ಬದುಕಿನ ಅವಧಿ ಸೀಮಿತವಾದುದು. ಈ ಅವಧಿಯನ್ನು ಸಮರ್ಥವಾಗಿ ಬಳಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ. ಬದುಕಿನಲ್ಲಿ ನಾನಾ ಅವಕಾಶಗಳು ಸಿಗುತ್ತಲೇ ಇರುತ್ತದೆ. ಆದರೆ ಬಹಳಷ್ಟು ಮಂದಿ ಈ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ಜಾಣತನ ಪ್ರದರ್ಶಿಸುವುದಿಲ್ಲ. ಮುಂದೊಂದು ದಿನ ಇಂತಹ ಅವಕಾಶ ಬಳಸಿಕೊಂಡರಾಯಿತು ಎಂಬ ಉದಾಸೀನ ಮನೋಭಾವದಿಂದಲೋ, ಇಂತಹ ಅವಕಾಶ ತಮ್ಮಂತಹವರಿಗಿಲ್ಲ ಎಂಬ ಕೀಳರಿಮೆಯಿಂದಲೋ, ಆಗಾಗ ಇಂತಹ ಅವಕಾಶಗಳು ಬರುತ್ತಲೇ ಇರುತ್ತವೆ ಎಂಬ ಅಪನಂಬಿಕೆ ಅಥವಾ ಅತಿ ವಿಶ್ವಾಸದಿಂದಲೋ ನಿರಾಯಾಸವಾಗಿ ದೊರೆತ ಚಿನ್ನದಂತಹ ಅವಕಾಶಗಳನ್ನು ಕಡೆಗಣಿಸುವುದು ಮೂರ್ಖತನದ ಪರಮಾವಧಿಯಲ್ಲದೆ ಮತ್ತಿನ್ನೇನು? ಅವಕಾಶಗಳು ಯಾರಿಗಾಗಿಯೂ ಕಾಯುವುದಿಲ್ಲ. ಅವು ಬಂದಾಗ ಬಳಸಿಕೊಳ್ಳಬೇಕು. ಬದುಕಿನಲ್ಲಿ ಯಶಸ್ಸು ಗಳಿಸಿದವರೆಲ್ಲ ಈ ರೀತಿ ಅವಕಾಶಗಳನ್ನು ಬಳಸಿಕೊಂಡೇ ಮುಂದೆ ಬಂದಿರುತ್ತಾರೆ.
ರಜಾ ದಿನಗಳಲ್ಲಿ ಬಂಧುಗಳ ಮನೆಗೆ ತೆರಳಿದಾಗ ಅಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ ನಡೆಯುತ್ತದೆ ಅನ್ನಿ ನೀವೂ ಅದರಲ್ಲಿ ಆಸಕ್ತಿಯಿಂದ ಭಾಗವಹಿಸಿ ನಿಮಗೊಂದು ಅಪೂರ್ವ ಅನುಭವವನ್ನು ಆ ಭಾಗವಹಿಸುವಿಕೆ ಕೊಡುತ್ತದೆ. ನಿಮ್ಮ ಮನೆಯ ಸಮೀಪ ಸಂಗೀತ, ನೃತ್ಯ, ಕರಕುಶಲ ವಸ್ತುಗಳ ತಯಾರಿ, ಯೋಗಾಭ್ಯಾಸ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಶಿಬಿರಗಳು, ತರಗತಿಗಳು ನಡೆಯುತ್ತಿದ್ದರೆ, ನಿಮ್ಮ ಬಿಡುವಿನ ಸಮಯದಲ್ಲಿ ಈ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ ಇವೆಲ್ಲ ನಮಗೇಕೆ ಎಂಬ ನಿರ್ಲಕ್ಷ್ಯ ಸಲ್ಲದು. ಈಗ ನೀವು ಪಡೆದ ತರಬೇತಿ ಮುಂದೊಂದು ದಿನ ಉಪಯೋಗಕ್ಕೆ ಬರಬಹುದು. ನಮಗೇ ಬೇಕು ಎಂದಾಗ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಹೋದಾಗಲೂ ಕೆಲವು ಬಾರಿ ಲಭ್ಯವಾಗಲಿಕ್ಕಿಲ್ಲ. ಆದುದರಿಂದ ಸಿಕ್ಕಿದ ಅವಕಾಶಗಳನ್ನು ಪೂರ್ಣವಾಗಿ ಉಪಯೋಗಿಸಿ ನಗದೀಕರಿಸುವುದು ಬುದ್ಧಿವಂತರ ಲಕ್ಷಣ.
ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಅಧ್ಯಾಪಕರು ಹಲವು ವಿದ್ಯಾರ್ಥಿಗಳಿಗೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ, ಪ್ರೋತ್ಸಾಹ ನೀಡುತ್ತಾರೆ. ಆದರೆ ಈ ಅವಕಾಶಗಳನ್ನು ಸವಾಲಾಗಿ ಸ್ವೀಕರಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತರುವವರು ಕೆಲವೇ ಕೆಲವು ಮಂದಿ, ಬಹುಮಾನ ಬಾರದು ಎಂಬ ಕಾರಣಕ್ಕಾಗಿ ಸ್ವರ್ಧೆಗಳಲ್ಲಿ ಭಾಗವಹಿಸದಿರುವುದು ಇದ್ದಾರೆ. ಆದರೆ ಬಹುಮಾನ ಬರುತ್ತದೋ ಇಲ್ಲವೋ ಎಂಬುದನ್ನು ತಿಳಿಯಬೇಕಾದರೆ ಮೊದಲು ಸ್ವರ್ಧೆಯಲ್ಲಿ ಭಾಗವಹಿಸಬೇಕಾಗುತ್ತದೆ. ಒಂದೆರಡು ಬಾರಿ ಸೋತರೂ ಮುಂದೆ ಗೆಲುವಿನ ಅವಕಾಶ ಬರುತ್ತದೆ. ಸೋಲು ಗೆಲುವಿನ ಮೂಲ, ಭಾಗವಹಿಸಿದ ಮೊದಲ ಅವಕಾಶದಲ್ಲಿ ಪ್ರಥಮ ಬಹುಮಾನ ಬಂದೇ ಬರಬೇಕು ಎಂದು ನಿರೀಕ್ಷಿಸಲಾಗದು. ಅವಕಾಶವನ್ನು ಉಪಯೋಗಿಸಿಕೊಂಡು ಭಾಗವಹಿಸುವುದನ್ನು ರೂಢಿಸಿಕೊಳ್ಳಬೇಕು. ಈಜು ಬರಬೇಕಾದರೆ ನೀರಿಗಿಳಿಯಲೇಬೇಕು.
ಎಲ್ಲ ವಯೋಮಾನದವರೂ ಅವಕಾಶ ಬಳಸಿಕೊಳ್ಳುವುದರಲ್ಲಿ ತಪ್ಪುವುದುಂಟು. ತಾವು ಅವಕಾಶ ನಿರ್ಲಕ್ಷಿಸುವದರೊಂದಿಗೆ ಇತರರೂ ಅವಕಾಶ ವಂಚಿತರಾಗುವಂತೆ ಮಾಡುವವರಿದ್ದಾರೆ. ನಾವು ನಾಲ್ಕು ಮಂದಿ ಒಮ್ಮೆ ಪ್ರವಾಸಕ್ಕೆ ಹೋಗಿದ್ದೆವು. ಅಲ್ಲೊಂದು ಕಲಾತ್ಮಕ ಕೃತಿಗಳುಳ್ಳ ಪ್ರವಾಸಿತಾಣವಿತ್ತು. ನಮ್ಮಲ್ಲೊಬ್ಬ ತನಗೆ ಆಯಾಸವಾಗಿದೆ ಎಂದೂ, ಆ ತಾಣದ ಪ್ರವಾಸ ಪ್ರಯಾಣಿಕರವಾದುದೆಂದೂ ಇತರರನ್ನೂ ಆ ತಾಣ ವೀಕ್ಷಿಸದಂತೆ ತಡೆದರು. ಆ ಕಾರಣಕ್ಕಾಗಿ ಇನ್ನೊಮ್ಮೆ ಬರುವ ಸಂದರ್ಭವಾಗಲಿ, ಈಗ ಅಲ್ಲಿಗೆ ಬಂದಿರುವುದರಿಂದ ದೊರೆತಿರುವ ಆ ತಾಣದ ವೀಕ್ಷಣೆಯ ಅವಕಾಶ ಇನ್ನೊಮ್ಮೆ ದೊರೆಯಬಹುದೆಂಬ ಭರವಸೆಯಾಗಲಿ ಇರಲಿಲ್ಲ. ನಾನಂತೂ ಇದ್ದ ಸಮಯದಲ್ಲಿ ಆ ಸುಂದರ ದೃಶ್ಯಗಳ ದರ್ಶನಕ್ಕೆ ಮುಂದಾದೆ. ಇನ್ನೊಬ್ಬರೂ ಜತೆಗೂಡಿದರು. ನಾವು ಹಿಂದೆ ಬಂದ ಮೇಲೆ ಉಳಿದಿಬ್ಬರು ತಮ್ಮ ಹೆಡ್ಡುತನಕ್ಕೆ ವ್ಯಥೆಪಟ್ಟುದ್ದನ್ನು ಗಮನಿಸಿದೆ. ಮತ್ತೆ ವೀಕ್ಷಿಸಬೇಕೆಂದರೆ ಅವರಿಗೆ ಸಮಯವಿರಲಿಲ್ಲ ಕತ್ತಲೂ ಆಗಿತ್ತು.
ಸಂಧ್ಯಾಕುಮಾರಿ ಜಿಲ್ಲಾಮಟ್ಟದಲ್ಲಿ ಭಾವಗೀತೆಯ ಸ್ವರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಳು. ಆದರೆ ಅನಂತರದ ವಲಯ ಮಟ್ಟದ ಸ್ವರ್ಧೆಯಲ್ಲಿ ಆಕೆಗೆ ದ್ವಿತೀಯ ಸ್ಥಾನ ಬಂತು. ಇದನ್ನೇ ನೆಪವಾಗಿಟ್ಟುಕೊಂಡು ಆಕೆಯ ಹೆತ್ತವರು ಆಕೆಗೆ ರಾಜ್ಯಮಟ್ಟದಲ್ಲಿ ಭಾಗವಹಿಸಲು ಅನುಮತಿ ನೀಡಲಿಲ್ಲ. ಹೆತ್ತವರ ಮನ ಒಲಿಸಿ ಆಕೆ ರಾಜ್ಯಮಟ್ಟದ ಸ್ವರ್ಧೆಯಲ್ಲಿ ಭಾಗವಹಿಸುವಂತೆ ಮಾಡಲು ನನಗೆ ತುಂಬ ಕಷ್ಟವಾದರೂ ನನ್ನ ಪ್ರಯತ್ನದಲ್ಲಿ ಯಶಸ್ವಿಯಾದೆ. ಆಕೆಗೆ ಆ ರಾಜ್ಯಮಟ್ಟದ ಸ್ವರ್ಧೆಯಲ್ಲಿ ಪ್ರಥಮ ಬಹುಮಾನ ಬಂತು. ಅವಕಾಶ ಬಳಸಿಕೊಳ್ಳದಿರುತ್ತಿದ್ದರೆ ಎಂತಹ ಒಂದು ಕೀರ್ತಿ ಕೈತಪ್ಪಿ ಹೋಗುತ್ತಿತ್ತು ಎಂಬ ಅರಿವು ಆಕೆಗೆ ಆಗಿದೆ. ಹಾಗಾಗಿ ಆಕೆ ತನ್ನ ಕೃತಜ್ಞತೆಯನ್ನು ಈಗಲೂ ಭೇಟಿಯಾದಾಗ ಸ್ಮರಿಸಿಕೊಳ್ಳುವುದುಂಟು. ಅವಕಾಶ ಬಳಸಿಕೊಳ್ಳುವ ಬುದ್ಧಿವಂತರಾಗಿ, ಅವಕಾಶ ನಿರ್ಲಕ್ಷಿಸುವ ಹೆಡ್ಡರಾಗಬೇಡಿ. ಸಿಕ್ಕಿದ ಅವಕಾಶಗಳನ್ನು ಬಿಟ್ಟುಕೊಂಡು ಮತ್ತೆ ಕೊರಗಬೇಡಿ. ಸೋಮಾರಿಗಳನ್ನು ದೇವರೂ ಮೆಚ್ಚಲಾರ.
ಡಾ. ತಲ್ಲೂರು ಶಿವರಾಮ ಶೆಟ್ಟಿ ಉಡುಪಿ