ನಿವೃತ್ತ ಪ್ರಾಧ್ಯಾಪಕ, ಸಾಹಿತಿ, ಅರ್ಥಧಾರಿ ಮತ್ತು ಮಾಧ್ಯಮ ತಜ್ಞ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ ಮೇ 24 ರಂದು ಪುತ್ತೂರು ತಾಲೂಕು ಬೆಟ್ಟಂಪಾಡಿಯಲ್ಲಿ ‘ಹುಟ್ಟೂರ ಸಮ್ಮಾನ’ ಜರಗಲಿದೆ. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪತ್ತನಾಜೆ ಉತ್ಸವ ಸಂದರ್ಭ ಜರಗುವ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವ ಸಲುವಾಗಿ ಕ್ಷೇತ್ರದ ‘ಬಿಳ್ವ ಶ್ರೀ’ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಬಹುಮುಖೀ ಸಾಧಕ ಭಾಸ್ಕರ ರೈ ಕುಕ್ಕುವಳ್ಳಿ: ಯಕ್ಷಗಾನ, ಸಾಹಿತ್ಯ, ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರು ವಿರಳ ಪಂಕ್ತಿಗೆ ಸೇರಿದ ಓರ್ವ ಬಹುಶ್ರುತ ವಿದ್ವಾಂಸರು. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪ್ರತಿಷ್ಠಿತ ಬಾಲ್ಯೊಟ್ಟು ಗುತ್ತು ಇರ್ದೆ ಬೆಟ್ಟಂಪಾಡಿಯಲ್ಲಿ ದಿ. ಕಲ್ಲಡ್ಕ ಕರಿಯಪ್ಪ ರೈ ಮತ್ತು ಗಿರಿಜಾ ರೈ ಕುಕ್ಕುವಳ್ಳಿ ದಂಪತಿಯ ಸುಪುತ್ರರು. ದರ್ಬೆತ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪ್ರಾರಂಭಿಸಿ, ಪ್ರೌಢ ಶಿಕ್ಷಣವನ್ನು ಬೆಟ್ಟಂಪಾಡಿಯ ನವೋದಯ ಪ್ರೌಢಶಾಲೆ ಮತ್ತು ಕಾಲೇಜು ಶಿಕ್ಷಣವನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿ, ಮಂಗಳೂರು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್, ನಂತರ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ. ಎ. ಮತ್ತು ಎಂ.ಇಡಿ. ಪದವಿಯನ್ನು ಪಡೆದರು. ಭಾರತೀಯ ಅಂಚೆ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿ ಬಳಿಕ ಶಿಕ್ಷಣ ಇಲಾಖೆಯನ್ನು ಸೇರಿ ಪೆರ್ಮನ್ನೂರು ಪ್ರೌಢ ಶಾಲೆಯಿಂದ ಪದೋನ್ನತಿ ಪಡೆದು ಚೇಳಾಯರು ಪ.ಪೂ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಮುಂದೆ ಗುರುಪುರ ಸರ್ಕಾರಿ ಕಿರಿಯ ಮಹಾವಿದ್ಯಾ ಲಯದಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದರು.
ಮಂಗಳೂರಿನ ಕದ್ರಿ ಕಂಬಳದಲ್ಲಿ ನೆಲೆಸಿರುವ ಭಾಸ್ಕರ ರೈ ಕುಕ್ಕುವಳ್ಳಿಯವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ (2002) ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ(2008) ಸದಸ್ಯರಾಗಿ ದುಡಿದಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ, ತುಳು ಭಾಷೆಯ ಶ್ರೀಮಂತಿಕೆಯನ್ನು ಉಳಿಸಿ ತಮ್ಮದೇ ಆದ ಶೈಲಿಯಲ್ಲಿ ಬರಹಗಾರರಾಗಿ, ಯಕ್ಷಗಾನ ಅರ್ಥಧಾರಿಯಾಗಿ, ಪ್ರವಚನಕಾರರಾಗಿ ಅವರು ಖ್ಯಾತರು. ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾಗಿ, ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ, ಬೆಂಗಳೂರಿನ ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ಕೆಂದ್ರದಲ್ಲಿ ಬಾನುಲಿ ಪಠ್ಯಗಳನ್ನು ರಚಿಸಿಕೊಟ್ಟಿದ್ದಾರೆ. ಏಕಾಂತದಿಂದ ಲೋಕಾಂತರಕೆ (ಲೇಖನ ಸಂಗ್ರಹ ), ಸೃಷ್ಟಿ ಸಿರಿಯಲ್ಲಿ ಪುಷ್ಪ ವೃಷ್ಟಿ (ಕಾವ್ಯ ಗುಚ್ಛ), ಗಾಂಪನ ಪುರಾಣ (ಪರಪೋಕುದ ಪಟ್ಟಾಂಗ), ಸೀಯನ, ನೆಯಿ-ಪೇರ್(ತುಳು ಕವನ ಸಂಕಲನ), ಒಡ್ಡೋಲಗ, ಯಕ್ಷಿಕಾ, ಅಭಿರಾಮ, ಯಕ್ಷ ಪ್ರಮೀಳಾ,ಯಕ್ಷರ ಚೆನ್ನ, ಪುಳಿಂಚ ಕೃತಿ-ಸ್ಮೃತಿ, ಯಕ್ಷ ಪುರುಷೋತ್ತಮ, ಅಳಿಕೆ ಶತಮಾನ ಸ್ಮೃತಿ, ಅಭಿರಾಮ, ಪನಿಯಾರ, ಅಬ್ಬಕ್ಕ ಸಂಕಥನ(ಸಂಪಾದಿತ), ಘೋರ ಮಾರಕ, ಗುನ್ಯಾಸುರ ವಧೆ, ಸಾವಯವ ವಿಜಯ, ಧೂಮಾಸುರ ಬಂಧನ ಕರ್ಕಶಾಸುರ ವಧೆ, ಕ್ರಾಂತಿ ಕಹಳೆ, ಉಳ್ಳಾಲ ರಾಣಿ ಅಬ್ಬಕ್ಕ (ಯಕ್ಷಗಾನ) ಮುಂತಾದವು ಇವರ ಪ್ರಕಟಿತ ಕೃತಿಗಳು. ಹರಣ ಹಾರಿತು, ಎರೆಯನೆಡೆಗೆ, ತುಳುವೆರೆ ಬಲೀಂದ್ರೆ, ಗರತಿ ಮಂಗಣೆ, ಜನ್ಮ ರಹಸ್ಯ, ರಂಭಾ ಶಾಪ, ದಳವಾಯಿ ದೇವಪೂಂಜೆ, ಅಮರ್ ವೀರೆರ್ ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ಇವರು ‘ಸಂಪರ್ಕ’ ಮಾಸ ಪತ್ರಿಕೆ ಹಾಗೂ ‘ಸದಾಶಯ’ ತ್ರೈಮಾಸಿಕದ ಸಂಪಾದಕರಾಗಿ ದುಡಿದಿದ್ದಾರೆ. ಉಳ್ಳಾಲ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು, ಕನ್ನಡ ಸಂಘ- ತುಳು ಕೂಟಗಳಲ್ಲಿ ಸಕ್ರಿಯರು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ತುಳು ವಾರ್ತಾ ವಾಹಿನಿ ‘ನಮ್ಮ ಕುಡ್ಲ’, ’ವಿ4 ಮೀಡಿಯಾ’, ಕ್ಯಾಡ್ ಟಿವಿ, ಸಹಾಯ, ನಮ್ಮ ಟಿವಿ, ಡೈಜಿ ವರ್ಲ್ಡ್ ಮತ್ತು ದೂರದರ್ಶನ ‘ಚಂದನ’ ವಾಹಿನಿಗಳಲ್ಲಿ ನೂರಾರು ಯಶಸ್ವೀ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ನಮ್ಮ ಕುಡ್ಲ ಬಳಗ ನಿರ್ಮಿಸಿದ ವಿಶ್ವ ತುಳು ಸಮ್ಮೇಳನ ಮತ್ತು ಧರ್ಮಸ್ಥಳ ಮಹಾನಡಾವಳಿ ಡಿ.ವಿ.ಡಿ. ಗಳಿಗೆ ನಿರೂಪಣಾ ಸಾಹಿತ್ಯ ಬರೆದು ಅವುಗಳನ್ನು ತಮ್ಮದೇ ಧ್ವನಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ಜಿಲ್ಲೆಯ ವಿವಿಧ ವಾಹಿನಿಗಳಲ್ಲಿ ಪುರಾಣ ಲೋಕ, ರಂಗಸ್ಥಳ ಸುದ್ದಿ ಸಲ್ಲಾಪ, ಕಾವ್ಯ ಸ್ಪಂದನ ‘, ‘ಪಟ್ಲ-ಗಾನ-ಯಾನ , ರಂಗ ವಿಹಾರ, ತುಳು ತುಲಿಪು ಇತ್ಯಾದಿ ವಿನೂತನ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ಮತ್ತು ಸಾರಂಗ್ ರೇಡಿಯೋದಲ್ಲಿ ಗಾಂಪನ ತಿರ್ಗಾಟ, ಊರು ಕೇರಿ, ಕಲಾಸಾರಂಗ್ ಸರಣಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಕರ್ನಾಟಕ ರಾಜ್ಯ ಮಟ್ಟದ ಆರ್ಯಭಟ ಪ್ರಶಸ್ತಿ, ಸುವರ್ಣ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ವಿದ್ಯಾರತ್ನ ಪ್ರಶಸ್ತಿ, ಸೌರಭ, ಸಾಧನಾ, ನೂಪುರ, ಕಾರಂತ ಸದ್ಭಾವನಾ ಪ್ರಶಸ್ತಿಗಳು, ಕಾಸರಗೋಡು ಬದಿಯಡ್ಕದ ತುಳುವೆರೆ ಅಯನೊ ಪ್ರಶಸ್ತಿ , ಮುಂಬಯಿ ಕಾವ್ಯ ಪ್ರಶಸ್ತಿ, ಸಾಂಗ್ಲಿ ತುಳುನಾಡ್ ಸಂಘದಿಂದ ‘ಪೆರ್ಮೆದ ತುಳುವೆ’ ಪ್ರಶಸ್ತಿ, ಯು.ಎ.ಇ.ಬಂಟ್ಸ್ ಸಂಘದ ‘ಬಂಟ ವಿಭೂಷಣ’ ಉಪಾಧಿ, ದುಬೈ, ಅಬುಧಾಬಿ, ಶಾರ್ಜಾ, ಕತಾರ್, ಓಮನ್, ಬಹ್ರೈನ್, ಚೆನ್ನೈ, ಮುಂಬೈ, ಅಮೇರಿಕಾ, ದೆಹಲಿಯ ವಿವಿಧ ಸಂಘಟನೆಗಳಿಂದ ಸನ್ಮಾನಗಳು ಅವರಿಗೆ ಲಭಿಸಿವೆ. ತುಳು ಮತ್ತು ಕನ್ನಡ ಭಾಷೆಯಲ್ಲಿ ಕಥೆ, ಕವಿತೆ, ಲೇಖನ ಮತ್ತು ಸಂಶೋಧನಾ ಪ್ರಬಂಧಗಳನ್ನು ರಚಿಸಿರುವುದಲ್ಲದೇ, ತಮ್ಮ ಕರ್ನಾಟಕ ಯಕ್ಷಭಾರತಿ ಪುತ್ತೂರು ತಂಡದ ಮೂಲಕ ದೇಶಾದ್ಯಂತ ಕನ್ನಡ ಮತ್ತು ತುಳು ಯಕ್ಷಗಾನ ಪ್ರದರ್ಶನಗಳನ್ನು ನೀಡಿ ಜನಜಾಗೃತಿ ಮೂಡಿಸಿದ್ದಾರೆ. ಶೇಣಿ-ಸಾಮಗ, ಪೆರ್ಲ, ಕಾಂತ ರೈ, ತೆಕ್ಕಟ್ಟೆ, ಕೊರ್ಗಿ, ಕುಂಬ್ಳೆ, ಸಿದ್ಧಕಟ್ಟೆ, ಬೊಟ್ಟಿಕೆರೆ, ಮಂಡೆಚ್ಚ, ಬಲಿಪ, ಪದ್ಯಾಣರಂತಹ ಹಿರಿಯ ಕಲಾವಿದರೊಂದಿಗೆ ಹಲವು ಯಕ್ಷಗಾನ ತಾಳಮದ್ದಳೆ ಮತ್ತು ಧ್ವನಿ ಸುರುಳಿಗಳಲ್ಲಿ ಪಾಲ್ಗೊಂಡಿದ್ದಾರೆ.
ಹಂಪಿ ವಿಶ್ವವಿದ್ಯಾನಿಲಯ ಹೊರತಂದ ‘ತುಳು ಸಾಹಿತ್ಯ ಚರಿತ್ರೆ’ಯಲ್ಲಿ ತುಳು ಯಕ್ಷಗಾನದ ಬಗ್ಗೆ ವಿಸ್ತಾರವಾದ ಸಂಶೋಧನಾತ್ಮಕ ಲೇಖನವನ್ನು ಬರೆದಿರುವ ಕುಕ್ಕುವಳ್ಳಿಯವರು ಅಕಾಡೆಮಿಯ ತುಳು ಪಠ್ಯ ರಚನಾ ಸಮಿತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಹಕರಿಸಿದ್ದಾರೆ. ತುಳು ಕೂಟ ತುಳು ಅಕಾಡೆಮಿ, ಯಕ್ಷಗಾನ ಅಕಾಡೆಮಿಗಳ ಬಹುಮಾನಿತ ಪುಸ್ತಕಗಳ ಮೌಲ್ಯ ಮಾಪನ ಮಾಡಿದ್ದಾರೆ. ಯಕ್ಷೋತ್ಸವ, ಯಕ್ಷಗಾನ ಕಲಾ ರಂಗಗಳ ಯಕ್ಷಗಾನ ಆಟ-ಕೂಟ ಸ್ಫರ್ಧೆಗಳಲ್ಲಿ ತೀರ್ಪುಗಾರರಾಗಿದ್ದುದಲ್ಲದೇ ಕಮ್ಮಟ ಕಾರ್ಯಾಗಾರಗಳ ನಿರ್ದೇಶಕ ವಿದ್ವಾಂಸರಾಗಿ ದುಡಿದಿದ್ದಾರೆ. ‘ನೀಲಾಂಜನ’, ‘ಭರಣಿ ಜ್ಯೋತಿ’, ಜಯ ಜನಾರ್ದನ, ಆದಿ ಮಹೇಶ್ವರೀ, ಪುಣ್ಯ ನೆಲ ಪೆರಣಂಕಿಲ ಇತ್ಯಾದಿ ಭಕ್ತಿಗೀತೆಗಳ ಧ್ವನಿಸುರುಳಿಗೆ ಸುಪ್ರಭಾತ ಮತ್ತು ಗೀತ ಸಾಹಿತ್ಯ ರಚಿಸಿದ್ದಾರೆ. ಈ ಹಿಂದೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಒಂದು ಅವಧಿಗೆ ಸೇವೆ ಸಲ್ಲಿಸಿರುವ ಭಾಸ್ಕರ ರೈ ಕುಕ್ಕುವಳ್ಳಿಯವರು ಮಂಗಳೂರಿನಲ್ಲಿ ಪ್ರಪ್ರಥಮ ಮಹಿಳಾ ಯಕ್ಷಗಾನ ಸಮ್ಮೇಳನ ‘ಯಕ್ಷ ಪ್ರಮಿಳಾ ೨೦೦೪’ ವನ್ನು ಆಯೋಜಿಸಿದ್ದರು. ಇಪ್ಪತ್ತೈದಕ್ಕೂ ಮೇಲ್ಪಟ್ಟು ಹಿರಿಯ ಯಕ್ಷಗಾನ ಕಲಾವಿದರಿಗೆ ಪ್ರಶಸ್ತಿ ಮತ್ತು ಅಶಕ್ತರಿಗೆ ಮಾಸಾಶನಗಳನ್ನು ದೊರಕಿಸಿಕೊಡುವಲ್ಲಿ ಶ್ರಮಿಸಿದವರು. ಇವರು ಪುನಾರಚಿತ ತುಳು ಆಕಾಡೆಮಿಯ ಸ್ಥಾಯಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅಕಾಡೆಮಿಯ ತ್ರೈಮಾಸಿಕ ’ಮದಿಪು’ ಪತ್ರಿಕೆಯ ಸಂಪಾದಕರೂ ಆಗಿದ್ದರು. ಕೆಲವು ತುಳು ಕನ್ನಡ ಧಾರಾವಾಹಿಗಳಲ್ಲೂ ನಟಿಸಿರುವ ಬಹುಮುಖೀ ಸಾಧಕ ‘ಕುಕ್ಕುವಳ್ಳಿ’ಯವರು ‘ಪತ್ತನಾಜೆ’ ತುಳು ಚಲನಚಿತ್ರದ ಶೀರ್ಷಿಕೆ ಗೀತೆ ಬರೆದ ಸಾಹಿತಿ.
ದೆಹಲಿ ಕರ್ನಾಟಕ ಸಂಘದಲ್ಲಿ ಜರಗಿದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ಡಾ. ಎಂ. ವೀರಪ್ಪ ಮೊಯಿಲಿ ಮತ್ತು ಆಸ್ಕರ್ ಫೆರ್ನಾಂಡೀಸ್ ಅವರು ಭಾಸ್ಕರ ರೈ ಕುಕ್ಕುವಳ್ಳಿಯವರ ತಂಡದಲ್ಲಿ ಯಕ್ಷಗಾನ ವೇಷ ಧರಿಸಿ ಅಭಿನಯಿಸಿದ್ದಾರೆ. ಕೈ ಮುಗಿದ ಭಂಗಿಯಲ್ಲಿರುವ ಇವರ ಸುಂದರ ಯಕ್ಷಗಾನ ರಾಜವೇಷವು ಇಂಟರ್ನೆಟ್ಟಿನಲ್ಲಿ ಲಭ್ಯವಿದ್ದು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕಂಪೆನಿಗಳು, ಬ್ಯಾಂಕುಗಳು ಮತ್ತು ಸಂಘ ಸಂಸ್ಥೆಗಳು ಅದನ್ನು ತಮ್ಮ ಜಾಹೀರಾತು ಫಲಕ ಮತ್ತು ಕರಪತ್ರಗಳಲ್ಲಿ ಬಳಸುತ್ತಿರುವುದನ್ನು ಕಾಣಬಹುದು. ಪ್ರಸ್ತುತ ‘ಯಕ್ಷಾಂಗಣ’ ಮಂಗಳೂರು ಇದರ ಕಾರ್ಯಾಧ್ಯಕ್ಷರಾಗಿ ಕಳೆದ ಹನ್ನೊಂದು ವರ್ಷಗಳಿಂದ ಮಂಗಳೂರಿನಲ್ಲಿ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ವನ್ನು ನಡೆಸುವುದಲ್ಲದೇ, ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗ ಹಾಗೂ ಅವಿಭಜಿತ ಜಿಲ್ಲೆಯ ಸಂಘ ಸಂಸ್ಥೆಗಳು ಆಯೋಜಿಸುವ ಪ್ರಸಿದ್ದರ ಕೂಟಗಳಲ್ಲಿ ಅರ್ಥಧಾರಿಯಾಗಿ ನಿರಂತರ ಭಾಗವಹಿಸುತ್ತಿದ್ದಾರೆ. ಭಾಸ್ಕರ ರೈ ಕುಕ್ಕುವಳ್ಳಿಯವರು ತಮ್ಮ ಜೀವನ ಸಂಗಾತಿ ವಿದ್ಯಾ ಮೂಕಾಂಬಿಕಾ (ಮೌಂಟ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯಲ್ಲಿ ವಿಜ್ಞಾನ ಉಪನ್ಯಾಸಕಿ), ಪುತ್ರಿ ಕು. ವಿಭಾಲಕ್ಷ್ಮಿ (ಜರ್ಮನಿಯಲ್ಲಿ ಉದ್ಯೋಗಿ), ಮಗ ಕು. ವಿಷ್ಣುಸ್ಮರಣ್ ಬಿ.ರೈ (ಇಂಜಿನಿಯರಿಂಗ್ ವಿದ್ಯಾರ್ಥಿ) ಇವರೊಂದಿಗೆ ಸುಖೀ ಸಂಸಾರಿಯಾಗಿದ್ದು ಇವರು ಅಪಾರ ಬಂಧು ಮಿತ್ರರ ಸ್ನೇಹವನ್ನು ಸಂಪಾದಿಸಿದ್ದಾರೆ.
ಸನ್ಮಾನ – ಸಂವಾದ :- ಮೇ 24 ಶುಕ್ರವಾರ ಪೂರ್ವಾಹ್ನ ಗಂಟೆ 10 ರಿಂದ ಆರಂಭವಾಗುವ ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ವಹಿಸುವರು. ಪುತ್ತೂರು ಪರ್ಲಡ್ಕದ ಎಸ್.ಡಿ.ಪಿ. ರೆಮಿಡೀಸ್ ಆಂಡ್ ರೀಸರ್ಚ್ ಸೆಂಟರ್ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ, ಬೆಟ್ಟಂಪಾಡಿ ನವೋದಯ ವಿದ್ಯಾ ಸಮಿತಿ ಅಧ್ಯಕ್ಷ ಡಿ.ಎಂ ಬಾಲಕೃಷ್ಣ ಭಟ್ ಘಾಟೆ ಮತ್ತು ಪ್ರಗತಿಪರ ಕೃಷಿಕ ಎಂ. ಮುತ್ತಣ್ಣ ಶೆಟ್ಟಿ ಚೆಲ್ಮಡ್ಕ ಮುಖ್ಯ ಅತಿಥಿಗಳಾಗಿರುವರು. ಸಭೆಯಲ್ಲಿ ಶಿಕ್ಷಣ, ಸಾಹಿತ್ಯ, ಯಕ್ಷಗಾನ ಮತ್ತು ಮಾಧ್ಯಮ ಸೇವೆಗಾಗಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ನಿವೃತ್ತ ಅಧ್ಯಾಪಕ ನಾರಾಯಣ ಭಟ್ ಕುಂಚಿನಡ್ಕ ಮತ್ತು ಕಲಾಪೋಷಕ ಜನಾರ್ಧನ ರಾವ್ ಬೆಟ್ಟಂಪಾಡಿ ಅವರನ್ನು ಗೌರವಿಸಲಾಗುವುದು. ಕಾರ್ಯಕ್ರಮದ ಆರಂಭದಲ್ಲಿ ‘ಗುರು-ಶಿಷ್ಯ ಸಂವಾದ’ ಯಕ್ಷಗಾನ ತಾಳಮದ್ದಳೆ ಜರಗುವುದು. ಡಾ.ಎಂ. ಪ್ರಭಾಕರ ಜೋಶಿ ಮತ್ತು ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅರ್ಥಧಾರಿಗಳಾಗಿರುವರು. ಪ್ರಶಾಂತ ರೈ ಪುತ್ತೂರು ಅವರ ಭಾಗವತಿಗೆಯಿದೆ.
‘ಮಹಾಶೂರ ಭೌಮಾಸುರ’ ಬಯಲಾಟ :- ಅಪರಾಹ್ನ ಗಂಟೆ 2 ರಿಂದ ಸಂಘದ ಕಲಾವಿದರು ಮತ್ತು ಅತಿಥಿ ಕಲಾವಿದರ ಸಂಯೋಜನೆಯಲ್ಲಿ ‘ಮಹಾಶೂರ ಭೌಮಾಸುರ’ ಯಕ್ಷಗಾನ ಬಯಲಾಟವನ್ನು ಏರ್ಪಡಿಸಲಾಗಿದೆ ಎಂದು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಐ.ಗೋಪಾಲಕೃಷ್ಣ ರಾವ್ ಮತ್ತು ಕಾರ್ಯದರ್ಶಿ ಪ್ರದೀಪ್ ರೈ ಕೇಕನಾಜೆ ತಿಳಿಸಿದ್ದಾರೆ.