ತುಳುನಾಡ ಫೌಂಡೇಶನ್ ಪುಣೆ ವತಿಯಿಂದ ಭಾರತೀಯ ಸೇನಾ ದಿನಾಚರಣೆಯನ್ನು ಖಡ್ಕಿಯಲ್ಲಿರುವ ಭಾರತೀಯ ಸೇನಾ ಪಾರ್ಶ್ವವಾಯು ಪುನರ್ವಸತಿ ಕೇಂದ್ರದಲ್ಲಿ ನಿವೃತ್ತ ಸೇನಾ ಯೋಧರೊಂದಿಗೆ ಆಚರಿಸಲಾಯಿತು. ಈ ಸಂದರ್ಭ ದೇಶಭಕ್ತಿ ಗೀತೆಯ ಹಾಡುಗಳೊಂದಿಗೆ ವೈವಿಧ್ಯಮಯ ಸಂಗೀತ ರಸಮಂಜರಿ ಕಾರ್ಯಕ್ರಮಗಳು, ನೃತ್ಯ ಪ್ರದರ್ಶನ ನಡೆಯಿತು. ನಿವೃತ್ತ ಸೇನಾ ಯೋಧರೊಂದಿಗೆ ಭೋಜನವನ್ನು ಮಾಡಲಾಯಿತು. ಈ ಸಂದರ್ಭ ತುಳುನಾಡ ಪೌಂಡೇಶನ್ ಪುಣೆ ಇದರ ಗೌರವಾಧ್ಯಕ್ಷ ತಾರಾನಾಥ ರೈ ಮೇಗಿನಗುತ್ತು ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಇದು ಎರಡನೇ ಸಾಮಾಜಿಕ ಕಾರ್ಯಕ್ರಮವಾಗಿದೆ. ಸಂಸ್ಥೆಯ ಸ್ಥಾಪನೆಯ ದಿನ ಪುಣೆಯಲ್ಲಿರುವ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೆ ಬ್ಯಾಗ್ ವಿತರಣೆ ಮಾಡಲಾಯಿತು. ಇಂದು ಭಾರತೀಯ ಸೇನಾ ದಿನಾಚರಣೆಯನ್ನು ಭಾರತ ಸೇನಾ ಪಾರ್ಶ್ವಾಯು ಪುನರ್ವಸತಿ ಕೇಂದ್ರದಲ್ಲಿ ನಿವೃತ್ತ ಸೇನಾ ಯೋಧರೊಂದಿಗೆ ಬೆರೆತು ಆಚರಿಸುತ್ತಿರುವುದು ಬಹಳಷ್ಟು ಸಂತೋಷ ತಂದಿದೆ. ಇಲ್ಲಿ ಅವರೊಂದಿಗೆ ಕಳೆದ ಕ್ಷಣಗಳು ಬಹಳಷ್ಟು ಉತ್ತಮ ಅನುಭವಗಳನ್ನು ನೀಡಿದೆ. ಸಂಸ್ಥೆಯ ವತಿಯಿಂದ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ. ಸಂಸ್ಥೆಯ ಅಧ್ಯಕ್ಷರಾದ ನ್ಯಾಯವಾದಿ ರೋಹನ್ ಪಿ ಶೆಟ್ಟಿಯವರ ಸಾಮಾಜಿಕ ಕಾರ್ಯವೈಖರಿ ಅನನ್ಯವಾಗಿದೆ. ಭವಿಷ್ಯದಲ್ಲಿ ಸಂಸ್ಥೆ ವತಿಯಿಂದ ಇನ್ನಷ್ಟು ಸಾಮಾಜಿಕ ಕಾರ್ಯಗಳು ನಡೆಯುತ್ತಿರಲಿ ಎಂದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಿವೃತ್ತ ಕರ್ನಲ್ ಡಾಕ್ಟರ್ ರತನ್ ಕುಮಾರ್ ಮುಖರ್ಜಿ ಅವರು ಮಾತನಾಡಿ, ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗಕ್ಕೂ ಸಿದ್ಧರಾಗಿರುವ ಯೋಧರ ಜೀವನ ಒಂದು ರೀತಿಯ ಸಂಘರ್ಷಮಯವಾಗಿದೆ. ಸೇನೆಯ ಸಮವಸ್ತ್ರ ಧರಿಸುವುದು ಹೆಮ್ಮೆಯ ಹಾಗೂ ಪುಣ್ಯದ ಕಾರ್ಯವಾಗಿದೆ. ಕೇವಲ ಸಮವಸ್ತ್ರವೇ ದೇಶ ಸೇವೆಯಲ್ಲ. ನಮ್ಮ ನಮ್ಮ ಕಾರ್ಯಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿಸ್ವಾರ್ಥವಾಗಿ ಮಾಡುವುದೇ ದೇಶ ಸೇವೆಯಾಗಿದೆ ಎಂದರು. ಖ್ಯಾತ ಮರಾಠಿ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕರಾದ ಸಿಕಂದರ್ ಸೈಯದ್ ರವರು ಮಾತನಾಡಿ ಇಂದು ನನ್ನ ಮುಖ್ಯವಾದ ಕಾರ್ಯಕ್ರಮ ಒಂದನ್ನು ಬದಿಗಿಟ್ಟು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಯಾಕೆಂದರೆ ಇಂಥಹ ಉತ್ತಮವಾದ ಕಾರ್ಯಕ್ರಮ ಮತ್ತೊಮ್ಮೆ ಸಿಗುವುದು ಕಷ್ಟ. ನಿಮ್ಮೊಂದಿಗೆ ಇಂದು ಭಾಗವಹಿಸಿ ಮನಸ್ಸಿಗೆ ನೆಮ್ಮದಿ ಹಾಗೂ ಪ್ರೇರಣೆ ಸಿಕ್ಕಿದೆ ಎಂದರು.
ತುಳುನಾಡ ಫೌಂಡೇಶನ್ ಪುಣೆ ಇದರ ಅಧ್ಯಕ್ಷ ನ್ಯಾಯವಾದಿ ರೋಹನ್ ಪುರುಷೋತ್ತಮ ಶೆಟ್ಟಿ ಅವರು ಮಾತನಾಡಿ, ನಿಮ್ಮೆಲ್ಲರ ಆಶೀರ್ವಾದದಿಂದ ಫೌಂಡೇಶನ್ ಕಾರ್ಯವನ್ನು ಆರಂಭಿಸಿದ್ದೇನೆ. ನೀವೆಲ್ಲರೂ ಫೌಂಡೇಶನ್ ನ ಸೇವಾ ಕಾರ್ಯಕ್ಕೆ ಶಕ್ತಿ ತುಂಬಿ ಆಶೀರ್ವದಿಸಿ. ಇಂದಿನ ಕಾರ್ಯಕ್ರಮ ಬಹಳಷ್ಟು ಅರ್ಥಪೂರ್ಣವಾಗಿ ಮೂಡಿ ಬಂದಿದೆ. ಸಹಕಾರ ನೀಡಿದ ಎಲ್ಲರಿಗೂ ವಂದನೆಗಳು ಎಂದರು. ಕಾರ್ಯಕ್ರಮದಲ್ಲಿ ಸಾಹಿತಿ ಪಾಂಗಾಳ ವಿಶ್ವನಾಥ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ ನಿಟ್ಟೆ, ಪುರುಷೋತ್ತಮ್ ಶೆಟ್ಟಿ, ಸದಾಶಿವ ಶೆಟ್ಟಿ, ದೇವಕಿ ಶೆಟ್ಟಿ, ಉಮಾ ಶೆಟ್ಟಿ, ನೀತು ಸಿಂಗ್ ಸಕಾಲಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರೊ. ಸನ್ಮತ್ ಶೆಟ್ಟಿ , ವಿಂದಿ ಪೂಜಾರಿ, ವಿಶ್ವನಾಥ ಶೆಟ್ಟಿ, ಸುಧಾಕರ ಸಿ ಶೆಟ್ಟಿ, ಮಂಜುನಾಥ ಶೆಟ್ಟಿ, ಭಾರ್ಗವ ದಂಪತಿಗಳು, ಪ್ರೇಮಾ ಪುರುಷೋತ್ತಮ ಶೆಟ್ಟಿ, ಮಧುರ ನಾಯಕ್, ಸ್ನೇಹ ಶೆಟ್ಟಿ, ಅಖಿಲ್ ಶೆಟ್ಟಿ, ಪ್ರತೀಕ್ ಪೂಜಾರಿ, ಪ್ರಜ್ವಲ್, ದಿವಾಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ, ವರದಿ : ಕಿರಣ್ ರೈ ಕರ್ನೂರು