ಬ್ರಹ್ಮಾವರ, ಜೂನ್ 21: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ “ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಎಂಬ ಸಂದೇಶದೊಂದಿಗೆ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಪತಂಜಲಿಯ ಯೋಗ ಶಿಕ್ಷಕಿ ಶಿಲ್ಪಾ ಕೆ. ವಿ ಯವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಮಾತನಾಡಿ ಯೋಗದಿಂದ ಎಲ್ಲಾ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಯೋಗವು ಕಲಿಕೆಯಲ್ಲಿ ಏಕಾಗ್ರತೆಯನ್ನು ಸಾಧಿಸಿ ಜೀವನದಲ್ಲಿ ಯಶಸ್ಸನ್ನು ಪಡೆಯಲು ನೆರವಾಗುತ್ತದೆ ಎಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರು ಭಾರತದ ಯೋಗ ಪರಂಪರೆಗೆ ವಿಶ್ವವೇ ಗೌರವಿಸುತ್ತಿದೆ.
ಸ್ವಸ್ಥ ಮನಸ್ಸು ಜೀವನಕ್ಕಾಗಿ ಯೋಗ ಮಾಡೋಣವೆಂದು ಸಂದೇಶ ನೀಡಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ವಿದ್ಯಾರ್ಥಿಗಳಿಂದ ಯೋಗಾಭ್ಯಾಸದ ಪ್ರತಿಜ್ಞೆಯನ್ನು ಸ್ವೀಕರಿಸಿ ಮಾತನಾಡಿ ಇಂದು ವಿಶ್ವವೇ ಈ ದಿನವನ್ನು ಆಚರಿಸುತ್ತಿದೆ. ಇದು ಒಂದು ದಿನಕ್ಕೆ ಸೀಮಿತವಾಗಿರದೇ ನಿತ್ಯವೂ ಮಕ್ಕಳೆಲ್ಲರೂ ಯೋಗವನ್ನು ಮಾಡಬೇಕು. ಉತ್ತಮ ಅರೋಗ್ಯಕ್ಕೆ, ನೆಮ್ಮದಿಗೆ ಯೋಗ ಅನಿವಾರ್ಯವೆಂದರು. ಸಂಸ್ಥೆಯ ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅತಿಥಿಗಳ ನಿರ್ದೇಶನದಲ್ಲಿ ಯೋಗಾಸನಗಳನ್ನು ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ನಾಗರಾಜ ಸೋಮಯಾಜಿ, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.