ಉದ್ಯೋಗ ಅರಸಿಕೊಂಡು ಇಲ್ಲವೇ ಇನ್ನಿತರ ಯಾವುದೇ ಕಾರಣದಿಂದ ಮುಂಬೈ ಮಹಾನಗರಕ್ಕೆ ಬಂದು ಏನನ್ನಾದರೂ ಸಾಧಿಸಿಬೇಕೆಂಬ ಛಲ, ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ, ಸಮಯ ಪ್ರಜ್ಞೆ, ವಿದ್ಯೆ,ವಿನಯ ಇದ್ದು ಬುದ್ಧಿವಂತಿಕೆಯಿಂದ ದುಡಿದವರನ್ನು ಮುಂಬೈಯ ಮಹಾಲಕ್ಷ್ಮೀ ಮಾತೆಯು ಉದ್ದರಿಸದೆ ಎಂದೂ ಕೈ ಬಿಡುವುದಿಲ್ಲ ಎಂಬುದಕ್ಕೆ ಹಲವಾರು ಮಂದಿ ಉನ್ನತ ಉದ್ಯೋಗಿಗಳಾಗಿ, ಹೋಟೆಲ್ ಮಾಲೀಕರಾಗಿ, ಕಂಪನಿಗಳ ನಿರ್ದೇಶಕರಾಗಿ ಮೆರೆಯುತ್ತಾ ತಮಗೆ ಸಾಧ್ಯವಾದಷ್ಟು ಸಮಾಜ ಸೇವೆ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂಬುದು ಸಂತೋಷದ ಸಂಗತಿ.
ಇಂತಹ ಸಮಾಜ ಸೇವಕರಲ್ಲಿ ಸರಳ ಸಜ್ಜನಿಕೆಯ ರಮೇಶ್ ಶೆಟ್ಟಿ, ಸಿದ್ಧಕಟ್ಟೆ ಪ್ರಮುಖರು. ಇವರ ಕಿರು ಪರಿಚಯವನ್ನು ಸಮಾಜ ಬಾಂಧವರಾದ ಬಂಧುಗಳೊಂದಿಗೆ ಹಂಚಿಕೊಳ್ಳಲು ಸಂತೋಷ ಪಡುತ್ತೇನೆ. ಸಿದ್ಧಕಟ್ಟೆ ಉಗ್ರೋಡಿ ಮನೆ ದಿ. ಮಹಾಬಲ ಶೆಟ್ಟಿ ಮತ್ತು ಕಲ್ಲಬೆಟ್ಟು ಮನೆ ದಿ.ಸೇಸಿ ಶೆಟ್ಟಿ ದಂಪತಿಗಳ ಸುಪುತ್ರನಾಗಿ 1968 ಜೂನ್ 4 ರಂದು ಜನಿಸಿದ ರಮೇಶ್ ಶೆಟ್ಟಿಯವರು ಪ್ರಾಥಮಿಕ ಶಿಕ್ಷಣವನ್ನು ಆರಂಬೋಡಿ ಶಾಲೆಯಲ್ಲೂ ಹೈಸ್ಕೂಲ್ ಶಿಕ್ಷಣವನ್ನು ಸಿದ್ಧಕಟ್ಟೆಯ “ಸೈಂಟ್ ಪ್ಯಾಟ್ರಿಕ್ ಹೈಸ್ಕೂಲ್”ನಲ್ಲಿ ಪೂರೈಸಿದ ನಂತರ ಭವಿಷ್ಯವನ್ನು ಅರಸಿಕೊಂಡು ಮುಂಬೈ ಬಂದ ರಮೇಶ್ ಶೆಟ್ಟಿಯವರು ಉದ್ಯೋಗಕ್ಕೆ ಸೇರಿದುದು ಮಾತ್ರವಲ್ಲದೇ ವಿದ್ಯಾಭ್ಯಾಸವನ್ನು ಮುಂದುವರಿಸಿ ಹೋಟೆಲ್ ಮ್ಯಾನೇಜ್ ಮೆಂಟ್ ಪೂರೈಸಿದ ಮೇಲೆ ತಾನು ಮಾಡುತ್ತಿದ್ದ ಉದ್ಯೋಗವನ್ನು ತೊರೆದು ಶಿಪ್ಪಿಂಗ್ ಕಂಪೆನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದರು. ತಾನು ಏನಾದರೂ ಸಾಧಿಸಬೇಕು ಎಂಬ ಧ್ಯೇಯವನ್ನು ಹೊಂದಿದ ರಮೇಶ್ ಶೆಟ್ಟಿಯವರು “ಸೃಷ್ಟಿ ಮೆರಿಟೈಮ್ ಸರ್ವಿಸಸ್” ಎಂಬ ಸ್ವಂತ ಕಂಪೆನಿಯನ್ನು ಆರಂಭಿಸಿ ಹಲವು ಜನರಿಗೆ ಕೆಲಸ ಕೊಟ್ಟು ಅನ್ನದಾತ ಎನಿಸಿ ಕೊಂಡರೂ ತನ್ನ ಶ್ರೇಯಸ್ಸಿಗೆ ಕಾರಣವಾದ ಶಿಪ್ಪಿಂಗ್ ಕಂಪೆನಿಯ ಉದ್ಯೋಗ ತೊರೆಯದೆ ಈಗಲೂ ಅದರಲ್ಲಿಯೇ ದುಡಿಯುತ್ತಿದ್ದಾರೆ.
ಮಹಾರಾಷ್ಟ್ರ ರಾಜ್ಯದಲ್ಲಿ ತುಳು ಕನ್ನಡಿಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶವೇ ಮೀರಾ-ಭಾಯಂಧರ್. ಆದ್ದರಿಂದ ಈ ಪ್ರದೇಶವು Mini Mangalore (ಚಿಕ್ಕ ಮಂಗಳೂರು) ಎಂದು ಕರೆಯಲ್ಪಡುತ್ತಿದೆ. ಈ ಪ್ರದೇಶದಲ್ಲಿ ಬಹಳಷ್ಟು ತುಳು-ಕನ್ನಡಿಗರ ಸಂಘ ಸಂಸ್ಥೆಗಳು ಇವೆ. ಪ್ರತೀ ವಾರಕ್ಕೊಮ್ಮೆಯಾದರೂ ಎಲ್ಲಿಯಾದರೂ ಒಂದು ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ. ಪರಿಸರದಲ್ಲಿ ಜರಗುವ ನಾಟಕ, ಯಕ್ಷಗಾನ, ಪುಸ್ತಕ ಬಿಡುಗಡೆ ಹಾಗೂ ಇತರ ಯಾವುದೇ ಕಾರ್ಯಕ್ರಮಕ್ಕೂ ತನು-ಮನ-ಧನದಿಂದ ರಮೇಶ್ ಶೆಟ್ಟಿಯವರು ಸಹಕರಿಸುವುದರಿಂದ ಎಲ್ಲರಿಗೂ ಪರಿಚಿತರು ಹಾಗೂ ಆತ್ಮೀಯರು. ಕೆಲವರು ಹೆಸರು ಗಳಿಸುವ ಉದ್ದೇಶದಿಂದ ದೇಣಿಗೆ ನೀಡುವುದಿದೆ. ಆದರೆ ರಮೇಶ್ ಶೆಟ್ಟಿಯವರು ಇದಕ್ಕೆ ತದ್ವಿರುದ್ಧು. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೂ ಗೊತ್ತಾಗದಷ್ಟು ಧಾರಾಳಿತನ.
ಯಾವುದೇ ಕಾರ್ಯಕ್ರಮಕ್ಕೂ ಸಹಕಾರ ನೀಡಲು ತಾನು ಸಿದ್ಧ ಎನ್ನುವ ಸಿದ್ಧಕಟ್ಟೆ ರಮೇಶ್ ಶೆಟ್ಟಿಯವರು ಆಗರ್ಭ ಶ್ರೀಮಂತರಲ್ಲ. “ನಾವು ಹುಟ್ಟುವಾಗ ಜೊತೆಯಲ್ಲಿ ಏನನ್ನೂ ತರಲಿಲ್ಲ ಮತ್ತು ಸಾಯುವಾಗ ಏನನ್ನೂ ಕೊಂಡು ಹೋಗುವುದಿಲ್ಲ. ನಾವು ಗಳಿಸಿದುದರಲ್ಲಿ ಸ್ವಲ್ಪ ಭಾಗವನ್ನು ಇತರರ ಉತ್ತಮ ಕೆಲಸಕ್ಕೆ ದಾನ ನೀಡಿ ಸಹಕರಿಸಿದರೆ ಅದಕ್ಕಿಂತ ದೊಡ್ಡ ಪುಣ್ಯದ ಕೆಲಸ ಬೇರೆ ಇರಲಾರದು” ಎಂಬುದು ರಮೇಶ್ ಶೆಟ್ಟಿಯವರ ಒಡಲಾಳದ ಮಾತು. ರಮೇಶ್ ಶೆಟ್ಟಿಯವರು ಪ್ರಚಾರ ಪ್ರಿಯರಲ್ಲ. ನನಗಿಂತಲೂ ಉತ್ತಮ ಕೆಲಸ ಮಾಡಿದವರು ಬಹಳಷ್ಟು ಮಂದಿ ಇದ್ದಾರೆ ಅವರನ್ನು ಸನ್ಮಾನಿಸಿ ನನಗೆ ಸನ್ಮಾನ ಬೇಡ ಎಂದು ನಯವಾಗಿ ನಿರಾಕರಿಸಿದರೂ ಹಲವಾರು ಸಂಘ ಸಂಸ್ಥೆಗಳು ಒತ್ತಾಯ ಪೂರ್ವಕವಾಗಿ ರಮೇಶ್ ಶೆಟ್ಟಿಯವರನ್ನು ಸನ್ಮಾನಿಸಿವೆ.
ಬಂಟರ ಸಂಘ, ಮುಂಬೈಯ ಮೀರಾ-ಭಾಯಂಧರ್ ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿಯಾಗಿ ಮಹತ್ವದ ಹೊಣೆಗಾರಿಕೆ ಹೊತ್ತಿರುವ ರಮೇಶ್ ಶೆಟ್ಟಿಯವರು “ನವ ತರುಣ ಮಿತ್ರ ಮಂಡಳಿ” ಮೀರಾ-ಭಾಯಂಧರ್ ಇದರ ಉಪಾಧ್ಯಕ್ಷರು. “ಬ್ರಾಹ್ಮರಿ” ಸುದ್ದಿ ವಾಹಿನಿ ಮುಂಬೈ ಮತ್ತು “ಯಕ್ಷಧ್ರುವ” ಮುಂಬೈ ಇವುಗಳ ಸಲಹೆಗಾರರು. “ಬಂಟರ ಸಂಘ” ಕುರ್ಲಾ, ಮುಂಬೈ. ಇದರ ಆಹ್ವಾನಿತ ಗೌರವ ಸದಸ್ಯರು. ಮೇಲಿನ ಸಂಘಸಂಸ್ಥೆಗಳು ಮುಂಬೈಯಲ್ಲಿ ರಮೇಶ್ ಶೆಟ್ಟಿಯವರು ಕಾರ್ಯ ಕ್ಷೇತ್ರವಾದರೆ ತನ್ನ ಹುಟ್ಟೂರ ಬಗ್ಗೆ ಅಪಾರ ಪ್ರೀತಿ ಅಭಿಮಾನ ಇರುವ ರಮೇಶ್ ಶೆಟ್ಟಿಯವರು ಊರಿನಲ್ಲಿಯ ಹಲವು ಸಂಸ್ಥೆಗಳಲ್ಲಿ ಸಹ ಭಾಗಿಯಾಗಿದ್ದಾರೆ. ಮುಖ್ಯವಾಗಿ “ಯಕ್ಷ ಮಿತ್ರ” ಪೂಂಜ, ಸಿದ್ಧಕಟ್ಟೆ ಇದರ ಸದಸ್ಯರು. “ಛಾಯಾ ಕಿರಣ” ಮಾಸ ಪತ್ರಿಕೆ ಹಾಗೂ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮುಖ್ಯ ಪ್ರವರ್ತಕರು. ಪಂಚ ದುರ್ಗಾಪರಮೇಶ್ವರಿ ದೇವಸ್ಥಾನ ಪೂಂಜ, ಆರಂಬೋಡಿ ಸಿದ್ಧಕಟ್ಟೆ, ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಕಂಬಳ ಮತ್ತು ಬ್ರಹ್ಮ ಮುಗೇರ-ಮಹಾಕಾಳಿ- ಕೊರಗಜ್ಜ ದೈವಸ್ಥಾನ, ಸಿದ್ಧಕಟ್ಟೆ ಉಪ್ಪಾರ ಬಂಟ್ವಾಳ ಇವುಗಳಲ್ಲಿ ಸಕ್ರಿಯರಾಗಿದ್ದಾರೆ.
ರಮೇಶ್ ಶೆಟ್ಟಿಯವರಿಗೆ ಸಲಹೆ ಹಾಗೂ ಸಂಪೂರ್ಣ ಸಹಕಾರ ನೀಡುವ ಅವರ ಮಡದಿ ತೃಪ್ತಿ ಶೆಟ್ಟಿಯವರು ಶಿಕ್ಷಕಿಯಾಗಿದ್ದಾರೆ. ರಮೇಶ್ ಶೆಟ್ಟಿ ಮತ್ತು ತೃಪ್ತಿ ಶೆಟ್ಟಿ ದಂಪತಿಗಳ ಏಕೈಕ ಸುಪುತ್ರಿ “ಸೃಷ್ಟಿ ಶೆಟ್ಟಿ”ಯು Bachelor of in Communication of MIT. Pune ಇಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ರಮೇಶ್ ಶೆಟ್ಟಿ ಸಿದ್ಧಕಟ್ಟೆಯವರಿಂದ ನಿರಂತರ ಸಮಾಜ ಸೇವೆ ನಡೆಯುತ್ತಲೇ ಇರಲಿ. ಅವರ ಸಂಸಾರಕ್ಕೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ಆರೋಗ್ಯ – ಆನಂದ – ಸಂಪತ್ತು ಸದಾ ಕರುಣಿಸಲಿ ಎಂದು ಮಹಾ ಮಾತೆಯನ್ನು ಪ್ರಾರ್ಥಿಸಿಕೊಂಡು ಲೇಖನಕ್ಕೆ ವಿರಾಮದ ಚಿಹ್ನೆ ಹಾಕುತ್ತೇನೆ.
ಶಿವಪ್ಪ ಶೆಟ್ಟಿ
ಪಂಜ ಮೊಗಪಾಡಿ ಪಡುಮನೆ