ಮೋಟಾರು ರ್ಯಾಲಿಯಲ್ಲಿ ಕಳೆದ ಎರಡೂವರೆ ದಶಕಗಳಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅಶ್ವಿನ್ ನಾಯ್ಕ್ ಅತ್ಯುನ್ನತ ಮಟ್ಟದ ಪ್ರದರ್ಶನ ನೀಡುತ್ತಾ ದೇಶ ಮತ್ತು ವಿದೇಶಗಳ 250 ಕ್ಕೂ ಹೆಚ್ಚು ರ್ಯಾಲಿಗಳಲ್ಲಿ ಭಾಗವಹಿಸಿದ ಎಲ್ಲಾ ರ್ಯಾಲಿಗಳಲ್ಲೂ ಪ್ರಶಸ್ತಿಗಳನ್ನು ಮುಡಿಗೆರಿಸಿಕೊಂಡಿರುವ ದಾಖಲೆಯನ್ನು ಹೊಂದಿದ್ದಾರೆ. 150ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರ್ಯಾಲಿಗಳಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ ಭಾರತ ಮತ್ತು ಬ್ರಿಟಿಷ್ ಹಾಗೂ ಯುರೋಪಿಯನ್ ರ್ಯಾಲಿಯ ಚಾಂಪಿಯನ್ ಶಿಪ್ ರೌಂಡ್ ನ ವಿನ್ನರ್ ಪಟ್ಟಕ್ಕೇರಿದ ಭಾರತದ ಪ್ರಥಮ ಹಾಗೂ ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಮಂಗಳೂರಿನ ಮಿಲಾಗ್ರಿಸ್ ಹೈಸ್ಕೂಲ್ ನಲ್ಲಿ ಪಡೆಯುತ್ತಿರುವಾಗಲೇ ಕ್ರೀಡೆಯಲ್ಲಿ (ಟ್ರ್ಯಾಕ್ & ಫೀಲ್ಡ್ ) ವಾಲಿಬಾಲ್, ಜಾವಲಿನ್ ತ್ರೋ ಮತ್ತು ಹೈ ಜಂಪ್ ಗಳಲ್ಲಿ ಜಿಲ್ಲಾ ಮತ್ತು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. 6 ಅಡಿ 2 ಇಂಚು ಎತ್ತರದ ದೃಢಕಾಯದ ಅಶ್ವಿನ್ ನಾಯ್ಕ್ ಅವರು 1995 – 1999 (ಸೈಂಟ್ ಅಲೋಶಿಯಸ್ ಪಿ.ಯು ಕಾಲೇಜಿನ ದಿನಗಳಲ್ಲಿ ಮತ್ತು ಮಂಗಳೂರಿನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಇನ್ ಡಿಪ್ಲೋಮ) ಮೋಟಾರ್ ರ್ಯಾಲಿಯತ್ತ ಗಮನ ಹರಿಸಿ ದ್ವಿಚಕ್ರ ವಾಹನ (ಬೈಕ್ ರ್ಯಾಲಿ) ಗಳಲ್ಲಿ ಪಾಲ್ಗೊಂಡು ಹಲವಾರು ರಾಷ್ಟ್ರೀಯ ರ್ಯಾಲಿ, ಮೋಟಾರ್ ಕ್ರಾಸ್, ಆಟೋಕ್ರಾಸ್, ಟ್ರೆಷರ್ ಹಂಟ್ ಚಾಂಪಿಯನ್ ಶಿಪ್ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
2000ನೇ ಇಸವಿಯಲ್ಲಿ ಅಶ್ವಿನ್ ಕಾರು ರ್ಯಾಲಿಯತ್ತ ಆಸಕ್ತಿ ಹೊಂದಿ ಕೋ -ಡೈವರ್ (ನ್ಯಾವಿಗೇಟರ್) ಆಗಿ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಶಿಪ್ ಗಳಲ್ಲಿ ಪಾಲ್ಗೊಂಡು ಯಶಸ್ವಿ ಸಹ ಚಾಲಕರಾಗಿ ಮಿಂಚಿದ ಅಶ್ವಿನ್ ಅಂತರಾಷ್ಟ್ರೀಯ ಮಟ್ಟದಲ್ಲಿ ಛಾಪನ್ನು ಮೂಡಿಸಿದ್ದಾರೆ. ಬಿ.ಜಿ. ರೇಸಿಂಗ್, ಟೀಂ ಬ್ಲೂ ಲೈನ್ಸ್, ರೆಡ್ ರೂಸ್ಟರ್ ರೇಸಿಂಗ್, ಟೀಂ ಎಂ.ಆರ್.ಎಫ್, ಟೀಂ ಥಂಡರ್ ಬೋಲ್ಟ್, ಟೀಂ ಅರುಣಾಚಲ, ಟೀಂ ಔಟ್ ಲ್ಯಾಂಡ್ ಗುವಾಹಟಿ, ಟೀಂ ಆರ್.ಆರ್.ಪಿ.ಎಂ, ಟೀಂ ಮಾರುತಿ ಸುಝುಕಿ, ಟೀಂ ಸ್ಪೀಡ್ ಸ್ಪೋರ್ಟ್ಸ್ ಮೊದಲಾದ ತಂಡಗಳನ್ನು ಪ್ರತಿನಿಧಿಸುತ್ತಾ ಬಂದಿರುವ ಅಶ್ವಿನ್ ಪ್ರಸ್ತುತ ಇಂಡಿಯನ್ ರ್ಯಾಲಿ ಚಾಂಪಿಯನ್ ಶಿಪ್ ಗಳಲ್ಲಿ ಮಹಿಂದ್ರಾ ಅಡ್ವೆಂಚರ್ ತಂಡವನ್ನು ಪ್ರತಿನಿಧಿಸಿದ್ದು ಹೆಲ್ಲಾ ಲೈಟ್ಸ್ ಯೂಕೊಹಾಮಾ ಟಯರ್ಸ್ ಹಾಗೂ ಮಹೀಂದ್ರಾ ಆಡ್ವೆಂಚರ್ ಬ್ರಾಂಡ್ ಐಕಾನ್ ಆಗಿ ಗುರುತಿಸಿಕೊಂಡಿದ್ದು ಮಹೀಂದ್ರಾ ಗ್ರೇಟ್ ಎಸ್ಕೇಪ್ ಹಾಗೂ ಕಾರು ಹಾಗೂ ಬೈಕ್ ಅವಾರ್ಡ್ಸ್ ಗಳ ಜ್ಯೂರಿ ಮೆಂಬರ್ ಆಗಿರುವ ಅಶ್ವಿನ್ ನಾಯ್ಕ್ ರವರ ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ಸಾಧನೆಗಳನ್ನು ನಾವೆಲ್ಲರೂ ಮೆಚ್ಚಲೇಬೇಕು.
2009 ಹಾಗೂ 2010 ಡೆಸರ್ಟ್ ಡ್ಯಾಶ್ ಚಾಂಪಿಯನ್ ಶಿಪ್ ಪ್ರಶಸ್ತಿ, ಸಬ್ ಹಿಮಾಲಯನ್ ರ್ಯಾಲಿ ಚಾಂಪಿಯನ್ ಶಿಪ್ ಪ್ರಶಸ್ತಿ, 2010ರ ದಕ್ಷಿಣ ಡೇರ್ ರ್ಯಾಲಿ ಚಾಂಪಿಯನ್ ಶಿಪ್ ಪ್ರಶಸ್ತಿ, ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಶಿಪ್ ನ ಒಡಿಶಾ ರ್ಯಾಲಿಯ ವಿಜೇತ, ರ್ಯಾಲಿ ಆಫ್ ಕೇರಳ ದ್ವಿತೀಯ ಸ್ಥಾನ, ರ್ಯಾಲಿ ಆಫ್ ರಾಜಸ್ಥಾನ ದ್ವಿತೀಯ ಸ್ಥಾನ, ರ್ಯಾಲಿ ಆಫ್ ಮಹಾರಾಷ್ಟ್ರ ತೃತೀಯ ಸ್ಥಾನ, 2012 ರಲ್ಲಿ 1000 ರ್ಯಾಲಿ ದ್ವಿತೀಯ ಸ್ಥಾನ, 2012 ಹಾಗೂ 2013 ರಲ್ಲಿ ನಡೆದ ಮಲೇಷಿಯನ್ ರ್ಯಾಲಿಯ ಕ್ಲಾಸ್ ಕೆಟಗರಿ ಹಾಗೂ ಥಾಯ್ಲೆಂಡ್ 4*4 ರ್ಯಾಲಿಯ ವಿಜೇತ, 2012 ಹಾಗೂ 2013 ರ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಶಿಪ್ ನ ಸಮಗ್ರ ರಾಷ್ಟ್ರೀಯ ಚಾಂಪಿಯನ್, 2013ರ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಶಿಪ್ 4 ಸುತ್ತುಗಳಲ್ಲಿ ಪ್ರಥಮ ಸ್ಥಾನ ಹಾಗೂ ಒಂದು ಸುತ್ತಿನಲ್ಲಿ ದ್ವಿತೀಯ ಸ್ಥಾನದೊಂದಿದೆ ಸಮಗ್ರ ದ್ವಿತೀಯ ಸ್ಥಾನ, 2013 ರ ಮೊಘಲ್ ರ್ಯಾಲಿ ಚಾಂಪಿಯನ್ ಶಿಪ್ ವಿಜೇತ, 2013ರ ರೈಡ್ ದಿ ಹಿಮಾಲಯ ರ್ಯಾಲಿ ಚಾಂಪಿಯನ್ ಶಿಪ್ ವಿಜೇತ, ಇಂಡಿಯನ್ ರ್ಯಾಲಿ ಬಳಗದಲ್ಲಿ ಅಶ್ವಿನ್ ಅತ್ಯುತ್ತಮ ಕೊ -ಡೈವರ್ ಎಂಬ ಗೌರವದ ಹೆಗ್ಗಳಿಕೆ, 2015 ರಲ್ಲಿ ನಡೆದ ಮಾರುತಿ ಸುಝುಕಿ ಡೆಸರ್ಟ್ ಸ್ಟ್ರಾಂ ರ್ಯಾಲಿಯಲ್ಲಿ ಪಾಲ್ಗೊಂಡ ಅಶ್ವಿನ್ ಸಮಗ್ರ ದ್ವಿತೀಯ ಸ್ಥಾನ ಪಡೆದ ಗೌರವಕ್ಕೆ ಪಾತ್ರರಾಗಿದ್ದರು. (ಥಾರ್ ಡೆಸರ್ಟ್ ನಲ್ಲಿ ಸುಮಾರು 2500 ಕಿ.ಮೀ ದೂರ ಕ್ರಮಿಸಬೇಕಿತ್ತು). 2016ರಲ್ಲಿ ಎಕ್ಸ್ಟ್ರೀಂ ರೈಡ್ ದಿ ಹಿಮಾಲಯ ರ್ಯಾಲಿ ಚಾಂಪಿಯನ್ ಶಿಪ್ ನ ವಿಜೇತ, ಎಕ್ಸ್ಟ್ರೀಂ ಡೆಸರ್ಟ್ ಸ್ಟಾರ್ಮ್ ರ್ಯಾಲಿ ಚಾಂಪಿಯನ್ ಶಿಪ್ ವಿಜೇತ, ಬಾಜಾ ಇಂಡಿಯಾ ರ್ಯಾಲಿ ಚಾಂಪಿಯನ್ ಶಿಪ್ ವಿಜೇತ 2016-2017, 2018ರ ನ್ಯಾಷನಲ್ ರ್ಯಾಲಿ ಚಾಂಪಿಯನ್ ಶಿಪ್ ಪ್ರಥಮ ರನ್ನರ್ ಆಫ್ ಪ್ರಶಸ್ತಿ, ಮಲ್ಟಿಪಲ್ ಥಾಯ್ಲೆಂಡ್ 4*4 ರ್ಯಾಲಿ ಚಾಂಪಿಯನ್ ಶಿಪ್ ವಿಜೇತ ರ್ಯಾಲಿ ಆಫ್ ಇಂಡೋನೇಷ್ಯಾ -2023 ಭಾರತವನ್ನು ಪ್ರತಿನಿಧಿಸಿ ರನ್ನರ್ ಅಪ್, ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ನ ಸ್ಥಾಪಕ ಸದಸ್ಯ ಹಾಗೂ ಕಾರ್ಯದರ್ಶಿಯಾಗಿರುವ ಅಶ್ವಿನ್ ನಾಯ್ಕ್ ಪ್ರಸ್ತುತ ಮಹೀಂದ್ರಾ ಗೇಟ್ ಎಸ್ಕೇಪ್ ಹಾಗೂ ದಕ್ಷಿಣ ಭಾರತ ಮತ್ತು ಈಶಾನ್ಯ ಭಾರತ ಟಿ.ಎಸ್.ಡಿ ರ್ಯಾಲಿ ಆಯೋಜಿಸಿದ್ದಾರೆ (1994 ಬೆಸ್ಟ್ ಎನ್ ಸಿ ಸಿ ಕ್ಯಾಡೆಟ್ – ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸುವಿಕೆ ಆಲ್ ಪಾಲಿಟೆಕ್ನಿಕ್ ಕಾಲೇಜಿನ ಸ್ಟೇಟ್ ಯೂನಿಯನ್ ಪ್ರಸಿಡೆಂಟ್ ಆಗಿದ್ದರು.
ಮುಂಡಬೆಟ್ಟು ಗುತ್ತು ದಿ. ಜಯಶೀಲ್ ನಾಯ್ಕ್ ಮತ್ತು ಕೊಡಿಬೈಲ್ ಸರಸ್ವತಿ ಜೆ ನಾಯ್ಕ್ ರವರ ಪುತ್ರನಾಗಿರುವ ಅಶ್ವಿನ್ ನಾಯ್ಕ್, ಧರ್ಮಪತ್ನಿ ರಮ್ಯ ಅಶ್ವಿನ್ ನಾಯ್ಕ್ (ಬಪ್ಪನಾಡು ಗುತ್ತು ರಾಮಣ್ಣ ರೈ ಮತ್ತು ಕುಳವೂರು ಉಮಾಲಕ್ಷ್ಮೀ ರೈಯವರ ಮಗಳು) ಮತ್ತು ಮಗ ಆರ್ಷ್ ನಾಯ್ಕ್ (2 ನೇ ತರಗತಿ ) ರವರ ಜೊತೆಯಲ್ಲಿ ಎಡಪದವಿನ ತೋಟದ ಮನೆಯಲ್ಲಿ ಸುಖ ಜೀವನ ನಡೆಸುತ್ತಿದ್ದಾರೆ. ಸಹೋದರಿ ಶಮಿಳಾ ಎಸ್ ಶೆಟ್ಟಿ ಮತ್ತು ಭಾವ ಕಳವಾರು ತಾರಾನಾಥ್ ಶೆಟ್ಟಿ (ಈರ್ವರೂ ದುಬೈಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ), ಮಗ ಆರ್ಷ್ ನಾಯ್ಕ್ ಮಂಗಳೂರಿನಲ್ಲಿ ನಡೆದ ಎಂ.ಆರ್.ಎಫ್ ಸೂಪರ್ ಕ್ರಾಸ್ ರೌಂಡ್ ಮಕ್ಕಳ ವಿಭಾಗದಲ್ಲಿ ಕಡ್ ಮೋಟಾರ್ ಬೈಕ್ ಚಲಾಯಿಸುವ ಮೂಲಕ ಅಪ್ಪನ ಹೆಜ್ಜೆಯ ಗುರುತಿನಲ್ಲಿ ಮೋಟಾರ್ ರ್ಯಾಲಿಗೆ ಹೆಜ್ಜೆ ಹಾಕುತ್ತಿದ್ದಾನೆ.
ಭಾಸ್ಕರ ರೈ ಎಣ್ಮೂರು ಕಟ್ಟಬೀಡು