ಚಿಕ್ಕಂದಿನಿಂದಲೇ ವಿಜಯಕುಮಾರ್ ಶೆಟ್ಟಿ ಅವರು ಬಹುಮುಖ ಪ್ರತಿಭಾವಂತರು. ಇವರು ನಮ್ಮೂರಿನವರು ಎಂಬುದಕ್ಕೆ ಹೆಮ್ಮೆಯಾಗುತ್ತದೆ. ಅದ್ಭುತ ನಟನಾಗಿರುವ ವಿಜಯಕುಮಾರ್ ಶೆಟ್ಟಿಯವರು ಚಿತ್ರರಂಗದ ಹೀರೋ ಆಗಿ ಮೆರೆಯಬೇಕಿತ್ತು. ಆದರೆ ನಾಟಕ ರಂಗವನ್ನೇ ನೆಚ್ಚಿಕೊಂಡ ವಿಜಯಕುಮಾರ್ ಶೆಟ್ಟಿ ಅವರು ಕಲಾಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಸಾಮಾನ್ಯ. ಕಲಾ ಜಗತ್ತು ಎಂಬ ಕಲಾ ಸಂಸ್ಥೆಯನ್ನು ಸ್ಥಾಪನೆ ಮಾಡಿ ಕಳೆದ 44 ವರ್ಷಗಳಿಂದ ನಿಸ್ವಾರ್ಥವಾಗಿ ಕಲಾ ಸೇವೆಯನ್ನು ಮಾಡುತ್ತಾ ಬಂದಿರುವರು. ಅದೆಷ್ಟೋ ಕಲಾವಿದರನ್ನು ರೂಪುಗೊಳಿಸಿ ಅವರನ್ನು ಕಲಾಕ್ಷೇತ್ರಕ್ಕೆ ಪರಿಚಯಿಸಿದ ಕೀರ್ತಿ ವಿಜಯ್ ಕುಮಾರ್ ಶೆಟ್ಟಿ ಅವರಿಗೆ ಸಲ್ಲುತ್ತದೆ. ಕಲಾಕ್ಷೇತ್ರದಲ್ಲಿ ಸಾಧನೆಯ ಮೂಲಕ ಈಗಾಗಲೇ ಲಿಮ್ಕಾ ಬುಕ್ ಆಫ್ ದಾಖಲೆಗೆ ವಿಜಯಕುಮಾರ್ ಸೇರ್ಪಡೆಯಾಗಿದ್ದಾರೆ. ಪ್ರಸ್ತುತ 70ರ ಹರೆಯದಲ್ಲಿ ಗಿನ್ನಿಸ್ ದಾಖಲೆಗೆ ಪ್ರಯತ್ನ ಶೀಲರಾಗಿದ್ದಾರೆ. ಇದರಲ್ಲಿ ಅವರಿಗೆ ಜಯವಾಗಲಿ. ನಮ್ಮ ನಾಡಿನ ಸಂಸ್ಕೃತಿ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಪಾರ ಸೇವೆ ಹಾಗೂ ಸಾಧನೆಯನ್ನು ಮಾಡಿರುವ ವಿಜಯ್ ಕುಮಾರ್ ಶೆಟ್ಟಿ ಅವರಿಗೆ ಮುಂದಿನ ದಿನಗಳಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸುವಂತಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆಎಂದು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕರು, ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ಅಭಿಮಾನಿ ಬಳಗ ಮುಂಬಯಿ ಅಧ್ಯಕ್ಷ ಜಯಕೃಷ್ಣ ಶೆಟ್ಟಿಯವರು ನುಡಿದರು. ಅವರು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜನವರಿ 14ರಂದು ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ಅಭಿಮಾನಿ ಬಳಗ ಮುಂಬಯಿ ಆಯೋಜನೆಯಲ್ಲಿ ವಿಜಯೋತ್ಸವ, ನೂರಾರು ಪ್ರತಿಬಾ ಕಲೋತ್ಸವದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು. ವಿಜಯಕುಮಾರ್ ಶೆಟ್ಟಿ ಹಾಗೂ ಡಾ. ಸುರೇಂದ್ರ ಕುಮಾರ್ ಹೆಗ್ಡೆಯವರು ರಾಮ – ಲಕ್ಷಣರಂತೆ ಜೊತೆಗೂಡಿ ಕಲಾ ಜಗತ್ತು ಸಂಸ್ಥೆಯನ್ನು ಬಹಳ ಎತ್ತರದ ಮಟ್ಟಕ್ಕೆ ಬೆಳೆಸಿದ್ದಾರೆ. ಪ್ರಸ್ತುತ ಕಲಾ ಜಗತ್ತು ಹಾಗೂ ಚಿಣ್ಣರಬಿಂಬವು ಮುಂಬಯಿ ಮಹಾನಗರದಲ್ಲಿ ಸಾಂಸ್ಕೃತಿಕ ಲೋಕವನ್ನೇ ಸೃಷ್ಟಿ ಮಾಡಿದೆ ಎಂದು ಜಯಕೃಷ್ಣ ಶೆಟ್ಟಿ ಅವರು ತಿಳಿಸಿದರು.
ಕರ್ನಾಟಕ ಮಲ್ಲದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿಯವರು ಮಾತನಾಡಿ, ಮಹಾರಾಷ್ಟ್ರದ ಮಣ್ಣಿನಲ್ಲಿ ಇಡೀ ಕಲೆಯ ಜಗತ್ತನ್ನೇ ವಿಜಯ್ ಕುಮಾರ್ ಶೆಟ್ಟಿ ಅವರು ಸೃಷ್ಟಿ ಮಾಡಿದ್ದಾರೆ. ಕಲಾ ಜಗತ್ತು ಸಂಸ್ಥೆಯನ್ನು ಹುಟ್ಟು ಹಾಕಿ ಸಾಂಸ್ಕೃತಿಕ ಲೋಕದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದಿಂದ ಸಾಂಸ್ಕೃತಿಕ ಲೋಕಕ್ಕೆ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಲಭಿಸಿರುವುದು ಬಹಳ ವಿರಳ. ಆದರೆ ನಾಟಕ ಕಲಾವಿದನಾಗಿದ್ದುಕೊಂಡು ಸಾಂಸ್ಕೃತಿಕ ಲೋಕಕ್ಕೆ ಸಲ್ಲಿಸಿರುವ ಮಹತ್ತರವಾದ ಸೇವೆಯನ್ನು ಹಾಗೂ ಮಾಡಿರುವ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರಕಾರವು ವಿಜಯ್ ಕುಮಾರ್ ಶೆಟ್ಟಿ ಅವರಿಗೆ ಅರ್ಹವಾಗಿಯೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ನಮಗೆಲ್ಲಾ ಅಭಿಮಾನ. ಮುಂಬಯಿ ಮಹಾನಗರದಲ್ಲಿ ನಮ್ಮ ನಾಡಿನ ಸಂಸ್ಕೃತಿ ಕಲೆ ಭಾಷೆಯನ್ನು ಬೆಳೆಸುವಲ್ಲಿ ವಿಜಯಕುಮಾರ್ ಶೆಟ್ಟಿ ಅವರ ಕೊಡುಗೆ ತುಂಬಾ ಇದೆ. ಹಳೆ ಕಲಾವಿದರನ್ನು ಜೊತೆ ಸೇರಿಸಿಕೊಂಡು ಯುವ ಪ್ರತಿಭಾವಂತ ಕಲಾವಿದರನ್ನು ಸೃಷ್ಟಿಸಿ ಅವರಿಗೆ ವೇದಿಕೆಯನ್ನು ಕಲ್ಪಿಸುವ ಕೆಲಸವನ್ನು ವಿಜಯ್ ಕುಮಾರ್ ಶೆಟ್ಟಿ ಅವರು ಮಾಡುತ್ತಾ ಬಂದಿರುವರು. ಚಿಣ್ಣರ ಬಿಂಬದ ಹುಟ್ಟು ಕೂಡ ವಿಜಯ್ ಕುಮಾರ್ ಶೆಟ್ಟಿ ಅವರಿಂದ ಆಗಿದೆ. ಪ್ರಸ್ತುತ ಪ್ರಕಾಶ್ ಭಂಡಾರಿ ಅವರ ನೇತೃತ್ವದಲ್ಲಿ ಚಿಣ್ಣರಬಿಂಬ ಎಲ್ಲರ ಮೆಚ್ಚುಗೆಯ ಸಂಸ್ಥೆಯಾಗಿ ಬೆಳೆದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತವಾಗಿದೆ ಎನ್ನಲು ತುಂಬಾ ಸಂತೋಷವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಲಾಜಗತ್ರು ಸಂಸ್ಥೆಯ ಅಭಿಮಾನಿ ಸುಗಂಧಿ ಕದಮ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಕಲಾ ಜಗತ್ತು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಸುರೇಂದ್ರ ಕುಮಾರ್ ಹೆಗ್ಡೆ ವಾಚಿಸಿದರು. ವೇದಿಕೆಯಲ್ಲಿ ನ್ಯಾಯವಾದಿ ಡಿ.ಕೆ ಶೆಟ್ಟಿ, ಬೊಂಬೆ ಬಂಟ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಕಿಶೋರ್ ಶೆಟ್ಟಿ ಕುತ್ಯಾರು, ಕಲಾಜಗತ್ತು ದಯಾಸಾಗರ್ ಚೌಟ, ಬಂಟರ ಸಂಘದ ಸದಸ್ಯ ಪಿ.ಡಿ ಶೆಟ್ಟಿ, ಪೊವಾಯಿ ಕನ್ನಡ ಸಂಘದ ಅಧ್ಯಕ್ಷ ನ್ಯಾಯವಾದಿ ಆರ್.ಜಿ. ಶೆಟ್ಟಿ, ಕೈಗಾರಿಕೋದ್ಯಮಿ ಶಂಕರ್ ಶೆಟ್ಟಿ, ಕಲಾಪೋಷಕ ಪುರಂದರ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಂಟರ ಸಂಘದ ಮುಖವಾಣಿ ಬಂಟರವಾಣಿಯ ಗೌರವ ಸಂಪಾದಕ ಅಶೋಕ್ ಪಕ್ಕಳ ನಿರೂಪಿಸಿದರು.
ಚಿತ್ರ, ವರದಿ : ನವೀನ್ ಕೆ. ಇನ್ನ