ಪರಿಸರ ಎಂದರೆ ನಾವು ವಾಸಿಸುವ ಪ್ರದೇಶ, ಉಸಿರಾಡುವ ವಾಯು, ಉಪಯೋಗಿಸುವ ನೀರು, ಫಲ ಪುಷ್ಪ ಆಹಾರ ವಸ್ತುಗಳ ಉತ್ಪತ್ತಿ ಯೋಗ್ಯ ಜಮೀನು, ಸೂರ್ಯನ ಶಾಖ, ಕಾಡು ಗುಡ್ಡ ಬೆಟ್ಟ, ವನ್ಯ ಜೀವಿಗಳು, ಪಕ್ಷಿ ಸಂಕುಲ ಜಲಚರಾದಿಗಳು ಎಲ್ಲವೂ ಸೇರುತ್ತದೆ. ಇವೆಲ್ಲವುಗಳ ಸಮತೋಲನ ಹೊಂದಾಣಿಕೆ ಪೃಥ್ವಿಯನ್ನು ರಕ್ಷಿಸುತ್ತದೆ. ಪರಿಸರವನ್ನು ನಾವು ರಕ್ಷಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಶುದ್ಧ ಗಾಳಿ, ಶುದ್ಧ ನೀರು, ಶಾಖ ಫಲವಸ್ತುಗಳು, ಆಹಾರ ವಾಣಿಜ್ಯ ಬೆಳೆಗಳು ಇವೆಲ್ಲಾ ನಮಗೆ ಈ ಪ್ರಕೃತಿಯಿಂದ ದೊರೆಯುತ್ತದೆ.ಆದರೆ ನಾವು ಈ ಪ್ರಕೃತಿಗೆ ಎಷ್ಟು ಕೃತಜ್ಞರಾಗಿದ್ದೇವೆ ಎನ್ನುವುದು ದೊಡ್ಡ ಪ್ರಶ್ನೆ. ಉಸಿರಾಡಲು ಆಮ್ಲಜನಕ, ಉರಿಸಲು ಇಂದನ, ಬಗೆ ಬಗೆ ಖನಿಜಗಳು, ಮುತ್ತು ರತ್ನಗಳು ಎಲ್ಲವೂ ನಮಗೆ ಪ್ರಕೃತಿಯ ಕೊಡುಗೆಗಳು. ಆದರೆ ಇಂದು ಈ ಪ್ರಕೃತಿಯ ಸಮತೋಲನ ತಪ್ಪಿ ಬರಗಾಲ, ಅಕಾಲ ವೃಷ್ಠಿ, ಅತಿವೃಷ್ಠಿ, ಅನಾವೃಷ್ಠಿಗಳಿಂದ ಭೂಮಿ ತತ್ತರಿಸಿದೆ. ಜೀವ ಸಂಕುಲಕ್ಕೆ ಆಪತ್ತು ಕಾದಿದೆ. ಭೂಮಿಯ ಅಂತರ್ಜಲ ಕುಸಿಯುತ್ತಿದೆ. ಕಾಡುಗಳು ನಾಶವಾಗುತ್ತಿವೆ. ಅತೀ ಕೈಗಾರಿಕರಣಗಳಿಂದ ವಾಯು, ಜಲ ಮಲಿನಗೊಂಡು ಪ್ರಾಣಾಂತಿಕ ಕಾಯಿಲೆಗಳ ಭಯದಿಂದ ಜನ ತತ್ತರಿಸಿದೆ. ಅಶುದ್ಧ ವಾತಾವರಣ, ಧೂಳು, ವಾಹನಗಳ ಹೊಗೆ, ದೊಡ್ಡ ದೊಡ್ಡ ಕೈಗಾರಿಕೆಗಳು ಉಗುಳುವ ಹೊಗೆ ಜನಜೀವನಕ್ಕೆ ಮೃತ್ಯು ಪ್ರಾಯವಾಗಿವೆ. ಹೀಗೆ ಮುಂದುವರಿದರೆ ಪೃಥ್ವಿಯನ್ನು ಪ್ರಳಯ ಆವರಿಸುವ ಭಯ ತಪ್ಪಿದ್ದಲ್ಲ.ವಾತಾವರಣವನ್ನು ಶುದ್ಧ ಇರಿಸುವ ಕೆಲಸ ಯುದ್ಧೋಪಾದಿಯಲ್ಲಿ ಆಗಬೇಕಾದ ಅವಶ್ಯಕತೆ ಇದೆ. ಕಾಡುಗಳ ರಕ್ಷಣೆ, ವನ್ಯ ಜೀವಿಗಳ ಸಂರಕ್ಷಣೆ, ಸಾವಯವ ಕೃಷಿ ಗಿಡ ನೆಡುವುದು, ಮರಗಳ ಕಡಿಯುವುದು, ಕಾಂಕ್ರೀಟುಕರಣಗಳಿಗೆ ತಡೆ ತರುವುದು, ಹೊಗೆಯುಗುಳುವ ಕೈಗಾರಿಕೆಗಳ ನಿರ್ವಹಣೆ ಸುಧಾರಣೆ, ವೈಜ್ಞಾನಿಕ ವಿಧಿ ವಿಧಾನಗಳ ಬಳಕೆ, ಗುಡ್ಡ ಬೆಟ್ಟಗಳ ಸಮತಟ್ಟು ಮಾಡುವಲ್ಲಿ ನಿಯಂತ್ರಣ, ಪಶು ಪಕ್ಷಿಗಳ ಜೀವ ಜಂತುಗಳ ಜಲಚರಗಳ ಸಂರಕ್ಷಣೆ, ಕಾಡುಗಳ ಕಡಿಯುವುದಕ್ಕೆ ತಡೆ ಇತ್ಯಾದಿ ಕೆಲಸಗಳಲ್ಲಿ ಸರಕಾರ ಸಾರ್ವಜನಿಕ ಸಂಸ್ಥೆಗಳು ಸರಕಾರೇತರ ಸಂಸ್ಥೆಗಳು ನಿರಂತರ ಕಾರ್ಯ ಪ್ರವೃತ್ತವಾಗಬೇಕು. ವಿನಾಶದಂಚಿನಲ್ಲಿರುವ ಈ ಪೃಥ್ವಿ ಹಾಗೂ ಜನ ಜೀವನವನ್ನುಳಿಸುವ ಕುರಿತಂತೆ ಗಂಭೀರ ಚಿಂತನೆಗಳು ನಡೆಯಬೇಕು. ಕೇವಲ ವರ್ಷಕ್ಕೊಮ್ಮೆ ವಿಶ್ವ ಪರಿಸರ ದಿನಾಚರಣೆ ಆಚರಿಸುವುದರಲ್ಲಿ ಯಾವ ಪುರುಷಾರ್ಥವೂ ಕಾಣದು. ಮುಂದಿನ ಜನಾಂಗ ಹಿತ ಚಿಂತನೆಯ ದೃಷ್ಠಿಯಿಂದಲಾದರೂ ಸರಕಾರ ಹಾಗೂ ಸಂಬಂಧಪಟ್ಟ ಸರಕಾರಿ ವಿಭಾಗಗಳು ಹಾಗೂ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಾದ ಕಾಲವಿದು. ಪರಿಸರ ಸಂರಕ್ಷಣೆ ಮಾಡೋಣ ವಿನಾಶ ತಪ್ಪಿಸೋಣ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು