ಹೌದು ಕಿನ್ನಿಗೋಳಿ ಸಮೀಪದ ಕೆಮ್ರಾಲ್ ಗ್ರಾಮದ ಪಲ್ಲೆಕುದ್ರು ಎಂಬ ಗ್ರಾಮಾಂತರ ಪ್ರದೇಶದ ಮಹಿಳೆಯೊಬ್ಬರು ಅತ್ಯಂತ ಅಪರೂಪದ ಕಲಾಪ್ರಕಾರದಲ್ಲಿ ಅಭಿರುಚಿ ತೋರಿಸುತ್ತಾ ಕಸದಿಂದ ರಸ ತೆಗೆವ ವಿಚಕ್ಷಣ ಪ್ರತಿಭೆ ಹೊಂದಿದ್ದು ಬಾಲ್ಯದ ದಿನಗಳಿಂದಲೇ ತನ್ನ ಸುತ್ತ ಮುತ್ತಲ ಕಸ ಗುಡಿಸಿ ವಠಾರವನ್ನು ಶುದ್ಧವಾಗಿರಿಸುತ್ತಾ ತನ್ನ ಮನೆ ಪರಿಸರದಲ್ಲೇ ಕಾಣ ಸಿಗುವ ಕೆಲವು ಕಸಗಳನ್ನು ಹೆಕ್ಕಿ ಆಯ್ದು ಅವುಗಳಿಗೆ ತನ್ನ ಕಲ್ಪನೆಯ ಆಕಾರ ನೀಡಿ ವರ್ಣರಂಜಿತ ಆಕರ್ಷಕ ವಸ್ತು ವೈವಿಧ್ಯಗಳನ್ನು ಸೃಜಿಸಿ ಕಂಡ ಜನರು ಮೆಚ್ಚಿ ಈಕೆಯ ಪ್ರತಿಭೆಯನ್ನು ಕೊಂಡಾಡುವಾಗ ಆಗುವ ಅಪರಿಮಿತ ಆನಂದವೇ ಮುಂದೆ ಇದೇ ಕ್ಷೇತ್ರದಲ್ಲಿ ಸಾಧನೆ ಮಾಡಿ ಇಂದು ಸುಮತಿ ಶೆಟ್ಟಿ ಅವರ ಕಲಾ ಪ್ರತಿಭೆಗೆ ವ್ಯಾಪಕ ಪ್ರಶಂಸೆ ದೊರೆಯುತ್ತಿದೆ.
ಕಲೆಯೇ ಜೀವಾಳವಾಗಿರುವ ಶ್ರೀಮತಿ ಸುಮತಿ ಶೆಟ್ಟಿ ಅವರ ಕಲಾತ್ಮಕ ವಸ್ತುಗಳ ರಚನೆ ಅವರ ಮನೆ ಸುತ್ತ ಹೂದೋಟಗಳಲ್ಲಿ ಸಾರ್ವಜನಿಕರನ್ನು ಆಕರ್ಷಿಸುತ್ತದೆ. ಮದುವೆಯದ ಕೆಲವೇ ವರ್ಷಗಳಲ್ಲಿ ಪತಿಯನ್ನು ಕಳೆದುಕೊಂಡ ಎರಡು ಹೆಣ್ಣು ಮಕ್ಕಳು ಒಂದು ಗಂಡು ಮಗನೊಂದಿಗೆ ವೃದ್ಧಾಪ್ಯದ ಜೀವನ ಸಾಗಿಸುತ್ತಿರುವ ಇವರ ಬಾಳಿನ ಸಂಜೆ ಗೋಳಾಗದ ರೀತಿಯಲ್ಲಿ ಮುಂದುವರಿಯಬೇಕು. ವಿಶೇಷ ಕಲಾ ಪ್ರತಿಭೆಯನ್ನು ಗುರುತಿಸಿ ಇವರಿಗೆ ಪ್ರೋತ್ಸಾಹ ನೀಡುವ ಸಂಸ್ಥೆಗಳು ಮುಂದೆ ಬರಬೇಕು. ಹಾಗೆ ಮಾಡಿದಲ್ಲಿ ಶ್ರೀಮತಿ ಸುಮತಿ ಶೆಟ್ಟಿ ಅವರ ಜೀವನ ಸುಧಾರಿಸಿ ಆಕೆಯ ಆಸಕ್ತಿಯ ಕಲಾ ಪ್ರತಿಭೆ ಅರಳೀತು. ಇವರ ವಿಶೇಷ ಪ್ರತಿಭೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸಂಮಾನಿಸಿ ಸಂಮಾನ ಪತ್ರ ಪ್ರಶಸ್ತಿಗಳನ್ನು ನೀಡಿವೆ. ಅವರ ಭವಿಷ್ಯಕ್ಕೊಂದು ಭಧ್ರ ನೆಲೆ ದೊರೆಯಲಿ. ಕಲಾಸಕ್ತಿ ಕಮರದೆ ಅರಳುತಿರಲಿ ಎಂಬುವುದೇ ನಮ್ಮೆಲ್ಲರ ಆಶಯ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು