ಸಾಧನೆ ಎನ್ನುವುದು ಹುಟ್ಟಿನಿಂದಲೇ ಬರುವುದಿಲ್ಲ. ಅದು ನಿರಂತರ ಪ್ರಯತ್ನ, ಪರಿಶ್ರಮದ ಫಲಶ್ರುತಿಯಾಗಿರುತ್ತದೆ. ಹುಟ್ಟಿದ ಮಗುವಿಗೆ ಮುಂದೆ ತಾನೇನಾಗುತ್ತೇನೆ ಎಂಬ ಕಲ್ಪನೆಯೂ ಇರುವುದಿಲ್ಲ. ಆದರೆ ಆ ಮಗು ಬೆಳೆಯುತ್ತಾ ಹೋದಂತೆ ಸನ್ಮಾರ್ಗದಲ್ಲಿ ನಡೆದಾಗ, ನಿರ್ದಿಷ್ಟ ಗುರಿಯನ್ನು ಮುಟ್ಟುವ ಛಲವಿದ್ದಾಗ ಏನಾದರೂ ಸಾಧನೆ ಮಾಡುವುದು ಸಾಧ್ಯವಾಗುತ್ತದೆ. ಇದಕ್ಕೆ ಕಷ್ಟಪಡಬೇಕು. ನಾವು ಕನಸು ಕಾಣಬೇಕು. ಅದನ್ನು ನನಸಾಗಿಸುವ ಹಂಬಲವಿರಬೇಕು. ನಮ್ಮಲ್ಲಿ ಆಕಾಂಕ್ಷೆಗಳಿರಬೇಕು. ವಿದ್ಯಾಕಾಂಕ್ಷಿ, ಉದ್ಯೋಗಾಕಾಂಕ್ಷಿ, ಉದ್ಯಮಕಾಂಕ್ಷಿ ರವಿ ಶೆಟ್ಟಿಯವರಲ್ಲಿ ಈ ಎಲ್ಲಾ ಮಹತ್ವಾಕಾಂಕ್ಷೆಗಳು ಇದ್ದುದರಿಂದಲೇ ಅವರು ಇಷ್ಟು ಎತ್ತರಕ್ಕೆ ಏರುವುದು ಸಾಧ್ಯವಾಯಿತೆನ್ನಬಹುದು. ಸಾಧನೆಯ ಹಾದಿಯಲ್ಲಿ ಕಷ್ಟ ಸುಖವೆಂಬ ಕಲ್ಲುಮುಳ್ಳುಗಳನ್ನು ತುಳಿದು ತನ್ನ ಜೀವನದ ಹಾದಿಯನ್ನು ಹೂವಿನ ಹಾಸಿಗೆಯನ್ನಾಗಿ ಮಾಡಿಕೊಂಡವರು ಪರಿಶ್ರಮಿ ಶ್ರೀಯುತ ಡಾ ರವಿ ಶೆಟ್ಟಿ ಕತಾರ್ ಅವರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಡಂಬೈಲ್ ತಿಮ್ಮಪ್ಪ ಶೆಟ್ಟಿ ಹಾಗೂ ದೋಣಿಂಜೆ ಗುತ್ತು ಸರೋಜಿನಿ ಶೆಟ್ಟಿಯವರ 5 ಮಕ್ಕಳಲ್ಲಿ ಹಿರಿಯ ಪುತ್ರನಾಗಿ 1963 ರಲ್ಲಿ ಜನಿಸಿದರು. ಮನೆಯಲ್ಲಿ ಹಿರಿ ಮಗನಾದ್ದರಿಂದ ಜವಾಬ್ದಾರಿ ಎಂದರೇನು ಎನ್ನುವುದನ್ನು ಎಲ್ಲವೆಯಲ್ಲಿಯೇ ಕಲಿತರು. ತನ್ನ ತಮ್ಮ, ತಂಗಿಯಂದಿರಿಗೊಂದು ನೆಲೆ ಒದಗಿಸುವ ಭಾರ ಹೆಗಲ ಮೇಲಿತ್ತು. ಇದು ಅವರನ್ನು ಬಹುಶಃ ಪರಿಶ್ರಮದ ಹಾದಿಗೆ ಎಳೆಯಿತು ಎನ್ನಬಹುದು. ತನಗಾಗಿ ಕಷ್ಟ ಪಟ್ಟು ದುಡಿದವರು ನಮ್ಮ ಸುತ್ತ ಮುತ್ತ ಬಹಳಷ್ಟು ಜನರಿದ್ದಾರೆ. ಆದರೆ ತಣ್ಣವರಿಗಾಗಿ ಕಷ್ಟ ಪಟ್ಟು ಅವರ ಸುಖದಲ್ಲಿ ಸಂಭ್ರಮಿಸುವ ಅಪರೂಪದ ವ್ಯಕ್ತಿತ್ವ ರವಿ ಶೆಟ್ಟಿಯವರದ್ದು.
ಶಿಕ್ಷಣ : ಮೂಡಂಬೈಲು ಪ್ರೈಮರಿ ಶಾಲೆಯಲ್ಲಿ ಪ್ರಾರ್ಥಮಿಕ ಶಿಕ್ಷಣ, ದೀಪಿಕಾ ಹೈಸ್ಕೂಲಿನಲ್ಲಿ ಎಸ್.ಎಸ್. ಎಲ್. ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶಾಲೆಯಲ್ಲಿ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾದದ್ದು ಅವರ ಯಶಸ್ಸಿನ ಮೊದಲ ಹೆಜ್ಜೆ. ಕಲಿಕೆಯಲ್ಲಿ ಸದಾ ಮುಂದಿದ್ದ ಶೆಟ್ಟಿಯವರಿಗೆ ಓದಿನಲ್ಲಿ ಅಪಾರ ಒಲವು. ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಉತ್ತಮ ಶ್ರೇಣಿಯಲ್ಲಿ ಪಾಸಾದ ನಂತರ ಇಂಜಿನಿಯರ್ ಕ್ಷೇತ್ರವನ್ನು ಆರಿಸಿಕೊಂಡರು. ಧಾರವಾಡದ ಪ್ರಸಿದ್ಧ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶವನ್ನು ಪಡೆದು ಪದವಿ (ಬಿ.ಇ.ಮೆಕ್ಯಾನಿಕಲ್) ಯನ್ನು ಮುಗಿಸಿದರು.
ಉದ್ಯೋಗಿಯಾಗಿ : ಆಗಿನ ಕಾಲದಲ್ಲಿ ಇಂಜಿನಿಯರ್ ಆಗುವುದೆಂದರೆ ಅದು ಅಷ್ಟು ಸುಲಭದ ಮಾತಾಗಿರಲಿಲ್ಲ. ಈಗಿನ ಮಕ್ಕಳಂತೆ ಬೇಕಾದ ಸವಲತ್ತುಗಳು ಆಗ ಇರಲಿಲ್ಲ. ಅಲ್ಲದೆ ರವಿ ಶೆಟ್ಟಿಯವರ ಮೇಲೆ ಜವಾಬ್ದಾರಿಯೂ ತುಂಬಾ ಇತ್ತು. ಆದರೆ ಅವರು ಆಶಾವಾದಿ, ಛಲವಾದಿ, ಇಂಜಿನಿಯರ್ ಪದವಿ ಪಡೆದ ಅವರ ಕಠಿಣ ಪ್ರರಿಶ್ರಮಕ್ಕೆ ತಕ್ಕ ಫಲವೆಂಬಂತೆ 1985 ರಲ್ಲಿ ಮಂಗಳೂರಿನಲ್ಲಿ ಸೈಮನ್ ಕಾವರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಇಂಜಿನಿಯರಿಂಗ್ ಪಧವೀದರರಿಗೆ ತರಬೇತಿ ಪಡೆಯುವ ಅವಕಾಶ ದೊರೆಯಿತು. ಅಲ್ಲಿ ಅವರು ಭಿನ್ನವಾದ ಅನುಭವವನ್ನು ಪಡೆದರು. ಜೀವನದಲ್ಲಿ ನಾವು ಬೇರೆ ಬೇರೆ ಸಂದರ್ಭದಲ್ಲಿ ಪಡೆಯುವ ಅನುಭವಗಳೇ ನಮ್ಮ ಕೈ ಹಿಡಿದು ಮುನ್ನಡೆಸುತ್ತವೆ. ಮುಂದೆ ಅವರು 1987 ರಲ್ಲಿ ಮುಂಬಾಯಿಗೆ ಆಗಮಿಸಿ ಅಲ್ಲಿ ಟಾಟಾ ಪ್ರೊಜೆಕೆಟ್ಸ್ ನಲ್ಲಿ ವೃತ್ತಿ ನಿರತರಾದರು. ಅಲ್ಲಿಂದ ಅವರು ತನ್ನ ಯೋಚನೆ ಮತ್ತು ಯೋಜನೆಗಳೊಂದಿಗೆ ಭಾರತದಾದ್ಯಂತ ಪ್ರವಾಸ ಕೈಗೊಂಡರು. ಕೊನೆಗೆ ಹೈದರಾಬಾದಿನಲ್ಲಿ 1997 ರವರೆಗೆ ನೆಲೆನಿಂತರು. ತಾವು ಬದುಕನ್ನು ಕಟ್ಟಿಕೊಂಡು ಅಲ್ಲಿ ಇಲ್ಲಿ ವಲಸೆ ಹೋಗುವುದು ಸರ್ವೇ ಸಾಮಾನ್ಯ ವಿಧಿ ನಮಗಾಗಿ ಯಾವ ಪ್ರದೇಶವನ್ನು ಆರಿಸಿರುತ್ತದೋ ಅಲ್ಲಿಗೆ ಹೇಗಾದರೂ ಹೋಗುವ ಪ್ರೇರಣೆ ದೊರೆತೇ ತೀರುತ್ತದೆ. ಅದೇ ರೀತಿ ರವಿ ಶೆಟ್ಟಿಯವರು ಕೆಲವೊಂದು ವೈಯಕ್ತಿಕ ಹಾಗೂ ಉದ್ಯೋಗದ ಕಾರಣದಿಂದ ದೋಹಾ-ಕತಾರ್ ಗೆ ತೆರಳಿದರು. ಅಲ್ಲಿನ ಪ್ರತಿಷ್ಠಿತ ಕಂಪನಿ ಮನ್ನಯ್ (ಮೆಕಾನ್) ಕಾರ್ಪೋರೇಷನ್ನಿನಲ್ಲಿ ಹಿರಿಯ ಅಭಿಯಂತರರಾಗಿ ವೃತ್ತಿಗೆ ಸೇರಿಕೊಂಡರು. ನಾವು ಎಲ್ಲೇ ಹೋಗಲಿ, ಹೇಗೇ ಇರಲಿ ಅಲ್ಲಿ ನಮ್ಮ ಸಮರ್ಪಣಾ ಭಾವ, ಕಾರ್ಯನಿಷ್ಠೆ ಅತೀ ಅಗತ್ಯ. ರವಿ ಶೆಟ್ಟಿಯವರು ಇದನ್ನು ಅರಿತಿದ್ದರು. ಇದು ಅವರಿಗೆ ಜೀವನ ಕಲಿಸಿದ ಪಾಠವೆನ್ನಬಹುದು. ಇದು ಅವರ ಜೀವನದಲ್ಲಿ ಮಹತ್ತರವಾದ ತಿರುವನ್ನು ತರುವಲ್ಲಿ ಯಶಸ್ಸಾಯಿತು. ಅಲ್ಲಿ ಅವರಿಗೆ ಪ್ರಪೋಸಲ್ಸ್ ಮ್ಯಾನೇಜರ್ ಆಗಿ ಭಡ್ತಿ ದೊರೆಯಿತು. ಶಿಕ್ಷಣ ಪ್ರೇಮಿಯಾಗಿರುವ ಶೆಟ್ಟಿಯವರು ಈ ಎಲ್ಲಾ ಕಾರ್ಯದ ಒತ್ತಡಗಳ ನಡುವೆಯೂ ಎಂ.ಬಿ.ಎ ವೃತ್ತಿಪರ ಪದವಿಯನ್ನು ಪಡೆದುಕೊಂಡರು.
ಉದ್ಯಮಿಯಾಗಿ : ತನ್ನ ಉದ್ಯೋಗದಲ್ಲಿ ಹಂತ ಹಂತವಾಗಿ ಮೇಲೇರುತ್ತಿದ್ದರೂ ತೃಪ್ತಿ ಪಡೆದ ಶೆಟ್ಟಿಯವರು ಮುಂದೆ ಸ್ವಂತ ಉದ್ಯಮವನ್ನು ಆರಂಭಿಸುತ್ತ ತನ್ನ ಮನಸ್ಸನ್ನು ಕೇಂದ್ರೀಕರಿಸಿದರು. ತಾನೇನೋ ಒಳ್ಳೆಯ ಉದ್ಯೋಗದಲ್ಲಿದ್ದೇನೆ. ಆದರೆ ಅದೆಷ್ಟೋ ಜನರು ಉದ್ಯೋಗವಿಲ್ಲದೆ ಸಹಾಯಕ್ಕಾಗಿ ಯಾಚಿಸುವಾಗ ನೊಂದ ಮನ ಸ್ವಂತ ಉದ್ಯಮವನ್ನು ಆರಂಭಿಸಿ ಇತರರಿಗೆ ಉದ್ಯೋಗ ನೀಡುವಂತೆ ಪ್ರೆರೇಪಿಸಿತು. ಪರಿಣಾಮವಾಗಿ ಹೈದರಾಬಾದಿನಲ್ಲಿ ಕೆಲವು ವರ್ಷ ವೃತ್ತಿಯಲ್ಲಿದ್ದರಿಂದ ಅಲ್ಲಿಯೇ ಎ ಗ್ರೇಡ್ ಶಾಖಾಹಾರಿ ರೆಸ್ಟೋರೆಂಟನ್ನು ಆರಂಭಿಸಿದರು. ದೇಶ ವಿದೇಶಗಳಲ್ಲಿ ಒಬ್ಬ ಮೆಕ್ಯಾನಿಕ್ ಇಂಜಿನಿಯರ್ ಆಗಿ ಅನುಭವಿಸಿದ್ದ ಶೆಟ್ಟಿಯವರು ನಂತರ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ 2005 ರಲ್ಲಿ ಅಡ್ವಾನ್ಸ್ ಡ್ ಟೆಕ್ನಿಕಲ್ ಸರ್ವೀಸಸ್ ಕಂಪನಿ (ATS) ಸ್ಥಾಪಿಸಿದರು. ಇದರ ಮುಖ್ಯ ಉದ್ದೇಶ ಉದ್ಯೋಗಾವಕಾಶವನ್ನು ಒದಗಿಸುವುದು ಹಾಗೂ ಕತಾರ್ ನ ಕೈಗಾರಿಕೆಗಳಿಗೆ ಉತ್ತಮ ಸೇವೆಯನ್ನು ಒದಗಿಸುವುದು. ಏಕವ್ಯಕ್ತಿಯ ದೃಢ ಸಂಕಲ್ಪದಿಂದ ಆರಂಭವಾದ ಈ ಸಂಸ್ಥೆ ಇಂದು ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಿದೆ. ಇಲ್ಲಿ ದಕ್ಷಿಣ ಕನ್ನಡದ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ನರು ಕಾರ್ಯ ನಿರ್ವಹಿಸುತ್ತಿರುವುದು ಇನ್ನೊಂದು ವಿಶೇಷ. ಆ ಜಾತಿ ಈ ಜಾತಿಯೆಂದು ಬಡಿದಾಡುತ್ತಿರುವ ಈ ಕಾಲದಲ್ಲಿ ಎಲ್ಲ ಜಾತಿ ಮತ ಧರ್ಮದವರನ್ನು ತನ್ನವರೆಂದು ಬಗೆದು ಎಲ್ಲರೊಡನೆ ಬೆರೆತು ಬಾಳುವ ಭಾವಜೀವಿ ಶೆಟ್ಟಿಯವರು. ಎಟಿಎಸ್ ಸಂಸ್ಥೆ ಇಂದು ಏನೆಲ್ಲಾ ಸಾಧನೆ ಮಾಡುತ್ತಿದೆಯೋ ಅದರ ಹಿಂದೆ ಇಲ್ಲಿ ಕೆಲಸ ಮಾಡುವ ಕಾರ್ಮಿಕರ ಬೆವರಿದೆ ಎನ್ನುವಾಗ ಅವರ ಮೃದು ಹೃದಯದ ಅರಿವಾಗುತ್ತದೆ.
“ಉದ್ಯೋಗ, ಉದ್ದಿಮೆಯ ಕನಸು ಯಾವತ್ತೂ ನನ್ನಲ್ಲಿತ್ತು. ಆದರೆ ನನ್ನ ಊರು, ನನ್ನ ಜನ, ನನ್ನ ಸಮಾಜ ಕುರಿತಾದ ಕಾಳಜಿ ಹೆಚ್ಚಿತ್ತು. ನನ್ನ ಸಾಮಾಜಿಕ ಜವಾಬ್ದಾರಿ ಏನು ಎಂಬ ಅರಿವಿತ್ತು. ಆದ್ದರಿಂದ ನನ್ನಿಂದಾದಷ್ಟು ಇತರರಿಗೆ ಸಹಾಯ ಸಹಕಾರ ನೀಡಬೇಕೆಂಬ ಇಚ್ಛೆ ನನ್ನಲ್ಲಿತ್ತು” ಎನ್ನುವ ರವಿ ಶೆಟ್ಟಿಯವರು ತನ್ನ ಬಳಿಗೆ ಕಷ್ಟ ಎಷ್ಟು ಕೈಚಾಚಿದವರನ್ನು ಬರಿಗೈಯಲಿ ಎಂದಿಗೂ ಕಳಿಸಿದ ಉದಾಹರಣೆಗಳಿಲ್ಲ. ಇಲ್ಲಿ ಮುಖ್ಯವಾಗಿ ಬೇಕಾಗುವುದು ಹಣಕ್ಕಿಂತ ಧೈರ್ಯ, ಆತ್ಮವಿಶ್ವಾಸ. ಈ ಸಂಸ್ಥೆ ಈಗ ಕತಾರ್ ದೇಶದಲ್ಲಿ ಕೈಗಾರಿಕೆಗಳಿಗೆ ವೃತ್ತಿಪರ ಮತ್ತು ತಾಂತ್ರಿಕ ಸೇವೆಯನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ ಎನ್ನುವಾಗ ಹೆಮ್ಮೆಯಾಗುತ್ತದೆ. ತುಳುನಾಡಿನಲ್ಲಿ ಹುಟ್ಟಿದ ಒಂದು ಮಗು ಮುಂದೆ ಬೆಳೆದು ದೊಡ್ಡವನಾದಂತೆ ಕಾತಾರ್ ನಂತಹ ದೇಶದಲ್ಲಿ ಉದ್ದಿಮೆಯಲ್ಲಿ ಯಶಸನ್ನು ಕಾಣುವುದೆಂದರೆ ಅದು ಅಷ್ಟಸುಲಭದ ಮಾತಲ್ಲ. ಅವರು ಈ ಸಂಸ್ಥೆಯ ಮೂಲಕ ಯಂತ್ರಗಳ ವಿನ್ಯಾಸವನ್ನು ಮಾಡುವುದು, ವಿದ್ಯುತ್ ಪ್ರತಿಷ್ಠಾಪನಾ ಯೋಜನೆಗಳನ್ನು ಹಮ್ಮಿಕೊಂಡು ಆ ಕುರಿತು ಸೇವೆಯನ್ನು ಒದಗಿಸುವುದು, ವಿಶೇಷ ಪರೀಕ್ಷಾ ಉಪಕರಣಗಳು ಮತ್ತು ತಾಂತ್ರಿಕ ನೆರವನ್ನು ನೀಡುವಲ್ಲಿ ಈ ಸಂಸ್ಥೆ ಜನಪ್ರಿಯವಾಗಿದೆ.2011 ರಲ್ಲಿ ಅಸೋಸಿಯೇಟೆಡ್ ಟೆಕ್ನಿಕಲ್ ಸರ್ವಿಸಸ್ ಎಂಬ ಕಂಪೆನಿಯಲ್ಲಿ ರವಿ ಶೆಟ್ಟಿಯವರು ಆರಂಭಿಸಿದರು. ಅಲ್ಲದೆ ಬೆಂಗಳೂರು ಮತ್ತು ಹೈದರಾಬಾದಿನಲ್ಲಿ ಮಾಡರ್ನ್ ಸೇಪ್ಪೀ ಗ್ಲಾಸ್ ಮತ್ತು ಸಿ.ಪಿ. ಏಜನ್ಸೀಸ್ ನ ನಿರ್ದೇಶಕರಾಗಿರುವುದು ಹೆಗ್ಗಳಿಕೆಯ ಮಾತು. ಈ ಕಂಪೆನಿಯ ಮೂಲಕ ಸಾವಿರಾರು ಜನರಿಗೆ ಉದ್ಯೋಗವಕಾಶವನ್ನು ಕಲ್ಪಿಸಿದ ರವಿ ಶೆಟ್ಟಿಯವರು ಅದೆಷ್ಟೋ ನಿರುದ್ಯೋಗಿಗಳ ಪಾಲಿಗೆ ಆಶ್ರಯದಾತ ರೆನಿಸಿಕೊಂಡಿದ್ದಾರೆ. ಒಬ್ಬ ವ್ಯಕ್ತಿ ಮನಸು ಮಾಡಿದರೆ ಏನೆಲ್ಲಾ ಸಾಧಿಸಬಹುದು ಎನ್ನುವುದಕ್ಕೆ ರವಿ ಶೆಟ್ಟಿಯವರು ಉತ್ತಮ ನಿದರ್ಶನ.
ಸಮಾಜ ಸೇವಕರಾಗಿ : ರವಿ ಶೆಟ್ಟಿಯವರು ಉದ್ಯೋಗ, ಉದ್ಯಮದಲ್ಲಿ ಮಾತ್ರ ಮುಂಚೂಣಿಯಲ್ಲಿರುವವರಲ್ಲ. ತಮ್ಮ ಉದ್ಯಮ ಕ್ಷೇತ್ರದ ಅಭಿವೃದ್ಧಿಯತ್ತಲೇ ಮುಳುಗಿರುವ ಅದೆಷ್ಟೋ ಜನರ ನಡುವೆ ರವಿ ಶೆಟ್ಟಿಯವರು ಭಿನ್ನವಾಗಿ ನಿಲ್ಲುತ್ತಾರೆ. ಅವರು ಸಮಾಜ ಸೇವೆಯಲ್ಲಿಯೂ ಮುಂದಿದ್ದಾರೆ. ಅವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದುಕೊಂಡು ಅಲ್ಲಿ ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಾಗಿಡುತ್ತಿರುವುದು ಸಾಮಾನ್ಯದ ಮಾತಲ್ಲ. ಶೆಟ್ಟಿಯವರು 1992 ರಲ್ಲಿ ಟಾಟಾ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಹೈದರಾಬಾದ್ ನಲ್ಲಿ ಜನರಲ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಸಂಘಟಕರಾಗಿ : ನಮ್ಮಲ್ಲಿ ಸ್ವಲ್ಪ ಶ್ರೀಮಂತಿಕೆ ಬಂದರೆ ಹತ್ತಿರವಿದ್ದೂ ದೂರ ನಿಲ್ಲುವಷ್ಟು ಅಹಂ ನಮ್ಮನ್ನಾವರಿಸಿರಿತ್ತದೆ. ಅದಕ್ಕೆ ಅಪವಾದವೆಂಬತೆ ಬಡವ ಬಲ್ಲಿದನೆಂಬ ಭೇದವಿಲ್ಲದೆ ಎಲ್ಲರೊಂದಿಗೆ ಬೆರೆತು ಬಾಳುವ ಸ್ವಭಾವ ರವಿ ಶೆಟ್ಟಿಯವರದ್ದು. ಅವರಲ್ಲಿ ಮುಂದಾಳತ್ವ ವಹಿಸಿಕೊಂಡು ಕಾರ್ಯವನ್ನು ನೆರವೇರಿಸುವ ಚಾತುರ್ಯವಿತ್ತು. ಇದಕ್ಕೆ ಅವರ ಬಾಲ್ಯ, ಮನೆಯ ಪರಿಸರ, ಶಿಕ್ಷಣವೂ ಕಾರಣವಾಗಿರಬಹುದು. ಅವರೊಬ್ಬ ಉತ್ತಮ ಸಂಘಟಕ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ದೂರದ ಕತಾರ್ ನಲ್ಲಿಯೂ ಸಾಂಸ್ಕೃತಿಕ ಅಸ್ಮಿತೆಯನ್ನು ಮೆರೆದಿದ್ದಾರೆ. ರವಿ ಶೆಟ್ಟಿಯವರು ಕತಾರ್ ನಲ್ಲಿದ್ದರೂ ಸಾಮಾಜಿಕ, ಸಾಂಸ್ಕೃತಿಕ ನೇತಾರರಾಗಿ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿರುವುದು ಶ್ಲಾಘನೀಯ ಸಂಗತಿ. ತಾನು ಹುಟ್ಟಿನ ತುಳುನಾಡಿನ ಮಣ್ಣಿನ ಸೊಗಡನ್ನು ತಾನು ನೆಲೆನಿಂತ ಜಾಗದಲ್ಲಿಯೂ ಪಸರಿಸಬೇಕೆಂಬ ಅದಮ್ಯವಾದ ಬಯಕೆಯಿಂದ ಕತಾರ್ ತುಳುಕೂಟದ ಸ್ಥಾಪಕ ಸದಸ್ಯರಾಗಿ ಸೇರಿಕೊಂಡರು. ಮುಂದೆ ಒಂದೊಂದೇ ಹುದ್ದೆಯನ್ನು ಅಲಂಕರಿಸಿದ ಶೆಟ್ಟಿಯವರು ತುಳುಕೂಟದ ಉಪಾಧ್ಯಕ್ಷರಾಗಿ, ತದನಂತರ ಮೂರು ಬಾರಿ ತುಳುಕೂಟದ ಅಧ್ಯಕ್ಷರಾಗಿ ಆಯ್ಕೆಯಾದದ್ದು ಅವರ ಕಾರ್ಯದಕ್ಷತೆಯ ಪರಿಣಾಮವೆಂದೇ ಹೇಳಬಹುದು. ದೇಶ ಬಿಟ್ಟರೂ ಭಾಷೆ ಮರೆಯಲಿಲ್ಲ. ಸಂಸ್ಕೃತಿ, ಸಂಸ್ಕಾರ ಮರೆಯಲಿಲ್ಲ. ನಮ್ಮ ಊರಿನ ಆಚರಣೆಗಳು. ಸಂಪ್ರದಾಯಗಳು ಅಲ್ಲಿನ ಜನರಿಗೂ ತಲುಪಬೇಕೆಂಬ ತುಡಿತ ಅವರಲ್ಲಿತ್ತು. ಆ ನಿಟ್ಟಿನಲ್ಲಿ ಅವರು ಕಾರ್ಯಪ್ರವತ್ತರಾಗಿದ್ದರು. ಕ್ರೀಡಾಭಿಮಾನಿಯೂ ಆಗಿರುವ ಶೆಟ್ಟಿಯವರು ಕ್ರೀಡೆಗೆ ತುಂಬಾ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ತನ್ನ ಬಳಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಎಟಿಎಸ್ ದಿನವನ್ನು ಬಹಳ ವಿಜೃಂಭಣೆಯಿಂದ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಅಲ್ಲಿ ವಿಶೇಷವಾಗಿ ಕಾರ್ಮಿಕರ ಪ್ರತಿಭೆಗೆ ಅವಕಾಶವನ್ನು ಮಾಡಿಕೊಡುವ ಅವರ ನಿರ್ಮಲಾಂತಕರಣ ಇತರರಿಗೆ ಮಾದರಿ.2011 ರಿಂದ 14 ರವರೆಗೆ ಅವರು ಕತಾರ್ ಬಂಟ್ಸ್ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ತನ್ನ ಬಂಟ ಸಮುದಾಯದ ಕೀರ್ತಿ ಅಲ್ಲಿಯೂ ಹಬ್ಬುವಂತೆ ಮಾಡಿದರು. ಕತಾರ್ ನಲ್ಲಿ ಯಕ್ಷಗಾನ ಪ್ರದರ್ಶನವನ್ನು ಮೊತ್ತ ಮೊದಲು ಮಾಡಿಸಿದ ಶ್ರೇಯ ಅವರದ್ದು. ಈ ಕರಾವಳಿಯ ಗಂಡು ಕಲೆಯನ್ನು ವಿಶ್ವಕನ್ನಡ ಸಮ್ಮೇಳನ ಕತಾರ್ ನಲ್ಲಿ ಸಾದಾರಪಡಿಸಿರುವುದು ಅವರೊಬ್ಬ ಸಾಂಸ್ಕೃತಿಕ ನೇತಾರ ಎನ್ನುವುದಕ್ಕೆ ಸಾಕ್ಷಿ. ನಾಯಕತ್ವದ ಎಲ್ಲ ಗುಣಗಳನ್ನು ತಮ್ಮಲ್ಲಿ ಮೈಗೂಡಿಸಿಕೊಂಡಿರುವ ರವಿ ಶೆಟ್ಟಿಯವರು ಕತಾರ್ ತುಳುಕೂಟ ಬಂಟ್ಸ್ ಸಂಘದ ಪೋಷಕರಾಗಿ, ಐಸಿಸಿ, ಐಸಿಬಿಎಫ್ ಮತ್ತು ಕತಾರ್ ಕರ್ನಾಟಕ ಸಂಘದ ಅಜೀವ ಸದಸ್ಯರಾಗಿ ಅವರು ಸಲ್ಲಿಸಿದ ಸೇವೆ ಅಪೂರ್ವವಾದುದು. ತುಳುಕೂಟ ಕತಾರ್, ಬಂಟ್ಸ್ ಸಂಘ ಕತಾರ್, ಮಂಗಳೂರು ಕ್ರಿಕೆಟ್ ಕ್ಲಬ್, ಮಂಗಳೂರು ಕಲ್ಚರಲ್ ಅಸೋಸಿಯೇಷನ್, ಸೌತ್ ಕೆನರಾ ಮುಸ್ಲಿಂ ಅಸೋಸಿಯೇಷನ್, ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಷನ್, ಐಸಿಬಿಎಫ್, ಐಸಿಸಿ ಹೀಗೆ ಹಲವಾರು ಜಾತೀಯ ಸಂಸ್ಥೆಗಳಿಗೆ ಅವರು ಭಾರತ ಮತ್ತು ಕತಾರ್ ನಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುವುದು ಅವರ ಹೃದಯವೈಶಾಲ್ಯಕ್ಕೆ ಸಾಕ್ಷಿ. ಭಾರತೀಯ ರಾಯಭಾರಿಯಾಗಿ ಸೂಚನೆಯ ಮೇರೆಗೆ ICBF ಸಲಹಾ ಸಮಿತಿಯ ಸದಸ್ಯರಾಗಿ ನೇಮಕಗೊಂಡಿರುವರು.
ಧಾರ್ಮಿಕ ಕ್ಷೇತ್ರದಲ್ಲಿ :ರವಿ ಶೆಟ್ಟಿಯವರು ಧಾರ್ಮಿಕ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡವರು. ಪುತ್ತೂರು ಸುಬ್ರಾಯ ದೇವಸ್ಥಾನದ ಸಮಿತಿಯ ಅಧ್ಯಕ್ಷರಾಗಿ 2013-15 ರ ಅವಧಿಗೆ ಆಯ್ಕೆಯಾಗಿ ಆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ಹಾಗೂ ಇದರ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವರು ಮೂಡಂಬೈಲು ನೇಸರ ಫೌಂಡೇಶನ್ನಿನ ಆಡಳಿತ ವಿಶ್ವಸ್ಥರಾಗಿಯೂ ಕಾರ್ಯನಿರ್ವಹಿಸುತ್ತಿರುವರು. ದೇವಸ್ಥಾನ, ಮಸೀದಿ, ಚರ್ಚ್ಗಳ ಜೀರ್ಣೋದ್ದಾರ ಕಾರ್ಯಗಳಲ್ಲಿಯೂ ಅವರ ಕೊಡುಗೆ ಮಹತ್ತರವಾದುದು.
ಉದಾರ ದಾನಿಯಾಗಿ :ನಮ್ಮಲ್ಲಿ ಎರಡು ವರ್ಗದ ಶ್ರೀಮಂತರಿದ್ದಾರೆ. ಉಳ್ಳವರೆಲ್ಲ ದಾನಿಗಳೇ ಆಗಿರುತ್ತಾರೆ ಎಂದೇನಿಲ್ಲ. ಕೆಲವರು ಬಂದದ್ದೆಲ್ಲ ಬರಲಿ ಎಂದು ಇನ್ನಷ್ಟು ಮತ್ತಷ್ಟು ಆಸ್ತಿ ಪಾಸ್ತಿ, ಐಶ್ವರ್ಯ, ಸಂಪತ್ತಿನ ಹಿಂದೆ ಓಡುತ್ತಿದ್ದರೆ ಇನ್ನು ಕೆಲವರು ನನ್ನಲ್ಲಿ ಏನೇ ಇದ್ದರೂ ಪರಮಾತ್ಮನ ಅನುಗ್ರಹದಿಂದ ದೊರೆತದ್ದು ಎಂದು ತನ್ನ ಸಂಪತ್ತಿನ ಕನಿಷ್ಠ ಒಂದಂಶವನ್ನಾದರೂ ಸಮಾಜಕ್ಕಾಗಿ ಮೀಸಲಾಗಿಡುವವರು. ರವಿ ಶೆಟ್ಟಿಯವರು ಎರಡನೇ ವರ್ಗಕ್ಕೆ ಸೇರಿದವರು ಆದರೆ ಕೇವಲ ಒಂದಂಶ ಮಾತ್ರವಲ್ಲ ಅಪಾರ ಜನರಿಗೆ ದಾನ ಮಾಡಿ ಅದರಲ್ಲೂ ಅನಾರೋಗ್ಯ ಪೀಡಿತರಾದ ಅದೆಷ್ಟೋ ಮಂದಿಗೆ ಅವರು ಸಹಾಯವನ್ನು ಮಾಡುತ್ತಿದ್ದಾರೆ. ಅಂತಹವರಿಗೆ ಸರಿಯಾದ ಚಿಕಿತ್ಸೆ ದೊರೆಯುವಲ್ಲಿ ತಾವೇ ಮುತುರ್ವರ್ಜಿ ವಹಿಸಿ ವೈದ್ಯಕೀಯ ನೆರವನ್ನು ನೀಡಿದ್ದಾರೆ. ಬಡಕುಟುಂಬದ ಹೆಣ್ಣುಮಕ್ಕಳಿಗೆ ಮದುವೆಯ ಸಮಯದಲ್ಲಿ ಆರ್ಥಿಕ ನೆರವನ್ನು ನೀಡುತ್ತಿದ್ದಾರೆ. ವಿಶೇಷವೆಂದರೆ ಇಲ್ಲಿ ಎಲ್ಲಿಯೂ ಅವರು ಜಾತಿಭೇದವನ್ನು ನೋಡಲಿಲ್ಲ. ಮಾನವೀಯ ಅಂತಃಕರಣ ಒಂದೇ ಇಲ್ಲಿ ರವಿ ಶೆಟ್ಟಿಯವರಿಗೆ ಮುಖ್ಯವಾಗಿತ್ತು.
ಆದರ್ಶ ದಾಂಪತ್ಯ : ಪ್ರತಿಯೊಂದು ಯಶಸ್ವಿ ಪುರುಷನ ಹಿಂದೆ ಮಹಿಳೆಯ ತ್ಯಾಗ ಇದ್ದೇ ಇರುತ್ತದೆ. ತಂದೆ – ತಾಯಿಯ ಆಶೀರ್ವಾದ ಅವರ ಮೇಲಿತ್ತು. ರವಿ ಶೆಟ್ಟಿ ಅವರು 1992 ರಲ್ಲಿ ಏತಮೊಗರು ಕೃಷ್ಣ ಆಳ್ವ ಹಾಗೂ ಕೊಲ್ನಾಡು ಗುತ್ತು ವಜ್ರಾಕ್ಷಿ ಆಳ್ವ ಅವರ ಸುಪುತ್ರಿ ಜ್ಯೋತಿ ಅವರೊಂದಿಗೆ ದಾಂಪತ್ಯ ಜೀವನವನ್ನು ಆರಂಭಿಸಿದರು. ಹೆಸರಿಗೆ ಸರಿಯಾಗಿ ರವಿಯ ಬಾಳಿನ ಜ್ಯೋತಿಯಾಗಿ, ಪತಿಯ ಕಷ್ಟ ಸುಖದಲ್ಲಿ ಭಾಗಿಯಾಗಿ ಅರ್ಥದಲ್ಲಿ ಸಹಧರ್ಮಿಣಿಯಾದರು. ಇಬ್ಬರು ಮುದ್ದು ಮಕ್ಕಳ ತಾಯಿಯಾಗಿ, ಗಂಡನ ಇಚ್ಛೆಯನರಿವ ಪತ್ನಿಯಾಗಿ, ಜೀವನದ ರಥವನ್ನೆಳೆವಲ್ಲಿ ಶಕ್ತಿಯಾಗಿ, ನಿರಂತರ ಪ್ರೋತ್ಸಾಹ ನೀಡುತ್ತಾ ಬಂದದ್ದರಿಂದಲೇ ‘ನನ್ನ ಬದುಕಿನ ಕಂಬ, ಆಧಾರವೇ ನನ್ನ ಮಡದಿ ಜ್ಯೋತಿ’ ಎನ್ನುತ್ತಾರೆ ರವಿ ಶೆಟ್ಟಿಯವರು. ಇವರದ್ದು ಆದರ್ಶ ದಾಂಪತ್ಯ ಮಗ ರೋಶನ್, ಮಗಳು ರಚನಾ ಅವರ ದಾಂಪತ್ಯ ಜೀವನಕ್ಕೆ ಸಾರ್ಥಕ್ಯವನ್ನು ನೀಡಿದವರು.
ಪ್ರಶಸ್ತಿ ಪುರಸ್ಕಾರಗಳು : ಪ್ರಶಸ್ತಿಗಳ ಹಿಂದೆ ನಾವು ಹೋಗಬಾರದು. ನಮ್ಮನ್ನು ಹುಡುಕಿಕೊಂಡು ಪ್ರಶಸ್ತಿಗಳು ಬಂದಾಗ ಅದಕ್ಕೆ ಅದರದ್ದೇ ಆದ ಮೌಲ್ಯವಿರುತ್ತದೆ. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಉದ್ಯಮ ಕ್ಷೇತ್ರದಲ್ಲಿ ರವಿ ಶೆಟ್ಟಿಯವರು ಮಾಡಿದ ಅಮೋಘ ಸಾಧನೆಗಳನ್ನು ಗುರುತಿಸಿ ಅವರನ್ನು ಹಲವಾರು ಪ್ರಶಸ್ತಿ ಪುರಸ್ಕಾರಗಳು ಅರಸಿಕೊಂಡು ಬಂದಿವೆ. ಅದರಲ್ಲಿ ಮುಖ್ಯವಾದವುಗಳು ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2015, ಅಭಿಯಂತರ ಶ್ರೀ, ಗೋಲ್ಡನ್ ಅಚೀವ್ ಮೆಂಟ್ ಅವಾರ್ಡ್ (ಗ್ಲೋಬಲ್ ಮೀಡಿಯಾ, ದುಬೈ), ರಾಜತರಂಗ ಪ್ರಶಸ್ತಿ, ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇತ್ಯಾದಿ. A rare gem from Karnataka (ಗಲ್ಫ್ ಪತ್ರಿಕೆಯಲ್ಲಿ ರವಿ ಶೆಟ್ಟಿಯವರ ಕುರಿತ ಲೇಖನ )mangalore’s pride in qutar ( ಶೆಟ್ಟಿಯವರ ಕುರಿತು ದಾಯ್ಜಿವಲ್ಡ್ ನಲ್ಲಿ ಪ್ರಕಟಿತ ಲೇಖನ) ಅವರಿಗೆ ತುಂಬಾ ಪ್ರಸಿದ್ಧಿಯನ್ನು ತಂದುಕೊಟ್ಟ ಲೇಖನಗಳು. ಅವರ ಸಾಧನೆಯನ್ನು ಗುರುತಿಸಿ ಬಂಟರ ಸಂಘ ಮದ್ರಾಸ್, ತುಳುಕೂಟ ಪುಣೆ, ಬಂಟರ ಸಂಘ ಕುವೈಟ್, ಬಂಟ್ಸ್ ಸಂಘ ಬೆಂಗಳೂರು, ಬಂಟ್ಸ್ ಸಂಘ ಹೈದರಾಬಾದ್ ಮೊದಲಾದ ಕಡೆಗಳಲ್ಲಿ ವಿಶೇಷವಾಗಿ ಗೌರವಿಸಲ್ಪಟ್ಟಿದ್ದಾರೆ.
ಈಜುವವನ ಕೈ ಸೋಲುವವರೆಗೂ
ಕಡಲಿನಾಳ ಬಾಯ್ದೆರೆಯುವವರೆಗೂ
ತಾನೇ ತನ್ನ ದೈವ
ತಾನೇ ತನ್ನ ಜೀವ
ಎಂಬ ಅಡಿಗರ ಕವಿವಾಣಿಯಂತೆ ದೃಢ ಸಂಕಲ್ಪ, ನಿರ್ದಿಷ್ಟ ಗುರಿ ಇದ್ದಾಗ ಮನುಷ್ಯ ತನ್ನ ಪ್ರಯತ್ನಕ್ಕೆ ಅನುಗುಣವಾಗಿ ಸರ್ವೋಚ್ಛ ಸ್ಥಿತಿಯನ್ನು ತಲುಪುತ್ತಾನೆ. ಇದಕ್ಕೆ ಉತ್ತಮ ನಿದರ್ಶನ ರವಿ ಶೆಟ್ಟಿಯವರು. ಅವರಲ್ಲಿ ಉತ್ತಮ ಸಂಸ್ಕಾರವಿದೆ. ಒಳ್ಳೆಯ ಮನಸಿದೆ. ಅವರ ಜೀವನದ ಜ್ಯೋತಿ ಸದಾ ಬೆಳಗುತಿರಲಿ. ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಸುವಂತೆ ಪರಮಾತ್ಮನು ಶಕ್ತಿಯನ್ನು ಅನುಗ್ರಹಿಸಲಿ. ಮೇ 19 ರಂದು ಮಂಗಳೂರಿನ ಪುರಭವನದಲ್ಲಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯು ಡಾ ರವಿ ಶೆಟ್ಟಿಯವರಿಗೆ 2024 ರ ಸಾಲಿನ ಬಂಟ ರತ್ನ ಪ್ರಶಸ್ತಿ ನೀಡಿ ಗೌರವಿಸಲಿದೆ.
ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ