ಜೀವನದ ಕೊನೆಯುಸಿರು ಇರುವವರೆಗೂ ಕ್ಯಾನ್ಸರ್ ರೋಗಿಗಳನ್ನು ಗೌರವದಿಂದ ಕಾಣುವುದೇ ಉಪಶಾಮಕ ಆರೈಕೆ ವಾರ್ಡಿನ ಉದ್ದೇಶವಾಗಿದೆ. ತಪಸ್ಯ ಫೌಂಡೇಷನ್ ಹಮ್ಮಿಕೊಂಡಿರುವ ಮಾನವೀಯತೆಯ ಕಾರ್ಯಕ್ಕೆ ಯೆನೆಪೋಯ ಸಂಸ್ಥೆ ಸದಾ ಬೆಂಬಲಿಸುತ್ತದೆ ಎಂದು ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎಂ. ವಿಜಯ್ ಕುಮಾರ್ ಅಭಿಪ್ರಾಯಪಟ್ಟರು. ಅವರು ತಪಸ್ಯ ಫೌಂಡೇಷನ್, ಲಯನ್ಸ್ ಇಂಟರ್ನ್ಯಾಷನಲ್ ೩೧೭ಡಿ ಆಶ್ರಯದಲ್ಲಿ ನರಿಂಗಾನದ ಯೆನೆಪೋಯ ಆಯುರ್ವೇದ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ತಾತ್ಕಾಲಿಕ ಉಪಶಾಮಕ ಆರೈಕೆ ವಾರ್ಡನ್ನು ಉದ್ಘಾಟಿಸಿ ಮಾತನಾಡಿದರು. ಕ್ಯಾನ್ಸರ್ ರೋಗದ ನೈಸರ್ಗಿಕ ಇತಿಹಾಸವನ್ನು ಬದಲಾಯಿಸದೇ ರೋಗ ಲಕ್ಷಣಗಳಿಗೆ ಕಂಡುಕೊಳ್ಳುವ ಪರಿಹಾರ, ತೊಡಕುಗಳ ನಿವಾರಣೆ ವಾರ್ಡಿನ ಮೂಲಕ ಸಾಧ್ಯ. ಕ್ಯಾನ್ಸರ್ ರೋಗಿಗಳು ಮನೆ ಮಂದಿಯಿಂದ ತಿರಸ್ಕರಿಸಲ್ಪಡುವಾಗ, ಸಲಹಲು ಅಸಾಧ್ಯವಾದಂತಹ ರೀತಿಯಲ್ಲಿ ಇರುತ್ತಾರೆ. ಅಂತಹವರನ್ನು ಗೌರವದಿಂದ ಕಾಣಲು ತಪಸ್ಯ ಫೌಂಡೇಷನ್ ಮುಡಿಪು ಭಾಗದಲ್ಲಿ ನಿರ್ಮಿಸುವ ಕೇಂದ್ರಕ್ಕೆ ಸಹಕಾರ ಅಗತ್ಯ . ಯೆನೆಪೋಯ ಸಂಸ್ಥೆ ತಪಸ್ಯ ಫೌಂಡೇಷನ್ ಸದಾ ಜತೆಗಿದೆ ಎಂದರು.
೩೧೭ಡಿ ಪಾಸ್ಟ್ ಮಲ್ಟಿಪಲ್ ಕೌನ್ಸಿಲ್ ಚೇರ್ಪರ್ಸನ್ ವಸಂತ್ ಕುಮಾರ್ ಶೆಟ್ಟಿ ಮಾತನಾಡಿ, ಮುಡಿಪುವಿನ ಹತ್ತಿರ ಜಾಗ ಸಮತಟ್ಟು ಮಾಡಿ ಕೆಲಸ ಆರಂಭವಾಗಿತ್ತು. ಕೋವಿಡ್ ನಿಂದಾಗಿ ಕಾಮಗಾರಿ ವಿಳಂಬವಾಗಿದೆ. ಇದೀಗ ಆರು ತಿಂಗಳಿನಿಂದ ಕಾಮಗಾರಿ ವೇಗ ಪಡೆದುಕೊಂಡಿದ್ದು, ಶೀಘ್ರವೇ ಮಕ್ಕಳ ಕ್ಯಾನ್ಸರ್ ಆರೈಕೆಯ ವಾರ್ಡನ್ನು ಆರಂಭಿಸುವ ಉದ್ದೇಶವನ್ನು ತಪಸ್ಯಾ ಫೌಂಡೇಷನ್ ಹಾಗೂ ಲಯನ್ಸ್ ಕ್ಲಬ್ ಹೊಂದಿದೆ. ಜಿಲ್ಲೆಯಲ್ಲೇ ಇದೊಂದು ಮೊದಲ ಸೆಂಟರ್ ಆಗಿದ್ದು, ಈಗಾಗಲೇ ಟ್ರಸ್ಟ್ ಮೊಬೈಲ್ ಆಂಬ್ಯುಲೆನ್ಸ್ ಮೂಲಕ ರೋಗಿಗಳ ಮನೆ ಮನೆಗೆ ಭೇಟಿ ನೀಡಿ ಸೇವೆಯನ್ನು ನೀಡುತ್ತಿದೆ. ಯೆನೆಪೋಯ ಪರಿಗಣಿತ ವಿ.ವಿಯ ಉಪಕುಲಪತಿಗಳು ಮೊದಲಿನಿಂದಲೂ ಸಹಕಾರವನ್ನು ನೀಡುತ್ತಾ ಬಂದಿದ್ದು, ಅವರ ಆಶ್ರಯದಿಂದ ಯೆನೆಪೋಯ ಆಯುರ್ವೇದ ಆಸ್ಪತ್ರೆಯಲ್ಲಿ ವಾರ್ಡನ್ನು ನೀಡುವ ಮೂಲಕ ಟ್ರಸ್ಟ್ ಸೇವೆಯನ್ನು ಆರಂಭಿಸಿದೆ ಎಂದರು.
ರುಪೀ ಬಾಸ್ ಫಿನಾನ್ಷಿಯಲ್ ಸರ್ವಿಸಸ್ ಇದರ ಸ್ಥಾಪಕ ಸಿಎ ಎನ್.ಬಿ ಶೆಟ್ಟಿ ಮಾತನಾಡಿ, ರೂ.೧೦ ಕೋಟಿ ವೆಚ್ಚದ ಕಟ್ಟಡದ ಕಾಮಗಾರಿ ಮುಡಿಪುವಿನಲ್ಲಿ ಆರಂಭವಾಗಿದೆ. ದಾನಿಗಳು, ಬೆಂಬಲಿಗರು, ಹಿತೈಷಿಗಳ ಆಶ್ರಯದೊಂದಿಗೆ ಕಟ್ಟಡದ ಕಾಮಗಾರಿ ಶೀಘ್ರವೇ ಪೂರ್ಣಗೊಂಡು ಕ್ಯಾನ್ಸರ್ ರೋಗಿಗಳಿಗೆ ಆಶ್ರಯವಾಗಲಿ ಎಂದು ಹಾರೈಸಿದರು. ತಪಸ್ಯ ಫೌಂಡೇಷನ್ ಟ್ರಸ್ಟಿಗಳಾದ ಡಾ. ಸುಂದರಾಮ್ ರೈ, ಮೋಹನ್ ಶೆಟ್ಟಿ, ನವೀನ್ ಚಂದ್ರ ಹೆಗ್ಡೆ, ಡಾ. ಆಶಾಜ್ಯೋತಿ ರೈ, ಅನಿಲ್ ಯು.ಪಿ, ಪದ್ಮಿನಿ ಪ್ರಶಾಂತ್ ರಾವ್, ವಿಶ್ವಾಸ್ ಯು.ಯಸ್ ಉಪಸ್ಥಿತರಿದ್ದರು. ತಪಸ್ಯ ಫೌಂಡೇಷನ್ ಆಡಳಿತ ಟ್ರಸ್ಟೀ ಸಬಿತಾ ಶೆಟ್ಟಿ ಸ್ವಾಗತಿಸಿದರು.