ಸಂಘ ಸಮಾಜಕ್ಕೆ ದಾರಿ ದೀಪದಂತೆ ನಡೆಯಬೇಕು. ಅದೇ ರೀತಿ ಬಾಂಧವರಲ್ಲಿ ಸಂಘಟನೆ ನಮ್ಮ ಹೆಮ್ಮೆ ಎಂಬ ಭಾವನೆ ಕೂಡಾ ತುಂಬಿರಬೇಕು. ಇದು ಹೊಂದಿಕೊಂಡು ನಡೆದರೆ ಸಂಸ್ಥೆ ಮತ್ತಷ್ಟು ಅಬಿವೃದ್ದಿಯ ಪಥದಲ್ಲಿ ಸಾಗಲು ಸಾದ್ಯ. ಅಭಿವೃದ್ದಿಯಲ್ಲಿ ನಾವು ಎಲ್ಲಿಂದ ಎಲ್ಲಿಗೆ ಸಾಗಿ ಬಂದಿದ್ದೇವೆ ಎಂಬುದನ್ನು ಅವಲೋಕಿಸಿದಾಗ ನಮ್ಮ ಈ ಬೆಳವಣಿಗೆಗೆ ಮತ್ತು ಉತ್ತುಂಗಕ್ಕೆ ಏರಲು ಮುಖ್ಯವಾಗಿ ಅದರ ಹಿಂದಿರುವ ಅರ್ಥಿಕತೆಯ ಬೇರು ಹೋಟೆಲ್ ಉದ್ಯಮ. ಅದೆಷ್ಟೋ ಹೋಟೆಲು ಉದ್ಯಮಿಗಳ ಸಹಕಾರದಿಂದ ನಮ್ಮ ಸಮಾಜದ ಉದ್ದೇಶ ಏನಿದೆಯೋ ಅದು ಈಡೇರಿದೆ. ಹೆಗ್ಗುರುತಾಗಿ ನಮ್ಮ ಸಮಾಜಕ್ಕೆ ವರದಾನವಾಗಿ ಸಿಕ್ಕಿದ ಹೋಟೆಲ್ ಉದ್ಯಮ ಇನ್ನಷ್ಟು ಬದಲಾವಣೆಯೊಂದಿಗೆ ನಮ್ಮ ಯುವ ಜನತೆ ಪ್ರಾಧಾನ್ಯತೆ ನೀಡಿ ಮುನ್ನಡೆಸುವ ಅವಶ್ಯಕತೆ ಇದೆ.
ನಮ್ಮ ಹಿರಿಯರು ಕಷ್ಟಪಟ್ಟು ಬೆಳೆಸಿದ ಉದ್ಯಮವು ಬಂಟ ಸಮಾಜದ ಉದ್ದಾರದ ಹಾಗೂ ಸಮಾಜದ ಪ್ರಗತಿಗೆ ಮತ್ತು ನಮ್ಮ ಅಸ್ತಿತ್ವದ ಮೂಲ ಬೇರಾಗಿದೆ. ಇಂದಿನ ಯುವ ಜನಾಂಗಕ್ಕೆ ಅದರ ಮಹತ್ವವನ್ನು ತಿಳಿಸಿ, ಉಳಿಸಿ ಬೆಳೆಸುವುದು ನಮ್ಮೆಲ್ಲರ ಅದ್ಯ ಕರ್ತವ್ಯ ಕೂಡ ಆಗಿದೆ. ಹೋಟೆಲ್ ಉದ್ಯಮದಲ್ಲಿ ಯುವಕರು ಮುಂದೆ ಬರಬೇಕು. ಇಂದಿನ ಯುವಕರು ಮೊದಲಾಗಿ ತಮ್ಮ ಅರೋಗ್ಯ. ನಂತರ ವ್ಯಾಪಾರ ಹಾಗೂ ಸಮಾಜ ಸೇವೆಗೆ ಗಮನ ಹರಿಸಬೇಕೆಂದು ಹೇಳ ಬಯಸುತ್ತೇನೆ. ಮೂಲ ನಂಬಿಕೆ ಮತ್ತು ಮೂಡ ನಂಬಿಕೆಯ ವ್ಯತ್ಯಾಸವನ್ನರಿತು ನಡೆಯಬೇಕು. ಸಮಾಜದ ಒಗ್ಗಟ್ಟು ಮತ್ತು ಸಾಮರಸ್ಯಕ್ಕಾಗಿ ಹಿರಿಯರು ಸಂಘವನ್ನು ಕಟ್ಟಿ ಬೆಳೆಸಿದ್ದರು. ಇದಕ್ಕೆ ಕಳಂಕ ಬಾರದಂತೆ ನಡೆಸಿಕೊಂಡು ಹೋಗಬೇಕಾದ ಕರ್ತವ್ಯ ನಮ್ಮದು. ಸಣ್ಣ ಪುಟ್ಟ ಮನ ನೋವನ್ನು ಬದಿಗಿಟ್ಟು ನಾವೆಲ್ಲರೂ ಸಮಾಜಕ್ಕಾಗಿ ದುಡಿಯಬೇಕು. ಪುಣೆ ಬಂಟರ ಸಂಘ ಸ್ಥಾಪನೆ ಆಗಿ 50 ಸಂವತ್ಸರ ಕಳೆದು ಸುವರ್ಣ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿದೆ. ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ, ಉತ್ತರ ದಕ್ಷಿಣ ಸಮಿತಿಗಳು ಸುವರ್ಣ ಮಹೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲು ಅಣಿಯಾಗಿದ್ದಾರೆ. ಸಮಾಜಕ್ಕೆ ಸೇವೆಯ ಮೂಲಕ ಮಾದರಿಯಾಗಿ ನಮ್ಮ ಈ ಸುವರ್ಣ ಸಂಭ್ರಮವನ್ನು ಆಚರಿಸೋಣ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ನುಡಿದರು.
ಬಂಟರ ಸಂಘ ಪುಣೆ ಇದರ 43 ನೇ ವಾರ್ಷಿಕ ಮಹಾಸಭೆಯು ಪುಣೆ ಬಂಟರ ಭವನದ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ ಬ್ಯಾಂಕ್ವೆಟ್ ಸಭಾ ಹಾಲ್ ನಲ್ಲಿ ಜರಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತೋಷ್ ಶೆಟ್ಟಿಯವರು ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷರು, ಹಿರಿಯರು ಕಲ್ಪವೃಕ್ಷದ ದಾನಿಗಳು ಇವರೆಲ್ಲರ ಸಹಕಾರವನ್ನು ಕೊಂಡಾಡಿದ ಸಂತೋಷ ಶೆಟ್ಟಿಯವರು ಬಂಟರ ಸಂಘಗಳಲ್ಲಿ ಪುಣೆ ಬಂಟರ ಸಂಘವು ಜಗತ್ತಿನಲ್ಲಿ ಕಲ್ಪವೃಕ್ಷದ ಸಮಾಜ ಕಲ್ಯಾಣ ಸಮಿತಿಯ ಅಡಿಯಲ್ಲಿ ಸಮಾಜಮುಖಿ ಸೇವೆಯ ಚಿಂತನೆಯೊಂದಿಗೆ ಮೂಂಚುಣಿಯಲ್ಲಿದೆ. ಇದಕ್ಕೆ ತಮ್ಮೆಲ್ಲರ ಅಶಿರ್ವಾದ ಹಾಗೂ ಶ್ರೀ ರಕ್ಷೆಯಿಂದ ಸಾದ್ಯವಾಗಿದೆ ಎಂದರು. ತಮ್ಮೊಳಗಿನ ಸಣ್ಣ ಪುಟ್ಟ ಅಭಿಪ್ರಾಯ ಭೇದಗಳು ಇದ್ದರೆ ಅದನ್ನು ಬದಿಗಿಟ್ಟು ಸಮಾಜದ ಒಳಿತನ್ನು ಬಯಸಿ ಹಿರಿಯರ ಆಕಾಂಕ್ಷೆಯನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪುವಂತೆ ಮಾಡಲು ಬಂಟರ ಸಂಘವು ಆಶ್ರಯದಾತರಾಗಿ ಇರಲು ನಾವೆಲ್ಲರೂ ಶ್ರಮಿಸೋಣ ಎನ್ನುತ್ತಾ ವಿಧ್ಯಾ ಸಂಕುಲಕ್ಕೆ ಜಾಗವನ್ನು ಪಡೆಯುವ ನಮ್ಮ ಇಚ್ಛೆಯನ್ನು ಭಗವಂತನು ಆದಷ್ಟು ಬೇಗ ಪರಿಪೂರ್ಣಗೊಳಿಸಲಿ. ಸಂಘವು ಕಳೆದ ವರ್ಷ ಜಾಗತಿಕ ಬಂಟರ ಸಂಘದ ವಿಶ್ವ ಬಂಟ ಸಮ್ಮೇಳನ, ಎಂ ಅರ್ ಜಿ ಗ್ರೂಪ್ ಪ್ರಕಾಶ್ ಶೆಟ್ಟಿಯವರ ಸಮಾಜ ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದೆ. ಈ ಸಂಧರ್ಭದಲ್ಲಿ ಸಮಾಜ ರತ್ನ ಕಾಪು ಲೀಲಾಧರ ಶೆಟ್ಟಿಯವರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಿದರು. ನಮ್ಮ ಸಂಘದ ವಾರ್ಷಿಕೋತ್ಸವ ಜನವರಿಗೆ 26 ರಂದು ನಡೆಯಲಿದ್ದು, ಸುವರ್ಣ ಮಹೋತ್ಸವದ ಸಂಭ್ರಮ ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಡೆಯಲಿದೆ. ತಮ್ಮೆಲ್ಲರ ಸಹಕಾರ ಸದಾ ಇರಲಿ ಎಂದರು.
ಈ ಮಹಾಸಭೆಯ ವೇದಿಕೆಯಲ್ಲಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು, ಉಪಾಧ್ಯಕ್ಷರುಗಳಾದ ಎರ್ಮಾಳ್ ಚಂದ್ರಹಾಸ್ ಶೆಟ್ಟಿ, ಪ್ರವೀಣ್ ಶೆಟ್ಟಿ ಪುತ್ತೂರು, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಕೋಶಾಧಿಕಾರಿ ಶ್ರೀನಿವಾಸ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ, ಕಾರ್ಯದರ್ಶಿ ಸುಚಿತ್ರಾ ಎಸ್.ಶೆಟ್ಟಿ, ಕೋಶಾಧಿಕಾರಿ ಶಮ್ಮಿ ಎ ಹೆಗ್ಡೆ, ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷರುಗಳಾದ ಗಣೇಶ್ ಪೂಂಜಾ ಮತ್ತು ಶೇಖರ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆಯರುಗಳಾದ ಪ್ರಮಿಳಾ ಶೆಟ್ಟಿ ಮತ್ತು ಯಶೋದಾ ಶೆಟ್ಟಿ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಧ್ಯಕ್ಷರು ಮತ್ತು ಪದಾಧಿಕಾರಿಗಳು ದೀಪ ಜ್ಯೋತಿ ಬೆಳಗಿಸಿ ಮಹಾಸಭೆಗೆ ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆಯವರು ಸ್ವಾಗತಿಸಿ 2023-24ನೇ ಸಾಲಿನ ವಾರ್ಷಿಕ ಕಾರ್ಯ ಯೋಜನೆಗಳ ವರದಿಯನ್ನು ಸಭೆಯ ಮುಂದಿಟ್ಟರು. ಗತ ವರ್ಷದ ಲೆಕ್ಕ ಪತ್ರ ಮಂಡನೆಯನ್ನು ಕೋಶಾಧಿಕಾರಿ ಶ್ರೀನಿವಾಸ್ ಶೆಟ್ಟಿಯವರು ಮಂಡನೆ ಮಾಡಿ ಸಭೆಯ ಅನುಮೋದನೆ ಪಡೆದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳು ತಮ್ಮ ಸಲಹೆ, ಸೂಚನೆ, ಅನಿಸಿಕೆಗಳನ್ನು ಸಭೆಯಲ್ಲಿ ತಿಳಿಸಿದರು. ಸಂಘದ ಮಾಜಿ ಅಧ್ಯಕ್ಷರುಗಳು, ದಾನಿಗಳು, ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಅಜಿತ್ ಹೆಗ್ಡೆಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ ಪ್ರೀತಿ ಭೋಜನ ನಡೆಯಿತು.