ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಸಹಿತ ಮಹಾ ಗಣಪತಿ ಗ್ರಾಮದ ಆರಾಧ್ಯ ದೇವರಾಗಿದ್ದರೂ ಗ್ರಾಮದ ಯಾವುದೇ ಮನೆಗಳಲ್ಲಿ ಗಣಪತಿ ಫೋಟೋ ಇಡುವಂತಿಲ್ಲ. ಗಣಹೋಮ ಮಾಡುವಂತಿಲ್ಲ. ಚೌತಿ ಹಬ್ಬ ಆಚರಿಸುವಂತಿಲ್ಲ. ಪೆರ್ಣಂಕಿಲ ಗ್ರಾಮದ ಗಡಿ ವ್ಯಾಪ್ತಿಯೊಳಗಿರುವ ಈ ವಿಶಿಷ್ಟ ಸಂಪ್ರದಾಯ ಇಂದಿಗೂ ಪಾಲನೆಯಾಗುತ್ತಿದೆ. ಬಡವನಿರಲಿ, ಶ್ರೀಮಂತನಿರಲಿ ಮನೆಗಳಲ್ಲಿ ಆಡಂಭರಕ್ಕೆ ಅವಕಾಶವಿಲ್ಲದೆ, ಕ್ಷೇತ್ರ ದೇವತೆಯನ್ನು ಮರೆಯದೆ ಎಲ್ಲರೂ ಭಕ್ತರ ನೆಲೆಯಲ್ಲಿ ದೇವಳಕ್ಕೆ ಬರಬೇಕು. ತಮ್ಮ ಕಷ್ಟ ನೋವು ಹೇಳಿಕೊಳ್ಳಬೇಕೆನ್ನುವುದೇ ಇದರ ಹಿಂದಿರುವ ತತ್ವವಾಗಿದೆ.
ಪೆರ್ಣಂಕಿಲ ಗ್ರಾಮದ ಮನೆಗಳಲ್ಲಿ ಎಮ್ಮೆಯನ್ನೂ ಸಾಕುವಂತಿಲ್ಲ. ಭಕ್ತನೊಬ್ಬ ದನದ ಹಾಲೆಂದು ಹೇಳಿ ಎಮ್ಮೆ ಹಾಲು ತಂದು ಕೊಟ್ಟಿದ್ದನ್ನು ದೇವರಿಗೆ ಅಭಿಷೇಕ ಮಾಡಿದ್ದು ಮರುದಿನ ಎಮ್ಮೆ ಸತ್ತಿತು. ಆ ಬಳಿಕ ಪೆರ್ಣಂಕಿಲ ಗ್ರಾಮದಲ್ಲಿ ಎಮ್ಮೆ ಸಾಕುವಂತಿಲ್ಲ. ಕೊಡಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪೆರ್ಣಂಕಿಲ ಗ್ರಾಮದಲ್ಲಿ 400 ಮನೆ,1,841 ಜನರಿದ್ದಾರೆ. ದೇವಳದಲ್ಲಿ ಜಾತ್ರೆಗೆ ಕೊಡಿ ಏರಿದ ಮೇಲೆ ಪೆರ್ಣಂಕಿಲ ಗ್ರಾಮದಿಂದ ಯಾವುದೇ ದಿಬ್ಬಣ ಹೊರಡಬಾರದು (ಬೇರೆ ಊರಿಂದ ದಿಬ್ಬಣದಲ್ಲಿ ಹೊರಟು ಬರುತ್ತಾರೆ). ಮನೆಗಳಲ್ಲಿ ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ. ಪೆರ್ಣಂಕಿಲ ಗ್ರಾಮದೊಳಗೆ ಆನೆಯೂ ಬರುವಂತಿಲ್ಲ. ಆನೆ ಕಾಲಿಗೆ ಸಂಕೋಲೆಯ ಬಂಧನ ಕ್ಷೇತ್ರದೊಡೆಯನಿಗೆ ಇಷ್ಟವಾಗದು.
ಅದೊಂದು ದಿನ ಗ್ರಾಮದೊಳಗೆ ಬಂದಿದ್ದ ಆನೆ ಮದವೇರಿ ದಾಳಿ ಮಾಡಿತ್ತು. ಹೀಗಾಗಿ ಕ್ಷೇತ್ರದ ಜಾತ್ರೆಗೆ ಮರ ಎಳೆಯಲು ಆನೆ ತರುವ ತಂಟೆಗೆ ಯಾರೂ ಹೋಗೋದಿಲ್ಲ. ಪೆರ್ಣಂಕಿಲ ದೇವಳ 9 ಮಾಗಣೆ ವ್ಯಾಪ್ತಿಯನ್ನು ಹೊಂದಿದ್ದು, ಪ್ರತಿ ಮನೆಯವರು ಶುಭ ಕಾರ್ಯವಿದ್ದರೆ ಗಣಪತಿಗೊಂದು ಅಪ್ಪ ಸೇವೆಯ ಹರಕೆ, ಕಾಣಿಕೆ ತೆಗೆದಿಡುತ್ತಾರೆ. 365 ದಿನದಲ್ಲಿ 300 ದಿನ ಮಹಾಗಣಪತಿಗೆ ಕೊಪ್ಪರಿಗೆ ಅಪ್ಪ ಸೇವೆ ತಪ್ಪಿದ್ದಲ್ಲ. ಮೂಲ ನಿವಾಸಿ ಪೆರ್ಣ ಉಳುಮೆ ಮಾಡುವಾಗ ನೇಗಿಲಿಗೆ ಸಿಕ್ಕಿ ರಕ್ತಸಿಕ್ತನಾದ ಉದ್ಭವ ಗಣಪತಿ ಒಲಿದಿದ್ದರಿಂದಲೇ ಪೆರ್ಣ + ಅಂಕಿಲ (ನೇಗಿಲು) ಪೆರ್ಣಂಕಿಲವಾಗಿದೆ. ಪಶ್ಚಿಮಕ್ಕೆ ಅರ್ಧ ಕಿ.ಮೀ. ದೂರದಲ್ಲಿ ಮುಗ್ಗೇರುಕಳ ದೈವ ಸನ್ನಿಧಿ ದೇವರ ರಕ್ಷಣೆಯಾಗಿದೆ.
ದಕ್ಷಿಣದಲ್ಲಿ ಮೊಯ್ಲಿಬೆಟ್ಟು ನಾಗಬ್ರಹ್ಮಸ್ಥಾನ, ಪಂಜುರ್ಲಿ ಹಾಗೂ ಉತ್ತರದಲ್ಲಿ ದೇವ ಪುಷ್ಕರಿಣಿಯಿದೆ. ಗಣಪಗೆ ಅಪ್ಪ, ಕೊಪ್ಪರಿಗೆ ಅಪ್ಪ (ಎಂಟು ಹೆಡಿಗೆ) ಬಲು ಇಷ್ಟ. ಕ್ಷೇತ್ರದಲ್ಲಿ ಅಪ್ಪ, ಮಗ ದೇವರಿಗೆ ದೂರ್ವಾರ್ಚನೆ, ರುದ್ರಾಭಿಷೇಕ, ಬಿಲ್ವ ಪತ್ರಾರ್ಚನೆ, ಶತರುದ್ರ, ಏಕಾದಶ ರುದ್ರಾಭಿಷೇಕ, ಮೃತ್ಯುಂಜಯ ಹೋಮ, ಸಹಸ್ರ ನಾರಿಕೇಳ ಗಣಯಾಗ, ಅನ್ನಸಂತರ್ಪಣೆ ನಡೆಯುತ್ತಿದೆ.