ವಿದ್ಯಾಗಿರಿ: ಹೊಸ ಆವಿಷ್ಕಾರಗಳಿಗೆ ಎಲ್ಲ ಅವಶ್ಯಕತೆಗಳೇ ಮೂಲ ಕಾರಣ ಎಂದು ಏಸ್ ಪುಡ್ಸ್ ಮಾರಾಟ ಮತ್ತು ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕ ಸುಧೀಂದ್ರ ಕಾಮತ್ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣಲ್ಲಿ ಸ್ನಾತಕೋತ್ತರ ಪದವಿ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗದ ವತಿಯಿಂದ ನಡೆದ ‘ನ್ಯೂಟ್ರಿಗೇಟ್: ಕ್ಲಿನಿಕಲ್ಒ ಳನೋಟಗಳು ಮತ್ತು ಉತ್ಪನ್ನ ನಾವೀನ್ಯತೆಗಳ ಪ್ರದರ್ಶನ’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅವಶ್ಯಕತೆ ಮತ್ತು ಅನಿವಾರ್ಯತೆಗೆ ವ್ಯತ್ಯಾಸವಿದೆ. ಇರುವುದರಲ್ಲೇ ನಡೆಸಿಕೊಂಡು ಹೋಗುವುದು ಅನಿವಾರ್ಯತೆ. ಆದರೆ, ಅವಶ್ಯಕತೆ ಎನ್ನುವುದು ಬೇಕಾದದ್ದಕ್ಕೂ ಮೀರಿ ಬಯಸುವುದು. ಉತ್ಪನ್ನಗಳ ಆವಿಷ್ಕಾರ, ಆವಿಷ್ಕಾರಗಳ ಅವಶ್ಯಕತೆ ಏನು ಎನ್ನುವುದು ನಮಗೆಲ್ಲರಿಗೂ ತಿಳಿದಿರಬೇಕು.
ಯಾವುದೇ ಉತ್ಪನ್ನಗಳು ಮಾರುಕಟ್ಟೆಗೆ ತಲುಪುವಾಗ ಪ್ರಾಡಕ್ಟ್ (ಉತ್ಪನ್ನ), ಪ್ರೈಸ್(ಬೆಲೆ), ಪ್ರಮೋಷನ್(ಪ್ರಚಾರ), ಪ್ಲೇಸ್(ಸ್ಥಳ) ಇವುಗಳು ತುಂಬಾ ಮುಖ್ಯ ಪಾತ್ರ ವಹಿಸುತ್ತದೆ ಎಂದರು. ಉತ್ಪನ್ನ ಯಾಕೆ ತಯಾರಾಗಬೇಕು, ಉತ್ಪನ್ನ ತಯಾರಾಗಿ ಎಷ್ಟು ಬೆಲೆಯಲ್ಲಿ ಮಾರುಕಟ್ಟೆಗೆ ತಲುಪಬೇಕು, ಅದರ ಪ್ರಚಾರ ಯಾವ ರೀತಿ ಇರಬೇಕು, ಯಾವ ಪ್ರದೇಶದಲ್ಲಿ ಆ ಉತ್ಪನ್ನ ತಲುಪಬೇಕು ಎನ್ನುವುದು ತಿಳಿದಿರುವುದು ಮುಖ್ಯವಾಗಿರುತ್ತದೆ ಎಂದರು. ಹೊಸ ಅವಿಷ್ಕಾರಗಳಾಗದಂತೆ ಜನರಲ್ಲಿ ಹೊಸ ಉತ್ಪನ್ನಗಳ ಕೊಂಡುಕೊಳ್ಳುವಿಕೆ ಬದಲಾಗುತ್ತಲೇ ಇರುತ್ತವೆ. ಈ ಮಾರ್ಕೆಟಿಂಗ್ ಯುಗದಲ್ಲಿ ನಿರಂತರವಾಗಿ ಜನರ ಕೊಂಡುಕೊಳ್ಳುವಿಕೆ ಮನಸ್ಥಿತಿ ಬದಲಾಗುತ್ತಲೇ ಇರುತ್ತದೆ.
ಈ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರಿಗೂ ವಿಭಿನ್ನವಾದ ಪ್ರತಿಭೆ, ಕೌಶಲ್ಯ, ಸಾಮಥ್ರ್ಯ ಮತ್ತು ಜ್ಞಾನ ಇದೆ. ಆದರೆ ನಿಮ್ಮ ವರ್ತನೆ ಮೂಲಕ ಅದು ನಿಮ್ಮಲ್ಲಿ ದ್ವಿಗುಣಗೊಳ್ಳಬೇಕು. ತಪ್ಪು ಮಾಡುವುದು ಸಹಜ ಆದರೆ ಮಾಡಿದ ತಪ್ಪನ್ನೇ ಪುನರಾವರ್ತನೆ ಗೊಳಿಸುವುದ್ದು ಅದಕ್ಕೂ ಮೀರಿದ ತಪ್ಪು ಎಂದರು. ಭಿತ್ತಿಪತ್ರ ಪ್ರದರ್ಶನದಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಸ್ವಾತಿ ಮತ್ತು ಮೌನಿಶಾ ಪ್ರಥಮ ಬಹುಮಾನ, ಫೆಡ್ರಿಕ್ ಮತ್ತು ಭವ್ಯ ದ್ವಿತೀಯ ಬಹುಮಾನ ಪಡೆದರು. ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ವಿಭಾಗದ ಸಂಯೋಜಕಿ ಡಾ. ಅರ್ಚನಾ ಪ್ರಭಾತ್ ಇದ್ದರು . ವಿಭಾಗದ ವಿಧ್ಯಾರ್ಥಿನಿ ರುತಿಕಾ ವಂದಿಸಿ, ನಿರೂಪಿಸಿದರು.