“ಉದ್ಯೋಗನಂ ಪುರುಷ ಸಿಂಗಂ ಉಪೈತಿ ಲಕ್ಷ್ಮೀ” ಉದ್ಯೋಗಿಯಾದ ಪುರುಷ ಶ್ರೇಷ್ಠನಲ್ಲಿ ಸಂಪತ್ತು ತಾನಾಗಿ ಬಂದು ನೆಲೆಸುತ್ತದೆ ಎಂಬುದು ಈ ಮಾತಿನ ಅರ್ಥವಾಗಿದೆ. ಇದು ದುಡಿಮೆಯ ಮಹತ್ವವನ್ನು ತಿಳಿಸುವ ಹಿಂದಿನ ಮಾತಾಗಿದೆ. ಯಾವುದೇ ಕಾರ್ಯಗಳು ತಮ್ಮ ಉದ್ಯೋಗದಿಂದ ಸಿದ್ಧಿಸುತ್ತವೇ ಹೊರತು ಕುಳಿತು ಸಂಕಲ್ಪ ಮಾಡುವುದರಿಂದಲ್ಲ. ಇದನ್ನೇ ಜಗಜ್ಯೋತಿ ಬಸವಣ್ಣನವರು ‘ಕಾಯಕವೇ ಕೈಲಾಸ’ ಎಂದರು. ಕಾಯಕವೆಂದರೆ ದುಡಿಮೆ. ದುಡಿಯದವನಿಗೆ ಉಣ್ಣುವ ಅಧಿಕಾರವಿಲ್ಲ. ಮೈ ಬಗ್ಗಿಸಿ ದುಡಿಯದೇ ದೇಹವನ್ನು ಯಾವುದಾದರೊಂದು ಉದ್ಯೋಗದಲ್ಲಿ ತೊಡಗಿಸದೆ ಇದ್ದಲ್ಲಿ ಜೀವನ ಸಾರ್ಥಕ್ಯ ಹೊಂದಲು ಸಾಧ್ಯವಿಲ್ಲ.
ಉದ್ಯೋಗದಲ್ಲಿ ಮೇಲು ಕೀಳು ಎಂಬುವುದಿಲ್ಲ. ಯಾವುದೇ ಉದ್ಯೋಗವಾಗಲಿ ಅದನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದರೆ ಬದುಕಿನಲ್ಲಿ ಯಶಸ್ಸು ಸಾಧ್ಯ. ಅಲ್ಲದೇ ಆ ಉದ್ಯೋಗದಿಂದಲೇ ಮನುಷ್ಯನ ಜೀವನ ಉಜ್ಜೀವನಗೊಳ್ಳಬಹುದು. “ಉದ್ಯೋಗಂ ಪುರುಷ ಲಕ್ಷಣಂ” ಎಂಬ ಮಾತಿನಂತೆ ಮನುಷ್ಯನು ಯಾವುದಾದರೊಂದು ಉದ್ಯೋಗದಲ್ಲಿ ತನ್ನನು ತೊಡಗಿಸಿಕೊಳ್ಳಬೇಕು. ಉದ್ಯೋಗ ಇರುವ ಮನುಷ್ಯ ತನ್ನ ದೈನಂದಿನ ಜೀವನವನ್ನು ಅತ್ಯಂತ ಶಿಸ್ತಿನಿಂದ ನಿರ್ವಹಿಸುತ್ತಾನೆ. ಅಲ್ಲದೇ ಆತನ ಜೀವನದ ಸಮಯವು ವ್ಯರ್ಥವಾಗದೆ ಸದ್ವಿನಿಯೋಗವಾಗುತ್ತದೆ. ಆತನ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಉತ್ತಮ ಆರೋಗ್ಯಕ್ಕೆ ಇದು ಪೂರಕವಾಗಿರುತ್ತದೆ. ಆದುದರಿಂದ ಮನುಷ್ಯನು ಯಾವುದೇ ಉದ್ಯೋಗವಿರಲಿ ಅದರಲ್ಲಿ ಕೀಳರಿಮೆ ಹೊಂದದೆ ತನ್ನ ಪಾಲಿನ ಉದ್ಯೋಗವನ್ನು ಶ್ರದ್ಧಾ ಭಕ್ತಿಯಿಂದ ನಿರ್ವಹಿಸುವುದೇ ಇಂದಿನ ಅಗತ್ಯತೆಯಾಗಿದೆ.
“ಹಸಿದವನಿಗೆ ಊಟ ರುಚಿ ; ದಣಿದವನಿಗೆ ನಿದ್ದೆ ಸವಿ” ಎಂಬ ಮಾತು ದುಡಿಮೆಯ ಬಗ್ಗೆ ಹುಟ್ಟಿಕೊಂಡಿದೆ. ಮನುಷ್ಯ ಪ್ರಕೃತಿ ಸಹಜವಾಗಿ ನಿರ್ಮಾಣಗೊಂಡ ಈ ದೇಹವನ್ನು ಚೆನ್ನಾಗಿ ದುಡಿಸಬೇಕು. ಆಲಸ್ಯವನ್ನು ಸೃಷ್ಠಿಸಿಕೊಂಡು ಅದಕ್ಕೆ ಬೇಕಾದಕ್ಕಿಂತ ಹೆಚ್ಚಾಗಿ ವಿಶ್ರಾಂತಿ ನೀಡಿದರೆ ಆರೋಗ್ಯಕ್ಕೆ ತೊಂದರೆಯುಂಟಾಗಬಹುದು. ನಮ್ಮ ಹಿರಿಯರು ಯಾವುದೇ ಕಾಯಿಲೆಗಳಿಲ್ಲದೆ ನೂರು ವರ್ಷಗಳ ಕಾಲ ಬದುಕಿದರು. ಕಾರಣ ಅವರ ಆಹಾರ ಪದ್ಧತಿ ಮತ್ತು ನಿರಂತರ ದುಡಿಮೆ. ಮಾನವನಿಗೆ ಆಲಸ್ಯವೇ ನಿಜವಾದ ಶತ್ರು. ವಿಷ್ಣು ಪುರಾಣದಲ್ಲಿ ಒಂದು ಮಾತು ಬರುತ್ತದೆ. “ಉದ್ಯೋಗದಿಂದಲೇ ಎಲ್ಲವೂ ಆಗುತ್ತದೆ. ಉದ್ಯೋಗ ವಿಭಿನ್ನಗತಿಗಳಿಗೆ ಕಾರಣ. ಆದುದರಿಂದ ಪ್ರಯತ್ನ ಪೂರ್ವಕವಾಗಿ ಉತ್ತಮ ಕೆಲಸಗಳನ್ನು ಮಾಡಬೇಕು. ನಾವು ಸಾರ್ಥಕ ಬದುಕಿನ ಪುಣ್ಯಜೀವಿಗಳಾಗಬೇಕು.”
ಉದ್ಯೋಗದ ಹಿಂದೆ ಸದ್ಭಾವ, ಸದಾಚಾರ, ಪ್ರಾಮಾಣಿಕ ಮನೋಭಾವನೆಗಳಿರಬೇಕು. ತುಪ್ಪ ತಿನ್ನಬೇಕು ಸಾಲ ಮಾಡಿ ಅಲ್ಲ. ಹಣಗಳಿಸಬೇಕು ವಾಮ ಮಾರ್ಗದಿ ಅಲ್ಲ. ಅಂದರೆ ಜೀವನದ ಉದ್ಯೋಗ ನಮ್ಮ ಗೌರವವನ್ನು ಹೆಚ್ಚಿಸುವಂತಿರಬೇಕು. ಅತ್ಯಂತ ಸಣ್ಣ ಮಟ್ಟದ ಕೆಲಸದವರೂ ಕೂಡಾ ದುಡಿಮೆಯ ಮೇಲಿಟ್ಟಿರುವ ಪ್ರೀತಿ ಗೌರವ ಶ್ರದ್ಧೆಗಳಿಂದ ಅತ್ಯುನ್ನತ ಸ್ಥಾನಮಾನಗಳನ್ನು ಸಮಾಜದಲ್ಲಿ ಪಡೆದಿರುವುದನ್ನು ನಾವು ಇಂದು ನೋಡುತ್ತಿದ್ದೇವೆ. ಆದುದರಿಂದ ಯಾವುದೇ ಉದ್ಯೋಗವಾಗಿರಲಿ ಶ್ರದ್ಧಾ ಭಕ್ತಿಯಿಂದ ನಿರ್ವಹಿಸುವುದೇ ದೇವರ ಪೂಜೆಯಾಗುತ್ತದೆ.
ರವೀಂದ್ರ ರೈ ಕಲ್ಲಿಮಾರು