ಕಾಸರಗೋಡು ಜಿಲ್ಲೆಯ ಕುಂಬಳೆ ಮುಳ್ಳೇರಿಯ ಮಾರ್ಗದ ಬದಿಯಲ್ಲಿ ಮುರಕಲ್ಲು ಗುಡ್ಡದಲ್ಲಿ ಒಂದು ಉಮಾಮಹೇಶ್ವರಿ ದೇವಾಲಯವಿದೆ. ಸಾಧಾರಣ ನಾಲ್ಕು ದಶಕದ ಹಿಂದೆ ಗುಡ್ಡದ ಸಮತಟ್ಟು ಪ್ರದೇಶದಲ್ಲಿ ಮುಳಿಹುಲ್ಲು ಹೊದಿಸಿದ ಒಂದು ಸಣ್ಣ ಗುಡಿ. ಅದರ ಹತ್ತಿರದಲ್ಲಿ ಒಂದು ದೇವರ ಅಡುಗೆ ಮನೆ ಅದರ ಪಕ್ಕದಲ್ಲಿ ಒಂದು ಪುಟ್ಟ ಬಾವಿ. ಒಪ್ಪತ್ತಿನ ಪೂಜೆ ವರ್ಷದ ಮಹಾ ಶಿವರಾತ್ರಿಗೆ ಊರವರೆಲ್ಲಾ ಸೇರಿ ಸಮಾರಾಧನೆ ಮಾಡಿ ಹೋಗುತ್ತಿದ್ದರು.
1980 ನಂತರ ಆರ್ಥಿಕ ಸ್ಥಿತಿ ಉತ್ತಮಗೊಂಡಂತೆ ಈ ಊರಿನ ಆಸ್ತಿಕ ಭಕ್ತರೆಲ್ಲಾ ಪ್ರಶ್ನೆ ಚಿಂತಿಸಿ ಜೀರ್ಣಾವಸ್ಥೆಯಲ್ಲಿದ್ದ ದೇವಾಲಯವನ್ನು ಕೆಡಿಸಿ ಉತ್ತಮ ರೀತಿಯಲ್ಲಿ ಧಾರ್ಮಿಕ ವಿಧಿ ವಿಧಾನದಂತೆ ನೂತನ ದೇವಾಲಯ ನಿರ್ಮಾಣವಾಯಿತು. ಹೆಚ್ಚು ಕಮ್ಮಿ 1990 ರಿಂದ 2015 ರವರೆಗೆ ನಾನಾ ಊರುಗಳಿಂದ ಇಷ್ಟಾರ್ಥ ಸಿದ್ಧಿಗಾಗಿ ಭಕ್ತ ಸಾಗರವೇ ಹರಿದು ಬರುತ್ತಿತ್ತು. ಇಲ್ಲಿನ ಸ್ಥಳ ಮಹಾತ್ಮೆ ಎಂದರೆ ವಿವಾಹ ಭಾಗ್ಯ ಸಿದ್ಧಿಸುವುದು. ಅಂದರೆ ಸನ್ನಿಧಿಗೆ ಬಂದು ದೇವರ ಮುಂದೆ ಅರಿಕೆ ಪ್ರಾರ್ಥನೆ ಮಾಡಿಕೊಂಡರೆ ವರ್ಷದ ಒಳಗಾಗಿ ಮಾಂಗಲ್ಯ ಭಾಗ್ಯ ಲಭಿಸುವುದೆಂದು ದೂರದ ಊರುಗಳಿಂದ ಭಕ್ತರು ಬರುತ್ತಿದ್ದರು. ವಿವಾಹ ಭಾಗ್ಯ ಆದ ದಂಪತಿಗಳಾಗಿ ಶ್ರೀ ಕ್ಷೇತ್ರಕ್ಕೆ ಬಂದು ದೇವಿಗೆ ಸೀರೆ ರವಕೆ ಒಪ್ಪಿಸಬೇಕಿತ್ತು. ಆ ಸಮಯದಲ್ಲಿ ಯೋಗ್ಯರಾದ ನೊಂದು ಬಂದವರ ಮನಸ್ಸಿಗೆ ನೆಮ್ಮದಿಯ ಅಭಯ ನೀಡುವ ಅರ್ಚಕರಿದ್ದರು. ಒಟ್ಟಾರೆಯಾಗಿ ಶುಕ್ಲ ಪಕ್ಷದ ಚಂದ್ರನಂತೆ ಶ್ರೀ ಕ್ಷೇತ್ರದ ಕೀರ್ತಿ ನಾಲ್ದೆಸೆಗೆ ಹರಡಿತ್ತು. ವರ್ಷದಲ್ಲಿ ಎರಡು ದಿವಸದ ಉತ್ಸವಾದಿಗಳು ವಿಜೃಂಭಣೆಯಿಂದ ಸಾಗುತ್ತಿತ್ತು. ಆನಂತರದಲ್ಲಿ ಕ್ಷೇತ್ರದ ತಂತ್ರಿ, ಆಡಳಿತ ವರ್ಗ ಹಾಗೂ ದೈವಜ್ಞರು ಸೇರಿ ಅಷ್ಟಮಂಗಲ ಚಿಂತಿಸಿ ಕೊಡಿಮರ ಹಾಕಿ ಐದು ದಿವಸದ ಜಾತ್ರೆ ಮಾಡಲು ತೀರ್ಮಾನಿಸಲಾಯಿತು. ದೂರದ ಕಾಡಿನಿಂದ ಕೊಡಿಮರಕ್ಕೆ ಯೋಗ್ಯವಾದ ಬೆಳೆದ ಸಾಗುವಾನಿ ಮರವನ್ನು ದೇವ ಶಿಲ್ಪಿ ಹಾಗೂ ವಿಶ್ವಕರ್ಮಗಳ ನೇತೃತ್ವದಲ್ಲಿ ಧರಿಸಿ ಕೆತ್ತಿ ದೋಣಿಯಲ್ಲಿ ಎಳ್ಳೆಣ್ಣೆ ಹಾಕಿ ಇಡಲಾಯಿತು. ಒಂದು ಮಂಡಲ ಕಳೆದು ಎಣ್ಣೆಯಿಂದ ಮರವನ್ನು ತೆಗೆದು ಒಣಗಿಸಿ ಕೊಡಿ ಮರವನ್ನು ಸ್ಥಾಪಿಸಿ ಐದು ದಿವಸದ ಮಹಾ ಉತ್ಸವಾದಿಗಳನ್ನು ನಡೆಸಲಾಯಿತು.
ನೂತನ ಕೊಡಿಮರ ವೀಕ್ಷಣೆಗೆ ಜನ ಹರಿದು ಬರುತ್ತಿದ್ದರು. ಆದರೆ ದೂರದೃಷ್ಟವೆಂದರೆ ಆ ಸಂತೋಷ ಹೆಚ್ಚು ಸಮಯ ನೆಲೆ ನಿಲ್ಲಲಿಲ್ಲ. ಕೇವಲ ಮೂರು ವರ್ಷದಲ್ಲಿ ಕೊಡಿಮರ ಬುಡದಿಂದಲೇ ತುಂಡಾಗಿ ದೊಪ್ಪನೆ ಬಿತ್ತು. ಆದರೆ ಯಾರಿಗೂ ಜೀವಪಾಯ ಆಗದಿರುವುದು ಪವಾಡ. ತಾಮ್ರ ಹೊದಿಸಿದ ಮರ ತಾಮ್ರ ಕವಚವನ್ನು ಬಿಚ್ಚಿ ನೋಡಿದಾಗ ಆಶ್ಚರ್ಯವೆಂದರೆ ಮರವು ಇಟ್ಟಿಗೆಯಂತೆ ಪುಡಿ ಪುಡಿಯಾಗಿತ್ತು. ನಾಲ್ಕೈದು ಶತಮಾನ ಬಾಳಿಕೆ ಬರಬೇಕಾದ ಮರ ಕೇವಲ ಮೂರು ವರ್ಷದಲ್ಲಿ ಏನು ಕಾರಣವೆಂದು ಪುನಃ ಚಿಂತನೆಯ ಮಂತ್ರಾಲೋಚನೆ ಒಂದೆಡೆಯಾದರೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದವರಂತೆ ಚಿಂತಕ್ರಾಂತರಾದ ಮುಗ್ದ ಊರ ಭಕ್ತರು ಅಂತೂ ತಂತ್ರಿಗಳ ಉಪದೇಶದಂತೆ ಮೊದಲಿನಂತೆ ಎಲ್ಲರೂ ಸೇರಿಕೊಂಡು ಅಷ್ಟಮಂಗಳ ಚಿಂತನೆ ಮಾಡಿ ಪುನಃ ಕೊಡಿಮರ ಸ್ಥಾಪನೆಯ ಅಂತಿಮ ವಿಧಿ ಎಂದು ಆಜ್ಞಾಪಿಸಿದರು. ಅದೆಷ್ಟು ಲಕ್ಷ ಖರ್ಚು ಮಾಡಿ ಪರಿಹಾರ ದೋಷ ಕರ್ಮ ವಿಧಿಗಳನ್ನು ಮಾಡಿ ಮೊದಲಿನಂತೆ ಉತ್ತಮ ಮರವನ್ನು ಆಯ್ದು ತಂದು ಕೆತ್ತಿ ನಯಗೊಳಿಸಿ ಎಳ್ಳೆಣ್ಣೆಯಲ್ಲಿ ಹಾಕಲಾಯಿತು. ವಿಚಿತ್ರವೆಂದರೆ 48 ದಿವಸ ಕಳೆದು ಎಳ್ಳೆಣ್ಣೆಯಿಂದ ಮರವನ್ನು ಎತ್ತಿದಾಗ ಮರವು ಉದ್ದಕ್ಕೆ ಸಿಡಿದು ಛಿದ್ರ ಛಿದ್ರಗೊಂಡಿತು. ಅದನ್ನು ಕಣ್ಣಾರೆ ನೋಡದೆ ಹೇಗೆ ಸತ್ಯವೆಂದು ನಂಬಲು ಸಾಧ್ಯ ಎನ್ನಬಹುದು. ಆದರೆ ಇದು ವಿಚಿತ್ರ ಸತ್ಯ.
ಇಷ್ಟೆಲ್ಲ ಸಂಭವಿಸಿದರು ಇಲ್ಲಿನ ಮುಗ್ಧ ಭಕ್ತರು ವಿಚಲಿತರಾದರೆ ಗಂಗೆಯನ್ನು ಧರೆಗೊಳಿಸಿದ ಭಗೀರಥನಂತೆ ನಾಲ್ಕೇ ವರ್ಷದಲ್ಲಿ ಮೂರನೇ ಅಷ್ಟಮಂಗಳ ಪ್ರಶ್ನೆಗೆ ಪಂಚಾಂಗ ಹಾಕಿಯೇ ಬಿಟ್ಟರು. ಇಲ್ಲಿ ಸಂಭವಿಸಿದ್ದು ಮತ್ತು ಸ್ವಾರಸ್ಯ ಎನ್ನಲೇಬೇಕು ಪ್ರಸ್ತುತ ದೇವಾಲಯದ ಚೈತನ್ಯ ಪುನಃಶ್ಚೇತನಗೊಳ್ಳಲು ಸುತ್ತಲೂ ಕೆಲವಾರು ಗುಡಿ ನಿರ್ಮಿಸಿ ಅದರಲ್ಲಿ ಉಪದೇವತೆಗಳನ್ನು ನೆಲೆಗೊಳಿಸಿ ಮತ್ತೊಮ್ಮೆ ಪೂರ್ಣ ರೂಪದ ಬ್ರಹ್ಮಕಲಶ ಮಾಡಬೇಕು. ಆನಂತರದಲ್ಲಿ ಮಗದೊಮ್ಮೆ ದೇವತಾ ಪ್ರಶ್ನೆ ಇಟ್ಟು ಕೊಡಿ ಮರ ಬೇಕಿದ್ದರೆ ಚಿಂತಿಸಬಹುದೆಂದು ಕಟ್ಟಪ್ಪನೆ ಆಗಿದೆ ಎಂದು ತಿಳಿಯಿತು.
ಇದನ್ನು ಓದಿದ ವಿಶ್ವಾಸಿ ಸಮಾಜ ಇದೊಂದು ಮೂಲ ನಂಬಿಕೆಯ ಭಾಗ ಎನ್ನುವರೋ ಅಥವಾ ಮೂಢನಂಬಿಕೆ ಆರಂಭ ಎನ್ನುವರೋ? ಅದು ಅವರಿಗೆ ಬಿಟ್ಟ ವಿಚಾರವಾಗಿರಲಿ. ಇಲ್ಲಿ ಚಿಂತಿಸಬೇಕಾದ ಅಂಶವೆಂದರೆ ಭಕ್ತ ದೈವ ವಿಶ್ವಾಸಿಯಾಗಿ ಬದುಕಲು ಇಂತಹ ಕಠಿಣ ತ್ಯಾಗಕ್ಕೂ ಬಲಿ ಆಗಬೇಕೇ? ಅಷ್ಟಮಂಗಲ ದೇವ ಪ್ರಶ್ನೆ ಎಂದರೆ ಹಿಂದಿನ ಕಾಲದಲ್ಲಿ ಮೂಲ ನಂಬಿಕೆಯ ಅನುಭವಿ ಪ್ರಜ್ಞಾವಂತರ ಚಿಂತನ ಮಂಥನದಿಂದ ಫಲ ನಿರ್ಣಯ ಆಗುತ್ತಿತ್ತು. ಆದರೆ ಇಂದು ದೈವಜ್ಞರೇ ಸರ್ವಜ್ಞರಾಗಿ ಪದ ಅರ್ಥ ಒಬ್ಬರೇ ಹೇಳಿ ತನ್ನ ನಿಲುವನ್ನೇ ಹೇರುವಂತಾಗಿದೆ. ಯಾವಾಗ ನಾಗರಿಕ ಸಮಾಜ ಆಚಾರ್ಯ ದೈವಜ್ಞರನ್ನು ಪ್ರಶ್ನಿಸುವುದು. ಬ್ರಹ್ಮ ಶಾಪವೆಂದು ನಂಬುವವರೆಗೆ ಸಂಭವಾಮಿ ಯುಗೇ ಯುಗೇ ಇದು ಸತ್ಯ. ಅಂಧ ವಿಶ್ವಾಸದಿಂದ ಮೂಲ ನೈಜ ವಿಶ್ವಾಸದೆಡೆಗೆ ಸಾಗೋಣ.
ಸರ್ವೇ ಜನ ಸುಖಿನೋ ಭವಂತು.
-ಕಡಾರು ವಿಶ್ವನಾಥ ರೈ