ಭಾರತವಲ್ಲದೇ ಜಗತ್ತಿನ ಇನ್ಯಾವುದೇ ದೇಶದ ಸಾಂಸ್ಕೃತಿಕ ಇತಿಹಾಸದಲ್ಲಿ ರಾಜ ಪ್ರಭುತ್ವವನ್ನು ವಿರೋಧಿಸಿದ ಪ್ರಜೆಗಳು ಬದುಕುಳಿದ ಕುರುಹುಗಳು ಕಾಣ ಸಿಗುವುದೇ ಇಲ್ಲ. ರಾಜನೇ ಪ್ರತ್ಯಕ್ಷ ದೇವರು. ಆತನಲ್ಲಿ ದೋಷ ಕಾಣುವುದೇ ಮಹಾಪರಾಧ ಎನ್ನುವಂತಹ ಅಲಿಖಿತ ಶಾಸನಗಳ ಅಡಿಯಲ್ಲಿಯೇ ಜಗತ್ತಿನ ಇನ್ನಿತರ ನಾಗರೀಕತೆಗಳು ಬೆಳೆದವು. ಅಲ್ಲಿ ಜನಸಾಮಾನ್ಯರ ಪ್ರತಿರೋಧದ ಸ್ವರಗಳನ್ನಾಗಲಿ, ರಾಜ ಶಾಸನದ ವಿಮರ್ಶೆ ಎಂಬ ಅಭಿವ್ಯಕ್ತಿ ಸ್ವಾತಂತ್ರ್ಯದ ಹುಚ್ಚು ಕಲ್ಪನೆಯನ್ನಾಗಲಿ ಊಹಿಸುವುದೇ ಬಾಲಿಶತನ.
ಆದರೆ ಭಾರತದ ಮಹಾಕಾವ್ಯಗಳಲ್ಲಿ ದೈವತ್ವವನ್ನು ಪಡೆದ ಮಹಾಪುರುಷರೂ ಪ್ರಶ್ನಾತೀತರಲ್ಲ. ಆ ಮಹಾಪುರುಷರೆಲ್ಲ ತಮ್ಮನ್ನು ಪ್ರಶ್ನಿಸಿದ ಜನ ಸಾಮಾನ್ಯನನ್ನೂ ತಮ್ಮ ಜೊತೆ ಉಳಿಸಿ ಬೆಳೆಸಿದರು. ಇಲ್ಲದಿದ್ದರೆ ಶ್ರೀ ರಾಮಚಂದ್ರನೆಂಬ ಅಖಂಡ ಆರ್ಯಾವರ್ತದ ಅನಭಿಷಿಕ್ತ ಸಾರ್ವಭೌಮನನ್ನು, ಒಬ್ಬ ಸಾಮಾನ್ಯ ಅಗಸ ಪ್ರಶ್ನಿಸಿದ ಜಗತ್ತಿನ ಬೇರೆ ಯಾವುದೇ ದೇಶಗಳಲ್ಲಾಗಿದ್ದರೆ, ಅಂತಹ ಅಪವಾದ ಹೊರಿಸಿದ ಅಗಸನ ರುಂಡವನ್ನೇ ಚೆಂಡಾಡಿ ಬಿಡುತ್ತಿದ್ದರು. ಆದರೆ ಶ್ರೀರಾಮಚಂದ್ರನ ಜೊತೆ ಒಬ್ಬ ಜುಜುಬಿ ಅಗಸ, ತ್ರೇತಾಯುಗದಿಂದ ಕಲಿಯುಗದವರೆಗೂ ಉಳಿದುಕೊಂಡು ಬಂದ..ಆ ಮೂಲಕ ಕೊಟ್ಯಾಂತರ ಜನರ ವಿಮರ್ಶೆಗೆ ವಸ್ತುವಾದ. ಜೊತೆಗೆ ಭಾರತದಂತ ಸಹನಶೀಲ ದೇಶದ ಸಹಸ್ರಾರು ಬುದ್ಧಿಜೀವಿ ಜನರಿಗೆ, ಅಶನ ವಸನಗಳನ್ನು ಗಳಿಸಿಕೊಡುವ ಮಾಗೋಪಾಯವಾದ.
ಬ್ರಹ್ಮ ದೇವನ ಮಗ ಮಾರಿಷಿ. ಆತನ ಮಗ ಕಶ್ಯಪ. ಕಶ್ಯಪನ ಮಗ ವಿವಸ್ವಾನ. ಈ ವಿವಸ್ವಾನನ ಮಗನೆ ವೈವಸ್ವತ ಮನು. ವಿಶ್ವ ಪ್ರಳಯದ ಕಾಲಕ್ಕಿದ್ದ ಮನುವೇ ಈತ. ಈತನ ಹತ್ತು ಮಂದಿ ಮಕ್ಕಳಲ್ಲಿ ಇಕ್ಷಾವಕುವೂ ಒಬ್ಬ. ಆತನ ರಾಜಧಾನಿ ಅಯೋಧ್ಯೆ. ಶ್ರೀ ರಾಮಚಂದ್ರನ ವಂಶಕ್ಕೆ ಇಕ್ಷವಾಕು ವಂಶವೆಂಬ ಹೆಸರು ಬರಲು ಕಾರಣನೀತ. ಅಲ್ಲಿಂದ ಮುಂದೆ ಇಕ್ಷಾವಕುವಿನ ವಂಶದಲ್ಲಿ ಕುಕ್ಷಿ, ವಿಕುಕ್ಷಿ, ಭಾನ, ಅನರಣ್ಯ, ಪೃಥು, ತ್ರಿಶಂಕು, ದುಂದುಮಾರ, ಯವನಾಶ್ವ, ಮಾಂಧಾತ, ಸುಸಂಧಿ, ಧುವಸಂಧಿ, ಭರತ, ಅಸಿತ, ಸಾಗರ, ಅಸಮಂಜ, ಅಂಶುಮಾನ, ದಿಲೀಪ, ಭಗೀರಥ, ಕಾಕುತ್ಸತ, ರಘು, ಪ್ರವೃದ್ಧನ, ಶಮಂತಕ, ಸುದರ್ಶನ, ಅಗ್ನಿವರ್ಣ, ಶೀಘ್ರಾಗ, ಮೇರು, ಪ್ರಶುಕ್ಷಕ, ಅಂಬರೀಷ, ನಹುಷ, ಯಯಾತಿ, ನಭಘ ಮತ್ತು ಅಜನವರೆಗೆ ಮೂವತ್ತೆರಡು ಮಂದಿ ರಾಜಶ್ರೇಷ್ಠರು ತಮ್ಮ ಪಿತೃಗಳಿಂದ ಬಳುವಳಿಯಾಗಿ ಪಡೆದ ಅಯೋಧ್ಯೆಯನ್ನು ಆಳಿದರು.
ಆ ನಂತರ ಬಂದ ದಶರಥನ ಮಗನೇ ಶ್ರೀರಾಮಚಂದ್ರ. ಅಲ್ಲಿಗೆ ಶ್ರೀ ರಾಮಚಂದ್ರನದ್ದು ಮೂವತ್ತೆಂಟನೆಯ ತಲೆಮಾರು. ಜಗತ್ತಿನ ಯಾವ ಲಿಖಿತವಾಗಲಿ, ಮೌಖಿಕ ಸಾಹಿತ್ಯದಲ್ಲಾಗಲಿ ಇಷ್ಟೊಂದು ದೊಡ್ಡ ತಲೆಮಾರುಗಳ ಇತಿಹಾಸ ದೊರಕುವುದಿಲ್ಲ. ಈ ರೀತಿ ತಮ್ಮ ವಂಶವೃಕ್ಷದ ಸ್ಪಷ್ಟ ಚಿತ್ರಣವುಳ್ಳ ಯಾವುದೇ ವ್ಯಕ್ತಿಯನ್ನಾಗಲಿ ಶಕ್ತಿಯನ್ನಾಗಲಿ ಭರತ ಭೂಮಿಯಲ್ಲಲದೆ ಜಗತ್ತಿನ ಇನ್ಯಾವುದೇ ಜಾಗದಲ್ಲಿ ಕಲ್ಪಿಸುವುದೂ ಅಸಾಧ್ಯ. ಅಂತಹ ಒಂದು ಪ್ರಭುದ್ಧ ಮತ್ತು ಸಂಸ್ಕಾರಯುತ ರಾಜ ವಂಶಗಳು ಜಗತ್ತನ್ನು ಆಳಿದ ಉದಾಹರಣೆಗಳನ್ನು ಕಾಣಬೇಕಾದರೆ ಭರತವರ್ಷದ ಪುಣ್ಯ ಮಹಾಕಾವ್ಯಗಳೊಳಗೆ ಇಳಿಯಬೇಕು. ಅಲ್ಲಿನ ಕಥೆ, ಉಪಕಥೆಗಳ ಪಾತ್ರಗಳು ನಾನಾ ಕವಲುಗಳಾಗಿ ಹೊರಟರೂ ಕೊನೆಗೆ ಮೂಲ ಕಥೆಯ ಸೂತ್ರದಲ್ಲಿ ಸೇರಿಕೊಳ್ಳುತ್ತವೆ. ಕೇವಲ ಕವಿ ಕಲ್ಪನೆಯಲ್ಲಿ ಇಷ್ಟೊಂದು ಸಂಖ್ಯೆಯ ಪಾತ್ರಗಳನ್ನು ಕಥೆಯ ಸ್ವಾರಸ್ಯ ಕೆಡದಂತೆ ಪೋಣಿಸಿಕೊಂಡು ಬರೆಯುವುದು ಸಾಧ್ಯವಿಲ್ಲ. ಮಾತ್ರವಲ್ಲ ಬಾಯ್ದೆರೆಯಾಗಿ ಅಂತಹ ಮಹಾಕಾವ್ಯವನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸಿಕೊಂಡು ಬರುವುದೂ ಸುಲಭ ಮಾತಲ್ಲ. ಭಾರತೀಯರ ಈ ಕಾವ್ಯ ಪರಂಪರೆಗಳು ಇಂದಿಗೂ ನಿಗೂಢ. ಅವುಗಳ ಆಳ ಅಗಲಗಳ ಬಗ್ಗೆ ನಾವು ತಿಳಿದುಕೊಳ್ಳುವುದು ಎಂದರೆ ಕೊಳದ ನೀರಿನಲ್ಲಿ ಚಂದ್ರನನ್ನು ನೋಡಿ, ಚಂದ್ರನ ಗಾತ್ರವನ್ನು ಊಹಿಸಿಕೊಂಡಂತೆ.
ಆಧುನಿಕ ವಿಜ್ಞಾನ ಶ್ರೀ ರಾಮನ ಕಾಲ ಇಂದಿಗಿಂತ ಸುಮಾರು ಏಳು ಸಾವಿರ ವರ್ಷ ಹಿಂದಿನದು ಎನ್ನುತ್ತದೆ. ವಿಜ್ಞಾನ ಎನ್ನುವುದು ಸಾಕ್ಷಾಧಾರಗಳ ಮೇಲೆ ನಿಂತಿರುವಂತದ್ದು. ಆದುದರಿಂದ ವೈಜ್ಞಾನಿಕ ಆವಿಷ್ಕಾರಗಳನ್ನು ಪ್ರಶ್ನಿಸುವುದು ಕೆಲವರ ಪ್ರಕಾರ ಉದ್ದಟತನ. ಅದು ಏನೇ ಇರಲಿ. ಆದರೆ ಭಾರತೀಯರ ಕಲ್ಪನೆಯಲ್ಲಿ ಶ್ರೀ ರಾಮಚಂದ್ರ ಸುಮಾರು ಎಂಟು ಲಕ್ಷದ ಎಪ್ಪತ್ತು ಸಾವಿರ ವರ್ಷದ ಹಿಂದೆ ಈ ಭರತ ಭೂಮಿಯಲ್ಲಿ ನಡೆದಾಡಿದ ದೇವರು. ಇಂದಿನ ಕಾಲಘಟಕ್ಕೆ, ಶ್ರೀರಾಮನ ಕಾಲಘಟ್ಟವನ್ನು ಹೋಲಿಸಿಕೊಂಡು, ತಮ್ಮ ಅನ್ನದ ದಾರಿಯನ್ನು ಕಂಡುಕೊಳ್ಳುವ ಬುದ್ಧಿಜೀವಿಗಳ ವಾದಗಳನ್ನು ಬದಿಗಿಟ್ಟು ಆ ಮಹಾಪುರುಷನ ಯೋಗ್ಯತೆಯನ್ನು ಕಲ್ಪಿಸಿಕೊಳ್ಳುವುದೇ ಒಂದು ರೋಮಾಂಚಕ ಅನುಭವ. ಆತನೇನೂ ಒಮ್ಮಿಂದೊಮ್ಮೆಲೆ ಅವಧರಿಸಿದ ಶಾಂತಿ ದೂತನಲ್ಲ. ವಿದ್ಯೆಯ ಮುಖವನ್ನೇ ನೋಡದ ಧರ್ಮ ಪ್ರವರ್ತಕನಲ್ಲ. ಜನರಿಗೆ, ನೀವೆಲ್ಲಾ ನನ್ನನ್ನೇ ನಂಬಿಕೊಂಡು ಬಂದರೆ ನಿಮಗೆಲ್ಲ ಮೋಕ್ಷ ಕರುಣಿಸುತ್ತೇನೆ ಎನ್ನುವ ಮೌಢ್ಯದ ಉಪದೇಶವನ್ನಾತ ನೀಡಲಿಲ್ಲ.
ತನ್ನ ಮನಸ್ಸಿಗೆ ತೋಚಿದ ವಿಚಾರಗಳನ್ನು, ಧಾರ್ಮಿಕ ಕಟ್ಟುಪಾಡುಗಳೆಂಬ ಪುಸ್ತಕದಲ್ಲಿ ಬರೆದಿಟ್ಟು, ಜನರ ಚಟ್ಟ ಕಟ್ಟಲು ಪ್ರೇರೇಪಿಸಲಿಲ್ಲ. ಆತನೆಂದೂ ತನ್ನನ್ನು ತಾನು ದೇವರೆಂದು ಕರೆದುಕೊಳ್ಳಲಿಲ್ಲ. ಸಾಮಾನ್ಯ ಜನಮಾನಸದಲ್ಲಿ ತನ್ನ ಆದರ್ಶಮಯ ವ್ಯಕ್ತಿತ್ವದಿಂದ ಆತ ದೇವರಾಗಿ ಪರಿವರ್ತಿತನಾದ. ಜನವರಿ 22 ರಂದು ಶ್ರೀರಾಮನ ಭಕ್ತರ ಐದು ನೂರು ವರ್ಷಗಳ ಸಂಘರ್ಷಗಳಿಗೆ ಸೈದ್ಧಾಂತಿಕಾ ಜಯ ಎನ್ನುವ ಹಾಗೆ ಶ್ರೀರಾಮ ಚಂದ್ರ ಸ್ವಾಮಿಯ ದಿವ್ಯ ಮಂದಿರ ಲೋಕಾರ್ಪಣೆಯಾಗಲಿದೆ. ಈ ಶುಭಕಾಲದಲ್ಲಿ ಪ್ರಭು ದಾಶರಥಿಯು ಎಲ್ಲರಿಗೂ ಸದ್ಬುದ್ದಿಯನ್ನು ಕೊಡಲಿ. ತನ್ನೆಲ್ಲ ಭಕ್ತರಿಗೂ ಆಯುರಾರೋಗ್ಯ ಸುಖ ಸಂಪದಗಳನ್ನನ್ನಿತ್ತು ಪೊರೆಯಲಿ.
ಹರಿಶ್ಚಂದ್ರ ಶೆಟ್ಟಿ ಕೌಡೂರು