ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕಾಲೇಜುಗಳ ‘ಆಳ್ವಾಸ್ ಕ್ರೀಡಾಕೂಟ’ ಶನಿವಾರ ಸ್ವರಾಜ್ ಮೈದಾನದಲ್ಲಿ ನಡೆಯಿತು. ಮಂಗಳೂರು ವಿಶ್ವವಿದ್ಯಾಲಯ, ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ
ವೈಯಕ್ತಿಕ, ಗುಂಪು, ಫೀಲ್ಡ್, ಟ್ರ್ಯಾಕ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಆರಂಭದಲ್ಲಿ ವಿದ್ಯಾರ್ಥಿಗಳ ಪಥಸಂಚಲನವು ಗಮನ ಸೆಳೆಯಿತು. ಬ್ಯಾಂಡ್ ತಂಡ ಹಾಗೂ ಧ್ವಜಧಾರಿಗಳು ಸಾಥ್ ನೀಡಿದರು. ಅತಿಥಿಗಳಿಗೆ ಗೌರವ ವಂದನೆ ನೀಡಲಾಯಿತು. ಆಳ್ವಾಸ್ ಕ್ರೀಡಾಕೂಟವನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಕಿಶೋರ್ ಕುಮಾರ್ ಸಿ. ಕೆ. ಮಾತನಾಡಿ, ಆಳ್ವಾಸ್ ಪ್ರಾಯೋಜಿಸುವ ಕ್ರೀಡಾಕೂಟಗಳು ಕ್ರೀಡಾ ಹಬ್ಬಗಳಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಿದೆ. ಮಂಗಳೂರು ವಿವಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳ ಕೊಡುಗೆ ಅಪಾರ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರು ಕ್ರೀಡಾ ಉನ್ನತಿಗಾಗಿ ಅಹರ್ನಶಿ ಶ್ರಮಿಸುತ್ತಿದ್ದು, ಸ್ವಂತ ಖರ್ಚಿನಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ರೂಪಿಸುತ್ತಿದ್ದಾರೆ. ಅವರು ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹದಿಂದಾಗಿ ವಿದ್ಯಾರ್ಥಿಗಳು ಕಾಮನ್ವೆಲ್ತ್, ಒಲಿಂಪಿಕ್ಸ್, ಅಂತರರಾಷ್ಟ್ರೀಯ ಮಟ್ಟದ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದರು. ಕ್ರೀಡಾಪಟು ಭಗವತಿ ಭವಾನಿ ಯಾದವ್ ಕ್ರೀಡಾ ಪ್ರಸ್ತಾವನೆಯನ್ನು ಓದಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ರಾಜೇಶ್ ಡಿಸೋಜಾ ನಿರ್ವಸಿದರು.
ಸಮಾರೋಪ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿಶ್ವವಿದ್ಯಾಲಯ, ಅಂತರ ರಾಜ್ಯ, ರಾಷ್ಟ್ರೀಯ ಮಟ್ಟ ಮಾತ್ರವಲ್ಲ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ ಎಂದರು. ವಿದ್ಯಾರ್ಥಿಗಳು ಮೊಬೈಲ್ ಗುಲರಾಗಬೇಡಿ. ಕ್ರೀಡಾ ಮನೋಭಾವದಿಂದ ಆರೋಗ್ಯ ವೃದ್ಧಿಸಿಕೊಳ್ಳಿ ಎಂದರು.
ಕ್ರೀಡಾ ಉತ್ಸಾಹದಿಂದ ಬದುಕು ಕಟ್ಟಲು ಹೊರಟ ಗ್ರಾಮೀಣ ವ್ಯಕ್ತಿತ್ವ ಡಾ.ಎಂ.ಮೋಹನ ಆಳ್ವ ಅವರು ಇಂದು ಸುಮಾರು 22 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ, 6 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಲು ಶಕ್ತರಾಗಿದ್ದಾರೆ ಎಂದು ಶ್ಲಾಘಿಸಿದರು.
ವಿಜೇತರು ಹಾಗೂ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಚೌಟರ ಅರಮನೆಯ ಕುಲದೀಪ್ ಎಂ. ಹಾಗೂ ಆಳ್ವಾಸ್
ಶಿಕ್ಷಣ ಸಂಸ್ಥೆಗಳ ವಿವಿಧ ಕಾಲೇಜುಗಳ ಪ್ರಾಂಶುಪಾಲಗಳು ಇದ್ದರು.