ಮೂಡುಬಿದಿರೆ: ಸಂಚಾರ ನಿಯಮ ಪಾಲಿಸಿಕೊಂಡು ವಾಹನ ಚಲಾಯಿಸಿದರೆ, ಅಪಘಾತ ತಡೆಗಟ್ಟಲು ಸಾಧ್ಯ ಎಂದು ಎಚ್ಎಸ್ಇ ಆ್ಯಂಡ್ ಟಿ ಏಷಿಯಾ ಫೆಸಿಫಿಕ್ ವ್ಯವಸ್ಥಾಪಕ ಸಂಜಯ್ ಕರಾಜಗಿಕರ್ ಹೇಳಿದರು ಆಳ್ವಾಸ್ ಎಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಕಾಲೇಜಿನ ಶೋಭಾವನ ಸಭಾಂಗಣದಲ್ಲಿ ಬುಧವಾರ ಒಶಾಯಿ ಫೌಂಡೇಷನ್ ಹಾಗೂ ಬಿಎಸಿಸಿಇ ಫೌಂಡೇಷನ್ ಸಹಯೋಗದಲ್ಲಿ ನಡೆದ ಸೇಫ್ಟಿ ಹ್ಯಾಕಥಾನ್- ‘ಜಾಗೃತಿ -2024’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾಹನದಲ್ಲಿ ಪ್ರಯಾಣಿಸುವಾಗ ಪ್ರತಿಯೊಬ್ಬರೂ ಸೀಟ್ ಬೆಲ್ಟ್ ಧರಿಸಬೇಕು. ಇದರಿಂದ ಅವಘಡದ ಪರಿಣಾಮವನ್ನು ಶೇ50 ರಷ್ಟು ತಡೆಗಟ್ಟಬಹುದು ಎಂದರು. ಪ್ರತಿದಿನವೂ ನಾವು ಸ್ವ ಸುರಕ್ಷತೆಯನ್ನು ಮಾಡಿಕೊಳ್ಳಬೇಕು. ನಮ್ಮ ಸುತ್ತಮುತ್ತಲು ಸುರಕ್ಷತೆಯ ಅನುಸರಿಸುವಂತೆ ಜಾಗೃತಿ ಮೂಡಿಸಬೇಕು ಎಂದರು. ಬದುಕಿನಲ್ಲಿ ನೀತಿ ನಿಯಮವನ್ನು ಪಾಲಿಸುವುದರಿಂದ, ಉನ್ನತ ಸ್ಥಾನಕ್ಕೆ ತಲುಪಬಹುದು. ಸುರಕ್ಷತಾ ಭಾವನೆಯನ್ನು ಮೂಡಿಸಬಹುದು ಎಂದರು.
ಎಸ್ಎಫ್ಇಜಿಒ ಮತ್ತು ಒಶಾಯಿ ಫೌಂಡೇಷನ್ ನಿರ್ದೇಶಕ ಅವ್ದೇಶ್ ಮಲಯ್ಯಾ ಮಾತನಾಡಿ, ಮನುಷ್ಯ ಸಂಪನ್ಮೂಲವಾಗಿದ್ದು, ಅವನ ಜೀವವನ್ನು ಉಳಿಸುವುದರಿಂದ ಸಮಾಜ ಮತ್ತು ದೇಶ ಅಭಿವೃದ್ಧಿ ಸಾಧ್ಯ ಹಾಗೂ ಮನುಷ್ಯ ಸತ್ತಾಗ ಮಾತ್ರ ಅವನ ಮೌಲ್ಯವು ತಿಳಿಯುತ್ತದೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟ್ ವಿವೇಕ್ ಆಳ್ವ ಮಾತನಾಡಿ, ಎಲ್ಲರೂ ಪರಿಸರ ಮತ್ತು ಆರೋಗ್ಯ ಸುರಕ್ಷತೆ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಉತ್ತಮ ವಾತಾವರಣ ಸೃಷ್ಟಿಸಬೇಕು ಎಂದರು. ಬೇಸ್ ಫೌಂಡೇಷನ್ ನಿರ್ದೇಶಕ ಶರದ್ ಬಿಹಾರಿ ದಾಸ್ ಇದ್ದರು. ಇನಿಕಾ ಕಾರ್ಯಕ್ರಮ ನಿರೂಪಿಸಿದರು. ಜಾಗೃತಿ- 2024ರ ಅಂಗವಾಗಿ 3 ದಿನಗಳು ವಿವಿಧ ವಿಷಯಗಳ ಉಪನ್ಯಾಸ ನಡೆಯಲಿದೆ.