‘ಪ್ರಪಂಚಕ್ಕೆ ನಾಟ್ಯ ಶಾಸ್ತ್ರವನ್ನು ಕೊಡುಗೆಯಾಗಿ ನೀಡಿದ ಭರತಮುನಿ ಸಮಸ್ತ ಮನುಕುಲವು ವೇದ ಶಾಸ್ತ್ರಗಳನ್ನು ಸುಲಭವಾಗಿ ಗ್ರಹಿಸುವಂತೆ ಮಾಡಿದ ಮಹಾ ದಾರ್ಶನಿಕ. ಚತುರ್ವೇದಗಳಿಂದ ಪಠ್ಯ, ಅಭಿನಯ, ಸಂಗೀತ ಮತ್ತು ರಸಗಳನ್ನು ಆಯ್ದು ನೃತ್ಯ ಎನ್ನುವ ಮೋಹಕ ಕಲೆಯನ್ನು ಜಗತ್ತಿಗೆ ಆತ ನಾಟ್ಯ ವೇದದ ರೂಪದಲ್ಲಿ ಪರಿಚಯಿಸಿದ್ದಾನೆ. ವೇದವನ್ನು ಓದದೇ ಇದ್ದರೂ ಭರತ ನೃತ್ಯವನ್ನು ಕಲಿತು, ಕಲಿಸಿ, ಅನುಭವಿಸುವುದರ ಮೂಲಕ ಮಾನವ ಸಮಾಜವು ವೇದದ ಸಾರವನ್ನು ತಿಳಿಯಲು ಸಾಧ್ಯವಾಗಿದೆ’ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು. ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ವತಿಯಿಂದ ಕದ್ರಿ ಮಲ್ಲಿಕಟ್ಟೆಯ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಜರಗಿದ ಭರತಮುನಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಘಟನೆ ಎಲ್ಲಾ ಕ್ಷೇತ್ರದಲ್ಲೂ ಇಂದು ಅವಶ್ಯಕ. ಬೇರೆ ಬೇರೆ ನೃತ್ಯ ಗುರುಗಳು ತಮ್ಮದೇ ತಂಡದೊಂದಿಗೆ ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡುತ್ತಿದ್ದರೂ ಕರಾವಳಿ ಭಾಗದ ಎಲ್ಲಾ ಕಲಾವಿದರು ಒಟ್ಟು ಸೇರಿ ಸಂಘಟನಾತ್ಮಕವಾಗಿ ಬೆಳೆದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಉಡುಪಿಯ ವಿದ್ವಾನ್ ರಾಮಕೃಷ್ಣ ಕೊಡಂಚ ಅವರು ನಾಟ್ಯ ಶಾಸ್ತ್ರದ ಪ್ರಥಮ ಅಧ್ಯಾಯದ ವಿವರಣೆ ನೀಡಿ ಭರತಮುನಿಗೆ ನುಡಿ ನಮನ ಅರ್ಪಿಸಿದರು. ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಅಧ್ಯಕ್ಷ ವಿದ್ವಾನ್ ಯು.ಕೆ. ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ವಿದ್ವಾನ್ ಸುರೇಶ್ ಅತ್ತಾವರ್ ವೇದಿಕೆಯಲ್ಲಿದ್ದರು. ಪರಿಷತ್ ಪ್ರಧಾನ ಕಾರ್ಯದರ್ಶಿ ವಿದ್ವಾನ್ ಸುಧೀರ್ ರಾವ್ ಕೊಡವೂರು ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ವಿದುಷಿ ರಾಜಶ್ರೀ ಉಳ್ಳಾಲ್ ವಂದಿಸಿದರು. ವಿದುಷಿ ಸುಲೋಚನಾ ವಿ.ಭಟ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ವಿದುಷಿ ವಿದ್ಯಾಲಕ್ಷ್ಮಿ ಕುಂಬಳೆ ಇವರ ಶಿಷ್ಯರಿಂದ ನೃತ್ಯ ಪ್ರದರ್ಶನ ಜರಗಿತು.