ಸಾಧಾರಣ 1980ರವರೆಗೆ ನಮ್ಮವರು ಉತ್ತರ ಕ್ರಿಯಾದಿಗಳನ್ನು ಜಾತಿ ಪದ್ಧತಿಯಂತೆ ಮನೆಯಲ್ಲೇ ನಡೆಸುತ್ತಿದ್ದರು. ಆನಂತರ ಹೆಚ್ಚಿನ ಸೌಕರ್ಯಕ್ಕಾಗಿ ಪೇಟೆ ಪಟ್ಟಣಗಳ ಮಂದಿರ, ದೇವಾಲಯ, ಛತ್ರಗಳಿಗೆ ವರ್ಗವಾಯಿತು. ಕಾಲಕ್ಕೆ ತಕ್ಕ ಬದಲಾವಣೆ ಅನಿವಾರ್ಯವಾದರೂ ಮೂಲ ಸಂಸ್ಕಾರಕ್ಕೆ ಸಂಪೂರ್ಣ ತೀಲಾಂಜಲಿ ನೀಡುವುದು ಕ್ಷಮ್ಯವೇ? ನಾವು ಶೂದ್ರ ಸಂಪ್ರದಾಯದವರು. ಹಿಂದೆ ಮೃತರ ಶವ ಸಂಸ್ಕಾರವಾದ ದಿವಸ ಉತ್ತರಕ್ರಿಯೆವರೆಗೆ ನಿತ್ಯ ಎರಡು ಹೊತ್ತು ಮನೆಯವರು ನೀರಿಡುತ್ತಿದ್ದರು. 11 ಅಥವಾ 13 ನೇ ದಿನ ಮನೆಯಲ್ಲೇ ಮಡಿವಾಳ ಮತ್ತು ಕ್ಷೌರಿಕ ಪೌರೋಹಿತ್ವದಲ್ಲಿ ಕ್ರಿಯಾ ಭಾಗಗಳನ್ನು ಮಾಡಿ, ಬಂದವರೆಲ್ಲರಿಂದ ದೂಪೆಗೆ ಅನ್ನ ಹಾಕಿಸುವುದು, ಕ್ಷೌರಿಕ ಜಲ ಸಂಪ್ರೋಕ್ಷಣೆಯಿಂದ ಶುದ್ಧವಾಗಿ ಮನೆಗೆ ಬಂದು ಭೋಜನ ಮಾಡಿ ಅದೇ ದಿನ ರಾತ್ರಿ ಮೀನು ಮಾಂಸದ ಅಡುಗೆ ಮಾಡಿ ಒಂದು ಎಲೆ ಹಾಕಿ ಬಡಿಸಿ ಮೃತರ ಆತ್ಮವನ್ನು ಒಳಗೆ ಕರೆಯುವುದು ಕ್ರಮ.
16 ನೇ ದಿನ ಕುಟುಂಬದ ಮನೆಯಲ್ಲಿ ಸರ್ವ ಪಿತೃಗಳಿಗೆ 16 ಎಲೆ ಹಾಕಿ ಬಡಿಸಿ ಪ್ರಾರ್ಥಿಸಿ ಪಿತೃಗಳೊಂದಿಗೆ ಸೇರಿಸುವುದು ಪದ್ಧತಿ. ಆನಂತರ ಒಂದು ತಿಂಗಳೊಳಗೆ ಯೋಗ್ಯ ಜ್ಯೋತಿಷ್ಯರಲ್ಲಿ ಮೃತರಿಗೆ ಮೋಕ್ಷ ಪ್ರಾಪ್ತಿಯಾಗಿದೆಯೇ ಎಂದು ತಿಳಿಯುತ್ತಿದ್ದರು. ಆಗ ಕಾರಣಾಂತರದಿಂದ ಮೋಕ್ಷ ಆಗಿಲ್ಲ ಎಂದು ಕಂಡು ಬಂದರೆ ತಿಲಹೋಮ ಮಾಡಿ ಪಿಂಡ ಪ್ರದಾನ ಮಾಡುತ್ತಿದ್ದರು. ಆದರೆ ಈಗ ಮಂದಿರಗಳಲ್ಲಿ 11 ಯಾ 13 ರಲ್ಲಿ ಉತ್ತರಕ್ರಿಯೆ ದಿವಸ ಅರ್ಚಕರನ್ನು ಕರೆದು ತಿಲಹೋಮ, ಪಿಂಡ ಪ್ರದಾನ ಮಾಡಿಸುತ್ತಾರೆ. ನಾವು 11 ಯಾ 13 ರಲ್ಲಿ ಉತ್ತರಕ್ರಿಯೆ ಮಾಡಿದರೂ ಸೂತಕ ಮುಗಿದು ದೇವಸ್ಥಾನಕ್ಕೆ ಹೋಗಬೇಕಾದರೆ 16 ದಿನ ಕಳೆಯಬೇಕು. ಹೀಗಿರುವಾಗ ಉತ್ತರಕ್ರಿಯೆ ದಿವಸ ಸೂತಕದಲ್ಲಿರುವಾಗಲೇ ಹೋಮ ಮಾಡಿಸುವುದು ಸರಿಯೇ? ಶೂದ್ರರಿಗೆ ಅಮೆ ಸೂತಕ ಇರುವಾಗ ಯಾವುದೇ ಹೋಮ ನಿಷಿದ್ಧ. ಮಾತ್ರವಲ್ಲ, ತಿಲಹೋಮ ಉತ್ತರಕ್ರಿಯೆಯ ಭಾಗವೇ ಅಲ್ಲ. ಅದೊಂದು ಪ್ರಾಯಶ್ಚಿತ್ತ ಕ್ರಿಯೆ.
ಮಂದಿರಗಳಲ್ಲಿ ಉತ್ತರಕ್ರಿಯೆ ಮಾಡಿಸುವವರು ಮನೆಯಲ್ಲಿ ಎರಡು ಹೊತ್ತು ನೀರಿಡುತ್ತಾರೆ. ಉತ್ತರಕ್ರಿಯೆ ದಿನ ಬೆಳಗ್ಗೆ ಕುಟುಂಬಸ್ಥರೆಲ್ಲಾ ಸೇರಿ ದೂಪೆಯ ಹತ್ತಿರ ಸೀಯಾಳ ಇಟ್ಟು ಕೈ ಮುಗಿದು ಮಂದಿರಕ್ಕೆ ಬಂದು ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿದರೆ ಸಾಲದೇ? ಹೋಮ ಮಾಡುವ ಅರ್ಚಕರು (ಬ್ರಾಹ್ಮಣರು) ಅವರ ಜಾತಿಯ ಉತ್ತರಕ್ರಿಯೆಯಲ್ಲಿ ಹೋಮ ಮಾಡುವುದಿಲ್ಲ. ಕೇವಲ 10,11,12 ನೇ ದಿನಗಳಲ್ಲಿ ಶುದ್ಧ ಕ್ರಿಯೆಗಗಳನ್ನು ಮಾತ್ರ ಮಾಡುತ್ತಾರೆ. ಮಾಡಿದ ಭಕ್ಷ್ಯಗಳನ್ನು ಮೃತರ ಹಿರಿಮಗ ಹೊತ್ತು ಮಂದಿರದಿಂದ ಹೊರಗೆ ಬಂದು ಕಾಗೆಗೆ ಇಡುವುದು. ಕಾದು ಕಾದು ಕಾಗೆ ಬಾರದಿದ್ದರೆ ಅದನ್ನು ದನಕ್ಕೆ ಇಡುವುದು. ಇದು ಖಂಡಿತ ಅಕ್ಷಮ್ಯವಲ್ಲವೇ? ಕಾರಣ ನಮ್ಮ ದೇಶೀ ತಳಿ ದನದ ಶರೀರದಲ್ಲಿ ಮುಕ್ಕೋಟಿ ದೇವತೆಗಳು ವಾಸಿಸುತ್ತಾರೆ ಎಂದು ಶಾಸ್ತ್ರ ಇದೆ. ಹೀಗಿರುವಾಗ ಕಾಗೆ ಮುಟ್ಟದ ಭಕ್ಷ್ಯವನ್ನು (ಎಂಜಲು) ದನಕ್ಕೆ ನೀಡುವುದೇ? ಯಾವುದೇ ಅಶುಭ ಕಾರ್ಯದಲ್ಲಿ ಗೋವಿಗೆ ಗೋಗ್ರಾಸ ನೀಡಬಾರದೆಂದೂ, ಶುಭ ಕಾರ್ಯದಲ್ಲಿ ನೀಡಿದರೆ ಮಾತ್ರ ಆ ಕಾರ್ಯ ಪೂರ್ಣವಾಗಿರುತ್ತದೆ. ಯಾವುದೇ ನೂತನ ದೈವ ದೇವಾಲಯಗಳಿಗೆ ಅಥವಾ ಗೃಹಕ್ಕೆ ಪ್ರಥಮ ಪ್ರವೇಶ ಗೋವಿನಿಂದ. ಸ್ಥಳ ಶುದ್ಧಿಗೆ ಪಂಚಗವ್ಯ ಹಾಗೆಯೇ ತೀರ್ಥಕ್ಕೆ ಪಂಚಾಮೃತದಲ್ಲಿಯೂ ಪ್ರಧಾನ ಗೋವಿನ ಉತ್ಪನ್ನವೇ ಆಗಿದೆ. ನಮ್ಮಲ್ಲಿ ಮೊದಲು ಉತ್ತರಕ್ರಿಯೆಯಲ್ಲಿ ಕಾಗೆಗೆ ಅನ್ನ ಇಡುವ ಸಂಪ್ರದಾಯ ಇರಲಿಲ್ಲ. ಮೃತರ ಹಿರಿಮಗ ಪ್ರತಿ ಅಮಾವ್ಯಾಸೆಯ ದಿನ ವೃತದಲ್ಲಿ ನಿಂತು ಮಧ್ಯಾಹ್ನ ಊಟಕ್ಕೆ ಮಾಡಿದ ಭಕ್ಷ್ಯಗಳಿಂದ 3 ಉಂಡೆ ಮಾಡಿ ಕೊಡಿ ಎಲೆಯಲ್ಲಿ ಹಾಕಿ ಮನೆಯ ಪಕ್ಕದ ತೊಂಡೆ, ಬಸಳೆ ಚಪ್ಪರದಲ್ಲಿ ಇಟ್ಟು 3 ಬಾರಿ ಕಾಗೆ ಕರೆದು ಬಂದು ಊಟ ಮಾಡುವ ಸಂಪ್ರದಾಯ ಈಗಲೂ ಕಾಸರಗೋಡು ಜಿಲ್ಲೆಯ ಕೆಲವೆಡೆ ಇತರ ಶೂದ್ರ ಪಂಗಡದವರು ಆಚರಿಸಿಕೊಂಡು ಬರುತ್ತಿದ್ದಾರೆ. ಉತ್ತರಕ್ರಿಯೆಯ ಮಧ್ಯಾಹ್ನ ಭೋಜನಕ್ಕೆ ಈಗೀಗ ಕೆಲವು ಶ್ರೀಮಂತರು ಕೊಟ್ಟಿಗೆ ರಸಾಯನ ಮಾಡುತ್ತಾರೆ. ಇದು ಸರಿಯಲ್ಲ. ಮೃತರ ಮನೆಯಲ್ಲಿ ಹಾಗೂ ಕುಟುಂಬದವರು ಉತ್ತರಕ್ರಿಯೆಯವರೆಗೆ ಹಿಟ್ಟಿನಿಂದ ಹಾಗೂ ಉದ್ದು ಹಾಕಿದ ಮತ್ತು ಎಣ್ಣೆಯಲ್ಲಿ ಕರಿದ ತಿಂಡಿ ಮಾಡಬಾರದು. ಆದ್ದರಿಂದಲೇ ಆ ದಿನ ರಾತ್ರಿ ಕಡುಬು ಮಾಡುವುದು. ಮೃತರ ಆತ್ಮವನ್ನು ಉತ್ತರಕ್ರಿಯೆಯ ದಿವಸ ರಾತ್ರಿ ಮೀನು ಮಾಂಸದ ಅಡುಗೆ ಮಾಡಿ ಒಳಗೆ ಕರೆಯುವುದು. ಈಗೀಗ ಕೆಲವು ಶ್ರೀಮಂತರಲ್ಲಿ ಮಧ್ಯಾಹ್ನದಿಂದ ಹೆಚ್ಚು ಜನ ರಾತ್ರಿ ಸೇರುತ್ತಾರೆ. ಕಾರಣ ಮನೆಯ ಅಂಗಳದಲ್ಲಿ ಟೇರೆಸಿನಲ್ಲಿ ಮೇಜಿಯ ಸುತ್ತಲೂ ಕುಳಿತು ಮಾಂಸ ಮದ್ಯದ ಅಭಿಷೇಕವೇ ತಡರಾತ್ರಿಯವರೆಗೆ ನಡೆಯುವುದನ್ನು ನೋಡುವಾಗ ಮದುವೆಯ ಔತಣವೋ ಕುಟುಂಬದ ಗೆಟ್ ಟುಗೆದರೋ ಅನ್ನಿಸಿದರೂ ತಪ್ಪಲ್ಲ. ಇದು ಸರಿಯೇ? ಮದ್ಯ ಮಾಂಸ ನಮಗೆ ನಿಷಿದ್ಧವಲ್ಲ. ಆದರೂ ಸಾವಿನ ಮನೆಯೆಂಬ ಸಾಮಾನ್ಯ ಜ್ಞಾನವಾದರೂ ಬೇಡವೇ? 11 ರಲ್ಲಿ ಉತ್ತರಕ್ರಿಯೆ ಮಾಡುವುದು ಯಾರಿಗೆಂದರೆ ಅವರಿಗಿಂತ ಹಿರಿಯರು ಕುಟುಂಬದಲ್ಲಿ ಇದ್ದರೆ ಮಾತ್ರ ಹಿರಿಯ ವ್ಯಕ್ತಿಗಳಾಗಿದ್ದರೆ 13 ರಲ್ಲಿ ನಮ್ಮ ವಾಡಿಕೆ. ಆದರೆ ಈಗೀಗ ಕೆಲವರು ಅನುಕೂಲಕ್ಕಾಗಿ ಮತ್ತು ವಾರ, ತಿಥಿ, ಅಮಾವಾಸ್ಯೆ, ಹುಣ್ಣಿಮೆ ಎಂದು ವ್ಯತ್ಯಾಸ ಮಾಡುತ್ತಾರೆ. ಇದು ಸರಿಯಲ್ಲ.
ದಿನ ನೋಡಿ ಸಾವು ಬರುವುದಿಲ್ಲ. ಅಂತೆಯೇ ಉತ್ತರಕ್ರಿಯೆ, ಬೂದಿ ಸೇರಿಸುವ ಯಾವುದಕ್ಕೂ ದಿನ ನೋಡುವ ಅಗತ್ಯವಿಲ್ಲ. ಹಿಂದಿನ ಕಾಲದಲ್ಲಿ ಚಿತೆಗೆ ಮರ ಕಡಿಯಲು ಮೂಲದವರನ್ನು ಕರೆಸಿ ಅವರಿಂದಲೇ ಸಾವಿನ ಸುದ್ಧಿ ಹಾಗೂ ಉತ್ತರಕ್ರಿಯೆಯ ಸುದ್ದಿ ಹೋಗುತ್ತಿತ್ತು. ಈಗ ನಾವೇ ಚಿತೆ ಏರಿಸುವುದರಿಂದ ತೊಡಗಿ ಉತ್ತರಕ್ರಿಯೆಗೆ ಕರಪತ್ರ ಮಾಡಿಸುತ್ತೇವೆ. ಅದನ್ನು ಖಂಡಿತವಾಗಿಯೂ ಮೃತರ ಮಕ್ಕಳು ಕೊಡಬಾರದು. ಅಂಚೆಯ ಮೂಲಕ ಅಥವಾ ಕೈಯಾನು ಕೈ ಮುಟ್ಟಿಸಿದರೆ ಸಾಕು ಕರೆದ ಮದುವೆಗೆ ಹೋಗದಿದ್ದರೂ ಕರೆಯದ ಮರಣ ಕಾರ್ಯಕ್ಕೆ ಹೋಗಬೇಕೆಂದು ನಂಬಿದವರು. ನಾವು ಉತ್ತರಕ್ರಿಯೆಯಂದು ತಿಲಹೋಮ ಮಾಡುತ್ತಿರುವಾಗ ಮೃತರ ಗೋತ್ರ ಕೇಳುತ್ತಾರೆ. ಬಂಟರಿಗೆ ಗೋತ್ರವಲ್ಲ ಬರಿ (ಬಳಿ) ಎಂಬ ಸಾಮಾನ್ಯ ಜ್ಞಾನವಾದರೂ ಅರ್ಚಕರಿಗೆ ಬೇಡವೇ? ಗೋತ್ರ ಗೊತ್ತಿಲ್ಲ ಎಂದಾಗ ಯಾವುದೋ ಒಂದು ಗೋತ್ರ ಹೇಳಿ ಎಳ್ಳು ನೀರು ಬಿಡುತ್ತಾರೆ. ಗೋತ್ರ ಹೇಳಿಯೇ ಪ್ರೇತಾತ್ಮಕ್ಕೆ ಮೋಕ್ಷ (ಸ್ವರ್ಗ)ದ ದಾರಿ ತೋರಿಸಬೇಕೆಂದು ನಿಯಮವಿರಬಹುದು. ಹಾಗಾದರೆ ಇಲ್ಲಿ ಪ್ರೇತ ಹಾದಿ ತಪ್ಪಿ ಯಾವ ಲೋಕಕ್ಕೆ ಹೋಯಿತೋ ಗೊತ್ತಿಲ್ಲ. ಆದ್ದರಿಂದಲೇ ಸದ್ಯ 3 ದಶಕಗಳಿಂದೀಚೆಗೆ ಮೃತರಾದವರಿಗೆ ಏನೂ ಮಾಡಿದರೂ ಮೋಕ್ಷ ಪ್ರಾಪ್ತಿ ಆಗಲಿಲ್ಲ ಎಂದು ಅದೆಷ್ಟೋ ಬಂಟ ಕುಟುಂಬಸ್ಥರ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದ ಯಕ್ಷಪ್ರಶ್ನೆ. ಈ ನಿಟ್ಟಿನಲ್ಲಿ ಸಮಾಜದ ಬಂಧುಗಳಲ್ಲಿ ನನ್ನ ಅರಿಕೆ ಏನೆಂದರೆ, ಬಂಟ್ಸ್ ನೌ ಮಾಧ್ಯಮದ ಹಿಂದಿನ ದಿನಗಳಲ್ಲಿ ಬಂಟರ ಮದುವೆ ಬ್ರಾಹ್ಮಣ ಧಾರೆ, ಸೂತಕಾಚರಣೆಯಲ್ಲಿ ತಾರತಮ್ಯ ಬೇಕೇ? ಹಾಗೂ ಈ ದಿನ ಆಧುನಿಕ ಉತ್ತರಕ್ರಿಯೆಯಲ್ಲಿ ಮಾಡುವ ಅಕ್ಷಮ್ಯಗಳು! ಲೇಖನಗಳ ಮೂಲಕ ನಮ್ಮ ಹಿರಿಯರು, ಬುದ್ಧಿವಂತರು ಹಾಗೂ ಸಮಾಜದ ಮುಂದಾಳುಗಳು ಚಿಂತಿಸಿ ಮುಂದಿನ ನಮ್ಮ ಯುವ ಪೀಳಿಗೆಗೆ ಅನುಸರಿಸಲು ಸುಲಭ ಸಾಧ್ಯ ಹಾಗೂ ನಮ್ಮ ಸಂಸ್ಕಾರ, ಸಂಸ್ಕೃತಿಯ ಉಳಿವಿಗೆ ಪ್ರಯತ್ನಿಸಿ ಬಂಟರೆಲ್ಲರಿಗೆ ಅನುಕರಣೀಯವಾದ ಒಂದು ಏಕರೂಪದ ಲಿಖಿತ ಸಂಸ್ಕಾರ ಸಂಹಿತೆ ರೂಪುಗೊಳ್ಳಲೆಂದು ಆಶಿಸೋಣ.
ಕಡಾರು ವಿಶ್ವನಾಥ್ ರೈ