ಜಿಲ್ಲಾ ಧಾರ್ಮಿಕ ಪರಿಷತ್ ನ ಸದಸ್ಯರಾಗಿ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶಿವನಾಥ ರೈ ಮೇಗಿನಗುತ್ತು ಅವರನ್ನು ನೇಮಕಗೊಳಿಸಿ ಸರಕಾರದ ಅಧೀನ ಕಾರ್ಯದರ್ಶಿ ಕೆ.ಪಿ ಹೇಮಂತರಾಜು ಆದ್ದೇಶಿಸಿದ್ದಾರೆ.
ಆದೂರು ಏಳ್ನಾಡುಗುತ್ತು ಕಿಟ್ಟಣ್ಣ ರೈ ಮತ್ತು ಮೇಗಿನಗುತ್ತು ಸುಂದರಿ ರೈ ದಂಪತಿಯರ ಪುತ್ರನಾಗಿರುವ ಶಿವನಾಥ ರೈ ಮೇಗಿನಗುತ್ತು ಅವರು ಕಲ್ಪಣೆ ಸರ್ವೆ ಸ.ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸರ್ವೆ ಎಸ್ ಜಿಎಂ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮತ್ತು ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿಎಸ್ಸಿ ಶಿಕ್ಷಣ ಪಡೆದಿರುತ್ತಾರೆ. ಧಾರ್ಮಿಕ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ಇವರು ಭಕ್ತಕೂಡಿ ಶ್ರೀರಾಮ ಭಜನಾ ಮಂದಿರದಲ್ಲಿ 14 ವರ್ಷಗಳ ಕಾಲ ಅಧ್ಯಕ್ಷರಾಗಿ, ಮಂದಿರ ಪುನರ್ ನಿರ್ಮಾಣದ ರೂವಾರಿಯಾಗಿ, ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಪುನರ್ ನಿರ್ಮಾಣ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಸರಕಾರಿ ಪ್ರೌಢಶಾಲೆ ಕಲ್ಪಣೆ ಸರ್ವೆ ಇದರ ಕಾರ್ಯಾಧ್ಯಕ್ಷರಾಗಿ, ಬೆಳ್ಳಿ ಹಬ್ಬದ ಅಧ್ಯಕ್ಷರಾಗಿ ರಂಗಮಂದಿರ ನಿರ್ಮಾಣ ಹಾಗೂ ಶಾಲಾ ಅಭಿವೃದ್ಧಿ ಕಾರ್ಯಗಳಿಗೆ ಕಾರಣೀಭೂತರಾಗಿದ್ದಾರೆ.
ವಿದ್ಯಾನಿಧಿ ಯೋಜನೆಯ ಮೂಲಕ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ, ಸ್ಪರ್ಶ ಸಹಾಯವಾಣಿ ಮುಖಾಂತರ ಕೊರೋನಾ ಸಂದರ್ಭದಲ್ಲಿ 625 ಕ್ಕಿಂತಲೂ ಮಿಕ್ಕಿ ಕಿಟ್ ವಿತರಣೆ, ಆಯುಷ್ಮಾನ್ ಕಾರ್ಡ್ ಶಿಬಿರವನ್ನು ಮಾಡಿ 600ಕ್ಕೂ ಮಿಕ್ಕಿ ಉಳಿದ ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಿರುತ್ತಾರೆ. ಇವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಮಿಕ ವಿಭಾಗದ ಮಾಜಿ ಕಾರ್ಯದರ್ಶಿ, ಪುತ್ತೂರು ಬ್ಲಾಕ್ ಕಾರ್ಮಿಕ ಘಟಕದ ಮಾಜಿ ಅಧ್ಯಕ್ಷ, ಸರ್ವೆ ವಲಯದ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿರುತ್ತಾರೆ. ಪ್ರಸ್ತುತ ಇವರು ಮುಂಡೂರು ಗ್ರಾ.ಪ. ಮಾಜಿ ಸದಸ್ಯ, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 4ನೇ ಅವಧಿಗೆ ನಿರ್ದೇಶಕರಾಗಿ ಹಾಗೂ ಸರ್ವೆ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರೆ ಹಾಗೂ ಉತ್ಸವಾದಿಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.