ಹಲವಾರು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಸೇವೆಗೈದಿದ್ದರೂ ಇಲ್ಲಿನ ಮಂತ್ರಮೂರ್ತಿ ಗುಳಿಗನ ಸನ್ನಿಧಿಯ ವಿಶೇಷ ಶಕ್ತಿಯನ್ನು ಮನಸಾರೆ ಅನುಭವಿಸುತ್ತಿದ್ದೇನೆ. ಪ್ರಾರ್ಥನೆ ಮೂಲಕ ದೈವಿಕ ಶಕ್ತಿಯನ್ನು ಒಳಿಸಿಕೊಳ್ಳಲು ಸಾಧ್ಯ ಎಂಬುದು ಇಲ್ಲಿ ಸಾಕಾರಗೊಂಡಿದೆ ಎಂದು ಕೊಡುಗೈ ದಾನಿ, ಹೇರಂಭ ಇಂಡಸ್ಟ್ರೀಸ್ ನ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು.
ಉಪ್ಲೇರಿ ವಾಂತಿಚ್ಚಾಲು ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿದಿಯಲ್ಲಿ ಜರುಗಿದ ವಿಶೇಷ ತಂಬಿಲ ಸೇವೆ ಮತ್ತು ನೂತನ ಟ್ರಸ್ಟ್ ನ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ತುಳುನಾಡಿನ ಜನರಿಗೆ ದೈವದ ಮೇಲೆ ಅಪಾರ ಭಕ್ತಿ ಇದೆ. ಮಂತ್ರ ಮೂರ್ತಿ ಗುಳಿಗ ಸನ್ನಿಧಿಯು ಪ್ರಸಿದ್ಧ ಕ್ಷೇತ್ರವಾಗಿ ಬೆಳಗಲಿ ಎಂದು ಹಾರೈಸಿದರು.
ಉದ್ಯಮಿ ದಾನಿ ಗೋಪಾಲಕೃಷ್ಣ ಪೈ ಬರಿಯಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರ ತಾರಾನಾಥ ರೈ, ತುಳುವೆರ್ ಚಾವಡಿಯ ಮಧು ಕುಮಾರ್ ಬೆಂಗಳೂರು, ಕುಂಬ್ಡಾಜೆ ಭಂಡಾರ ಬೀಡು ಅಶೋಕ್, ಚೆನ್ನಪ್ಪ ಕುಲಾಲ್ ಎರಗಲ್ಲು, ಕೃಷ್ಣ ಬೆಳ್ಚಪ್ಪಾಡ, ರಾಮ ನಾಯ್ಕ ಕುಂಟಾಲುಮೂಲೆ ಉಪಸ್ಥಿತರಿದ್ದರು. ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಪ್ರಾಸ್ತಾವಿಕ ಮಾತುಗಳ ಮೂಲಕ ಶ್ರೀಗುಳಿಗ ಸನ್ನಿಧಿಯಲ್ಲಿ ಪ್ರಾರ್ಥಿಸಿದ ಅನೇಕರಿಗೆ ತಮ್ಮ ಮನದಿಂಗಿತವು ಸಾಕಾರಗೊಂಡಿದೆ. ಸಂತಾನ, ವಿವಾಹ, ರೋಗ ಮುಕ್ತಿ, ಕಷ್ಟಗಳ ನಿವಾರಣೆಗಾಗಿ ಇಲ್ಲಿ ಪ್ರಾರ್ಥನೆ ಮಾಡಿದ ಭಗವದ್ಭಕ್ತರ ಇಷ್ಟಾರ್ಥ ಸಿದ್ಧಿಯಾಗಿದೆ ಎಂದರು. ಸೇವಾ ಸಮಿತಿ ಸದಸ್ಯ ಜಯ ನಿರೂಪಿಸಿದರು. ಸೇವಾ ಸಮಿತಿ ಕಾರ್ಯದರ್ಶಿ ರಮೇಶ್ ಮುಳಿಯಡ್ಕ ಸ್ವಾಗತಿಸಿ, ಜತೆ ಕಾರ್ಯದರ್ಶಿ ಸುಕುಮಾರ ವಂದಿಸಿದರು.