ಭಾರತೀಯ ಸೇನೆಯಲ್ಲಿ ಸಾಹಸ ತ್ಯಾಗ ಬಲಿದಾನಕ್ಕೆ ಹೆಸರುವಾಸಿಯಾಗಿರುವ ಪ್ರತಿಷ್ಠಿತ ಗೋರ್ಖಾ ರೈಫಲ್ಸ್ ರೇಜಿಮೆಂಟ್ ಸೇವೆ ಸಲ್ಲಿಸಿದ್ದ ನಿವೃತ್ತ ಸೇನಾಧಿಕಾರಿ ಯುವ ನಾಯಕ ಕ್ಯಾಪ್ಟನ್ ಬೃಜೇಶ್ ಚೌಟ ಅವರು 2024ರ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ಮಂಗಳೂರಿನ ಮಿಲಾಗ್ರಿಸಿನಲ್ಲಿ ಪ್ರಾಥಮಿಕ ಶಿಕ್ಷಣ, ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿಎಸ್ಸಿ ಪದವಿ ಮುಗಿಸಿದ ಬೃಜೇಶ್ ಬಳಿಕ ಮಧ್ಯಪ್ರದೇಶದ ಇಂದೋರ್ ಐಐಎಂನಲ್ಲಿ ಉನ್ನತ ಶಿಕ್ಷಣವನ್ನು ಮುಗಿಸಿದರು. ಪದವಿಯಲ್ಲಿದ್ದಾಗ ಎನ್.ಸಿ.ಸಿ ಸೇರಿ ವಿಶ್ವವಿದ್ಯಾಲಯದಲ್ಲಿ ಬೆಸ್ಟ್ ಕೇಡೆಟ್ ಎಂದು ಗುರುತಿಸಿಕೊಂಡು ದೆಹಲಿಯಲ್ಲಿ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಎನ್.ಸಿ.ಸಿ ಕೇಡೆಟ್ ಆಗಿ ಪಾಲ್ಗೊಂಡಿದ್ದರು.
ಯು.ಪಿ.ಎಸ್.ಸಿ ಆಯೋಜಿಸುವ ಕಂಬೈನ್ಸ್ ಡಿಫೆನ್ಸ್ ಸರ್ವಿಸಸ್ ಎಕ್ಸಾಮಿನೇಷನ್ (CDSE) ಪರೀಕ್ಷೆ ಹಾಗೂ ಎಸ್.ಎಸ್.ಬಿ ಇಂಟರ್ವ್ಯೂನಲ್ಲಿ ತೇರ್ಗಡೆಗೊಂಡು ಚೆನ್ನೈಯಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಭಾರತೀಯ ಭೂ ಸೇನೆಯ ಪ್ರತಿಷ್ಠಿತ ಗೋರ್ಖಾ ರೈಫಲ್ಸ್ ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇವರು ಅಸ್ಸಾಂ ಮತ್ತು ಮಣಿಪುರ ಸೇರಿದಂತೆ ದೇಶದ ಹಲವು ಪ್ರದೇಶಗಳಲ್ಲಿ ಸೇನಾ ಅಧಿಕಾರಿಯಾಗಿ ಸೇವೆ ಸಲ್ಲಿಸಿ 2011ರಲ್ಲಿ ಸ್ವಯಂ ನಿವೃತ್ತಿ ಪಡೆದರು.
ಊರಿಗೆ ಮರಳಿದ ಬೃಜೇಶ್ ಚೌಟ ಆರ್.ಎಸ್.ಎಸ್ ಮತ್ತು ಬಿಜೆಪಿಯಲ್ಲಿ ಗುರುತಿಸಿಕೊಂಡರು. ದಕ್ಷಿಣ ಕನ್ನಡ ಯುವ ಮೋರ್ಚಾದ ಕಾರ್ಯದರ್ಶಿಯಾಗಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಆನಂತರ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಕ್ಯಾಪ್ಟನ್ ಜವಾಬ್ದಾರಿ ನಿರ್ವಹಿಸಿ ಮೊನ್ನೆಯಷ್ಟೇ ಕರ್ನಾಟಕ ಬಿಜೆಪಿಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಪ್ರಭಾರಿಯಾಗಿ ಕೆಲಸ ಮಾಡಿ ಗುರುರಾಜ್ ಗಂಟಿಹೊಳೆ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2015ರಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳ ನಿಷೇಧಕ್ಕೊಳಗಾದ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಟವನ್ನು ಅತ್ಯಂತ ಸಮರ್ಪಕವಾಗಿ ಸಂಘಟಿಸಿದವರಲ್ಲಿ ಕ್ಯಾಪ್ಟನ್ ಬೃಜೇಶ್ ಚೌಟ ಕೂಡಾ ಒಬ್ಬರು. ಕಂಬಳಕ್ಕೆ ಒಂದು ಹಂತದ ಜಯ ಸಿಕ್ಕ ಬೆನ್ನಲ್ಲೇ ಮಂಗಳೂರು ನಗರದಲ್ಲಿಯೇ ಕಂಬಳ ಆಯೋಜಿಸಬೇಕೆಂದು ನಿಶ್ಚಯಿಸಿ, ಯುವಕರ ತಂಡವನ್ನು ಕಟ್ಟಿಕೊಂಡು ಸತತ ಆರು ವರ್ಷಗಳಿಂದ ‘ಮಂಗಳೂರು ಕಂಬಳ’ ಹೆಸರಲ್ಲಿ ಕಂಬಳ ನಡೆಸಿಕೊಂಡು ಬಂದರು. ಅಲ್ಲದೇ ಇವರು ಪ್ರತಿಷ್ಠಿತ ಮಂಗಳೂರು ಲಿಟ್ ಫೆಸ್ಟ್ ಆಯೋಜಕರೂ ಹೌದು.
ದಕ್ಷಿಣ ಕನ್ನಡಕ್ಕೆ ಒಬ್ಬ ವಿದ್ಯಾವಂತ ಯುವ ನಾಯಕನ ಅವಶ್ಯಕತೆ ತುಂಬಾ ಇತ್ತು. ಈ ಸ್ಥಾನಕ್ಕೆ ಬಿಜೆಪಿ ಒಬ್ಬ ಮಧ್ಯಮ ವರ್ಗದಲ್ಲಿ ಜನಸಿದ ಸಮರ್ಥ ಸಾಮಾನ್ಯ ವ್ಯಕ್ತಿಯನ್ನು ಆಯ್ಕೆ ಮಾಡಿದೆ. ಯೋಧನೊಬ್ಬ ನಮ್ಮ ಪ್ರತಿನಿಧಿ ಆಗೋದು ಬಂಟರಾಗಿ, ಕರಾವಳಿಗರಾಗಿ ನಮಗೆಲ್ಲಾ ಹೆಮ್ಮೆಯ ವಿಚಾರ. ದಕ್ಷಿಣ ಕನ್ನಡದ ಸಮರ್ಪಕ ಅಭಿವೃದ್ಧಿಯ ಹರಿಕಾರ ನೀವಾಗಿ. ನಾವು ವಿರಮಿಸದೆ ನಿಮ್ಮನ್ನು ಗೆಲ್ಲಿಸಿಕೊಡುತ್ತೇವೆ. ಅಭಿವೃದ್ಧಿಯ ವಿಚಾರದಲ್ಲಿ ನೀವು ಯಾವತ್ತಿಗೂ ವಿರಮಿಸದಿರಿ. ವಿಜಯೀಭವ ಬೃಜೇಶ್ ಚೌಟ.