“ಕೀರ್ತಿಕಾಮನೆ ಬೆನ್ನ ಹಿಡಿದು ಹೋದರೆ ಮನುಜ ತಂತಿ ಮೇಲಿನ ಆಟ, ಅದು ದೊಂಬರಾಟ ; ಹೂ ಅರಳಿ ನಗುವಂತೆ ಇರಲಿ ಸಹಜತೆ ಮನದಿ ದೂರವಿರು ಹೊಗಳಿಕೆಗೆ” – ಮುದ್ದು ರಾಮ ಒಬ್ಬೊಬ್ಬರ ಬದುಕು ಒಂದೊಂದು ರೀತಿ. ಒಬ್ಬರದು ಗಳಿಸಬೇಕು ಗಳಿಸಿದನ್ನು ಉಳಿಸಬೇಕು ಅದೇ ಬದುಕು ಅನ್ನುವುದಾದರೆ, ಇನ್ನೊಬ್ಬರದ್ದು ದುಡಿಯಬೇಕು ದುಡಿ ದುಡಿದು ಗಂಟು ಕಟ್ಟಿ ನನ್ನ ಕುಟುಂಬದವರ ಜೀವನ ಹಸನುಗೊಳಿಸಬೇಕು. ಮತ್ತೊಬ್ಬರದ್ದು ದುಡಿಯುತ್ತಿರಬೇಕು ದುಡಿ- ದುಡಿಯುತ್ತಾ ಬದುಕು ಕೊನೆಯಾಗಲಿ ಅನ್ನುವುದಾದರೆ, ಬೆರಳೆಣಿಕೆಯ ಜನರ ವಿಚಾರ ಮಾತ್ರ ಬೇರೆಯದೇ ಆಗಿರುತ್ತದೆ. ನಾನು ಶ್ರಮಿಕನಾಗಬೇಕು ನನಗಾಗಿಯಲ್ಲ ನನ್ನವರಿಗಾಗಿಯೂ ಅಲ್ಲ, ಕೇವಲ ನನ್ನ ಸುತ್ತ-ಮುತ್ತಲ ಸಮಾಜಕ್ಕಾಗಿ ದುಡಿಯಬೇಕು ಅನ್ನುವವರ ಒಂದು ವರ್ಗ ಇರುತ್ತದೆ. ಆ ವರ್ಗಕ್ಕೆ ಸೇರಿದವರ ಚಿಂತನೆಯೂ ನಮ್ಮ ಊಹೆಗೆ ನಿಲುಕದಾಗಿರುತ್ತದೆ.
ಈ ಭೂಮಿಯಲ್ಲಿನ ಋಣ ಚಿರ ನಿದ್ರೆಗೆ ಜಾರುವ ತನಕ. ಇರುವಷ್ಟು ಕಾಲ ಕಷ್ಟ – ನೊಂದವರ ಬದುಕನ್ನು ಸಾಂತ್ವನಿಸಬೇಕು. ನಮ್ಮ ಆಸು-ಪಾಸಿನ ಸಮಾಜ ಪ್ರಗತಿ ಕಾಣಬೇಕು, ಊರು ಅಭಿವೃದ್ಧಿಯಾಗಬೇಕು, ಅಲ್ಲಿನ ಮಕ್ಕಳು ಶಿಕ್ಷಿತರಾಗಬೇಕು, ಅಲ್ಲಿನ ಧಾರ್ಮಿಕ ಕ್ಷೇತ್ರಗಳು ಸನಾತನ ಧರ್ಮದ ಮಹಿಮೆಯನ್ನು ಯುವ ಪೀಳಿಗೆಗೆ ಅರುಹುತ್ತಿರಬೇಕು ಎನ್ನುವ ಅಂಬರದಷ್ಟು ವಿಶಾಲ ಮನೋಭಾವನೆಯ ಜನ ಈ ಸಮಾಜದಲ್ಲಿ ಇದ್ದಾರೆ. ಅಂತವರಲೊಬ್ಬ ಧೀಮಂತ ಸಮಾಜ ಸೇವಕ ಹುಬ್ಬಳ್ಳಿಯ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿಯವರು. ಅವರ ಮನ- ಮನಸ್ಸು ನಿರ್ಮಲ. ಅವರ ಆಲೋಚನೆ- ಅವಲೋಕನ ಪರ ಹಿತದ ಬಗ್ಗೆಯೇ ಹೊರತು ಸ್ವಂತಕ್ಕಾಗಿಯಲ್ಲ. ಸುಗ್ಗಿಯವರು ಕಡು ಬಡತನದ ಮನೆಯಿಂದ ಬಂದವರಲ್ಲ ಹಾಗಂತ ಕೂತುಣ್ಣುವ ಶ್ರೀಮಂತಿಕೆಯ ಮನೆಯಂತೂ ಅವರದಲ್ಲ. ತಂದೆ ಬಾರ್ಕೂರು ಹನೇಹಳ್ಳಿ ಕೃಷ್ಣಯ್ಯ ಶೆಟ್ಟಿ ಹಾಗೂ ಉಡುಪಿ ತಾಲೂಕಿನ ಹಲುವಳ್ಳಿ ಗಿರಿಜಾ ಶೆಟ್ಟಿ ದಂಪತಿಯ ಇಬ್ಬರು ಪುತ್ರರಲ್ಲಿ ಮೊದಲನೆಯವರು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ಸುಧಾಕರ ಮಹಾ ತಂಟೆಕೋರ. ಎಂಟನೇ ತರಗತಿಯಲ್ಲಿಯೇ ಶಿಕ್ಷಣಕ್ಕೆ ತೀಲಾಂಜಲಿ ಇತ್ತಾಗ, ಇವನ ಪೋಕರಿತನಕ್ಕೆ ಕಡಿವಾಣ ಹಾಕಬೇಕಾದರೆ ಪರವೂರಿಗೆ ಕಳಿಸಬೇಕು ಎಂಬ ದೃಢ ನಿರ್ಧಾರಕ್ಕೆ ಮನೆಯವರು ಬಂದದು ಬೆಳಗಾವಿಯ ವಿಠಲ ಹೆಗ್ಡೆಯವರ ಹೋಟೆಲಿಗೆ ಕಳುಹಿಸಿದರು.
ಪುಟ್ಟ ಹುಡುಗ ಅಲ್ಲಿ ಗ್ಲಾಸ್ ತೊಳೆದದ್ದು ಕೇವಲ ಹದಿನೈದು ದಿನ. ಹೆಗ್ಡೆಯವರಿಗೆ ಸುಧಾಕರನ ಚುರುಕುತನ ಕಂಡು ಆತನಿಗೆ ಜವಾಬ್ದಾರಿಯ ಕೆಲಸಕ್ಕೆ ಹಚ್ಚಿದರು. ಬಹಳ ಚುರುಕಾದ ಸುಧಾಕರ ಬದುಕು ಕಟ್ಟಿಕೊಳ್ಳಲು ಮಸ್ತಕದ ಪುಸ್ತಕದಲ್ಲಿ ನೀಲಿ ನಕ್ಷೆ ರಚಿಸಿಕೊಂಡರು. ಮೊತ್ತ ಮೊದಲು ತನ್ನಲ್ಲಿರುವ ಹುಡುಗಾಟದ ಬುದ್ದಿಗೆ ಪೂರ್ಣವಿರಾಮದ ಚುಕ್ಕೆ ಇಟ್ಟರು. ಮಾಲಕರ ಪ್ರೀತಿಗೆ ಪಾತ್ರರಾದರು. ಒಂದಷ್ಟು ವರ್ಷಗಳ ಕಾಲ ವಿಠಲ ಹೆಗ್ಡೆಯವರೊಂದಿಗೆ ದುಡಿದು ಹೋಟೆಲ್ ಉದ್ಯಮದ ಒಳ ಹೊರಗನ್ನು ಅರಿತು ಬಿಟ್ಟರು. ಆಪ್ತ ಮಿತ್ರರ ಸ್ನೇಹ ಸಂಪಾದಿಸಿಕೊಂಡ ಸುಧಾಕರ್ ಜೀವನ ಅಂದರೆ ಕೇವಲ ದುಡಿತವಲ್ಲ, ದುಡಿಯುವುದರೊಂದಿಗೆ ಸಾಧಿಸಬೇಕು ಎಂಬ ಹಟಕ್ಕೆ ಬಿದ್ದು ಹುಬ್ಬಳ್ಳಿ ನಗರ ಮಧ್ಯದಲ್ಲಿ ರೇಣುಕಾ ಹೋಟೆಲಿನ ಸಂಚಾಲಕರಾದರು. ಕಠಿಣ ಪರಿಶ್ರಮಕ್ಕೆ ಪರಮಾತ್ಮನ ಕೃಪೆ ಅನಂತವಾಗಿರುತ್ತದೆ ಅನ್ನುವುದಕ್ಕೆ ಸಾಕ್ಷಿಯಾದರು. ಮತ್ತೆ ಅವರು ಹಿಂತಿರುಗಿ ನೋಡಲಿಲ್ಲ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುತ್ತಾ ಬಂದರು.
ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದ ನಂತರ ಹುಬ್ಬಳ್ಳಿ ನಡು ನಗರದಲ್ಲಿರುವ ಮತ್ತೊಂದು ಹೋಟೆಲಿನ ಸಂಚಾಲಕತ್ವ ಇವರ ಪಾಲಿಗಾಯಿತು. ಆ ಹೋಟೆಲಿಗೆ ‘ಸುಗ್ಗಿ’ ಎಂದು ಹೆಸರಿಟ್ಟರು. ಸುಗ್ಗಿ ಗೆದ್ದು ಬಂದರು. ಹೋಟೆಲಿನ ವ್ಯಾಪಾರ ಸುಗ್ಗಿಯ ಕೊಯಿಲಾಗಿತ್ತು. ಸುಧಾಕರ ಶೆಟ್ಟಿಯವರ ಹೆಸರಿನ ಮುಂದೆ ‘ಸುಗ್ಗಿ’ ಶಾಶ್ವತವಾಗಿ ಸೇರಿಕೊಂಡಿತು. ಹಂತ ಹಂತವಾಗಿ ಯಶಸ್ಸಿನ ಮೆಟ್ಟಿಲುಗಳು ಇವರಿಗೆ ಸೋಪಾನವಾದವು. ಇವತ್ತು ಹುಬ್ಬಳ್ಳಿ- ಧಾರವಾಡದ ಪ್ರತಿಷ್ಠಿತ ಉದ್ಯಮಿಗಳಲ್ಲಿ ಇವರ ಹೆಸರು ಮೇರು ಸ್ತರದಲ್ಲಿದೆ. ಹಲವು ಉದ್ಯಮಗಳು ಇವರ ಮುಂದಾಳತ್ವದಲ್ಲಿವೆ. ಕೇವಲ ಉದ್ಯಮಿ ಅಂದ ಮಾತ್ರಕ್ಕೆ ಅವರ ಕುರಿತು ಬರೆಯುವ ಅಗತ್ಯವಿರಲಿಲ್ಲ. ಸುಗ್ಗಿಯವರ ಸಮಾಜ ಸೇವೆ ಮಾತ್ರ ವಿಶಿಷ್ಟವಾದುದು. ಸಮಾಜದ ಪ್ರತಿಯೊಬ್ಬರೂ ಮೆಚ್ಚುವಂತಹ ಕೆಲಸ ಅವರದ್ದು. ಧಾರವಾಡದಿಂದ ನಮ್ಮ ಕರಾವಳಿಗೆ ಹೋಗುವ ರಾಜ ಮಾರ್ಗದಲ್ಲಿ ಯಾವುದೇ ರಸ್ತೆ ಅಪಘಾತಗಳು ಆದಲ್ಲಿ ಅಪಘಾತಕ್ಕೊಳಗಾದವರನ್ನು ತನ್ನದೇ ಆಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಸೇರಿಸಿ ಅಲ್ಲಿನ ಖರ್ಚು ವೆಚ್ಚಗಳನ್ನು ಮೊದಲಿಗೆ ಇವರೇ ಭರಿಸುತ್ತಾರೆ. ಅಪಘಾತದಲ್ಲಿ ಯಾರಾದರೂ ಮೃತ ಪಟ್ಟರೆ ಅವರನ್ನು ಅವರೂರಿಗೆ ಮುಟ್ಟಿಸಿ ಶವ ಸಂಸ್ಕಾರದ ತನಕ ತಾನಿದ್ದು ಅಲ್ಲಿದ್ದವರನ್ನು ಸಾಂತ್ವನಗೊಳಿಸುವ ಕೆಲಸವನ್ನು ಮಾಡಿ ಹಿಂತಿರುಗುತ್ತಾರೆ.
ಅವರ ಈ ಪರಿಯ ಮಾನವೀಯ ಅನುಕಂಪಕ್ಕೆ ಮುಂಬಯಿಯ ಹಲವಾರು ಕುಟುಂಬಗಳೂ ಸಾಕ್ಷಿಯಾಗಿವೆ. ಕೊರೋನಾ ಕಾಲದಲ್ಲಿ ಮುಂಬಯಿಯಿಂದ ಉಡುಪಿ ಮಂಗಳೂರು ಕಡೆ ಹೋಗುತ್ತಿದ್ದವರಿಗೆ ನೀರು ಕೊಡಲೂ ಹೆದರುತ್ತಿದ್ದ ಆ ಸಮಯದಲ್ಲಿ ಇವರು ತನ್ನ ಹೋಟೆಲಿನ ಪ್ರತಿಯೊಂದು ಕೋಣೆಗಳನ್ನು ನಮ್ಮವರಿಗಾಗಿ ಮೀಸಲಿಟ್ಟರು. ಅದೂ ಸಹ ಒಂದು ನಯಾ ಪೈಸೆಯನ್ನು ಪಡೆಯದೇ. ಆ ಸಮಯದಲ್ಲಿ ಸಾವಿರಾರು ಜನರಿಗೆ ಊಟ-ಉಪಚಾರ ವ್ಯವಸ್ಥೆಯನ್ನೂ ಧರ್ಮಾರ್ಥವಾಗಿ ಮಾಡಿದ ಪುಣ್ಯಾತ್ಮ ಅವರು. ಅವರ ಈ ಅನುಪಮ ಸೇವೆಯನ್ನು ಪರಿಗಣಿಸಿ ಇಂಟರ್ನ್ಯಾಷನಲ್ ಕೌನ್ಸಿಲ್ ಏಷ್ಯಾ ವೇದಿಕೆ ಕಲ್ಚರಲ್ ಫೌಂಡೇಶನ್ ವತಿಯಿಂದ ತಮಿಳುನಾಡಿನ ಹೊಸೂರ್ ನಗರದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಕೊಟ್ಟು ಗೌರವಿಸಲಾಯಿತು. ಅದೇ ಸಮಯದಲ್ಲಿ ಹುಬ್ಬಳ್ಳಿ- ಧಾರವಾಡದ ಹತ್ತಾರು ಸಂಸ್ಥೆಗಳು ಕೋವಿಡ್ ಸಮಯದ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿದವು. ನಾಡಿನ ಎಲ್ಲಾ ಪತ್ರಿಕಾ ಮಾಧ್ಯಮಗಳು ಅವರ ಸೇವೆಯನ್ನು ಕೊಂಡಾಡಿದವು. ಸುಗ್ಗಿಯವರ ಅಂತಃಕರಣವನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಸಮಾಜ ಸೇವೆಯನ್ನು ಪ್ರಧಾನವಾಗಿಟ್ಟುಕೊಂಡು ಯಾವತ್ತೋ ರಾಜಕೀಯ ಪ್ರವೇಶ ಮಾಡಿ ಬಹು ದೊಡ್ಡ ಹೆಸರು ಮಾಡಬಹುದಿತ್ತು. ಎಲ್ಲಾ ಪಕ್ಷಗಳ ನಾಯಕರುಗಳೊಂದಿಗೆ ಇವರ ನಿಕಟ ಸಂಪರ್ಕವಿತ್ತು.
ರಾಜಕೀಯ ನನಗೆ ಒಗ್ಗಿ ಬಾರದು. ಒಂದು ಪಕ್ಷಕ್ಕೆ ನಾನು ಸೀಮಿತನಾಗಿರಬಾರದು. ಪಕ್ಷಾತೀತವಾಗಿ ಬೆಳೆಯಬೇಕು ಎಂಬ ದೃಢ ಸಂಕಲ್ಪಕ್ಕೆ ಬಂದರು. ಎಲ್ಲರೊಂದಿಗೂ ಆಪ್ತರಾಗಿದ್ದುಕೊಂಡೇ ರಾಜಕೀಯದ ಲಾಭವನ್ನು ಕೇವಲ ಸಮಾಜ ಸೇವೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಹಿರಿಯ ರಾಜಕಾರಣಿ ಬಸವರಾಜ್ ಹೊರಟ್ಟಿಯವರೊಂದಿಗಿನ ಸ್ನೇಹ ಸಂಬಂಧವನ್ನು ಉಪಯೋಗಿಸಿಕೊಂಡು ತನ್ನ ಹುಟ್ಟೂರಿನ ಸಮೀಪದ ಕರ್ಜೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪದವಿ ಪೂರ್ವ ಕಾಲೇಜು ಆಗುವಲ್ಲಿ ಅವಿರತ ಶ್ರಮಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ಬಹಳ ದೊಡ್ಡ ಕೊಡುಗೆ ಕೊಟ್ಟ ಪುಣ್ಯಾತ್ಮ ಸುಗ್ಗಿ. ಹಾಗೆಯೇ ಕರ್ಜೆಯಲ್ಲಿರುವ ಶತಮಾನಗಳಷ್ಟು ಪುರಾತನ ಮಹಾಲಿಂಗೇಶ್ವರ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡುವುದಕ್ಕಾಗಿ ಪಣ ತೊಟ್ಟರು. ಒಂದಷ್ಟು ಕಾನೂನು ತೊಡಕುಗಳನ್ನು ಎದುರು ಹಾಕಿಕೊಂಡರು. ಒಟ್ಟಾರೆಯಾಗಿ ಇವರ ಅಧ್ಯಕ್ಷತೆಯಲ್ಲಿ ಈ ಶೀಲಾಮಯ ದೇವಸ್ಥಾನ ಇದೀಗ ಉಡುಪಿ ತಾಲೂಕಿನ ಒಂದು ಪವಿತ್ರ ಧಾರ್ಮಿಕ ಸ್ಥಳವಾಗಿದೆ. ಅವರ ಹೋರಾಟದ ಫಲಕ್ಕೆ ಊರವರ ಕೊಂಡಾಟ-ಹಾರೈಕೆ ಸುಗ್ಗಿಯವರನ್ನು ಮತ್ತಷ್ಟು ಬೆಳೆಸಿದೆ. ಅಂದರೆ ಕೇವಲ ಹೊಗಳಿಕೆಯ ಮಾತಲ್ಲ, ತನ್ನೂರಿನ ಸುತ್ತಮುತ್ತಲ ಹಳ್ಳಿಯ ಬಡ ಹೆಣ್ಣು ಮಕ್ಕಳ ಮದುವೆಗೆ ಬಹುದೊಡ್ಡ ಮಟ್ಟದಲ್ಲಿ ಧನ ಸಹಾಯ ಮಾಡುತ್ತಾ ಬಂದಿದ್ದಾರೆ. ಮಾತ್ರವಲ್ಲ ಅನಾರೋಗ್ಯ ಪೀಡಿತರಿಗೆ, ಹಿರಿಯ ಜೀವಗಳಿಗೆ ತಿಂಗಳು ತಿಂಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಅವರ ಸಹಾಯಕ್ಕೆ ವಿನಿಯೋಗಿಸುತ್ತಾರೆ.
ಸುಗ್ಗಿ ಸುಧಾಕರ ಶೆಟ್ಟಿ ದಂಪತಿಗಳ ಮಾತು ಸಮಾಜಮುಖಿ. ಸಮಾಜದಲ್ಲಿರುವ ಬಡ ಹೆಣ್ಣು ಮಕ್ಕಳನ್ನು ನಮ್ಮ ಮಕ್ಕಳಂತೆ ಕಾಣುತ್ತೇವೆ ಎನ್ನುತ್ತಾರೆ ಈ ದಂಪತಿ. ಭಟ್ಕಳದಿಂದ ಕಾಸರಗೋಡಿನ ತನಕ ಎಲ್ಲಾ ಬಂಟರ ಸಂಘಗಳಿಗೂ ಸದಸ್ಯರಾಗಿದ್ದಾರೆ, ಮಾತ್ರವಲ್ಲ ಆ ಸಂಸ್ಥೆಗಳಿಗೆ ತನ್ನ ಕೊಡುಗೈ ಸಹಾಯವನ್ನು ನೀಡುತ್ತಾ ಬಂದಿದ್ದಾರೆ. ಬಂಟರ ಮಾತೃ ಸಂಘ ಮಂಗಳೂರು, ಜಾಗತಿಕ ಬಂಟರ ಸಂಘಗಳ ಸದಸ್ಯರಾಗಿರುವರು. ಪ್ರಸ್ತುತ ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಅಧ್ಯಕ್ಷರಾಗಿ ಬಹಳಷ್ಟು ಕಾರ್ಯಗಳನ್ನು ಮಾಡುತ್ತಾ ಬಂದಿರುವರಲ್ಲದೆ, ಅವರ ಸಾಮಾಜಿಕ ಕಾರ್ಯಗಳನ್ನು ಕಂಡು ಹುಬ್ಬಳ್ಳಿ- ಧಾರವಾಡ ಮಹಾನಗರಪಾಲಿಕೆ ಈ ಸಂಸ್ಥೆಗೆ 2023 ರ ಕರ್ನಾಟಕ ರಾಜ್ಯೋತ್ಸವದಂದು ಧೀಮಂತ ಸನ್ಮಾನವನ್ನು ಮಾಡಿದೆ. ಇತ್ತೀಚಿಗೆ ಬಹ್ರೈನ್ ನಲ್ಲಿ ಜರುಗಿದ ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಸಂಯೋಗದಲ್ಲಿ ಉದ್ಯಮ ರಂಗದಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಗುರುತಿಸಿ ‘ಬಹ್ರೈನ್-ಇಂಡಿಯನ್ ಇಂಟರ್ನ್ಯಾಷನಲ್ ಅವಾರ್ಡ್’ ಕೊಟ್ಟು ಗೌರವಿಸಲಾಯಿತು. ಆ ಸಮಯದಲ್ಲಿ ಭಾರತೀಯ ರಾಯಭಾರಿ ಕಚೇರಿಗೆ ಅವರನ್ನು ಆಹ್ವಾನಿಸಿ ಸನ್ಮಾನಿಸಿತ್ತು. ಕರ್ನಾಟಕದ ನೂರಕ್ಕಿಂತಲೂ ಹೆಚ್ಚು ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ. ಸುಗ್ಗಿಯವರು ಸಮಾಜ ಸೇವೆ ಜಾತಿ- ಮತವನ್ನು ಮೀರಿ ನಿಂತಿದೆ. ಅವರ ಎಲ್ಲಾ ಸಮಾಜ ಸೇವೆಗೆ ಪತ್ನಿ ಆಶಾ ಸುಧಾಕರ ಶೆಟ್ಟಿ ಹುರಿದುಂಬಿಸುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಸುಗ್ಗಿಯವರಂತಹ ನಿಸ್ವಾರ್ಥ ಸಮಾಜ ಸೇವಕರ ಪಟ್ಟಿ ಈ ಸಮಾಜದಲ್ಲಿ ಬೆಳೆಯುತ್ತಿರಬೇಕು. ಸಾವಿರಾರು ನೋವಿನಿಂದ ಬಳಲುವ, ಕಷ್ಟದಲ್ಲಿರುವ ಜೀವಗಳಿಗೆ ಅವರು ಸ್ವಂದಿಸುವ ರೀತಿಗೆ ನಾವು ಅವರನ್ನು ಅಕ್ಷರದ ಮೂಲಕ ಅಭಿನಂದಿಸುತ್ತೇವೆ. ಇಂತಹ ಓರ್ವ ಸಜ್ಜನ ಸಮಾಜ ಸೇವಕನ ಬದುಕಿಗೆ ಭಗವಂತ ಶತಮಾನದ ಆರೋಗ್ಯದ ಬದುಕನ್ನು ಕರುಣಿಸಬೇಕು ಎಂದು ಹಾರೈಸುತ್ತೇವೆ.