳಿಗೆ ಮೇಯರ್, ಕಾರ್ಪೋರೇಟರ್, ಶಾಸಕರನ್ನು, ಸಂಸದರನ್ನು ವರ್ಷದ ಎಲ್ಲಾ ದಿನವೂ ಕರೆದರೆ ಅವರು ಮಾಡಬೇಕಾದ ಕೆಲಸಗಳಿಗೆ ಗಮನ ಕೊಡುವುದಾದರೂ ಯಾವಾಗ?. ಈ ಕುರಿತು ಯಾರಿಗೂ ಪ್ರಜ್ಞೆಯೇ ಇಲ್ಲ.
ಏನಂತೀರಾ? ಹೌದು ಪ್ರಚಾರ ಬೇಕು. ಆದರೆ ವಿಚಾರಗಳೇ ಇಲ್ಲದ ಪ್ರಚಾರ ಯಾವ ಕರ್ಮಕ್ಕೆ ಹೇಳಿ?. ಸಭೆ ಸಮಾರಂಭಗಳಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಹಾಗೆ ಮಾಡ್ತೇವೆ, ಹೀಗೆ ಮಾಡ್ತೇವೆ ಎಂದು ಉತ್ತರ ಕೊಡುವುದು, ದಿನಾ ಟಿವಿ ಚ್ಯಾನಲ್ ಗಳಲ್ಲಿ, ಪೇಪರ್ ಗಳಲ್ಲಿ ಕಾಣುತ್ತೇವೆ. ಆದರೆ ಅದು ಸಮರ್ಪಕವಾಗಿ ನಡೆಯಬೇಕಿದ್ದರೆ ಈ ಜನಪ್ರತಿನಿಧಿಗಳು ಅಲ್ಲಿ ಉಪಸ್ಥಿತರಿರಬೇಕಾಗಿದೆ. ಇಲ್ಲವಾದಲ್ಲಿ ಬೇರೆ ಬೇರೆ ಪ್ರಲೋಭನೆಯಿಂದ ಯಾವುದೇ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಪ್ರಜ್ಞೆ ಅವರ ಸುತ್ತಮುತ್ತ ಇಂಪ್ಲುಯೆನ್ಸ್ ಮಾಡುವ ಮಹಾ ಚೇಲಾಗಳಿಗೆ ಇರಬೇಕಲ್ವಾ? ಅವರು ಬೇರೆ ಏರಿಯಾದ ಜನಗಳಲ್ಲಿ ತಮ್ಮ ಸಾಮರ್ಥ್ಯ ತೋರಿಸುವ ಹುಚ್ಚು ಪ್ರಚಾರದ ಗೀಳಿನಿಂದ ಪ್ರತೀ ಸಣ್ಣ ಕಾರ್ಯಕ್ರಮಕ್ಕೂ ಜನಪ್ರತಿನಿಧಿಗಳಿಗೆ ಒತ್ತಡ ಹಾಕಿ ಕರೆದುಕೊಂಡು ಬರುತ್ತಾರೆ. ಹಾಗಾಗಿ ನಿಜವಾಗಿ ನಡೆಯಬೇಕಾದ ಈ ಜನಪ್ರತಿನಿಧಿಗಳ ಕರ್ತವ್ಯಕ್ಕೆ ಚ್ಯುತಿಯಾಗುತ್ತಿದೆ ಮಾತ್ರವಲ್ಲ ಅವರ ಹೆಸರು ಮತ್ತು ಹಣ ಎಲ್ಲವೂ ಹಾಳಾಗುತ್ತಿದೆ. ಮಂಗಳೂರಿನಲ್ಲಿ ನಡೆಯುತ್ತಿರುವ ಹೆಚ್ಚಿನ ಎಲ್ಲಾ ಅವಾಂತರಗಳಿಗೆ ಇದೇ ಬಹುದೊಡ್ಡ ಕಾರಣ ಎಂದು ನನಗನಿಸುತ್ತಿದೆ. ಇಲ್ಲವಾದಲ್ಲಿ ಇಷ್ಟೊಂದು ರೋಡ್ ಗಳನ್ನು ಮತ್ತೆ ಮತ್ತೆ ಅಗೆಯುವ ಪ್ರಮೇಯವೇ ಬರುತ್ತಿರಲಿಲ್ಲ. ಮಳೆಯ ನೀರು ಇದ್ದಲ್ಲೆಲ್ಲಾ ಬ್ಲಾಕ್ ಆಗಿ ರಸ್ತೆಗೆ ಹರಿದು ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇದಕ್ಕೆ ಕಾರಣವೇ ಅಸಮರ್ಪಕವಾದ ಕಾಮಗಾರಿಗಳು.
ಇನ್ನು ಹೊಸತನ ಕೊಟ್ಟ ಎಲ್ಲಾ ರಸ್ತೆಗಳ ಫುಟ್ ಪಾತ್ ಗಳನ್ನೂ ಬೀದಿಬದಿಯ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ. ಇವರ ವ್ಯಾಪಾರದಿಂದ ನಡೆದಾಡುವ ಪಾದಾಚಾರಿಗಳಿಗೆ ಸಮಸ್ಯೆಯಾಗುವುದು ಮಾತ್ರವಲ್ಲದೇ, ಅವರ ವ್ಯಾಪಾರದಿಂದ ಸಂಗ್ರಹವಾದ ಅನಗತ್ಯ ಪ್ಲಾಸ್ಟಿಕ್ ಮತ್ತು ತ್ಯಾಜ್ಯಗಳೂ ನೀರು ಹರಿಯುವ ತೋಡನ್ನು ಬ್ಲಾಕ್ ಮಾಡುವ ಸಾಧ್ಯತೆ ಇದೆ. ಇನ್ನು ಮೊನ್ನೆ ಮೊನ್ನೆ ಮಂಗಳೂರು ಮತ್ತು ಸುತ್ತಮುತ್ತದ ಪ್ರದೇಶದಿಂದ ಎರಡೇ ದಿನದಲ್ಲಿ ಒಟ್ಟು ಏಳು ಜನಗಳ ಪ್ರಾಣ ಹಾನಿಯ ದುರ್ಘಟನೆ ನಡೆದಿರುವುದೂ ಶೋಚನೀಯ ಮತ್ತು ಯೋಚನೀಯ ಸಂಗತಿ. ಹಾಗಾದರೆ ಮಂಗಳೂರಿನ ಯಾವ ಸರಕಾರಿ ಇಲಾಖೆ ಕೂಡ ಮಳೆಗಾಲದ ತಯಾರಿ ನಡೆಸಿಲ್ಲ ಎಂದರೆ ಎಂತಹ ವಿಚಿತ್ರ ಮತ್ತು ವಿಪರ್ಯಾಸ. ರಿಕ್ಷಾ ತೊಳೆಯುತ್ತಿದ್ದ ಅಮಾಯಕ ಡ್ರೈವರ್ ಗಳ ಮೇಲೆ ವಿದ್ಯುತ್ ತಂತಿ ತುಕ್ಕು ಹಿಡಿದು ಕಡಿದು ಬೀಳುತ್ತಿದೆ ಎಂದರೆ ಅದನ್ನು ಯಾರೂ ಗಮನಿಸಿಲ್ಲ ಎನ್ನುವುದು ಸ್ಪಷ್ಟ ಅಲ್ವೇ?!. ಇನ್ನು ಪಕ್ಕದ ಮನೆಯ ಗೋಡೆ ಬಿದ್ದು ನಾಲ್ಕು ಮಂದಿ ಇದ್ದ ಕುಟುಂಬವೇ ದುರ್ಮರಣಕ್ಕೀಡಾಯ್ತು ಎಂದರೆ, ಆ ಮನೆಯವರಾಗಲೀ ಅಥವಾ ಹತ್ತಿರದ ಯಾರೇ ಆಗಲೀ ಮನೆಯಿಂದ ಹೊರಗೆ ಬಂದು ಇದನ್ನು ಗಮನಿಸಿಯೇ ಇಲ್ಲ ಅನ್ನುವುದು ಒಂದು ರೀತಿಯ ಅಸಡ್ಡೆಯೇ ಅಲ್ಲವೇ? ಪ್ರತಿಯೊಂದನ್ನು ಸರಕಾರವೇ ನೋಡಬೇಕು ಎಂದರೆ ಅದು ಅಸಾಧ್ಯ!. ನಮ್ಮ ಆರೋಗ್ಯದ ಬಗ್ಗೆ ಹೇಗೆ ನಾವೇ ಮುತುವರ್ಜಿ ವಹಿಸಬೇಕೋ ಹಾಗೆಯೇ ನಮ್ಮ ಮನೆ ಅದರ ಸುತ್ತಮುತ್ತ ನಾವೇ ಕಾಳಜಿ ವಹಿಸಬೇಕಲ್ಲದೇ ಬೇರಾರನ್ನು ಹೊಣೆಗಾರರಾಗಿಸುವುದು ಎಷ್ಟು ಸರಿ? ಇನ್ನು ಸಮುದ್ರ ತಟದಲ್ಲಿನ ಮನೆ ಮಠ ಇದಕ್ಕೆ ಹೊಣೆಯೂ ಆ ಭಗವಂತನೇ ಅಲ್ಲದೇ ಸಮುದ್ರಕ್ಕೆ ಬೇಲಿ ಹಾಕಲು ಯಾವ ಟೆಕ್ನಾಲಜಿಗೂ ಅಸಾಧ್ಯ. ಅದಕ್ಕೆ ವ್ಯರ್ಥ ಮಾಡಿದ ಹಣ ಎಂದರೆ ಹೊಳೆಗೆ ಹಿಚುಕಿದ ಹುಣಸೆ ಹಣ್ಣಿನಂತೆ. ನೀರಿಗೆ ಎಸೆದ ದುಡ್ಡಿನಂತೆ.
ಇನ್ನು ಹೈವೇ ಕಾಮಗಾರಿಯ ಬಗ್ಗೆ ಹೇಳುವುದಾದರೆ, ಮಳೆಗಾಲಕ್ಕೆ ತಯಾರಿ ನಡೆಸಿಯೇ ಈ ಕಾಮಗಾರಿ ನಡೆಸಬೇಕಲ್ವೇ? ನಾನು ಕೆಲವು ಕಡೆ ಗಮನಿಸಿದೆ. ಉದಾಹರಣೆಗೆ ವಾಮಂಜೂರು, ಕಲ್ಲಡ್ಕ ಇಂತಹ ಪ್ರದೇಶದಲ್ಲಿ ಹಳೆಯ ರಸ್ತೆಯನ್ನು ಮಧ್ಯದಲ್ಲಿ ಹಾಗೆಯೇ ಗುಂಡಿಯಲ್ಲಿ ಬಿಟ್ಟು ಇಕ್ಕೆಲಗಳಲ್ಲಿ ಮಣ್ಣು ಜಲ್ಲಿ ಹಾಕಿ ಏರಿಸಿ ಹೊಸ ರಸ್ತೆ ನಿರ್ಮಿಸುತ್ತಿದ್ದರು. ಮಳೆ ಬಂದಾಗ ಈ ನಡುವಿನ ರಸ್ತೆಗೆ ಎರಡೂ ಕಡೆಯಿಂದ ನೀರು ಹರಿದು ಅದು ತೋಡಿನ ತರಹ ಆಗಿಯೇ ಆಗುತ್ತದೆ ಅಲ್ವೇ? ಈ ಸಾಮಾನ್ಯ ಪ್ರಜ್ಞೆ ಈ ಕಾಮಗಾರಿ ಮಾಡುವ ಕಂಪನಿಗಾಗಲೀ ಅಥವಾ ಅದರ ಇಂಜಿನೀಯರ್ ಗಳಿಗಾಗಲೀ ಇರುವುದಿಲ್ವೇ?!. ಒಂದು ವೇಳೆ ಗೊತ್ತಿಲ್ಲ ಎಂದರೆ ಇದು ಆಶ್ಚರ್ಯ ದ ಸಂಗತಿ ಅಲ್ವೇ? ಅಥವಾ ಇದೆಲ್ಲವನ್ನು ತಿಳಿದೂ ಇದರಲ್ಲಿ ಸಂಚಾರ ಮಾಡುವ ಜನರು ಸಂಕಟ ಪಡಲಿ ಎಂಬುದೇ ಇವರ ಉದ್ದೇಶವೇ? ಒಂದೂ ಅರ್ಥವಾಗುತ್ತಿಲ್ಲ. ಇನ್ನು ಪ್ರತೀ ವರ್ಷವೂ ಮಳೆ ಬಿಡದೆ ಬಂದರೆ ನಗರದ ಹೆಚ್ಚಿನ ಭಾಗದಲ್ಲಿ ಕೃತಕ ನೆರೆಯ ನಿರ್ಮಾಣವಾಗುವುದೂ ಸರ್ವೇ ಸಾಮಾನ್ಯವಾಗುತ್ತಿದೆ. ಇದಕ್ಕೂ ಸರಿಯಾಗಿ ನೀರು ಹರಿದು ಹೋಗಲು ನಿರ್ಮಿಸಿದ ರಾಜಕಾಲುವೆಗಳ ಒತ್ತುವರಿ ಮತ್ತೆ ಹೊಸದಾಗಿ ನಿರ್ಮಾಣವಾದ ಅದೆಷ್ಟೋ ರಸ್ತೆ ಹಾಗೂ ವಸತಿ ಸಮುಚ್ಚಯಗಳು ಮಾಡಿದ ದೂರಾಲೋಚನೆಯಿಲ್ಲದ ಕಾಮಗಾರಿಗಳೇ ಅಲ್ವೇ?ಇದರಿಂದಾಗಿ ಈ ರಾಜಕಾಲುವೆಗೆ ಸರಾಗವಾಗಿ ನೀರು ಹರಿದು ಹೋಗದಂತೆ ಮಾಡಿರುವುದೇ ಪ್ರಮುಖ ಕಾರಣ ಎಂಬುದು ಮಹಾನಗರಪಾಲಿಕೆಗಾಗಲೀ ಸ್ಥಳೀಯ ಕಾರ್ಪೋರೇಟರ್ ಗಳಿಗಾಗಲೀ ತಿಳಿದಿಲ್ಲವೇ?. ಅವರ ಗಮನಕ್ಕೆ ಬಾರದೆ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ ಎಂಬುದು ನೂರಕ್ಕೆ ನೂರು ಸತ್ಯ ಸಂಗತಿ. ಹಾಗಾಗಿ ಇದರ ಹೊಣೆಗಾರರು ಇವರೇ. ಇನ್ನು ಮಂಗಳೂರಲ್ಲಿ ಇರುವಷ್ಟು ವಸತಿ ಸಮುಚ್ಚಯಗಳು, ಆಸ್ಪತ್ರೆಗಳು, ಶಾಲಾ ಕಾಲೇಜುಗಳು ಬೇರೆ ಎಲ್ಲೂ ಇರದು ಎನ್ನಬಹುದು. ಆದರೆ ಏನಾದರೂ ಅವಘಡ ಸಂಭವಿಸಿದರೆ ಶೀಘ್ರವಾಗಿ ಪರಿಸ್ಥಿತಿಯ ಹತೋಟಿಗೆ ಮಂಗಳೂರಲ್ಲಿ ಏನು ವ್ಯವಸ್ಥೆ ಇದೆ ಹೇಳಿ?.
ಮುಂಬಯಿಯಂತಹ ಮಹಾನಗರವು ತುಂಬಾನೇ ಹಳೆಯದು ಮತ್ತು ಅಲ್ಲಿಯ ವಾಹನ ಮತ್ತು ಜನ ಜಂಗುಳಿಗೆ ಹೋಲಿಸಿದರೆ ಮಂಗಳೂರು ಏನೂ ಅಲ್ಲ. ಆದರೆ ಅಲ್ಲಿ ಒತ್ತಡವಿರುವ ಸಿಟಿಯ ಒಳಗಡೆಯೇ ಸುಗಮ ಸಂಚಾರಕ್ಕೆ ಅಲ್ಲಿಯ ಸರಕಾರ ಮತ್ತು ಮಹಾನಗರಪಾಲಿಕೆ ನಿರಂತರ ಮೇಲ್ಸೇತುವೆ, ಫಾಸ್ಟ್ ಟ್ರೈನ್, ಎಕ್ಸ್ಪ್ರೆಸ್ ವೇ, ಮೆಟ್ರೋ ಹೀಗೆ ನಾಗರಿಕರಿಗೆ ದಿನವೂ ಅದೆಷ್ಟು ಹೊಸ ಅನುಕೂಲಗಳನ್ನು ಮಾಡಿ ಕೊಡುತ್ತಿದೆ. ಆದರೆ ನಮ್ಮ ಮಂಗಳೂರಲ್ಲಿ ಅರುವತ್ತು ಎಪ್ಪತ್ತು ವರ್ಷದಿಂದಲೂ ಅದೇ ಹಳೆಯ ರಸ್ತೆಗಳು ಅದರಲ್ಲೇ ಎಲ್ಲಾ ಕಡೆಗೆ ಹೋಗುವ ಎಲ್ಲಾ ವಾಹನಗಳು ಸೈಕಲ್ ನಿಂದ ಹಿಡಿದು ಲಾರಿ ಬಸ್ ವರೆಗೆ ಸಂಚರಿಸಬೇಕು. ಅದೆಷ್ಟು ಶಾಸಕರು, ಸಂಸದರು, ಮಂತ್ರಿಗಳು, ಮೇಯರ್ ಗಳು, ಕಮೀಷನರ್ ಗಳು ಬಂದರೂ ಆದರೆ ಮಂಗಳೂರಿನ ಸುಧಾರಣೆ ಕೇವಲ ಬಾಯಿಯಲ್ಲಿ ಮತ್ತು ಪೇಪರ್ ಗಳಲ್ಲೇ ಉಳಿದಿದೆ. ಹಾಗಾದರೆ ಇಡೀ ಮಂಗಳೂರಿನ ಈ ಮಳೆಗಾಲದ ಅವಾಂತರಗಳಿಗೆ ಕೊನೆ ಇಲ್ಲವೇ? ಇಂತಹ ಸುಮಾರು ಕೊಳಕನ್ನು ಒಡಲೊಳಗೆ ಕಟ್ಟಿಕೊಂಡ ಮಂಗಳೂರು ಸ್ಮಾರ್ಟ್ ಸಿಟಿ ಆಗುವುದಾದರೂ ಎಂದು?. ನಿಜಕ್ಕೂ ಇದಕ್ಕೆ ಒಂದು ಸ್ಮಾರ್ಟ್ ಮೈಂಡ್ ಬೇಕೇ ಬೇಕು. ಆಗ ಮಾತ್ರ ನಿಜಕ್ಕೂ ಸ್ಮಾರ್ಟ್ ಜನಗಳ ಮಂಗಳೂರು ನಿಜಕ್ಕೂ ಸ್ಮಾರ್ಟ್ ಸಿಟಿ ಆಗಬಹುದೇನೋ?!.
-ಶರತ್ ಶೆಟ್ಟಿ ಪಡುಪಳ್ಳಿ