ಮಾನವ ಬೇಸಾಯ ಮಾಡಲು ಆರಂಭಿಸಿದ. ಮಣ್ಣಿನಿಂದ ಮಡಕೆ ತಯಾರಿಸಿದ. ಅದರಲ್ಲಿ ತಾನು ಬೆಳೆದ ಧಾನ್ಯ ತರಕಾರಿಗಳನ್ನು ಬೇಯಿಸಿ ತಿನ್ನಲು ಆರಂಭಿಸಿದ ಕಾಲವನ್ನು ನಾಗರಿಕತೆಯ ಉಗಮ ಎನ್ನಬಹುದು. ಪ್ರಪ್ರಥಮವಾಗಿ ಮಣ್ಣಿನಿಂದ ನಿರ್ಮಿಸಿದ ವಸ್ತುವೇ ಮಡಕೆ. ಬಯಲಿನ ನಯವಾದ ಮಣ್ಣಿನಿಂದ ಮಡಕೆ ತಯಾರಿಸಿ ಅದನ್ನು ಬೆಂಕಿಯಲ್ಲಿ ಸುಟ್ಟಾಗ ಗಟ್ಟಿಯಾದ ಮಡಕೆ ನಿರ್ಮಾಣವಾಯಿತು. ಅದನ್ನು ನೀರು ತುಂಬಿಡಲು, ಅಡುಗೆ ಮಾಡಿ ಉಣ್ಣಲು ಬಳಸಬಹುದು ಎಂದು ತಿಳಿದಾಗ ಅವನ ಸಂತೋಷಕ್ಕೆ ಪಾರವಿದೆಯೇ?
ಉತ್ತರ ಬಾರಕೂರಿನಿಂದ ದಕ್ಷಿಣದ ನಿಲೇಶ್ವರದವರೆಗಿನ ಕರಾವಳಿ ಭೂಮಿಯೇ ಆಗಿನ ತೌಳವ ದೇಶ. ಇಲ್ಲಿ ವಾಸಿಸುತ್ತಿದ್ದ ತುಳುವರು ಆ ಕಾಲದ ಅತಿ ಪುರಾತನ ಪ್ರಕೃತಿ ಆರಾಧನೆಯೇ ಮೂರ್ತಿ ನಲ್ಕೆ. ತುಳುವಿನಲ್ಲಿ ಮೂರಿ ಎಂದರೆ ಮಣ್ಣಿನ ಮಡಕೆ. ಭೂಮಾತೆ ನೀಡಿದ ಅನ್ನದ ಅಕ್ಷಯ ಪಾತ್ರೆಯಾದರೆ ನೀರು ಪ್ರಕೃತಿ ಕೊಟ್ಟ ಜೀವ ಜಲ ಎಂಬ ನಂಬಿಕೆಯ ಪ್ರತೀಕವಾಗಿ ಗುಡಿ ನಿರ್ಮಿಸಿ ಮೂರಿಯಲ್ಲಿ ನೀರು ತುಂಬಿಸಿಡುವ ಸ್ಥಳವೇ ಮೂರ್ಲೆ ಬದಿ ಅಥವಾ ಮೂರ್ಲೆ ಮಂಟಪ ಎನ್ನುವರು. ಈಗಲೂ ಗತಕಾಲದ ಪ್ರಸಿದ್ಧ ತರವಾಡು ಮನೆಗಳಲ್ಲಿ ಅಳಿವಿನಿಂಚಿನಲ್ಲಿರುವ ಮೂರ್ಲೆ ಬದಿಗಳನ್ನು ಕಾಣಬಹುದಾಗಿದೆ.
ಹಿನ್ನಲೆ :
ಮಾನವ ಪ್ರಥಮವಾಗಿ ಕಂಡು ಹಿಡಿದ ಮಡಕೆಯನ್ನು ಕಲಶ ಪ್ರಾಯವಾಗಿ ಮೂರು ಮಡಕೆಗಳನ್ನು ನೀರು ತುಂಬಿಸಿ ಮಡಕೆಯ ಹೊರ ಮೈಯಲ್ಲಿ ನಾಗನ ಚಿತ್ರ ಬರೆಯುತ್ತಿದ್ದರು. ತುಳುನಾಡನ್ನು ಹಿಂದೆ ನಾಗರಾಜನು ಆಳುತ್ತಿದ್ದನೆಂಬ ನಂಬಿಕೆ. ಮುಂದೆ ಪರಂಪರಾಗತವಾಗಿ ತರವಾಡು ಮನೆಗಳ ಈಶಾನ್ಯ ಭಾಗದಲ್ಲಿ ಅಂಗಳದ ಬದಿಯಲ್ಲಿ ಒಂದು ಸಣ್ಣ ಗುಡಿಕಟ್ಟಿ ಗುಡಿಯ ಪಶ್ಚಿಮದ ಒಳಗೋಡೆಯಲ್ಲಿ ಎರಡು ಹಲಗೆಗಳನ್ನು ಇರಿಸುತ್ತಿದ್ದರು. ಮೇಲಿನ ಹಲಗೆಯಲ್ಲಿ ಮೂರು ಮೂರಿ (ಕಲಶ) ಗಳು. ಅವುಗಳಿಗೆ ಮಣ್ಣಿನ ಪಾತ್ರೆಯ ಮುಚ್ಚಳ ಇರುತ್ತದೆ. ಈ ಗುಡಿಗೆ ಆವರಣ ಗೋಡೆಯೂ ಇದೆ. ಅಶುದ್ಧಿಯವರು ಒಳಗೆ ಹೋಗುವಂತಿಲ್ಲ.
ಮೂರ್ಲೆನಲ್ಕೆ
ತುಳುನಾಡಿನಲ್ಲಿ ಎರಡನೇ ಬೇಸಾಯವನ್ನು ಸುಗ್ಗಿ ಎನ್ನುವರು. ಈ ಬೇಸಾಯ ಕಾರ್ಯ ಮುಗಿದ ಮರುದಿನ ಮೂರ್ಲೆನಲ್ಕೆ ಅಥವಾ ಮೂರ್ಲೆಕಾರ್ಯ ನಡೆಯುವ ಪದ್ಧತಿ. ಮೂರ್ಲೆ ಬದಿ ಇರುವ ಗುತ್ತು, ಬಾರಿಕೆ, ಬೂಡು ತರವಾಡುಗಳಲ್ಲಿ ವರ್ಷಂಪ್ರತಿ ಇದು ನಡೆಯುತ್ತಿತ್ತು. ಮೂರ್ಲೆ ಕಾರ್ಯ ಮಾಡುವ ಪೂಜಾರಿ ಮಿಂದು ಶುಚಿಯಾಗಿ ಆವರಣದ ಒಳಗೆ ಗುಡಿಸಿ ಸೆಗಣಿ ಸಾರಿಸಿ ಮೂರಿಗಳನ್ನು ಹೊರಗೆ ತಂದು ಚೆನ್ನಾಗಿ ತೊಳೆದು ಬಾವಿ ಕಟ್ಟೆಯಿಂದ ನೀರು ತೆಗೆದು ಮೂರಿಗಳಲ್ಲಿ ತುಂಬಿಸಿ ಒಳಗೆ ಮೇಲಿನ ಹಲಗೆಯಲ್ಲಿ ಮೂರು ಪಾತ್ರೆಗಳನ್ನು ಇಡಬೇಕು. ಮಾವು ಹಲಸಿನ ಎಲೆಗಳ ಮಧ್ಯದಲ್ಲಿ ತೆಂಗಿನಕಾಯಿಯನ್ನು ಮೂರಿಗಳ ಶಿರ ಭಾಗದಲ್ಲಿ ಕಲಶದಂತೆ ಇರಿಸಬೇಕು, ಕಲಶದ ಪಾತ್ರೆಯ ಕೊರಳಿಗೆ ಕಡುಗೆಂಪು ಬಣ್ಣದ ಬಟ್ಟೆಯನ್ನು ಕಟ್ಟಿ ಕೇಪುಳ ಮತ್ತು ಸಿಂಗಾರ ಹೂವಿನಿಂದ ಅಲಂಕರಿಸಬೇಕು. ಕೆಳಗಿನ ಹಲಗೆಯಲ್ಲಿ ಬಿಳಿ ಮಡಿ ವಸ್ತ್ರವನ್ನು ಹರಡಿ ಅದರ ಮೇಲೆ 3 ಬಾಳೆ ಎಲೆ ಹಾಕಿ ಶುದ್ಧ ಮುದ್ರಿಕೆಯಲ್ಲಿ ನಿಂತು ಮಾಡಿದ ಅಡುಗೆಯನ್ನು ಬಡಿಸಬೇಕು. ಜೈನರು ಹಾಗೂ ಬಲ್ಲಾಳರು ಸಸ್ಯಾಹಾರ ಅಡುಗೆ ಬಡಿಸಿದರೆ ಬಂಟರು ಮತ್ತು ಪೂಜಾರಿಗಳು ಮಾಂಸಾಹಾರ ಅಡುಗೆ ಬಡಿಸುತ್ತಾರೆ. ಅನಂತರ ಬಡಿಸಿದ ಪೂಜಾರಿ ಆರತಿ ಮತ್ತು ದೂಪವನ್ನು ಎತ್ತುತ್ತಾರೆ. ಕುಟುಂಬದ ಯಜಮಾನ ಸೇರಿದ ಎಲ್ಲರಿಗೂ ಪೂವರಿ ನೀಡಿ ಅನಾದಿ ಕಾಲದಿಂದ ಕಾಡಾಡಿಯಾಗಿದ್ದ ನಮ್ಮ ಹಿರಿಯರನ್ನು ಈ ತುಳು ನೆಲಕ್ಕೆ ಕರೆದು ಆಶ್ರಯ ನೀಡಿ ಉಳಲು ಭೂಮಿ, ಬೇಯಿಸಿ ತಿನ್ನಲು ಮಣ್ಣಿನ ಅಕ್ಷಯ ಪಾತ್ರೆಯನ್ನು ದಯಪಾಲಿಸಿದ್ದೀರಿ. ಮೇಲೆ ನಿಂತಿರುವ ಸೂರ್ಯ ಚಂದ್ರರು ಕೆಳಗೆ ಇರುವ ಭೂಮಿ ತಾಯಿ ಹಾಗೂ ಇತರ ಕಣ್ಣಿಗೆ ಕಾಣುವ ಪ್ರಕೃತಿ ಶಕ್ತಿಗಳೇ, ನಿಮ್ಮ ಮಕ್ಕಳಾದ ನಾವು ನಿಮ್ಮ ಮಡಿಲಲ್ಲಿ ಬೆಳೆದುದನ್ನು ನಿಮಗೆ ಈ ರೀತಿ ಪ್ರಸಾದ ರೂಪದಲ್ಲಿ ಸಮರ್ಪಿಸುತ್ತಿದ್ದೇವೆ. ಮಾಡಿದ ಕಾರ್ಯದಲ್ಲಿ ಕುಂದು ಕೊರತೆಗಳಿದ್ದರೆ ಕ್ಷಮಿಸಿ, ಮಾಯಾ ರೂಪದಲ್ಲಿ ನೀವು ಬಂದು ಸ್ವೀಕರಿಸಿ ನಮಗೂ ಜಾನುವಾರುಗಳಿಗೂ ಕ್ಷೇಮವನ್ನು ಹಾಗೂ ಬಿತ್ತಿದ ಬೆಳೆಯನ್ನು ರಕ್ಷಿಸಿ ಕೊಡುವ ಹೊಣೆ ನಿಮಗೆ ಸೇರಿದೆಂದು ಕಣ್ಣೀರು ಸುರಿದು ಅಕ್ಕಿ ಕಾಳು ಹಾಕಿ ಸಾಷ್ಟಾಂಗ ಎರಗಿ ಪ್ರಾರ್ಥಿಸುತ್ತಾರೆ. ಅನಂತರ ಯಜಮಾನ ವೃತ ನಿಷ್ಠೆಯಲ್ಲಿದ್ದ ನಲ್ಕೆಯ 3 ಜನ ಹೆಂಗಸರಿಗೆ ಎಣ್ಣೆ ಬೂಳ್ಯ ಕೊಡುತ್ತಾರೆ.
ಅಲ್ಲಿ ಸೇರಿದ ಎಲ್ಲರಿಗೂ ಪ್ರಸಾದ ಭೋಜನ ನಡೆಯುತ್ತದೆ. ಅಷ್ಟರಲ್ಲಿ ನಲ್ಕೆಯ ಹೆಂಗಸರು ಮಿಂದು ಮಡಿಯುಟ್ಟು ಕೇಶ ಬಿಚ್ಚಿ ಕೈಯಲ್ಲಿ ಸಿಂಗಾರ ಹಿಡಿದು ಮೂರಿಗಳ ಬದಿಯ ಎದುರಿನಲ್ಲಿ ಮೂರಿ ಹುಟ್ಟಿದ ಕತೆ ಹಾಗೂ ಬೇಸಾಯದ ಆರಂಭದ ಕತೆಯನ್ನು ಪಾಡ್ದನ ರೂಪದಲ್ಲಿ ಹಾಡುತ್ತಾರೆ. ನಲ್ಕೆಯ ಗಂಡಸರು ಡೋಲು ಬಾರಿಸುತ್ತಾರೆ. ಹೆಣ್ಣು ಗಂಡು ಕಾಳಿಂಗ ನಾಗರ ಚರಿತ್ರೆಯನ್ನು ಹಾಡುವಾಗ ಮೈಮೇಲೆ ವಿಚಿತ್ರವಾಗಿ ಆವೇಶ ಬಂದು ಕುಣಿಯುತ್ತಾರೆ. ನಲ್ಕೆಯ ಗಂಡಸರಿಗೂ ದೈವ, ನಾಗಗಳು ಪರಕಾಯ ಪ್ರವೇಶ ಆಗಿ ಅಭಯದ ನುಡಿ ಹೇಳುವುದಿದೆ. ಬಂದವರೆಲ್ಲರೂ ಅರಸಿನ ಹುಡಿ ಪ್ರಸಾದ ಕೊಡುತ್ತಾರೆ. ಅನಂತರ ಯಜಮಾನ ನಲ್ಕೆಯ ಹೆಂಗಸರಿಗೆ ಗೆರಸೆಯಲ್ಲಿ ಅಕ್ಕಿ ಕಾಳು ವಸ್ತ್ರ ಹಾಗೂ ಹಣ ನೀಡುವ ಮರ್ಯಾದೆ ಇದೆ.
ಕೇರಳದ ತೆಂಕಣ ಜಿಲ್ಲೆಗಳಲ್ಲಿ ಶ್ರಾವಣ ಮಾಸದಲ್ಲಿ ಸರ್ಪಕಾಲ (ನಾಗವನ) ಗಳಲ್ಲಿ ಆದಿವಾಸಿ ಹೆಂಗಸರು ಸರ್ಪಪಾಟು (ಹಾವಿನ ಹಾಡು) ಹಾಡಿ ಕುಣಿಯುತ್ತಾರೆ. ಕಾಸರಗೋಡು ಜಿಲ್ಲೆಯ ಕೆಲವು ದೇವಾಲಯಗಳಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದೊಂದಿಗೆ ಪಾಟು ( ಹಾಡು) ಉತ್ಸವಗಳು ಈಗಲೂ ಆಚರಣೆಯಲ್ಲಿದೆ.
ಕಡಾರು ವಿಶ್ವನಾಥ್ ರೈ